ಮೋದಿಯವರೇ, ಬಡವರ ಪಾಲಿನ ಅಕ್ಕಿಯನ್ನೂ ಅದಾನಿ, ಅಂಬಾನಿ ಹೊಟ್ಟೆಗೆ ಹಾಕಲು ಹೊರಟಿರಾ: ಕಾಂಗ್ರೆಸ್ ಪ್ರಶ್ನೆ

ಮೋದಿ ಅವರೇ, ಬಡವರ ಪಾಲಿನ ಅಕ್ಕಿಯನ್ನೂ ಅದಾನಿ ಅಂಬಾನಿ ಹೊಟ್ಟೆಗೆ ಹಾಕಲು ಹೊರಟಿರಾ?... ಬಿಜೆಪಿ ನಾಯಕರು ಅದೆಷ್ಟೇ ಷಡ್ಯಂತ್ರ ನಡೆಸಿದರೂ ನಾವು ಅನ್ನಭಾಗ್ಯದ ಅಕ್ಕಿಯನ್ನು 10 ಕೆಜಿಗೆ ಏರಿಸುವುದು ನಿಶ್ಚಿತ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮೋದಿ ಅವರೇ, ಬಡವರ ಪಾಲಿನ ಅಕ್ಕಿಯನ್ನೂ ಅದಾನಿ ಅಂಬಾನಿ ಹೊಟ್ಟೆಗೆ ಹಾಕಲು ಹೊರಟಿರಾ?... ಬಿಜೆಪಿ ನಾಯಕರು ಅದೆಷ್ಟೇ ಷಡ್ಯಂತ್ರ ನಡೆಸಿದರೂ ನಾವು ಅನ್ನಭಾಗ್ಯದ ಅಕ್ಕಿಯನ್ನು 10 ಕೆಜಿಗೆ ಏರಿಸುವುದು ನಿಶ್ಚಿತ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ನಿಯಮದಂತೆ ರಾಜ್ಯ ಸರ್ಕಾರಕ್ಕೆ ಅಕ್ಕಿ ಮಾರಾಟಕ್ಕೆ ಒಪ್ಪಿಗೆ ಸೂಚಿಸಿತ್ತು ಎಫ್'ಸಿಐ, ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ಮರುದಿನವೇ ರಾಜ್ಯ ಸರ್ಕಾರಗಳಿಗೆ ಅಕ್ಕಿ ಮಾರಾಟ ಮಾಡುವುದಿಲ್ಲ ಎಂದಿದೆ. ಖಾಸಗಿಯವರಿಗೆ ಮಾರಾಟ ಮಾಡಲು ಮಾತ್ರ ಒಪ್ಪಿಗೆ ನೀಡಲಾಗಿದೆ. ಮೋದಿ ಅವರೇ, ಬಡವರ ಪಾಲಿನ ಅಕ್ಕಿಯನ್ನೂ ಅದಾನಿ ಅಂಬಾನಿ ಹೊಟ್ಟೆಗೆ ಹಾಕಲು ಹೊರಟಿರಾ? ಎಂದು ಪ್ರಶ್ನಿಸಿದೆ.

ಕಳೆದ 6 ವರ್ಷದಲ್ಲಿ 25,000 ಮೆಟ್ರಿಕ್ ಟನ್ ದವಸ ಧಾನ್ಯಗಳು ಕೇಂದ್ರದ ಗೋದಾಮಿನಲ್ಲಿ ನಷ್ಟವಾಗಿದೆ. ಮೈತುಂಬ ದ್ವೇಷ ರಾಜಕಾರಣವನ್ನೇ ತುಂಬಿಕೊಂಡಿರುವ ಮೋದಿಯವರಿಗೆ ದವಸಧಾನ್ಯಗಳನ್ನು ಜನರ ಹಸಿವು ನೀಗಿಸಲು ನೀಡುವುದಕ್ಕಿಂತ ಇಲಿ ಹೆಗ್ಗಣಗಳ ಹೊಟ್ಟೆ ತುಂಬಿಸುವಲ್ಲಿಯೇ ಹೆಚ್ಚಿನ ಆಸಕ್ತಿ ಇದ್ದಂತಿದೆ. ಆಹಾರ ಹಕ್ಕನ್ನು ನಿರಾಕರಿಸುವುದು ಸಂವಿಧಾನ ವಿರೋಧಿ ನಡೆ.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ನಾಯಕರು ಅದೆಷ್ಟೇ ಷಡ್ಯಂತ್ರ ನಡೆಸಿದರೂ ನಾವು ಅನ್ನಭಾಗ್ಯದ ಅಕ್ಕಿಯನ್ನು 10 ಕೆಜಿಗೆ ಏರಿಸುವುದು ನಿಶ್ಚಿತ. ಬಸವಣ್ಣನ ಅನುಭವ ಮಂಟಪದ ದಾಸೋಹಕ್ಕೂ ವಿರೋಧಿಗಳು ಇಂತಹದ್ದೇ ಅಡೆತಡೆಗಳನ್ನು ಸೃಷ್ಟಿಸಿದ್ದರು. ನಮ್ಮ ಅನ್ನಭಾಗ್ಯದ ದಾಸೋಹವನ್ನು ಬಿಜೆಪಿಗರ ಯಾವ ಕುತಂತ್ರವೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.

