ಬಿಜೆಪಿಯನ್ನು ಅಧಿಕಾರಕ್ಕೆ ತರುವವರೆಗೂ ವಿರಮಿಸುವುದಿಲ್ಲ: ಬಿ.ವೈ ವಿಜಯೇಂದ್ರ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವವರೆಗೂ ನಾವು ವಿಶ್ರಾಂತಿ ಪಡೆದುಕೊಳ್ಳುವುದಿಲ್ಲ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಭಾನುವಾರ ಶಪಥ ಮಾಡಿದರು.
ಬಿ.ವೈ ವಿಜಯೇಂದ್ರ
ಬಿ.ವೈ ವಿಜಯೇಂದ್ರ

ದಾವಣಗೆರೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವವರೆಗೂ ನಾವು ವಿಶ್ರಾಂತಿ ಪಡೆದುಕೊಳ್ಳುವುದಿಲ್ಲ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಭಾನುವಾರ ಶಪಥ ಮಾಡಿದರು.

ದಾವಣಗೆರೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನದಲ್ಲಿ ಭಾಗಿಯಾಗುವ ಮುನ್ನ ಬಿಜೆಪಿ ಪದಾಧಿಕಾರಿಗಳ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ನಿನ್ನೆ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆಯಾಗಿದೆ. ಕರ್ನಾಟಕದ ಎಲ್ಲ ಭಾಗದ ಯುವಕರು ಹಾಗೂ ಹಿರಿಯರಿಗೆ ಪಕ್ಷ ಅವಕಾಶ ಮಾಡಿಕೊಟ್ಟಿದೆ. ಈಗ ನಮ್ಮ‌ಮುಂದೆ ದೊಡ್ಡ ಸವಾಲು ಇದೆ. ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಟ ನಡೆಸಲು ಬಲ ಬಂದಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮೂಲಕ ಲೋಕಸಭಾ ಚುನಾವಣೆ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂಗಳವಾರ ನೂತನ‌ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವವರೆಗೂ ವಿರಮಿಸುವುದಿಲ್ಲ ಎಂದು ಇದೇ ವೇಳೆ ಶಪಧ ಮಾಡಿದರು.

ಬಳಿಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ರಾಜ್ಯದ ರೈತರು ಹಿಡಿಶಾಪ ಹಾಕುತ್ತಿದ್ದಾರೆ. ಮೂರನೇ ಬಾರಿಗೆ ನರೇಂದ್ರ‌ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂಬ ಇಚ್ಚೆ ರಾಜ್ಯದ ಜನರಲ್ಲಿದೆ ಎಂದು ಹೇಳಿದರು.

ಹಿಜಾಬ್ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ರಾಜ್ಯದ ಸಿಎಂ ಯಾಕೆ ಮಕ್ಕಳ ಭವಿಷ್ಯದ ಬಗ್ಗೆ ಚೆಲ್ಲಾಟ ಆಡುತ್ತಿದ್ದಾರೆ. ಮಕ್ಕಳಲ್ಲಿ ಜಾತಿಯ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಹೇಳಿಕೆಯನ್ನು ರಾಜ್ಯದ ಜನರೆಲ್ಲ ಗಮನಿಸಿದ್ದಾರೆ. ಈ ವಿಚಾರವನ್ನು ಬಿಜೆಪಿ ಹಗುರವಾಗಿ ತೆಗದುಕೊಳ್ಳಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್​​ನವರಿಗೆ ಯಾಕೆ ಆತುರ, ಸಿಎಂ ಒಡೆದಾಳುವ ನೀತಿ‌ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಜಾತಿ‌ ಜನಗಣತಿ ವರದಿ ವಿಚಾರವಾಗಿ ಮಾತನಾಡಿ, ಯಾವಾಗ ಸೋಲಿನ‌ ಭೀತಿ ಎದುರಾಗುತ್ತೋ‌ ಅಗ ಕಾಂಗ್ರೆಸ್​​ನವರಿಗೆ ಜಾತಿ ಜನಗಣತಿ, ಕಾಂತರಾಜು ವರದಿ ಬಗ್ಗೆ ನೆನಪಾಗುತ್ತದೆ. ಹಿಂದುಳಿದ ಸಮಾಜ ಹಾಗೂ ಹಿಂದುಳಿದ ವರ್ಗಗಳಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ನ್ಯಾಯ ಒದಗಿಸಬೇಕು. ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ಸಮಾಜಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಈ ನಡೆಯನ್ನ ಬಿಜೆಪಿ ಸಹಿಸಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com