ಆ ಸೀತೆಗೂ ಅಗ್ನಿ ಪರೀಕ್ಷೆ ತಪ್ಪಲಿಲ್ಲ, ಇನ್ನು ಲಕ್ಷ್ಮಿ ಹೆಬ್ಬಾಳ್ಕರ್ ಯಾವ ಲೆಕ್ಕ; 3 ತಿಂಗಳು ಕೆಟ್ಟದನ್ನ ನೋಡಲ್ಲ, ಕೆಟ್ಟದನ್ನ ಕೇಳಲ್ಲ: ಗ್ರಾಮೀಣ ಶಾಸಕಿ ಶಪಥ!
ರಾಜಕಾರಣದಲ್ಲಿ ಮಹಿಳೆಯರಿಗೆ ಬಹಳ ಕಷ್ಟವಿದೆ. ಹಂತ ಹಂತದಲ್ಲೂ ನಾವು ಅಗ್ನಿ ಪರೀಕ್ಷೆಯನ್ನು ಎದುರಿಸಬೇಕು. ಆ ಸೀತಾ ಮಾತೆ ಕೂಡ ಅಗ್ನಿ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಇನ್ನು ಈ ಲಕ್ಷ್ಮಿ ಹೆಬ್ಬಾಳ್ಕರ್ ಯಾವ ಲೆಕ್ಕ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ತಮ್ಮ ಬಗ್ಗೆ ಹೇಳಿಕೊಂಡರು
Published: 06th February 2023 10:34 AM | Last Updated: 06th February 2023 12:57 PM | A+A A-

ಲಕ್ಷ್ನಿ ಹೆಬ್ಬಾಳ್ಕರ್
ಚಿಕ್ಕಮಗಳೂರು: ಸಿಡಿ ಪ್ರಕರಣ ಸಂಬಂಧ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಲ್ಲೇ ಇದ್ದಾರೆ. ಇನ್ನು ಈ ವಿಚಾರವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿ ಪ್ರತಿಕ್ರಿಯಿಸಿದ್ದು, 3 ತಿಂಗಳು ಕೆಟ್ಟದನ್ನ ನೋಡಲ್ಲ, ಕೆಟ್ಟದನ್ನ ಕೇಳಲ್ಲ, ಕೆಟ್ಟದನ್ನ ಮಾಡಲ್ಲ . ಈ ಬಾರಿ ತಾಳ್ಮೆಯಿಂದ ಚುನಾವಣೆ ಮಾಡಬೇಕೆಂದು ಅಂದುಕೊಂಡಿದ್ದೇನೆ. ಸಿಡಿ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲ್ಲವೆಂದು ಎಂದು ಸ್ಪಷ್ಟಪಡಿಸಿದರು.
ರಾಜಕಾರಣದಲ್ಲಿ ಮಹಿಳೆಯರಿಗೆ ಬಹಳ ಕಷ್ಟವಿದೆ. ಹಂತ ಹಂತದಲ್ಲೂ ನಾವು ಅಗ್ನಿ ಪರೀಕ್ಷೆಯನ್ನು ಎದುರಿಸಬೇಕು. ಆ ಸೀತಾ ಮಾತೆ ಕೂಡ ಅಗ್ನಿ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಇನ್ನು ಈ ಲಕ್ಷ್ಮಿ ಹೆಬ್ಬಾಳ್ಕರ್ ಯಾವ ಲೆಕ್ಕ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ತಮ್ಮ ಬಗ್ಗೆ ಹೇಳಿಕೊಂಡರು. ಅಲ್ಲದೆ, ಚುನಾವಣೆ ಹಿನ್ನೆಲೆಯಲ್ಲಿ ಇನ್ನು ಮೂರು ತಿಂಗಳೂ ತಾವು ಹೆಚ್ಚು ಮಾತನಾಡುವುದಿಲ್ಲ ಎಂದೂ ಹೇಳಿಕೊಂಡಿದ್ದಾರೆ.
ಮಹಿಳೆ ಎಂದರೇ ಒಂದು ಸಂಘರ್ಷ, ಅದು ಮಹಿಳೆ ಜತೆಯೇ ಬರುತ್ತದೆ. ಹುಟ್ಟಿನಿಂದ ಸಾಯುವವರೆಗೂ ಪರೀಕ್ಷೆಗಳನ್ನು ಹೊತ್ತುಕೊಂಡೇ ಇರಬೇಕು, ಎದುರಿಸಬೇಕು, ಪಾಸಾಗಬೇಕು ಎಂದು ನೋವು ತೋಡಿಕೊಂಡರು. ನಾನು ಮಾಡಿದ ಅಭಿವೃದ್ಧಿ ಕೆಲಸದಿಂದ ಚುನಾವಣೆಯಲ್ಲಿ ಗೆಲ್ಲಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ. ಮಹಿಳೆಯರ ಪರವಾದ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಾಗಿದೆ. ಹಾಗಾಗಿ 3 ತಿಂಗಳು ಬಹಳ ತಾಳ್ಮೆಯಿಂದ ಇರಲು ಬಯಸುತ್ತೇನೆ ಎಂದು ಹೇಳಿದರು.