ಕಳೆದ ವರ್ಷ ಸರ್ಕಾರಿ ದಾಸ್ತಾನಿನಲ್ಲಿದ್ದ ಅಪಾರ ಪ್ರಮಾಣದ ದವಸ ಧಾನ್ಯದ ಹಾಳಾಗಿ ಹೋಗಿದ್ದ ವರದಿಯಾಗಿತ್ತು. ಈಗಲೂ 7 ಲಕ್ಷ ಟನ್ ಅಕ್ಕಿಯನ್ನು ಗೋದಾಮಿನಲ್ಲಿಟ್ಟು ಕೊಳೆಸುತ್ತಿದೆ ಕೇಂದ್ರ ಸರ್ಕಾರ. ರಾಜ್ಯ ಸರ್ಕಾರ ಹಣ ಕೊಟ್ಟರೂ ಅಕ್ಕಿ ಕೊಡಲೊಪ್ಪದ್ದು ಜನವಿರೋಧಿ ನಡೆಯಲ್ಲವೇ? ಬಡವರ ಅನ್ನ ಕಿತ್ತೂಕೊಳ್ಳಲು ಬಿಜೆಪಿ ನಾನಾ ಮಾರ್ಗ ಹುಡುಕುತ್ತಿದೆ. ಕೇಂದ್ರ ಸರ್ಕಾರ ಸ್ಪಷ್ಟವಾಗಿ ಆಹಾರ ಹಕ್ಕು ಕಾಯ್ದೆಯನ್ನು ಉಲ್ಲಂಘಿಸುತ್ತಿದೆ. 7 ಲಕ್ಷ ಟನ್ ಅಕ್ಕಿ ಸಂಗ್ರಹವಿದ್ದರೂ ರಾಜ್ಯಗಳಿಗೆ FCI ಅಕ್ಕಿ ಮಾರಾಟ ಮಾಡುವುದನ್ನು ನಿರಾಕರಿಸುವ ಮೂಲಕ ಕನ್ನಡಿಗರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಮೋದಿ. ಖಾಸಗಿಯವರಿಗೆ ಮಾರಾಟ ಮಾಡುವ ಅವಕಾಶವಿರುವಾಗ ರಾಜ್ಯ ಸರ್ಕಾರಕ್ಕೆ ಏಕೆ ಈ ನಿರಾಕರಣೆ. ಇದು ದುರುದ್ದೇಶವಲ್ಲದೆ ಇನ್ನೇನು? ಎಂದು ಪ್ರಶ್ನೆ ಮಾಡಿದೆ.

ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಉಚಿತ ಅಕ್ಕಿ ನೀಡಲು ಕೇಂದ್ರ ಸರ್ಕಾರ ಅಡ್ಡಗಾಲು ಹಾಕುತ್ತಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪ ತೀವ್ರ ರಾಜಕೀಯ ವಿವಾದ ಸ್ವರೂಪ ಪಡೆದುಕೊಂಡಿದೆ.

ಒಂದೆಡೆ ಕಾಂಗ್ರೆಸ್ ಬಿಜೆಪಿಗೆ ಮತ ನೀಡಿಲ್ಲ ಎಂಬ ಕಾರಣಕ್ಕೆ ಅಕ್ಕಿ ನೀಡದೆ ಬಡವರ ಮೇಲೆ ಮೋದಿ ಸೇಡು ತೀರಿಸಿಕೊಳ್ಳುತ್ತಿದ್ದಾರೆಂದು ಕಾಂಗ್ರೆಸ್ ಹೇಳುತ್ತಿದ್ದರೆ, ಮತ್ತೊಂದೆಡೆ ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಉಚಿತ ಅಕ್ಕಿ ಎಂದಿನಂತೆ ಕರ್ನಾಟಕ್ಕೆ ದೊರೆಯಲಿದೆ, ಕಾಂಗ್ರೆಸ್ ನೀಡಿದ್ದ 5 ಕೆಜಿ ಹೆಚ್ಚುವರಿ ಅಕ್ಕಿಯ ಭರವಸೆ ಈಡೇರಿಸಲು ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಿ ಭರವಸೆ ಈಡೇರಿಸಲಿ ಎಂದು ಬಿಜೆಪಿ ಹೇಳುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com