ಕಾಂಗ್ರೆಸ್‌ನಲ್ಲಿ ಅಸುರರ ದೊಡ್ಡ ಪಟ್ಟಿಯೇ ಇದೆ: ಸುರ್ಜೇವಾಲಾಗೆ ಸಿಎಂ ಬೊಮ್ಮಾಯಿ ತಿರುಗೇಟು

ಬಿಜೆಪಿಯ ನಾಯಕರನ್ನು ಅಸುರರು ಎಂದು ಕರೆದಿರುವ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕಾಂಗ್ರೆಸ್‌ನಲ್ಲಿರುವ ಅಸುರರ ಪಟ್ಟಿ ಬಹಳ ದೊಡ್ಡದಿದೆ ಎಂದು ಗುಡುಗಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಬಿಜೆಪಿಯ ನಾಯಕರನ್ನು ಅಸುರರು ಎಂದು ಕರೆದಿರುವ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕಾಂಗ್ರೆಸ್‌ನಲ್ಲಿರುವ ಅಸುರರ ಪಟ್ಟಿ ಬಹಳ ದೊಡ್ಡದಿದೆ ಎಂದು ಗುಡುಗಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕರ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು.

ರಣದೀಪ್‌ ಸಿಂಗ್ ಸುರ್ಜೇವಾಲಾ‌ ಬಿಜೆಪಿಯ ಬಗ್ಗೆ ಚಿಂತಿಸುವುದನ್ನು ಬಿಟ್ಟು, ಮೊದಲು ಕಾಂಗ್ರೆಸ್‌ನ ಒಳಜಗಳನ್ನು ಬಗೆಹರಿಸಲಿ ಎಂದು ಕುಹುಕವಾಡಿದರು.

ಬಿಜೆಪಿ ಬಗ್ಗೆ ಏನಾದರೂ ಮಾತನಾಡುವ ಮೊದಲು, ಸುರ್ಜೇವಾಲಾ ಅವರು ಮೊದಲು ಕರ್ನಾಟಕದ ಬಗ್ಗೆ ತಿಳಿದುಕೊಳ್ಳುವುದು ಒಳಿತು ಎಂದು ಸಲಹೆ ನೀಡಿದರು.

70 ವರ್ಷ ಆಡಳಿತ ಮಾಡಿರುವ ಕಾಂಗ್ರೆಸ್‌ನ್ನು ಕಿತ್ತೆಸೆದಿರುವ ರಾಜ್ಯ ಮತ್ತು ದೇಶದ ಜನತೆ, ನಿಜವಾದ ಅಸುರರು ಯಾರೆಂದು ತೋರಿಸಿದ್ದಾರೆ. ಕಾಂಗ್ರೆಸ್‌ನಲಿರುವ ಅಸುರರ ಪಟ್ಟಿಯನ್ನು ಬೇಕಾದರೆ ಸುರ್ಜೇವಾಲಾ ಅವರಿಗೆ ಕಳುಹಿಸಿಕೊಡಲಾಗುವುದು ಎಂದು ವ್ಯಂಗ್ಯವಾಡಿದರು.

ಬಳಿಕ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ರಾಜ್ಯದಲ್ಲಿ ನರಕ ಸೃಷ್ಟಿಸಿದೆ ಎಂಬ ಆರೋಪಕ್ಕೆ ಖಡಕ್‌ ಆಗಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಸೃಷ್ಟಿಸಿದ್ದ ನರಕದಿಂದ ನಾವು ರಾಜ್ಯದ ಜನರನ್ನು ರಕ್ಷಿಸುತ್ತಿದ್ದೇವೆ. ಕಾಂಗ್ರೆಸ್‌ ಆಡಳಿತ ಪಕ್ಷವಾಗಿ ಮಾತ್ರವಲ್ಲದೇ ವಿರೋಧ ಪಕ್ಷವಾಗಿಯೂ ಸಂಪೂರ್ಣ ವಿಫಲವಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಈ ಬಾರಿಯ ಬಜೆಟ್‌ನಲ್ಲಿ ಕಾಂಗ್ರೆಸ್‌ನ ಗೃಹಲಕ್ಷ್ಮೀ ಯೋಜನೆಯನ್ನು ಬೊಮ್ಮಾಯಿ ನಕಲು ಮಾಡಿದ್ದಾರೆ ಎಂಬ ಸುರ್ಜೇವಾಲಾ ಆರೋಪಕ್ಕೆ ಪ್ರತಿಕ್ರಿಯಿಸಿ, ನಾವು ಗೃಹಿಣಿ ಶಕ್ತಿ ನೀಡಿದ ಮೇಲೆ ಕಾಂಗ್ರೆಸ್‌ನವರು ಗೃಹಲಕ್ಷ್ಮಿ ಯೋಜನೆ ಘೋಷಿಸಿದ್ದಾರೆ. ಸುರ್ಜೇವಾಲಾ ಅವರಿಗೆ ನೆನಪಿನ ಶಕ್ತಿ ಕಡಿಮೆಯಾಗಿದೆ ಎಂದು ಲೇವಡಿ ಮಾಡಿದರು.

ಕಳೆದ ಬಾರಿ ಆಯವ್ಯಯ ಅನುಷ್ಠಾನಕ್ಕೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಈ ಸಮಿತಿ ಮೂಲಕ ಬಹುತೇಕ ಶೇ. 90ರಷ್ಟು ಆದೇಶಗಳನ್ನು ಹೊರಡಿಸಲಾಗಿದೆ. ಅದೇ ರೀತಿ ಈ ಬಾರಿಯೂ ಕೂಡ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಅನುಷ್ಠಾನ ಸಮಿತಿ ರಚಿಸಿ, ಬಜೆಟ್‌ನ್ನು ಸರಿಯಾಗಿ ಅನುಷ್ಠಾನ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಇದೇ ವೇಳೆ ಭರವಸೆ ನೀಡಿದರು.

ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಕಿವಿ ಮೇಲೆ ಹೂವಿಟ್ಟುಕೊಳ್ಳುವ ಅಭಿಯಾನ ಆರಂಭಿಸಿರುವ ಬಗ್ಗೆ‌ ಪ್ರತಿಕ್ರಿಯಿಸಿದ ಸಿಎಂ, ಇಷ್ಟು ದಿನ ಕಾಂಗ್ರೆಸ್‌ನವರು ಜನರ ಕಿವಿ ಮೇಲೆ ಹೂವಿಡುತ್ತಿದ್ದರು, ಆದರೆ ಮುಂದಿನ ವಿಧಾನಸಭೆ ಚುನಾವಣೆ ಬಳಿಕ ಜನರೇ ಕಾಂಗ್ರೆಸ್‌ ನಾಯಕರ ಕಿವಿ ಮೇಲೆ ಹೂವಿಡಲಿದ್ದಾರೆ ಎಂದು ವ್ಯಂಗ್ಯವಾಡಿದರು.

2024ರ ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳು ಒಂದಾದರೆ ಬಿಜೆಪಿಯನ್ನು ಕೇವಲ 100 ಸೀಟುಗಳಿಗೆ ಸಿಮೀತಗೊಳಿಸಬಹುದು ಎಂಬ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ಅಧಿಕಾರಕ್ಕಾಗಿ ಬಣ ಬದಲಿಸುವ ವ್ಯಕ್ತಿಯ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com