ಸಂಸದ ಜಿ.ಎಸ್.ಬಸವರಾಜು ದೊಡ್ಡ ಲೂಟಿಕೋರ; ಜೆಡಿಎಸ್‌ನ ಮೂರ್ನಾಲ್ಕು ಶಾಸಕರು ಪಕ್ಷ ಬಿಡಲಿದ್ದಾರೆ: ಶಾಸಕ ಶ್ರೀನಿವಾಸ್

ಬಗರ್ ಹುಕುಂ ಕಮಿಟಿಯಿಂದ ನಾನು ನನ್ನ ಸಂಬಂಧಿಕರಿಗೆ, ಕಾರ್ಯಕರ್ತರಿಗೆ ಒಬ್ಬರಿಗೂ ಜಮೀನು ಮಾಡಿಕೊಟ್ಟಿಲ್ಲ, ಮಾಡಿಕೊಟ್ಟಿರೋದು ಏನಾದರು ಇದ್ರೆ ಬಿಜೆಪಿಯವರು ತಂದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ.
ಎಸ್ ಆರ್ ಶ್ರೀನಿವಾಸ್
ಎಸ್ ಆರ್ ಶ್ರೀನಿವಾಸ್

ತುಮಕೂರು: ಜೆಡಿಎಸ್ ಉಚ್ಛಾಟಿತ ಶಾಸಕ ಎಸ್.ಆರ್ ಶ್ರೀನಿವಾಸ್ ಹಾಗೂ ಬಿಜೆಪಿ ನಾಯಕರ ನಡುವಿನ ಮುಸುಗಿನ ಗುದ್ದಾಟ ಬಹಿರಂಗವಾಗಿದೆ. ಬಗರ್ ಹುಕ್ಕುಂ ಕಮಿಟಿ ಸಭೆ ಮುಂದೂಡಿದ ಬೆನ್ನಲ್ಲೆ, ಶಾಸಕ ಎಸ್. ಆರ್ ಶ್ರೀನಿವಾಸ್ ಸಂಸದ ಹಾಗೂ ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದಿದ್ದಾರೆ.

ಬಗರ್ ಹುಕುಂ ಕಮಿಟಿಯಿಂದ ನಾನು ನನ್ನ ಸಂಬಂಧಿಕರಿಗೆ, ಕಾರ್ಯಕರ್ತರಿಗೆ ಒಬ್ಬರಿಗೂ ಜಮೀನು ಮಾಡಿಕೊಟ್ಟಿಲ್ಲ, ಮಾಡಿಕೊಟ್ಟಿರೋದು ಏನಾದರು ಇದ್ರೆ ಬಿಜೆಪಿಯವರು ತಂದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

ನಾನು ರಾಜಕೀಯಕ್ಕೆ ಬಂದಾಗಿನಿಂದಲೂ ಒಂದು ಗುಂಟೆ ಜಮೀನು ತಗೊಂಡಿಲ್ಲ, ಆದರೆ ಬಸವರಾಜ್ ಸಂಸದರಾಗಿ ಆಯ್ಕೆಯಾದ ನಂತರ ಗುಬ್ಬಿ ತಾಲ್ಲೂಕಿನ ಚೇಳೂರು ರಸ್ತೆಯ ದೊಡ್ಡಬಿದರೆ ಗೇಟ್ ಬಳಿ ಎಕರೆಗೆ 80 ಲಕ್ಷದಂತೆ 80 ಎಕರೆ ಜಮೀನು ಖರೀದಿಸಿದ್ದಾರೆ. ಅವರಂತೆ ಲೂಟಿ ಮಾಡಬೇಕಾದರೆ ಹಣ ಹೊಡಿಬೇಕು. ನನಗೆ ಎಲ್ಲಿಂದ ಬರುತ್ತದೆ’ ಎಂದು ತಿಳಿಸಿದರು.

