ಸಿದ್ದರಾಮಯ್ಯ ಹೊಸ ಪ್ಲಾನ್: 'ಬಂಡೆ' ಬುಡಕ್ಕೆ ಡೈನಾಮೇಟ್- ಕುಮಾರಸ್ವಾಮಿಗೆ ಲಾಕ್; ಚನ್ನಪಟ್ಟಣದಿಂದ ಸ್ಯಾಂಡಲ್ ವುಡ್ ಕ್ವೀನ್?

ವಿಧಾನಸಭೆ ಚುನಾವಣೆ  ಸಮೀಪಿಸುತ್ತಿರುವಂತೆ ರಾಜ್ಯ ರಾಜಕೀಯ ರಂಗೇರುತ್ತಿದೆ, ಮೂರು ಪಕ್ಷಗಳು ಬಹುಮತ ಪಡೆಯಲು ಹಲವು ತಂತ್ರಗಳನ್ನು ಬಳಸುತ್ತಿದ್ದಾರೆ. ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನ ಪಡೆಯಲು ಕಾಂಗ್ರೆಸ್, ಜೆಡಿಎಸ್ ಜೊತೆ ಬಿಜೆಪಿ ಕೂಡ ಹಣಾಹಣಿ ನಡೆಸುತ್ತಿದೆ.
ಡಿ.ಕೆ ಶಿವಕುಮಾರ್, ಎಚ್ ಡಿ ಕುಮಾರಸ್ವಾಮಿ ಮತ್ತು ಸಿ.ಪಿ ಯೋಗೇಶ್ವರ್, ರಮ್ಯಾ
ಡಿ.ಕೆ ಶಿವಕುಮಾರ್, ಎಚ್ ಡಿ ಕುಮಾರಸ್ವಾಮಿ ಮತ್ತು ಸಿ.ಪಿ ಯೋಗೇಶ್ವರ್, ರಮ್ಯಾ

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ರಾಜ್ಯ ರಾಜಕೀಯ ರಂಗೇರುತ್ತಿದೆ, ಮೂರು ಪಕ್ಷಗಳು ಬಹುಮತ ಪಡೆಯಲು ಹಲವು ತಂತ್ರಗಳನ್ನು ಬಳಸುತ್ತಿದ್ದಾರೆ. ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನ ಪಡೆಯಲು ಕಾಂಗ್ರೆಸ್, ಜೆಡಿಎಸ್ ಜೊತೆ ಬಿಜೆಪಿ ಕೂಡ ಹಣಾಹಣಿ ನಡೆಸುತ್ತಿದೆ.

ಮುಖ್ಯಮಂತ್ರಿ ಹುದ್ದೆ ಮೇಲೆ ಕಾಂಗ್ರೆಸ್ ನಾಯಕರುಗಳಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರು ಕಣ್ಣಿಟ್ಟಿದ್ದು ಮುಸುಕಿನ ಗುದ್ದಾಟ ಮುಂದುವರಿದಿದೆ, ಇದೇ ವೇಳೆ ಡಿ.ಕೆ ಶಿವಕುಮಾರ್ ಅವರನ್ನು ಮಣಿಸಲು ತಮ್ಮದೇ ಆದ ತಂತ್ರ ರೂಪಿಸುತ್ತಿದ್ದಾರೆ. ಇದರ ಭಾಗವಾಗಿ ಚನ್ನಪಟ್ಟಣ ಕ್ಷೇತ್ರದಿಂದ ಸ್ಯಾಂಡಲ್ ವುಡ್ ನಟಿ ರಮ್ಯಾ ಅವರನ್ನು ಕಣಕ್ಕಿಳಿಸಬೇಕೆಂದು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ಕನಕಪುರ ಬಂಡೆ ಬುಡಕ್ಕೆ ಡೈನಾಮೇಟ್ ಇಟ್ಟು, ಕುಮಾರಸ್ವಾಮಿಯನ್ನು ಲಾಕ್ ಮಾಡುವ ದಾಳವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹೂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಜೆಡಿಎಸ್‌ನಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಕಣಕ್ಕಿಳಿಯುವುದು ಖಚಿತವಾಗಿದೆ. ಇವರಿಬ್ಬರ ಎದುರು ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದ ಕಾಂಗ್ರೆಸ್ ವರಿಷ್ಠರು ಉದ್ಯಮಿ ಪ್ರಸನ್ನ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಕುಮಾರಸ್ವಾಮಿ ಮತ್ತು ಯೋಗೇಶ್ವರ್ ಎದುರು ಪ್ರಬಲ ಅಭ್ಯರ್ಥಿಯೊಬ್ಬರ ಹುಡುಕಾಟದಲ್ಲಿರುವ ಕಾಂಗ್ರೆಸ್‌ ಚಿತ್ರನಟಿ ರಮ್ಯಾ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಚಿಂತನೆ ನಡೆಸಿದೆ ಎನ್ನಲಾಗಿದೆ. ಪಕ್ಷದ ಸಾಂಪ್ರದಾಯಿಕ ಮತಗಳ ಜತೆಗೆ ಮಹಿಳಾ ಮತದಾರರನ್ನು ಸೆಳೆಯಬಹುದು ಎನ್ನುವ ಲೆಕ್ಕಾಚಾರ ಇದರ ಹಿಂದಿದೆ.

