ಮೇ 18ಕ್ಕೆ ದೇವೇಗೌಡರ ಹುಟ್ಟುಹಬ್ಬ: ಹಾಸನ ಪೂರ್ತಿ ಗೆಲ್ಲಿಸಿ ಅಪ್ಪಾಜಿ ಪಾದದಡಿಗೆ ಇಡುತ್ತೇವೆ- ಭವಾನಿ ರೇವಣ್ಣ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಹಾಸನದಲ್ಲಿ ಸ್ವರೂಪ್‌ ಗೆಲುವಿಗಾಗಿ ಮಾಜಿ ಸಚಿವ ರೇವಣ್ಣ ಫ್ಯಾಮಿಲಿ ಅಖಾಡಕ್ಕಿಳಿದು ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ.
ಭವಾನಿ ರೇವಣ್ಣ
ಭವಾನಿ ರೇವಣ್ಣ

ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಹಾಸನದಲ್ಲಿ ಸ್ವರೂಪ್‌ ಗೆಲುವಿಗಾಗಿ ಮಾಜಿ ಸಚಿವ ರೇವಣ್ಣ ಫ್ಯಾಮಿಲಿ ಅಖಾಡಕ್ಕಿಳಿದು ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ.

ನಗರದ ಆಂಜನೇಯ ದೇವಸ್ಥಾನದಲ್ಲಿ ಬುಧವಾರ ಪೂಜೆ ಸಲ್ಲಿಸಿದ ನಂತರ ಮಾಜಿ ಸಚಿವ, ಜೆಡಿಎಸ್‌ನ ಹಿರಿಯ ಮುಖಂಡ ಹೆಚ್‌ಡಿ ರೇವಣ್ಣ ಹಾಗೂ ಅವರ ಪತ್ನಿ ಭವಾನಿ ರೇವಣ್ಣ ಜೆಡಿಎಸ್‌ ಹಾಸನ ಅಭ್ಯರ್ಥಿ ಎಚ್‌ಪಿ ಸ್ವರೂಪ್‌ ಪರ ಪ್ರಚಾರ ನಡೆಸಿದರು.

ಸುಭಾಷ್ ವೃತ್ತದಿಂದ ಆರಂಭವಾದ ರ್ಯಾಲಿಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಹೇಮಾವತಿ ಪ್ರತಿಮೆ ವೃತ್ತದಲ್ಲಿ ಸಮಾಪ್ತಿಗೊಂಡಿತು.

ಜನರನ್ನುದ್ದೇಶಿಸಿ ಮಾತನಾಡಿದ ಭವಾನಿ, ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಪ್ರೀತಂ ಜೆ ಗೌಡ ಅವರಿಗೆ ಮಹಿಳೆಯರ ಮೇಲಾಗಲೀ, ಹಿರಿಯರ ಮೇಲಾಗಲೀ ಗೌರವವಿಲ್ಲ. ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಮತ್ತು ಅವರ ಕುಟುಂಬವನ್ನು ಅವರು ಹಲವಾರು ಬಾರಿ ಅವಮಾನಿಸಿದ್ದಾರೆ, ಜನರು ಅವರನ್ನು ತಿರಸ್ಕರಿಸಿ ಮೇ 10 ರ ಚುನಾವಣೆಯಲ್ಲಿ ಸ್ವರೂಪ್ ಅವರನ್ನು ಬೆಂಬಲಿಸಬೇಕು ಎಂದು ಒತ್ತಾಯಿಸಿದರು.

ಮೇ.10 ರಂದು ಚುನಾವಣೆ ಇದೆ. ಮೇ 18ಕ್ಕೆ ದೇವೇಗೌಡರ ಹುಟ್ಟುಹಬ್ಬ ಇದೆ. ದೇವೇಗೌಡರ ಪಾದದಡಿಗೆ ಈ ಗೆಲುವು ಕೊಡುತ್ತೇವೆ. ಜಿಲ್ಲೆಯಲ್ಲಿ ಏಳಕ್ಕೆ ಏಳೂ ಕ್ಷೇತ್ರ ಗೆಲ್ಲಿಸ್ತೀವಿ ಅಂತ ಮಾತು ಕೊಟ್ಟಿದ್ದೇವೆ. ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎಂದರು

ಸ್ವರೂಪ್‌ ನನ್ನ ಮಗನಿದ್ದಂತೆ. ಆತನಿಗೆ ಇಬ್ಬರು ತಾಯಂದಿರು. ಒಬ್ಬರು ಹೆತ್ತವರು, ನಾನು ಪೋಷಣೆ ಹಾಗೂ ಆರೈಕೆ ಮಾಡೋ ತಾಯಿ. ಇವನು ನನ್ನ ಮಗ ಎಂದು ಹೇಳುವ ಮೂಲಕ ಭವಾನಿ ಸ್ವರೂಪ್‌ ಬೆನ್ನು ತಟ್ಟಿದರು. ಅಲ್ಲದೇ ಅವರನ್ನು ಗೆಲ್ಲಿಸಿ ಎಂದು ಭವಾನಿ ರೇವಣ್ಣ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ನಾಲ್ಕು ರೋಡ್‌ ಮಾಡಿಸಿದ್ರೆ, ಅದು ಅಭಿವೃದ್ಧಿ ಆಗಲ್ಲ. ಈ ಹಿಂದೆ ಶಾಸಕರಾಗಿದ್ದವರು ಏನು ಅಭಿವೃದ್ಧಿ ಮಾಡಿಲ್ಲ ಎನ್ನುವ ಮೂಲಕ ಪ್ರೀತಂ ಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಷ್ಟೇ ಅಲ್ಲ, ಹಾಸನದ ಜನತೆಗೆ ನ್ಯಾಯ ದೊರಕಿಸಿಕೊಡುವಲ್ಲಿ ಪ್ರೀತಂ ವಿಫಲರಾಗಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com