ಬಗರ್ ಹುಕುಂ ಸಮಿತಿ ಸಭೆಯಲ್ಲಿ ಬಡವರಿಗೆ ಜಮೀನು ಮಂಜೂರು ಮಾಡಲು ಅವಕಾಶ ನೀಡುತ್ತಿಲ್ಲ. ಸಂಸದರು ತಮ್ಮ ಬೆಂಬಲಿಗ ಸಮಿತಿ ಸದಸ್ಯರ ಮೂಲಕ ನಿಯಂತ್ರಿಸಿದ್ದಾರೆ. ಮಂಗಳವಾರ ನಡೆದ ಸಮಿತಿ ಸಭೆಗೆ ಸಂಸದರ ಬೆಂಬಲಿಗ ಸದಸ್ಯರು ಹಾಜರಾಗದಂತೆ ನೋಡಿಕೊಂಡರು. ಒಪ್ಪಿಗೆ ಸಿಕ್ಕಿದ್ದರೆ ನೂರಾರು ರೈತರಿಗೆ ಅನುಕೂಲವಾಗುತ್ತಿತ್ತು. ಬಡವರಿಗೆ ಜಮೀನು ಸಿಗದಂತೆ ಮಾಡಿದರು. ಆದರೆ ಅವರು ಮಾತ್ರ ಜಮೀನು ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು.

ಜೆಡಿಎಸ್ ಚಿಹ್ನೆ ಮೇಲೆ ಆಯ್ಕೆಯಾಗಿದ್ದು, ಪಕ್ಷದಿಂದ ಹೊರಗೆ ಹಾಕಿದ್ದಾರೆ. ಮತ್ತೆ ಪಕ್ಷಕ್ಕೆ ಮರಳುವುದಿಲ್ಲ. ಕಾಂಗ್ರೆಸ್ ಸೇರುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೊ ಯಾತ್ರೆಯಲ್ಲಿ ದೇಶದ ಪ್ರಜೆಯಾಗಿ ಸೌಜನ್ಯಕ್ಕಾಗಿ ಭೇಟಿ ಕೊಟ್ಟಿದೆ. ಗೌರವಯುತವಾಗಿ ನಡೆಸಿಕೊಳ್ಳುವ ಪಕ್ಷ ಸೇರುತ್ತೇನೆ. ಇಲ್ಲವಾದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ’ ಎಂದು ತಿಳಿಸಿದರು.

ನನ್ನ ಜತೆಗೆ ಜೆಡಿಎಸ್‌ನ ಮೂರು–ನಾಲ್ಕು ಶಾಸಕರು ಪಕ್ಷ ಬಿಡಲಿದ್ದಾರೆ. ಅದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ. ಯಾರೆಲ್ಲ ಪಕ್ಷ ತೊರೆಯುತ್ತಾರೆ ಎಂಬುದು ಸಮಯ ಬಂದಾಗ ಗೊತ್ತಾಗುತ್ತದೆ’ ಎಂದು ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

ಕೆಲವರು ಪಕ್ಷ ಬಿಡುವ ಬಗ್ಗೆ ನನ್ನ ಜತೆಗೆ ಮಾತುಕತೆ ನಡೆಸಿದ್ದಾರೆ. ಶಾಸಕ ಜಿ.ಟಿ.ದೇವೇಗೌಡ ಸಹ ಪಕ್ಷ ತೊರೆಯಲು ಸಿದ್ಧರಾಗಿದ್ದರು. ಕೊನೆಗೆ ಅವರ ಜತೆಗೆ ಸೇರಿಕೊಂಡರು. ಹಾಗಾಗಿ ಈಗಲೇ ಏನನ್ನೂ ಹೇಳಲಾಗದು. ಆದರೆ ನಾನು ಮಾತ್ರ ಜೆಡಿಎಸ್‌ಗೆ ಮತ್ತೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಖಚಿತಪಡಿಸಿದರು.

ಜೆಡಿಎಸ್ ಪಂಚರತ್ನ ಯಾತ್ರೆ ಗುಬ್ಬಿಯಲ್ಲಿ ಸಂಚಾರ ನಡೆಸಿದ್ದರಿಂದ ನನಗೆ ಯಾವುದೇ ತೊಂದರೆ ಆಗಿಲ್ಲ, ನಾನು ಅದಕ್ಕೆ ಹೆದರುವುದು ಇಲ್ಲ, ಬೇರೆ ತಾಲ್ಲೂಕಿನಲ್ಲಿ ನಡೆದಿದ್ದಕೂ ನಮ್ಮ ತಾಲೂಕಿನಲ್ಲಿ ನಡೆದಿದ್ದಕ್ಕೂ ಹೆಚ್ಚಿನ ವ್ಯತ್ಯಾಸ ಇದೆ. ಯಾವ ರತ್ನನೂ ನಡಿಲಿ ಜನ ತಿರ್ಮಾನ ಮಾಡುತ್ತಾರೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com