
ಕಲಬುರಗಿ: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮಹತ್ವಾಕಾಂಕ್ಷೆಯ ಗೃಹ ಜ್ಯೋತಿ ಯೋಜನೆಯ ಚಾಲನೆ ನೀಡುವ ವೇದಿಕೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆಯವರು, ಕಲ್ಯಾಣ ಕರ್ನಾಟಕ ಪ್ರದೇಶಕ್ಕಾಗಿ 371 ಜೆ ಕಲಂಗೆ ತಿದ್ದುಪಡಿ ತರಲು ಕಾಂಗ್ರೆಸ್ ಮಾಡಿದ ಪ್ರಯತ್ನಗಳನ್ನು ಸ್ಮರಿಸಿದರು.
ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, 2008ರ ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಕಲಬುರಗಿಗೆ ಭೇಟಿ ನೀಡಿದ್ದರುಯ ಇದೇ ಸ್ಥಳದಲ್ಲಿ (ಎನ್‌ವಿ ಮೈದಾನ) ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸಂವಿಧಾನದ 371 ಜೆ ಕಲಂಗೆ ತಿದ್ದುಪಡಿ ತರುವುದಾಗಿ ಭರವಸೆ ನೀಡಿದ್ದರು. ನಾವು ಕೊಟ್ಟ ಮಾತಿನಂತೆ ತಿದ್ದುಪಡಿ ತಂದಿದ್ದೇವೆ, ಸಿದ್ದರಾಮಯ್ಯ ಸರ್ಕಾರ ನಿಯಮಾವಳಿ ರೂಪಿಸಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಹೇಳಿದರು.
ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಧಾನಸಭೆ ಚುನಾವಣೆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಲವು ಬಾರಿ ಭೇಟಿ ನೀಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಈ ಪ್ರದೇಶದ ಹಲವು ಸ್ಥಳಗಳಿಗೆ ಭೇಟಿ ನೀಡಿ ಹಲವು ಸುಳ್ಳು ಭರವಸೆಗಳನ್ನು ನೀಡಿದ್ದರು. ಕಲ್ಯಾಣ ಕರ್ನಾಟಕದ ಜನತೆ ಮುಗ್ಧರು ಮತ್ತು ಸುಳ್ಳು ಭರವಸೆಗಳನ್ನು ನಂಬುತ್ತಾರೆ ಎಂದು ಅವರು ಭಾವಿಸಿದ್ದರು. ಆದರೆ, ನಮ್ಮ ಜನರು ಸಾಕಷ್ಟು ಬುದ್ಧಿವಂತರು. ಶೇ.40 ಕಮಿಷನ್‌ನಲ್ಲಿ ತೊಡಗಿರುವ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶವನ್ನು ಅಭಿವೃದ್ಧಿ ಪಡಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚಿನ ಗಮನ ಹರಿಸಬೇಕು. ರಾಜ್ಯದ ಇತರ ಅಭಿವೃದ್ಧಿ ಹೊಂದಿದ ಪ್ರದೇಶಗಳಿಗೆ ಸರಿಸಮನಾಗಿ ಈ ಪ್ರದೇಶವದಲ್ಲಿ ಅಭಿವೃದ್ಧಿ ತರಬೇಕು. ಕಲ್ಯಾಣ ಕರ್ನಾಟಕ ಪ್ರದೇಶಕ್ಕಾಗಿ ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
Advertisement