ಇಡೀ ಸಚಿವ ಸಂಪುಟ ದೆಹಲಿಗೆ: ಪ್ರಜಾಪ್ರಭುತ್ವ ವಿರೋಧಿ, ಜನತೆಗೆ ಮಾಡಿದ ಅವಮಾನ- ಸಿಎಂ ವಿರುದ್ಧ ಬಿಜೆಪಿ ಕಿಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ಸಚಿವ ಸಂಪುಟವನ್ನು ದೆಹಲಿಗೆ ಕರೆದೊಯ್ದು, ಪಕ್ಷದ ಹೈಕಮಾಂಡ್ ಜೊತೆಗೆ ಸಭೆ ನಡೆಸಿರುವುದನ್ನು ಪ್ರತಿಪಕ್ಷ ಬಿಜೆಪಿ ಗುರುವಾರ ತೀವ್ರವಾಗಿ ಖಂಡಿಸಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಮತ್ತು ಸರ್ಕಾರವನ್ನು ಭಾರಿ ಬಹುಮತದಿಂದ ಆಯ್ಕೆ ಮಾಡಿದ ರಾಜ್ಯದ ಜನತೆಗೆ ಮಾಡಿದ ಅವಮಾನ ಎಂದು ಹೇಳಿದೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ಸಚಿವ ಸಂಪುಟವನ್ನು ದೆಹಲಿಗೆ ಕರೆದೊಯ್ದು, ಪಕ್ಷದ ಹೈಕಮಾಂಡ್ ಜೊತೆಗೆ ಸಭೆ ನಡೆಸಿರುವುದನ್ನು ಪ್ರತಿಪಕ್ಷ ಬಿಜೆಪಿ ಗುರುವಾರ ತೀವ್ರವಾಗಿ ಖಂಡಿಸಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಮತ್ತು ಸರ್ಕಾರವನ್ನು ಭಾರಿ ಬಹುಮತದಿಂದ ಆಯ್ಕೆ ಮಾಡಿದ ರಾಜ್ಯದ ಜನತೆಗೆ ಮಾಡಿದ ಅವಮಾನ ಎಂದು ಹೇಳಿದೆ.

ಒಂದು ವೇಳೆ ಸಚಿವ ಸಂಪುಟ ಕಾಂಗ್ರೆಸ್ ಹೈಕಮಾಂಡ್‌ಗೆ ವರದಿ ನೀಡುತ್ತಿದೆಯೇ? ಎಂದು ಪ್ರಶ್ನಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಅವರು ಹಿಂದಿನ ಮುಖ್ಯಮಂತ್ರಿಯಾಗಿದ್ದ ಅವಧಿಗೆ ಹೋಲಿಸಿದರೆ ದುರ್ಬಲ ನಾಯಕ ಎಂದು ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಯಾವುದೇ ಮುಖ್ಯಮಂತ್ರಿ ತಮ್ಮ ಇಡೀ ಸಂಪುಟವನ್ನು ಪಕ್ಷದ ಹೈಕಮಾಂಡ್‌ ಮುಂದೆ ಕೊಂಡೊಯ್ದ ಉದಾಹರಣೆ ಇಲ್ಲ, ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸಚಿವ ಸಂಪುಟವೇ ಸರ್ವಶ್ರೇಷ್ಠವಾಗಿದೆ. ಅಂತಹ ಪರಮಾಧಿಕಾರ ಹೊಂದಿರುವ ಹೊಂದಿರುವ ಸಂಪುಟ ಕೇಂದ್ರ ವರಿಷ್ಠರ ಮುಂದೆ ಮಂಡಿಯೂರಿದೆ ಎಂದರು. 

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಈ ಹಿಂದೆ ನಡೆದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ, ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದ್ದರು ಎಂದು ಟೀಕಿಸಿದ ಬೊಮ್ಮಾಯಿ, "ಇದೊಂದು ಪ್ರಜಾಸತ್ತಾತ್ಮಕ ಸರ್ಕಾರ, ಮತ್ತು ಏನಾದರೂ ಮಾಡಬೇಕಾದರೆ, ಕೆಲವು ನಾಯಕರು ಇಲ್ಲಿಗೆ ಬರಬಹುದಿತ್ತು ಅಥವಾ ಕೆಲವು ಮಂತ್ರಿಗಳನ್ನು ಅಲ್ಲಿಗೆ ಕರೆಸಬಹುದಿತ್ತು, ಆದರೆ ಇಡೀ ಕ್ಯಾಬಿನೆಟ್ ಅನ್ನು ಕರೆಯುವುದು ನಿಜವಾಗಿಯೂ ಅಪ್ರಜಾಸತ್ತಾತ್ಮಕವಾಗಿದೆ ಮತ್ತು ಈ ಸರ್ಕಾರವನ್ನು ಭಾರಿ ಬಹುಮತದಿಂದ ಆಯ್ಕೆ ಮಾಡಿದ ಕರ್ನಾಟಕದ ಜನತೆಗೆ ಮಾಡಿದ ಅವಮಾನವಾಗಿದೆ ಎಂದರು. 

