ಸಿದ್ದರಾಮಯ್ಯ, ಡಿಕೆ.ಶಿವಕುಮಾರ್ ಜೊತೆ ಸುರ್ಜೇವಾಲಾ ರಹಸ್ಯ ಸಭೆ: ಗರಿಗೆದರಿದ ಕುತೂಹಲ!
ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯ ಮುನ್ನಾದಿನದಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ರಹಸ್ಯ ಸಭೆ ನಡೆಸಿದ್ದು, ನಾಯಕರಿಬ್ಬರೊಂದಿಗೆ ಸುರ್ಜೇವಾಲಾ ಅವರ ಪ್ರತ್ಯೇಕ ಮಾತುಕತೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
Published: 02nd February 2023 01:02 PM | Last Updated: 02nd February 2023 01:42 PM | A+A A-

ರಂದೀಪ್ ಸಿಂಗ್ ಸುರ್ಜೇವಾಲಾ,
ಬೆಂಗಳೂರು: ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯ ಮುನ್ನಾದಿನದಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ರಹಸ್ಯ ಸಭೆ ನಡೆಸಿದ್ದು, ನಾಯಕರಿಬ್ಬರೊಂದಿಗೆ ಸುರ್ಜೇವಾಲಾ ಅವರ ಪ್ರತ್ಯೇಕ ಮಾತುಕತೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಪಕ್ಷದ ನಿಷ್ಠಾವಂತರ ಹಿತಾಸಕ್ತಿಗಳ ಕಾಪಾಡುವಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ಇಬ್ಬರೂ ವಿಫಲರಾಗಿದ್ದು, ಈ ಹಿನ್ನೆಲೆಯಲ್ಲಿ ಭಿನ್ನಾಭಿಪ್ರಾಯಗಳ ಇತ್ಯರ್ಥಗೊಳಿಸಲು ಇಬ್ಬರೊಂದಿಗೆ ಸಭೆ ನಡೆಸುವಂತೆ ಸುರ್ಜೇವಾಲಾ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಜೊತೆಗೆ ಸುರ್ಜೇವಾಲಾ ಅವರು ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಮಾಡುವ ಕುರಿತು ನಿನ್ನೆಯಷ್ಟೇ ಸುರ್ಜೇವಾಲಾ ಅವರು ಸರಣಿ ಚರ್ಚೆಗಳನ್ನು ನಡೆಸಿದರು.
ಇದನ್ನೂ ಓದಿ: ಚಂದ್ರಶೇಖರ್ ರಿಂದ ರಾಹುಲ್ ಗಾಂಧಿವರೆಗೆ: ಜನತೆಯ ಗಮನ ಕೇಂದ್ರೀಕರಿಸಲು ರಾಜಕಾರಣಿಗಳು ನಡೆಸಿದ ಯಾತ್ರೆಗಳ ಸಂಪೂರ್ಣ ವಿವರ!
ಸಭೆಯಲ್ಲಿ ವಿವಿಧ ಸಂಸ್ಥೆಗಳು ಚುನಾವಣೆ ಕುರಿತು ನಡೆಸಿದ ವಿವಿಧ ಸಮೀಕ್ಷೆಗಳ ಕುರಿತೂ ನಾಯಕರು ಚರ್ಚೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ಸುರ್ಜೇವಾಲಾ ಅವರು ಮಾಜಿ ಸಿಎಂ ಡಾ ಜಿ ಪರಮೇಶ್ವರ ಅವರನ್ನು ಮಧ್ಯಾಹ್ನ ಅವರ ನಿವಾಸದಲ್ಲಿ ಭೇಟಿ ಮಾಡಿ, ಗೌಪ್ಯ ಸಭೆ ನಡೆಸಿದರು.
ಕೊರಟಗೆರೆ ಇನ್ನೂ ಸಂಕೀರ್ಣವಾದ ವಿಧಾನಸಭಾ ಕ್ಷೇತ್ರವಾಗಿರುವುದರಿಂದ ಪರಮೇಶ್ವರ ಅವರು ಸುರಕ್ಷಿತ ಸ್ಥಾನ ಹುಡುಕುವಂತೆ ಹೇಳಿರುವ ಸಾಧ್ಯತೆಗಳಿದೆ ಎಂದು ಹೇಳಲಾಗುತ್ತಿದ್ದು, ಸಮೀಕ್ಷೆಯ ವರದಿಯನ್ನು ಆಧರಿಸಿ ಸುರ್ಜೇವಾಲಾ ಅವರು ಈ ಸಲಹೆಯನ್ನು ನೀಡಿರಬಹುದು ಎಂದು ಮೂಲಗಳು ತಿಳಿಸಿವೆ.
ಗುರುವಾರ ದೇವನಹಳ್ಳಿಯ ರೆಸಾರ್ಟ್‌ನಲ್ಲಿ 36 ಸದಸ್ಯರ ಚುನಾವಣಾ ಸಮಿತಿ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ವೇಳೆ ಯಾವುದೇ ರೀತಿಯ ಮುಜುಗರ ಎದುರಾಗದಂತೆ ಬುಧವಾರ ಸರಣಿ ಸಭೆಗಳ ನಡೆಸಿದ್ದರು ಎಂದು ತಿಳಿದುಬಂದಿದೆ.