ಭವಾನಿ 'ಬಯಕೆ'ಯ ಬಿರುಗಾಳಿ: ಪ್ರಬಲ ಆಕಾಂಕ್ಷಿ ಸ್ವರೂಪ್ ಪ್ರಕಾಶ್ ಗೆ ತಲ್ಲಣ; ಅತ್ತಿಗೆ ನಡೆಯಿಂದ ಎಚ್ ಡಿಕೆಗೆ ಮುಜುಗರ!

ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಮುನ್ನವೇ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಭವಾನಿ ರೇವಣ್ಣ ಸ್ವಯಂ ಘೋಷಿಸಿಕೊಂಡಿದ್ದಾರೆ. ಇದು ಕ್ಷೇತ್ರ ಹಾಗೂ ಜೆಡಿಎಸ್ ಪಾಳಯದಲ್ಲಿ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಭವಾನಿ, ಕುಮಾರಸ್ವಾಮಿ ಮತ್ತು ಸ್ವರೂಪ್
ಭವಾನಿ, ಕುಮಾರಸ್ವಾಮಿ ಮತ್ತು ಸ್ವರೂಪ್

ಹಾಸನ: ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಮುನ್ನವೇ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಭವಾನಿ ರೇವಣ್ಣ ಸ್ವಯಂ ಘೋಷಿಸಿಕೊಂಡಿದ್ದಾರೆ. ಇದು ಕ್ಷೇತ್ರ ಹಾಗೂ ಜೆಡಿಎಸ್ ಪಾಳಯದಲ್ಲಿ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾಜಿ ಸಚಿವ ಎಚ್.ಡಿ.‌ರೇವಣ್ಣ ಪತ್ನಿ ಭವಾನಿ ರೇವಣ್ಣ ಭಾಗಿಯಾಗಿ, ಇನ್ನು 90 ದಿನಗಳಲ್ಲಿ ನಮ್ಮ ಚುನಾವಣೆ ಮುಗಿದು ಹೋಗಿರುತ್ತದೆ. ಜೆಡಿಎಸ್‌ನಿಂದ ನನ್ನನ್ನು ಅಭ್ಯರ್ಥಿ ಮಾಡಬೇಕೆಂದು ಎಲ್ಲರೂ ಕೂಡ ಮಾತನಾಡಿಕೊಂಡು, ನಿರ್ಣಯ ತೆಗೆದುಕೊಂಡಿದ್ದಾರೆ. ಇನ್ನು ಸ್ವಲ್ಪ ದಿನದಲ್ಲಿಯೇ ನಮ್ಮ ಹೆಸರು ಕೂಡ ಹೇಳುತ್ತಾರೆ ಎಂದು ಭವಾನಿ ರೇವಣ್ಣ ಹೇಳಿದ್ದಾರೆ.

ಪಾಪ ಅವರಿಗೂ ಸ್ಪರ್ಧೆ ಮಾಡಬೇಕೆಂಬ ಆಸೆ ಇದೆ. ಆಸೆ ಇರುವುದು ತಪ್ಪಲ್ಲ. ಅದರೆ, ಪಕ್ಷ ಸಂಘಟನೆ ಹಾಗೂ ರಾಜ್ಯದ ಜನರಿಗೆ ಸಂದೇಶ ಕೊಡುವ ದೃಷ್ಟಿಯಿಂದ ಸೂಕ್ತ ತೀರ್ಮಾನವನ್ನು ಪಕ್ಷ ತೆಗೆದುಕೊಳ್ಳುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವುದರ ಬಗ್ಗೆ ಅನುಮಾನ ವ್ಯಕ್ತಪಡಿಸುವುದರ ಜತೆಗೆ ಸೈಲೆಂಟ್ ಆಗಿ ತಿರುಗೇಟು ನೀಡಿದ್ದಾರೆ.

