ಸಿಎಂ ಸಿದ್ದರಾಮಯ್ಯ ರಾಜತಾಂತ್ರಿಕ ನಡೆ: ರಾಷ್ಟ್ರಪತಿ- ಅಮಿತ್ ಶಾ ಗೆ ಗೌರವ ವಂದನೆ; ಅಕ್ಕಿ ತಿಕ್ಕಾಟ ಅಂತ್ಯ?

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಮೈತ್ರಿ ಸರ್ಕಾರ ನಡೆಸುತ್ತಿಲ್ಲ ಎಂದು ತಿರುಗೇಟು ನೀಡಿದರು.  ಸರ್ಕಾರವು 135 ಶಾಸಕರ ಪೂರ್ಣ ಜನಾದೇಶವನ್ನು ಹೊಂದಿದೆ ಎಂದರು.
ಸಿದ್ದರಾಮಯ್ಯ- ಅಮಿತ್ ಶಾ ಭೇಟಿ
ಸಿದ್ದರಾಮಯ್ಯ- ಅಮಿತ್ ಶಾ ಭೇಟಿ

ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಿದ್ದರಾಮಯ್ಯ ಮೊದಲ ಬಾರಿಗೆ ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು.

ಇದೊಂದು ಸೌಜನ್ಯಯುತ ಭೇಟಿ ಎಂದು ಹೇಳಲಾಗಿದೆಯಾದರೂ ಭೇಟಿಯಲ್ಲಿ ರಾಜಕೀಯ ಕೂಡ ಅಡಗಿದೆ ಎನ್ನುವುದು ಖಚಿತ, ಅಮಿತ್ ಶಾ ಭೇಟಿಯ ವೇಳೆ ಸಿದ್ದರಾಮಯ್ಯ  ‘ಅನ್ನ ಭಾಗ್ಯ’ ಯೋಜನೆಗೆ ಅಕ್ಕಿ ಖರೀದಿ ಸೇರಿದಂತೆ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ, ಇದಕ್ಕೆ ಅಮಿತ್ ಶಾ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ ಸಿದ್ದರಾಮಯ್ಯ ಮತ್ತು ಶಾ ಅವರ ಏಕಾಏಕಿ ಭೇಟಿ ಏಕೆ ನಡೆದಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ,  ಕೇಂದ್ರದ ಇತ್ತೀಚಿನ ನೀತಿಯು ಆಹಾರ ಭದ್ರತಾ ಕಾಯ್ದೆಗೆ ವಿರುದ್ಧವಾಗಿದೆ, ಏಕೆಂದರೆ ಇದು ಬಡವರ ‘ದಿನಕ್ಕೆ ಎರಡು ಊಟ’ ಯೋಜನೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಸಿದ್ದರಾಮಯ್ಯ ಅಮಿತ್ ಶಾ ಅವರಿಗೆ ವಿವರಿಸಿದ್ದಾರೆ ಎಂದು ಸಿಎಂಒ ಮೂಲಗಳು ತಿಳಿಸಿವೆ. ಹಾಗಾಗಿ, ರಾಜ್ಯಗಳಿಗೆ ಆಹಾರಧಾನ್ಯ ನೀಡದಿರುವ ಮನೋಭಾವವನ್ನು ಬದಲಾಯಿಸಿದರೆ ಒಳ್ಳೆಯದು ಎಂದು ಅವರು ಶಾಗೆ ಹೇಳಿದ್ದರು ಎಂದು  ತಿಳಿದು ಬಂದಿದೆ.

ಗುರುವಾರ ಬೆಳಗ್ಗೆ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಚರ್ಚಿಸುವುದಾಗಿ ಅಮಿತ್ ಶಾ ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ ಎಂದು ಸಿಎಂಒ ಸ್ಪಷ್ಟಪಡಿಸಿದೆ. ರಾಜ್ಯಗಳಿಗೆ ಅಕ್ಕಿ ಮಾರಾಟ ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡಿರುವ ಕೇಂದ್ರವು ಅಕ್ಕಿಯ ಮೇಲೆ "ಕೊಳಕು ರಾಜಕೀಯ"ಮಾಡುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ ಕೆಲವೇ ಗಂಟೆಗಳ ನಂತರ ಸಭೆ ನಡೆಯಿತು.

ತಮ್ಮ ಸಂಪುಟದ ಸಹೋದ್ಯೋಗಿಗಳು, ಬಹುತೇಕರು ತಮ್ಮ ಆಪ್ತರೊಂದಿಗೆ  ಪ್ರವಾಸ ಮುಗಿಸಿದ ಸಿದ್ದರಾಮಯ್ಯ, ಅಧಿಕಾರ ಹಂಚಿಕೆಯ ವಿಚಾರದ ಬಗ್ಗೆ ಚರ್ಚಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಐದು ವರ್ಷ ಉಳಿಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಮೈತ್ರಿ ಸರ್ಕಾರ ನಡೆಸುತ್ತಿಲ್ಲ ಎಂದು ತಿರುಗೇಟು ನೀಡಿದರು.  ಸರ್ಕಾರವು 135 ಶಾಸಕರ ಪೂರ್ಣ ಜನಾದೇಶವನ್ನು ಹೊಂದಿದೆ ಎಂದರು.

ಅಧಿಕಾರ ಹಂಚಿಕೆಯ ವಿಚಾರವೇ ಉದ್ಭವಿಸುವುದಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಸಂದೇಶ ರವಾನಿಸಿದ್ದಾರೆ ಎಂದು ರಾಜಕೀಯ ಪಂಡಿತರ ಪ್ರಕಾರ  ಅಭಿಪ್ರಾಯವಾಗಿದೆ.  ಡಿಕೆ ಶಿವಕುಮಾರ್ ಮತ್ತು ಅವರ ಬೆಂಬಲಿಗರು ಸಿಎಂ ಸ್ಥಾನಕ್ಕೆ ಹಕ್ಕು ಚಲಾಯಿಸುತ್ತಿದ್ದು, ಹೈಕಮಾಂಡ್ ಬಳಿ ಅಧಿಕಾರ ಹಂಚಿಕೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆಯೂ ಗುಸುಗುಸು ಕೇಳಿಬರುತ್ತಿರುವುದನ್ನು ಇಲ್ಲಿ ಗಮನಿಸಬಹುದು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಕರೆದಿದ್ದ ಎಲ್ಲ ಸಚಿವರ ಸಭೆಯನ್ನು ಮುಂದೂಡಲಾಗಿದ್ದು, ಹಿರಿಯ ನಾಯಕ ರಾಹುಲ್ ಗಾಂಧಿ ವಿದೇಶದಲ್ಲಿರುವ ಕಾರಣ  ಪಕ್ಷದ ಹೈಕಮಾಂಡ್ ನಾಯಕರೊಂದಿಗೆ ಸಿದ್ದರಾಮಯ್ಯ ಯಾವುದೇ ಸಭೆ  ನಡೆಸಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com