ಆದರೆ ಸಿದ್ದರಾಮಯ್ಯ ಅವರು ಹೊಸ ಗೇಮ್ ಪ್ಲಾನ್ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್‍ ನಲ್ಲಿ ಗೆಲುವಿನ ಮಂತ್ರಕ್ಕೆ ಹೊಸ ತಂತ್ರಗಾರಿಕೆಯ ಮುನ್ನುಡಿಯನ್ನು ಸಿದ್ದರಾಮಯ್ಯ ಬರೆದಿದ್ದಾರೆ. ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿಯಬೇಕಾದರೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಮಣಿಸಿ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಬೇಕು. ಹಾಗಾಗ ಬೇಕಾದರೆ ಮಂಡ್ಯ, ರಾಮನಗರದಂತಹ ಒಕ್ಕಲಿಗರ ಕೋಟೆಯಲ್ಲಿ ಜೆಡಿಎಸ್ ಮಣಿಸಬೇಕು. ಇದಕ್ಕೆ ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ತಮ್ಮದೇ ಗೆಲುವಿನ ಫಾರ್ಮುಲಾ ಇಟ್ಟಿದ್ದಾರೆ ಎನ್ನಲಾಗಿದೆ. ಈ ಮೂಲಕ ಎಚ್.ಡಿ ಕುಮಾರಸ್ವಾಮಿ ಜೊತೆ ಡಿ.ಕೆ ಶಿವಕುಮಾರ್ ಅವರಿಗಿರುವ ಬಾಂಧವ್ಯವನ್ನು ಮುರಿಯಬೇಕೆನ್ನುವುದು ಸಿದ್ದರಾಮಯ್ಯ ಪ್ಲಾನ್ ಆಗಿದೆ.

ಕಾಂಗ್ರೆಸ್ ಗೆಲುವು ಸುಲಭವಾಗಬೇಕಾದರೆ ರಾಮನಗರದಿಂದ ಸಂಸದ ಡಿ.ಕೆ ಸುರೇಶ್ ಅವರನ್ನ, ಚನ್ನಪಟ್ಟಣದಿಂದ ಮೋಹಕ ತಾರೆ ಮಾಜಿ ಸಂಸದೆ ರಮ್ಯಾ ಅವರನ್ನ ಅಖಾಡಕ್ಕೆ ಇಳಿಸಿದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎನ್ನೋದು ಸಿದ್ದರಾಮಯ್ಯ ವಾದ ಎಂದು ತಿಳಿದು ಬಂದಿದೆ.

ರಮ್ಯಾ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಿದರೆ ಕುಮಾರಸ್ವಾಮಿ ಅವರನ್ನ ಚನ್ನಪಟ್ಟಣ ಹಾಗೂ ರಾಮನಗರದಲ್ಲೇ ಕಟ್ಟಿ ಹಾಕಬಹುದು. ಇದು ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ಇಟ್ಟ ಗೆಲುವಿನ ಫಾರ್ಮುಲಾ ಎನ್ನಲಾಗಿದೆ.

ಆದರೆ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಆರ್ಭಟದ ನಡುವೆ ಪಕ್ಷವನ್ನು ಸಮರ್ಥವಾಗಿ ಕಟ್ಟಲು ಡಿ.ಕೆ. ಸಹೋದರರು ಚಿಂತನೆ ನಡೆಸಿ ಉದ್ಯಮಿ ಪ್ರಸನ್ನ ಅವರನ್ನು ಪಕ್ಷಕ್ಕೆ ಕರೆತಂದಿದ್ದರು. ಪಕ್ಷಕ್ಕೆ ಬಂದಾಗಿನಿಂದಲೂ ಪ್ರಸನ್ನ ತಾಲ್ಲೂಕಿನಲ್ಲಿ ಸಕ್ರಿಯವಾಗಿದ್ದರು. ಸ್ಥಳೀಯ ಕಾಂಗ್ರೆಸ್ಸಿಗರ ನಡುವೆ ವೈಮನಸ್ಸು ಸೃಷ್ಟಿಯಾಗಿ ಪ್ರಸನ್ನ ಅವರು ಪಕ್ಷ ಸಂಘಟನೆಯಿಂದ ಕೆಲವು ದಿನ ದೂರ ಉಳಿದಿದ್ದರು. ಆನಂತರ ಸಂಧಾನದ ಬಳಿಕ  ಮತ್ತೆ ಸಕ್ರಿಯರಾಗಿದ್ದರು.

ಚನ್ನಪಟ್ಟಣದಲ್ಲಿ ಈಗಾಗಲೇ ಹಾಲಿ ಶಾಸಕ ಎಚ್.ಡಿ. ಕುಮಾರಸ್ವಾಮಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಸಂಕಲ್ಪ ಯಾತ್ರೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com