ಬೆಂಗಳೂರಿನಲ್ಲಿ ನಾಳೆಯಿಂದ ಎರಡು ದಿನ ವಿಪಕ್ಷಗಳ ಸಭೆ: ಭರ್ಜರಿ ತಯಾರಿ, ಎಲ್ಲೆಡೆ ರಾರಾಜಿಸುತ್ತಿರುವ ಫೋಸ್ಟರ್ ಗಳು!

ಬೆಂಗಳೂರಿನಲ್ಲಿ ನಾಳೆಯಿಂದ ಎರಡು ದಿನ ನಡೆಯಲಿರುವ ವಿಪಕ್ಷಗಳ ಸಭೆ ಹಿನ್ನೆಲೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.ಈ ಸಭೆಯಲ್ಲಿ 24 ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಬೆಂಗಳೂರಿನಲ್ಲಿ ವಿಪಕ್ಷ ನಾಯಕರ ಫೋಸ್ಟರ್ ಗಳು
ಬೆಂಗಳೂರಿನಲ್ಲಿ ವಿಪಕ್ಷ ನಾಯಕರ ಫೋಸ್ಟರ್ ಗಳು

ಬೆಂಗಳೂರು: ಬೆಂಗಳೂರಿನಲ್ಲಿ ನಾಳೆಯಿಂದ ಎರಡು ದಿನ ನಡೆಯಲಿರುವ ವಿಪಕ್ಷಗಳ ಸಭೆ ಹಿನ್ನೆಲೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.  2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಅಧಿಕಾರದಿಂದ ದೂರವಿಡುವ ಮಹತ್ವಕಾಂಕ್ಷೆಯೊಂದಿಗೆ ನಡೆಯಲಿರುವ ಈ ಸಭೆಯಲ್ಲಿ 24 ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಬಿಜೆಪಿಯ ವಿರುದ್ಧ ಒಗ್ಗಟ್ಟನ್ನು ಪ್ರದರ್ಶಿಸುವ ವಿಪಕ್ಷಗಳ ಸಭೆಗೆ  ಎಂಟು ಹೊಸ ಪಕ್ಷಗಳು ತಮ್ಮ ಬೆಂಬಲವನ್ನು ನೀಡಿವೆ ಎಂದು ಮೂಲಗಳು ತಿಳಿಸಿವೆ.

ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತಿತರ ನಾಯಕರ ಫೋಸ್ಟರ್ ಗಳು ರಾಜಧಾನಿಯಲ್ಲಿ ರಾರಾಜಿಸುತ್ತಿವೆ.

ದೆಹಲಿಯಲ್ಲಿ ಸೇವೆಗಳ ನಿಯಂತ್ರಣಕ್ಕೆ ಕೇಂದ್ರದ ಸುಗ್ರೀವಾಜ್ಞೆಯನ್ನು ಬೆಂಬಲಿಸುವುದಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡಾ ಈ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದ್ದು, ಅವರ ಫೋಸ್ಟರ್ ಕೂಡಾ ಕಂಡುಬಂದಿದೆ.

ಈ ಮಧ್ಯೆ ವಿಪಕ್ಷಗಳ ಸಭೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದಿಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಈ ಸಭೆಯು ಪಾಟ್ನಾ ಸಭೆಯ ಮುಂದುವರಿಕೆಯಾಗಿದೆ. ನಾವು ಒಟ್ಟಾಗಿ 2024ರ ಲೋಕಸಭಾ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.

ಜೂನ್ 23 ರಂದು ಪಾಟ್ನಾದಲ್ಲಿ ಜೆಡಿಯು ನೇತಾರ ನಿತೀಶ್ ಕುಮಾರ್ ಆಯೋಜಿಸಿದ್ದ ವಿಪಕ್ಷಗಳ ಮೊದಲ ಸಭೆಯಲ್ಲಿ ಸುಮಾರು 20 ವಿವಿಧ ವಿಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.ಮುಂದಿನ ಕಾರ್ಯತಂತ್ರ ರೂಪಿಸಲು ಶಿಮ್ಲಾದಲ್ಲಿ ಸಭೆ ಸೇರಲು ತೀರ್ಮಾನಿಸಲಾಗಿತ್ತು. ಆದರೆ, ಕೊನೆಗೆ ಶಿಮ್ಲಾದಲ್ಲಿ ಸಭೆ ರದ್ದುಗೊಂಡು, ಬೆಂಗಳೂರಿನಲ್ಲಿ ಆಯೋಜಿಸಲು ತೀರ್ಮಾನಿಸಲಾಯಿತು.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com