'ತುರ್ತಾಗಿ ವಿಪಕ್ಷ ನಾಯಕ ಬೇಕಾಗಿದ್ದಾರೆ': ಕಾಂಗ್ರೆಸ್‌ ಟ್ವೀಟ್ ಗೆ ಬಿಜೆಪಿ ತಿರುಗೇಟು!

ವಿಧಾನಸಭೆ ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತು ಕಾಂಗ್ರೆಸ್ ಬಿಜೆಪಿಯನ್ನು ಲೇವಡಿ ಮಾಡುತ್ತಿದೆ. ಶನಿವಾರ ತುರ್ತಾಗಿ ವಿಪಕ್ಷ ನಾಯಕ ಬೇಕಾಗಿದ್ದಾರೆ ಎಂದು ಪ್ರಕಟಣೆ ಮಾದರಿಯಲ್ಲಿ ಟ್ವೀಟ್ ವೊಂದನ್ನು ಮಾಡಿತ್ತು. ಅಲ್ಲದೇ, ವಿಪಕ್ಷ ನಾಯಕನಾಗಲು ಬೇಕಾದ ಅರ್ಹತೆಗಳನ್ನು ಸಹ ಟ್ವೀಟ್ ನಲ್ಲಿ ಹೇಳಿತ್ತು.
ಬಿಜೆಪಿ
ಬಿಜೆಪಿ

ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತು ಕಾಂಗ್ರೆಸ್ ಬಿಜೆಪಿಯನ್ನು ಲೇವಡಿ ಮಾಡುತ್ತಿದೆ. ಶನಿವಾರ ತುರ್ತಾಗಿ ವಿಪಕ್ಷ ನಾಯಕ ಬೇಕಾಗಿದ್ದಾರೆ ಎಂದು ಪ್ರಕಟಣೆ ಮಾದರಿಯಲ್ಲಿ ಟ್ವೀಟ್ ವೊಂದನ್ನು ಮಾಡಿತ್ತು. ಅಲ್ಲದೇ, ವಿಪಕ್ಷ ನಾಯಕನಾಗಲು ಬೇಕಾದ ಅರ್ಹತೆಗಳನ್ನು ಸಹ ಟ್ವೀಟ್ ನಲ್ಲಿ ಹೇಳಿತ್ತು.

ಇದಕ್ಕೆ ಭಾನುವಾರ ತಿರುಗೇಟು ನೀಡಿರುವ ಬಿಜೆಪಿ, 'ನಮ್ಮ ವಿಪಕ್ಷ ನಾಯಕ ಸ್ಥಾನದ ಬಗ್ಗೆ ನಮ್ಮ ವರಿಷ್ಠರು ಸದನ ಪ್ರಾರಂಭಕ್ಕಿಂತಲೂ ಮೊದಲೆ, ಸೂಕ್ತ ಸಮಯದಲ್ಲಿ ಘೋಷಿಸುತ್ತಾರೆ. ಕಾಂಗ್ರೆಸ್ ಪಕ್ಷ ಇದರ ಬಗ್ಗೆ ತಲೆ ಕೆರೆದುಕೊಳ್ಳುವುದನ್ನು ಬಿಟ್ಟು, ಅವಾಸ್ತವಿಕ ಗ್ಯಾರಂಟಿಗಳ ಅಪ್ರಬುದ್ಧ ಅನುಷ್ಠಾನದ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ದವಾಗಿರುವ ನಮ್ಮ ಪಕ್ಷದ ಶಾಸಕರನ್ನು ಹೇಗೆ ಎದುರಿಸಬೇಕೆಂದು ತಮ್ಮ ಸರಕಾರಕ್ಕೆ ಸಲಹೆ ನೀಡಲಿ' ಎಂದು ಹೇಳಿದೆ.

ಬಹುಮತ ದೊರೆತರೂ, ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರನ್ನು ಅಂತಿಮಗೊಳಿಸುವಲ್ಲಿ ಕಾಂಗ್ರೆಸ್ ನಡೆಸಿದ ಹಗ್ಗಜಗ್ಗಾಟವನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಇವರಿಂದ ಹೇಳಿಸಿಕೊಂಡು ಬುದ್ದಿ ಕಲಿಯುವ ಪರಿಸ್ಥಿತಿ ಯಾರಿಗೂ ಬಂದಿಲ್ಲ ಎಂದಿದೆ. 

ಇಷ್ಟಕ್ಕೂ ಹೊಸದಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಸಿದ್ದರಾಮಯ್ಯ 2008ರಲ್ಲಿಅಂದಿನ ವಿಪಕ್ಷ ನಾಯಕನ ಸ್ಥಾನ ಖರ್ಗೆ ಅವರಿಗೆ ದೊರೆತ ಕಾರಣ, ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಆ ಪಕ್ಷದ ಕೆಲವು ಶಾಸಕರು ರಾಜೀನಾಮೆ ನೀಡಿದಾಗಲೂ , ಆ ಶಾಸಕರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. 

ಕಾರ್ಯಕ್ರಮವೊಂದರ ನಿಮಿತ್ತ ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಜೊತೆ ಸಿದ್ದರಾಮಯ್ಯ ಒಟ್ಟಿಗೆ ಪ್ರಯಾಣಿಸಿದ ಸಂದರ್ಭವನ್ನು ತಮಗೆ ಲಾಭವಾಗುವ ಹಾಗೆ ಸುದ್ದಿ ಹಬ್ಬಿಸಿ ಕಾಂಗ್ರೆಸ್ ಹೈಕಮಾಂಡ್ ಬೆದರಿಸಿದ್ದರು. ಬೆದರಿಕೆಗೆ ಬಗ್ಗಿದ ಹೈಕಮಾಂಡ್ ಒಲ್ಲದ ಮನಸ್ಸಿನಿಂದಲೇ ಸಿದ್ದರಾಮಯ್ಯರಿಗೆ ವಿಪಕ್ಷ ನಾಯಕ ಸ್ಥಾನ ನೀಡಿತ್ತು.

ಈ ಬೆಳವಣಿಗೆಯನ್ನು ಕಟುವಾಗಿ ಟೀಕಿಸಿದ್ದ ವಿರೋಧ ಪಕ್ಷದ ನಿರ್ಗಮಿತ ನಾಯಕ ಖರ್ಗೆ ಅವರು ‘10 ಜನ ಶಾಸಕರೊಂದಿಗೆ ಬಂದ ಸಿದ್ದರಾಮಯ್ಯ, ಈಗ 100 ಶಾಸಕರ ಮುಖ್ಯಸ್ಥರಾಗಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದಿದ್ದರು. ಈ ಎಲ್ಲಾ ಘಟನೆಗಳನ್ನು ಕಾಂಗ್ರೆಸ್ ಮರೆತಂತೆ ಕಾಣುತ್ತಿದೆ. ಚಿಂತಿಸಬೇಡಿ, ಕೆಲವೇ ದಿನಗಳಲ್ಲಿ ಈ ಘಟನೆಗಳು ಮತ್ತಷ್ಟುಭಿನ್ನವಾಗಿ ಪುನರಾವರ್ತನೆಯಾಗಲಿವೆ ಎಂದು ಬಿಜೆಪಿ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com