ಡಿಕೆಶಿ​ ಸಿಎಂ ಆಗಲ್ಲವೆಂದು ಡಿ.ಕೆ.ಸುರೇಶ್​ಗೆ ಗೊತ್ತಾಗಿದೆ, ಹೀಗಾಗಿ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ: ಬಿಜೆಪಿ

ಡಿ.ಕೆ.ಶಿವಕುಮಾರ್​ ಸಿಎಂ ಆಗಲ್ಲವೆಂದು ಡಿ.ಕೆ.ಸುರೇಶ್​ಗೆ ಗೊತ್ತಾಗಿದೆ. ಹೀಗಾಗಿ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆಂದು ಬಿಜೆಪಿ ವ್ಯಂಗ್ಯವಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಡಿ.ಕೆ.ಶಿವಕುಮಾರ್​ ಸಿಎಂ ಆಗಲ್ಲವೆಂದು ಡಿ.ಕೆ.ಸುರೇಶ್​ಗೆ ಗೊತ್ತಾಗಿದೆ. ಹೀಗಾಗಿ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆಂದು ಬಿಜೆಪಿ ವ್ಯಂಗ್ಯವಾಡಿದೆ.

ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ರಾಜಕಾರಣದ ಬಗ್ಗೆ ಮಾತನಾಡಿದ್ದು, ರಾಜಕಾರಣವೇ ಬೇಡ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಆರ್.ಅಶೋಕ್ ಅವರು, ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಮೇಲೆ ಒಳ ಜಗಳ ಹೊರ ಬರುತ್ತಿದೆ. ಗ್ಯಾರಂಟಿಯಾಗಿ ಹೇಳುತ್ತೇನೆ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲ್ಲ. ಕರ್ನಾಟಕದಲ್ಲಿ ಅವರಿಬ್ಬರಿಗಿಂತ ಸಿದ್ದರಾಮಯ್ಯ ಪವರ್ ಫುಲ್​. ಅಧಿಕಾರ ಹಂಚಿಕೆ ಒಂದು ನಾಟಕ ಅಷ್ಟೇ. ಅದಕ್ಕಾಗಿ ಡಿ.ಕೆ.ಸುರೇಶ್ ರಾಜಕೀಯ ನಿವೃತ್ತಿ ಹೇಳಿದ್ದಾರೆಂದು ಹೇಳಿದರು.

ಶಿವಕುಮಾರ್ ಅವರು ಸಿಎಂ ಆಗುವುದು ಭಿಕ್ಷುಕನ ಕನಸು. ಸುರೇಶ್‌ಗೆ ಇದು ಚೆನ್ನಾಗಿ ಅರ್ಥವಾಗಿದ್ದು, ಹೀಗಾಗಿ ರಾಜಕೀಯ ತ್ಯಜಿಸುವ ಮಾತುಗಳನ್ನಾಡಿದ್ದಾರೆ. ರಾಜಕೀಯ ನಾಯಕರಾಗಿ ಶಿವಕುಮಾರ್ ಅವರ ನಿಲುವು ಸಿದ್ದರಾಮಯ್ಯನಷ್ಟು ಬಲವಾಗಿಲ್ಲ. ಆದರೂ 'ಚಾಣಕ್ಯ ಎಂಬ ಹೆಸರುಗಳಿಸಿದ್ದಾರೆ. ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಂತಹವರನ್ನು ನಿಭಾಯಿಸಿದ್ದು,  ಶಿವಕುಮಾರ್ ಅವರನ್ನು ನಿಭಾಯಿಸುವುದು ಅವರಿಗೆ ದೊಡ್ಡ ವಿಷಯವಲ್ಲ. ರಾಜಸ್ಥಾನ ಮತ್ತು ಮಧ್ಯಪ್ರದೇಶದಂತೆ ಕರ್ನಾಟಕದಲ್ಲಿ ಅಧಿಕಾರ ಹಂಚಿಕೆಯಾಗಲು ಸಾಧ್ಯವಿಲ್ಲ. ಪರಿಸ್ಥಿತಿ ಹೀಗಿದ್ದರೂ ಡಿಕೆ.ಶಿವಕುಮಾರ್ ಮುಂದೆ ಮುಖ್ಯಮಂತ್ರಿಯಾಗುತ್ತೇನೆಂದು ಬಿಂಬಿಸಲು ಸರಣಿ ಸಭೆಗಳನ್ನು ನಡೆಸುತ್ತಲೇ ಇದ್ದಾರೆಂದು ವ್ಯಂಗ್ಯವಾಡಿದ್ದಾರೆ.

ಟಿಎನ್‌ಐಇ ಜತೆ ಮಾತನಾಡಿದ ಕಾಂಗ್ರೆಸ್ ವಕ್ತಾರ ನಟರಾಜ್ ಗೌಡ ಅವರು, ಆರ್.ಅಶೋಕ್ ಅವರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ರಚನೆಯಾಗಿ ಇನ್ನೂ ಒಂದು ತಿಂಗಳಾಗಿದೆ. ಈಗಾಗಲೇ ಸಿಎಂ ವಿಚಾರ ಪ್ರಸ್ತಾಪಿಸುವುದು ಅಪ್ರಸ್ತುತ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬೆಂಗಳೂರು ನಗರ ಜಿಲ್ಲಾ ಸಚಿವರಾಗಲು ಬಯಸಿದ್ದ ಅಶೋಕ ಅವರಿಗೆ ನಗರದ ವರ್ಚಸ್ಸು ಹೆಚ್ಚಿಸಲು ಶಿವಕುಮಾರ್ ಅವರ ಮಾಡುತ್ತಿರುವ ಪ್ರಯತ್ನಗ ಕಂಡು ಅಸೂಯೆ ಪಡುತ್ತಿದ್ದಾರೆಂದು ತಿರುಗೇಟು ನೀಡಿದರು.

ಈ ನಡುವೆ ಆರ್.ಅಶೋಕ್ ಅವರ ಹೇಳಿಕೆ ಸಂಬಂಧ ಪ್ರತಿಕ್ರಿಯೆ ಪಡೆಯಲು ಡಿಕೆ.ಸುರೇಶ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲಾಯಿತಾದರೂ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಚಿಂತನೆ ನಡೆಸುತ್ತೇನೆಂಬ ಎಂಬ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಆದರೆ, ನನ್ನ ಅವಧಿ ಇನ್ನೂ ಇರುವುದರಿಂದ ಕ್ಷೇತ್ರದ ಜನರ ಸೇವೆ ಮಾಡಲು ಬಯಸುತ್ತಿದ್ದೇನೆ. ನನ್ನಂತೆ, ಬೇರೆ ಯಾವುದೇ ನಾಯಕ ಕೂಡ ಗೆಲುವು ಸಾಧಿಸಬಹುದು. ಅದನ್ನು ಪಕ್ಷದ ನಾಯಕತ್ವ ಹುಡುಕಬೇಕು. ಮುಂದಿನ ಚುನಾವಣೆಗೆ ನಾಯಕತ್ವ ಪರ್ಯಾಯ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com