'ಮೋದಿ ವಿಷದ ಹಾವು ಇದ್ದಂತೆ': ಹೇಳಿಕೆ ವಿವಾದ ಪಡೆಯುತ್ತಿದ್ದಂತೆಯೇ ಮಲ್ಲಿಕಾರ್ಜುನ ಖರ್ಗೆ ಯೂಟರ್ನ್!

ಮೋದಿ ಅಂದ್ರೆ ವಿಷದ ಹಾವಿದ್ದಂತೆ. ವಿಷ ಹೌದೋ, ಇಲ್ಲವೋ ಎಂದು ನೆಕ್ಕಿ ನೋಡಿದರೆ ನೀವು ಸತ್ತಂತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಗದಗ: ಮೋದಿ ಅಂದ್ರೆ ವಿಷದ ಹಾವಿದ್ದಂತೆ. ವಿಷ ಹೌದೋ, ಇಲ್ಲವೋ ಎಂದು ನೆಕ್ಕಿ ನೋಡಿದರೆ ನೀವು ಸತ್ತಂತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗದಗದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದಲ್ಲಿ ನಾವು ಯಾರಿಗೂ ಬಗ್ಗಲ್ಲ. ಗುಜರಾತಿನವರು ಹೇಗೆ ಇಲ್ಲಿನ ಮಣ್ಣಿನ ಮಕ್ಕಳ ಬಳಿ ನಮಗೆ ಓಟು ಕೊಡಿ ಎಂದು ಕೇಳುತ್ತಾರೆ. ನಾವು ಕರ್ನಾಟಕದ ಮಣ್ಣಿನ ಮಕ್ಕಳುಯ ನಮಗೂ ಕನ್ನಡ ಅಭಿಮಾನ ಇದೆ.

ನರೇಂದ್ರ ಮೋದಿ ಎಂದರೆ ವಿಷದ ಹಾವಿದ್ದಂತೆ. ವಿಷ ಹೌದೋ ಇಲ್ಲ ಎಂದು ನೆಕ್ಕ ನೋಡಿದ್ರೆ ಸತ್ತಂತೆ. ಬಿಜೆಪಿಯ ಸಿದ್ಧಾಂತ, ಐಡಿಯಾಲಜಿ ಏನಿದೆ ಅದು ದೇಶಕ್ಕೆ ಕೆಟ್ಟದಾಗಿದೆ. ಮೋದಿಯ ವಿಚಾರಧಾರೆಯೇ ದೇಶವನ್ನ ಹಾಳು ಮಾಡುತ್ತಿದೆ. ಈ ದೇಶದ ಬಗ್ಗೆ ಪ್ರತಿಯೊಬ್ಬರು ಚಿಂತೆ ಮಾಡಬೇಕಿದೆ. ದೇಶ ಮುಗಿಸೋಕೆ ಮೋದಿಯೊಬ್ಬರೇ ಸಾಕು. ಯಾವನು ಗುಜರಾತ್‌ನಿಂದ ಬರಲಿ, ಅಹ್ಮದಾಬಾದ್‌ನಿಂದ ಬರಲಿ ಯಾರಿಗೂ ಬಗ್ಗಲ್ಲ ಎಂದು ಹೇಳಿದರು.

ಒಬ್ಬ ದೇಶದ ಪ್ರಧಾನಿಯಾಗಿ ಹಳ್ಳಿ, ಹಳ್ಳಿ, ತಾಲೂಕು ಅಡ್ಡಾಡ್ಡುತ್ತೀದ್ದೀರಾ, ಮೋದಿ ಮುಖ ನೋಡಿ‌ ಮತ ಕೊಡಿ ಎಂದು ಬಿಜೆಪಿಯವರು ಕೇಳುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಾರ್ಪೊರೇಷನ್ ಇಲೆಕ್ಷನ್‌ನಲ್ಲಿಯೂ ಸಹ ಮೋದಿ ನೋಡಿ ಮತ ಕೊಡಿ ಎಂದು ಹೇಳುತ್ತಾರೆ. ಹಾಗಾದರೆ ನಿಮ್ಮದು ಎಷ್ಟು ಮುಖ ಇದೆ. ಇಂತಹ ಆಸೆಬುರುಕರಿಗೆ ಕುರ್ಚಿಗಾಗಿ ವ್ಯಾಮೋಹ. ಯಾವುದಾದರೂ ಒಂದು ಖುರ್ಚಿ ಖಾಲಿ ಇದ್ದರೆ ಅವರೇ ಬಂದು ಕೂರುತ್ತಾರೆ ಎಂದು ತಿಳಿಸಿದರು.

