ರಾಜ್ಯದಲ್ಲಿ ಅಧಿಕಾರದಲ್ಲಿಲ್ಲದಿದ್ದರೂ 25 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಖಚಿತ: ಮಾಜಿ ಸಿಎಂ ಬೊಮ್ಮಾಯಿ (ಸಂದರ್ಶನ)

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಬಿಜೆಪಿ, ಇದೀಗ 2024ರ ಲೋಕಸಭಾ ಚುನಾವಣೆಗೆ ಪಕ್ಷ ಸಂಘಟಿಸಲು ಸಜ್ಜಾಗುತ್ತಿದೆ. ಆದರೆ, ರಾಜ್ಯ ಬಿಜೆಪಿ ನಾಯಕರ ಒಳ ಬೇಗುದಿಯೇ ಪಕ್ಷಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಈ ನಡುವೆ, ಬಿಜೆಪಿ ರಾಜ್ಯಾಧ್ಯಕ್ಷರು ಯಾರು ಅನ್ನೋ ಪ್ರಶ್ನೆಯೂ ಎದ್ದಿದೆ.
ಮಾಜಿ ಸಿಎಂ ಬೊಮ್ಮಾಯಿ
ಮಾಜಿ ಸಿಎಂ ಬೊಮ್ಮಾಯಿ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಬಿಜೆಪಿ, ಇದೀಗ 2024ರ ಲೋಕಸಭಾ ಚುನಾವಣೆಗೆ ಪಕ್ಷ ಸಂಘಟಿಸಲು ಸಜ್ಜಾಗುತ್ತಿದೆ. ಆದರೆ, ರಾಜ್ಯ ಬಿಜೆಪಿ ನಾಯಕರ ಒಳ ಬೇಗುದಿಯೇ ಪಕ್ಷಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಈ ನಡುವೆ, ಬಿಜೆಪಿ ರಾಜ್ಯಾಧ್ಯಕ್ಷರು ಯಾರು ಅನ್ನೋ ಪ್ರಶ್ನೆಯೂ ಎದ್ದಿದೆ.

ಮುಖ್ಯಮಂತ್ರಿ ಆಯ್ಕೆಗೆ ವಿಳಂಬ ಮಾಡಿದ ಕಾಂಗ್ರೆಸ್ ಕುರಿತು ಬಿಜೆಪಿ ಈ ಹಿಂದೆ ವ್ಯಂಗ್ಯವಾಡಿತ್ತು. ಇದೀಗ ವಿಪಕ್ಷ ನಾಯಕನ ಆಯ್ಕೆ ಮಾಡುವಲ್ಲಿ ವಿಳಂಬ ಮಾಡುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡುತ್ತಿದೆ. ಪ್ರತಿಪಕ್ಷ ನಾಯಕನ ಸ್ಥಾನ ಸುಮಾರು ಎರಡು ತಿಂಗಳಿನಿಂದ ಖಾಲಿಯಿದೆ. ಈಗಾಗಲೇ ಬಜೆಟ್ ಮಂಡನೆ ಕೂಡ ಪೂರ್ಣಗೊಂಡಿದ್ದು, ಇಂದಿನಿಂದ ಬಜೆಟ್ ಮೇಲಿನ ಚರ್ಚೆಯೂ ಆರಂಭವಾಗುತ್ತಿದೆ. ಆದರೆ, ವಿಪಕ್ಷ ನಾಯಕನ ಆಯ್ಕೆ ಮಾತ್ರ ಇನ್ನೂ ಆಗಿಲ್ಲ. ಈ ಎಲ್ಲಾ ಬೆಳವಣಿಗೆಗಳ ಕುರಿತು ಹಾಗೂ ಮುಂಬರುವ ಲೋಕಸಭಾ ಚುನಾವಣೆ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದು, ಹೊಸ ಸರ್ಕಾರ ಕೂಡ ರಚೆಯಾಗಿದೆ. ಸುಮಾರು ಎರಡು ತಿಂಗಳಾದರೂ ಪಕ್ಷ ಇನ್ನೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ಇದರಿಂದ ಪಕ್ಷದ ನೈತಿಕ ಸ್ಥೈರ್ಯ ಕುಗ್ಗುವುದಿಲ್ಲವೇ? ಲೋಕಸಭಾ ಚುನಾವಣೆ ಇನ್ನು ಕೇವಲ 8 ತಿಂಗಳುಗಳಷ್ಚೇ ಬಾಕಿಯಿದೆ. ಈ ಪರಿಸ್ಥಿತಿಯಲ್ಲಿ ನೀವು 25 ಸ್ಥಾನಗಳನ್ನು ಉಳಿಸಿಕೊಳ್ಳಲು ಸಾಧ್ಯವಿದೆಯೇ?
ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಲೋಕಸಭೆ ಚುನಾವಣೆಯಲ್ಲಿ ಸೋತರೂ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದರು. 2018 ರಲ್ಲಿ, ನಾವು ಕರ್ನಾಟಕದಲ್ಲಿ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಆದರೆ, 25 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದೇವೆ. ಭದ್ರತೆ, ರಕ್ಷಣೆ, ಅಭಿವೃದ್ಧಿ ಪ್ರಮುಖ ವಿಷಯಗಳಾಗಿದ್ದು, 25 ಸ್ಥಾನಗಳನ್ನು ಉಳಿಸಿಕೊಳ್ಳುವ ವಿಶ್ವಾಸವಿದೆ. ಪಕ್ಷದ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರನ್ನು ಒಟ್ಟಿಗೆ ಆಯ್ಕೆ ಮಾಡುವ ಸಾಧ್ಯತೆಗಳಿವೆ. ಹೀಗಾಗಿಯೇ ಸಮಯ ಹೈಕಮಾಂಡ್ ಸಮಯ ತೆಗೆದುಕೊಳ್ಳುತ್ತಿದೆ.

ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದಿದ್ದರೆ ಪಕ್ಷದ ಕಾರ್ಯಕರ್ತರಿಗೆ ಯಾವ ರೀತಿಯ ಸಂದೇಶವನ್ನು ನೀಡಿದಂತಾಗುತ್ತದೆ?
ಆರು ತಂಡಗಳ ರಚಿಸಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇವೆ. ಸೋಲಿನ ಕಾರಣವನ್ನು ಚರ್ಚಿಸಲು ಚುನಾವಣೆಯಲ್ಲಿ ಗೆದ್ದವರು ಮತ್ತು ಸೋತವರ ಸಭೆಗಳನ್ನು ನಡೆಸಿದ್ದೇವೆ. ನಮ್ಮ ಕಾರ್ಯಕರ್ತರು ಸಿಡಿದೆದಿದ್ದು, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಬಯಸುತ್ತಿದ್ದಾರೆ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಮರುಳಾಗಬಾರದು ಎಂದು ಜನರಿಗೆ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ, ಜನರು ಅಸಮಾಧಾನಗೊಂಡಿದ್ದಾರೆ.

ನಾಯಕತ್ವದ ಸಮಸ್ಯೆ ಬಗೆಹರಿಯದ ಕಾರಣ, ಕೇಂದ್ರದಿಂದ ಇಬ್ಬರು ವೀಕ್ಷಕರು ರಾಜ್ಯಕ್ಕೆ ಭೇಟಿ ನೀಡಿ, ವಾಪಸ್ಸಾಗಿದ್ದರು. ಈಗ ಮತ್ತೆ ಮೂವರು ವೀಕ್ಷಕರು ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸರ್ಕಾರ ಅಧಿಕಾರಕ್ಕೆ ಬಂದಿದ್ದರೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಿತ್ತೇ?
ನಮ್ಮ ಸರ್ಕಾರ ಆಗಿದ್ದರೆ ಇಷ್ಟು ದಿನ ತೆಗೆದುಕೊಳ್ಳುತ್ತಿರಲಿಲ್ಲ. ಬಿ ಎಸ್ ಯಡಿಯೂರಪ್ಪ ಅವರಿಂದ ನನ್ನ ಬದಲಾವಣೆಗೆ ಕೇವಲ 24 ಗಂಟೆಗಳು ಬೇಕಾಯಿತು. ಇದೂ ಕೂಡ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸ ನನಗಿದೆ.

ಬೊಮ್ಮಾಯಿ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಸ್ವಪಕ್ಷದ ನಾಯಕರೇ ಆರೋಪಿಸಿದ್ದಾರೆ?
ನಾನು ಅದನ್ನು ಎಂದಿಗೂ ಮಾಡಿಲ್ಲ ಮತ್ತು ಮಾಡುವ ಅಗತ್ಯವೂ ಇಲ್ಲ.

ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ, ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಹಾಗೂ ಲೋಕಸಭಾ ಚುನಾವಣೆಗೆ ಅರವಿಂದ್ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್ ಮತ್ತು ನಿಮ್ಮ ಹೆಸರು ಕೇಳಿಬರುತ್ತಿದೆ?
ನಾವು ನಮ್ಮ ವೀಕ್ಷಕರಿಗೆ ನಾವು ಒಗ್ಗಟ್ಟಾಗಿದ್ದೇವೆ ಎಂದು ಹೇಳಿದ್ದೇವೆ, ಆದ್ದರಿಂದ, ಪಕ್ಷದ ನಾಯಕತ್ವವು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಅದಕ್ಕೆ ಬದ್ಧರಾಗಿದ್ದೇವೆ. ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ.

ಜೆಡಿಎಸ್ ಬಹಿರಂಗವಾಗಿ ಬಿಜೆಪಿಯನ್ನು ಬೆಂಬಲಿಸುತ್ತಿರುವಂತೆ ತೋರುತ್ತಿದೆ, ಜೆಡಿಎಸ್ ಜೊತೆಗೆ ಕೈಜೋಡಿಸುವ ಚಿಂತನೆಗಳಿವೆಯೇ?
ದೇಶದಲ್ಲಿರುವ ಹಲವಾರು ರಾಜಕೀಯ ಪಕ್ಷಗಳು ಇದೀಗ ನರೇಂದ್ರ  ಮೋದಿಯವರ ನಾಯಕತ್ವವನ್ನು ಒಪ್ಪಿಕೊಳ್ಳುತ್ತಿದೆ. ಈ ಮೂಲಕ ರಾಜಕೀಯ ಲಾಭಕ್ಕಾಗಿ ಒಗ್ಗೂಡುವ ವಿಪಕ್ಷಗಳಿಗಿದು ಸೋಲಾಗಿದೆ. ಅನೇಕ ಸ್ಥಳೀಯ, ಪ್ರಾದೇಶಿಕ ಮತ್ತು ಉಪ ಪ್ರಾದೇಶಿಕ ಪಕ್ಷಗಳು ಎನ್‌ಡಿಎದತ್ತ ಕಣ್ಣು ಹಾಯಿಸುತ್ತಿವೆ.

ಈ ಕುರಿತು ನಿರ್ದಿಷ್ಟವಾಗಿ ಹೇಳುವಿರಾ?
ಆಂಧ್ರಪ್ರದೇಶದಲ್ಲಿ, ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರೊಂದಿಗೆ ಮಾತುಕತೆ ನಡೆಯುತ್ತಿದೆ, ಬಿಹಾರದಲ್ಲಿ ಮರುಹೊಂದಾಣಿಕೆ ಮಾತುಗಳಾಗುತ್ತಿವೆ, ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಶಾಸಕರ ಗುಂಪು ಮರಳಿದೆ. ರಾಜ್ಯದಲ್ಲಿಯೂ ಹೊಂದಾಣಿಕೆ ಎಂಬುದು ಪ್ರಧಾನಿ ಮೋದಿ ಮತ್ತು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರ ನಡುವಿನ ಮಾತುಕತೆಯ ಮೇಲೆ ಅವಲಂಬಿತವಾಗಿದೆ.

ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯಿಂದ ಬೆಂಬಲ ಸಿಗುತ್ತಿದೆ?
ಅದಕ್ಕೆ ಕೆಲವು ಕಾರಣಗಳಿವೆ. ನಾವು ಸದನದಲ್ಲಿ ಒಗ್ಗಟ್ಟಿನಿಂದ ಹೋರಾಟ ಆರಂಭಿಸಿದ್ದೇವೆ. ಏಕೆಂದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಭ್ರಷ್ಟಾಚಾರವನ್ನು ಆರಂಭಿಸಿದೆ.

ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ, ಬಿ.ಶ್ರೀರಾಮುಲು, ಜಗದೀಶ್ ಶೆಟ್ಟರ್, ಸಿ.ಟಿ.ರವಿ ಚುನಾಯಿತ ಸದಸ್ಯರಲ್ಲ, ಆದರೂ, ಹಲವು ಭಿನ್ನಾಭಿಪ್ರಾಯಗಳು, ಒಳಜಗಳಗಳಿವೆ...?
ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಟಲು ಸಿದ್ಧತೆ ನಡೆಸುತ್ತಿದೆ. ಇದಕ್ಕೂ ವ್ಯಕ್ತಿತ್ವಗಳಿಗೂ ಯಾವುದೇ ಸಂಬಂಧವಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com