ಆಕೆಯ ಹೇಳಿಕೆಯಿಂದ ಬೆಚ್ಚಿಬಿದ್ದಿರುವ ಸ್ವರೂಪ್ ಪ್ರಕಾಶ್, ಪಕ್ಷದಿಂದ ಹಾಸನದ ಏಕೈಕ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಯ ಎಲ್ಲ ಏಳು ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಅಂತಿಮಗೊಳಿಸಲಿದ್ದಾರೆ ಎಂದು ಹೇಳಿದ್ದಾರೆ. ಟಿಕೆಟ್ ಸಿಗುವ ವಿಶ್ವಾಸವಿದೆ, ಆದರೆ ಪಕ್ಷದ ಯಾವುದೇ ನಿರ್ಧಾರಕ್ಕೆ ಬದ್ಧರಾಗಿರುತ್ತೇನೆ ಎಂದು ಪ್ರಕಾಶ್ ಹೇಳಿದರು.

ನಾಮಪತ್ರ ಸಲ್ಲಿಕೆಯಾಗುವವರೆಗೂ ಉಮೇದುವಾರಿಕೆಯನ್ನು ಬಹಿರಂಗಪಡಿಸದಂತೆ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಕುಮಾರಸ್ವಾಮಿ ಮತ್ತು ರೇವಣ್ಣ  ಭವಾನಿ ಅವರಿಗೆ ಮನವಿ ಮಾಡಿದ್ದರು, ಆದರೆ ಅದನ್ನು ಗೌರವಿಸದ ಭವಾನಿ ಅವರನ್ನು ಅವಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉತ್ತರ ಕರ್ನಾಟಕದಲ್ಲಿ ಪಂಚರತ್ನ ಯಾತ್ರೆಯಲ್ಲಿ ನಿರತರಾಗಿರುವ ಕುಮಾರಸ್ವಾಮಿ, ಹಾಸನ ಜಿಲ್ಲೆಯಲ್ಲಿ ಪಕ್ಷದಿಂದ ಯಾವುದೇ ಅಭ್ಯರ್ಥಿಗಳಿಗೆ ಟಿಕೆಟ್ ಅಂತಿಮಗೊಳಿಸಿಲ್ಲ ಎಂದಿದ್ದಾರೆ.

ಹಾಸನ ಸಂಸದ ಹಾಗೂ ಭವಾನಿ ಅವರ ಪುತ್ರ ಪ್ರಜ್ವಲ್ ರೇವಣ್ಣ ಕೂಡ ಜಿಲ್ಲೆಯಲ್ಲಿ ಅಭ್ಯರ್ಥಿಗಳಿಗೆ ಪಕ್ಷ ಇನ್ನೂ ಟಿಕೆಟ್ ಘೋಷಣೆ ಮಾಡಿಲ್ಲ, ದೇವೇಗೌಡ ಮತ್ತು ಕುಮಾರಸ್ವಾಮಿ ಅವರೇ ಅಂತಿಮ ಅಧಿಕಾರ ಎಂದು ಹೇಳಿದ್ದಾರೆ. ಆದರೆ ಚುನಾವಣೆಗೆ ತಯಾರಿ ನಡೆಸುತ್ತಿರುವ ಭವಾನಿ ಕಳೆದ ಒಂದು ತಿಂಗಳಿಂದ ಗ್ರಾಮಗಳಿಗೆ ತೆರಳಿ ಪ್ರಮುಖರು ಹಾಗೂ ಹಿರಿಯ ನಾಗರಿಕರನ್ನು ಭೇಟಿಯಾಗುತ್ತಿದ್ದಾರೆ.

ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ ಮದುವೆ, ನಾಮಕರಣ, ಮದುವೆ ಆರತಕ್ಷತೆ, ಧಾರ್ಮಿಕ, ಕ್ರೀಡಾ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದು, ಚುನಾವಣೆಗೂ ಮುನ್ನ ರಾಜಕಾರಣಿಗಳು ನಡೆಸುವ ತಂತ್ರಗಾರಿಕೆ ಸಾಮಾನ್ಯವಾಗಿದೆ. ಹಾಸನ ಜಿಲ್ಲೆಯಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ರೇವಣ್ಣ ಅವರ ಮಾತೇ ಅಂತಿಮ ಎಂದು ಅವರ ನಿಷ್ಠಾವಂತರೊಬ್ಬರು ಹೇಳಿದ್ದಾರೆ. ಈ ಸಂಬಂಧ ಮಾತನಾಡಲು ಹಲವು ಬಾರಿ ಪ್ರಯತ್ನಿಸಿದರೂ ಭವಾನಿ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com