ಕಪ್ಪು ಹಣ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡುತ್ತೇವೆ ಎಂದು ಹೇಳಿದ್ದರು, ಈಗ ಕಪ್ಪು ಹಣ ಅದಾನಿ ಬಳಿ ಇಟ್ಟಿದ್ದಾರೇನು? ಯುವಕರಿಗೆ ನೌಕರಿ ಕೊಡುತ್ತೇವೆ ಎಂದರು. 9 ವರ್ಷದಿಂದ ನೀವು 18 ಕೋಟಿ ಜನರಿಗೆ ನೌಕರಿ ಕೊಡಬಹುದಿತ್ತು. ಬರೀ ಸುಳ್ಳು ಹೇಳಿರುವುದು ಜನರಿಗೆ ಗೊತ್ತಾಗಿದೆ. 30 ಲಕ್ಷ ಸರ್ಕಾರಿ ನೌಕರಿ ಖಾಲಿ ಇವೆ. ಅದನ್ನಾದರೂ ತುಂಬಿ. ಕರ್ನಾಟಕದಲ್ಲಿ ನೌಕರಿ ಖಾಲಿ ಇವೆ. ಇಲ್ಲಿ ಬೊಮ್ಮಾಯಿನೂ ತುಂಬ್ತಿಲ್ಲ, ಅಲ್ಲಿ‌ ಮೋದಿನೂ ತುಂಬ್ತಿಲ್ಲ ಎಂದು ಕಿಡಿಕಾರಿದರು.

ಮೋದಿ ದೊಡ್ಡ ಸುಳ್ಳುಗಾರ. ಕೆಲವರು ಮೋದಿ ಮೋದಿ ಅಂತಾರೆ. ಅವರು ಕರ್ನಾಟಕಕ್ಕೆ ಏನು ಮಾಡಿದ್ದಾರೆ ಎಂದು ಹೇಳಿ ಎಂದು ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ, ಇಂದಿರಾ ಗಾಂಧಿ ಮೊದಲ ಬಾರಿಗೆ ರಾಕೆಟ್ ಹಾರಿಸಿದರು. ಈಗ ಎಲ್ಲಿಯಾದರೂ ರಾಕೆಟ್ ಹಾರಿದರೆ 'ಏ ಮೇರಾ ಕಾಮ್ ಹೈ' ಎಂದು ಸುಳ್ಳು ಹೇಳೋ ಚಟ ಅವರದು ಎಂದು ಆರೋಪಿಸಿದರು.

ಅದಾನಿಗೆ ಎಲ್ಲಾ ರೀತಿಯ ಬೆಂಬಲ ನೀಡುತ್ತಾರೆ. 2014ರಲ್ಲಿ ಅವರ ಸಂಪತ್ತು 50 ಸಾವಿರ ಕೋಟಿ, 2020ರಲ್ಲಿ 2 ಲಕ್ಷ ಕೋಟಿ ಆಯ್ತು. 2023ರಲ್ಲಿ 12 ಲಕ್ಷ ಕೋಟಿ ಆಯ್ತು. ಇಷ್ಟೊಂದು ಹಣ ಮಾಡಬೇಕಾದರೆ ಎಷ್ಟು ಸರ್ಕಾರಿ ದುಡ್ಡು ಹೊಡೆದಿರಬೇಕು. ರಸ್ತೆ, ಏರ್‌ಪೋರ್ಟ್‌ಗಳನ್ನು ಅವನಿಗೆ ಕೊಟ್ಟು, ನಮಗೆ ಜಿಎಸ್‌ಟಿ ಹಾಕುತ್ತಾರೆ. ಮುಂದೆ ಗಾಳಿ ಮೇಲೂ ಟ್ಯಾಕ್ಷ್‌ ಹಾಕಬಹುದು. ನಮ್ಮ ಹಿಂದೆ ಅಮಿತ್ ಶಾ, ಮೋದಿ ಇದ್ದಾರೆ ಅಂತಾರೆ, ಯಾಕೆ ಇದ್ದಾರೆ 40% ಹೊಡೆಯೋಕೆ ಇದ್ದಾರೆಯೇ? ಎಂದು ಪ್ರಶ್ನಿಸಿದರು.

ಯೂಟರ್ನ್ ಹೊಡೆದ ಖರ್ಗೆ

ಈ ನಡುವೆ ಹೇಳಿಕೆ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಮಲ್ಲಿಕಾರ್ಜುನ ಖರ್ಗೆಯವರು ಯೂಟರ್ನ್ ಹೊಡೆದಿದ್ದಾರೆ.

ಹೇಳಿಕೆ ಸಂಬಂಧ ಸ್ಪಷ್ಟನೆ ನೀಡಿರುವ ಅವರು, ನಾನು ಪ್ರಧಾನಿ ಮೋದಿಯವರನ್ನು ವಿಷದ ಹಾವು ಎಂದು ಹೇಳಿಲ್ಲ. ಭಾರತೀಯ ಜನತಾ ಪಾರ್ಟಿ ಹಾವು ಇದ್ದಂತೆ, ಅದನ್ನು ನೆಕ್ಕಿ ನೋಡುತ್ತೇನೆ ಅಂದರೆ ಸತ್ತು ಹೋಗ್ತಾರೆ ಎಂದು ಹೇಳಿದ್ದೆ. ವೈಯಕ್ತಿಕವಾಗಿ ಯಾರಿಗೂ ಹೇಳಿಲ್ಲ, ಯಾರ ಹೆಸರು ಹೇಳಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com