ಬುಧವಾರ, ಸಿದ್ದರಾಮಯ್ಯ ಅವರು ತಮ್ಮ ಸಂಪುಟದ ಸಚಿವರು ಮತ್ತು ರಾಜ್ಯದ ಪಕ್ಷದ ಮುಖಂಡರೊಂದಿಗೆ ಕೇಂದ್ರ ನಾಯಕತ್ವದ ಸಭೆಯಲ್ಲಿ ಭಾಗವಹಿಸಿ ಮುಂದಿನ ಲೋಕಸಭೆ ಚುನಾವಣೆಗೆ ಪಕ್ಷದ ಕಾರ್ಯತಂತ್ರದ ಕುರಿತು ಚರ್ಚಿಸಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಹಿರಿಯ ನಾಯಕ ಸುರ್ಜೇವಾಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕರ್ನಾಟಕ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ, ಆಡಳಿತ ಪಕ್ಷದ ಶಾಸಕರೇ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಸಭೆ ನಡೆಯುವಾಗಲೇ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ರದ್ದು ಅಥವಾ ತಡೆ ಹಿಡಿದಿರುವುದು ಸಿದ್ದರಾಮಯ್ಯ ಆಡಳಿತದ ಮೇಲಿನ ಹಿಡಿತವನ್ನು ಕಳೆದುಕೊಂಡಿರುವುದನ್ನು ತೋರಿಸುತ್ತಿದೆ ಎಂದು ಆರೋಪಿಸಿದರು.

ರಾಜ್ಯದಾದ್ಯಂತ 211 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿದ ಒಂದು ದಿನದ ನಂತರ, ಮುಂದಿನ ಆದೇಶದವರೆಗೆ ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆಯನ್ನು ಸ್ಥಗಿತಗೊಳಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಉಲ್ಲೇಖಿಸಿದ ಬೊಮ್ಮಾಯಿ, ವರದಿಗಳ ಪ್ರಕಾರ, ಪಕ್ಷದ ಕೆಲವು ಮುಖಂಡರು ಮತ್ತು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ ನಂತರ ವರ್ಗಾವಣೆಯನ್ನು ತಡೆಹಿಡಿಯಲು ನಿರ್ಧರಿಸಲಾಗಿದೆ. ಸಿಎಂ ದುರ್ಬಲರಾಗಿದ್ದಾರೆ. ಸಿಎಲ್‌ಪಿ ಸಭೆಯ ಬೆಳವಣಿಗೆಗಳನ್ನು ನೋಡಿದರೆ  ಅವರು ಶಾಸಕರ ಮೇಲಿನ ಹಿಡಿತವನ್ನು ಕಳೆದುಕೊಂಡಂತೆ ತೋರುತ್ತಿದೆ, ಆದ್ದರಿಂದ ಹೈಕಮಾಂಡ್ ಮಧ್ಯಪ್ರವೇಶಿಸಿದೆ ಎಂದು ಅವರು ಹೇಳಿದರು.

ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾಗಿರುವ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ (ಎಸ್‌ಸಿಎಸ್‌ಪಿ-ಟಿಎಸ್‌ಪಿ) ನಿಧಿಯಿಂದ ಕಾಂಗ್ರೆಸ್‌ನ ಐದು ಚುನಾವಣಾ ಭರವಸೆಗಳನ್ನು ಜಾರಿಗೆ ತರಲು 13,000 ಕೋಟಿ ರೂ.ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಆ ಸಮುದಾಯಕ್ಕೆ ಮಾಡಿರುವ ದೊಡ್ಡ ಅನ್ಯಾಯವಾಗಿದೆ. ಇದು SC/ST ಮತ್ತು ದಲಿತ ವಿರೋಧಿ ಸರ್ಕಾರವಾಗಿದೆ ಎಂದು ಬೊಮ್ಮಾಯಿ ಟೀಕಾ ಪ್ರಹಾರ ನಡೆಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com