ದೇವೇಗೌಡರಿಗೆ ಕಡಿಮೆಯಾಯ್ತು ಮೊಣಕಾಲು ನೋವು, ಹೆಚ್ಚುತ್ತಿದೆ ಹಾಸನ ಟಿಕೆಟ್ ಕಾವು: ಸ್ವರೂಪ್- ಭವಾನಿ, ಯಾರಿಗೆ ಬೆಲ್ಲ, ಯಾರಿಗೆ ಬೇವು?
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಣಿಪಾಲ ಆಸ್ಪತ್ರೆಯಲ್ಲಿ ಒಂದು ವಾರದ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ತವರು ಜಿಲ್ಲೆ ಹಾಸನದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರ ಇನ್ನೂ ಕಗ್ಗಂಟಾಗಿಯೇ ಉಳಿದಿದೆ.
Published: 07th March 2023 11:15 AM | Last Updated: 07th March 2023 02:11 PM | A+A A-

ಎಚ್.ಡಿ ದೇವೇಗೌಡ
ಬೆಂಗಳೂರು/ ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಣಿಪಾಲ ಆಸ್ಪತ್ರೆಯಲ್ಲಿ ಒಂದು ವಾರದ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ತವರು ಜಿಲ್ಲೆ ಹಾಸನದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರ ಇನ್ನೂ ಕಗ್ಗಂಟಾಗಿಯೇ ಉಳಿದಿದೆ.
ದೇವೇಗೌಡರ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಅವರ ಕಾಲುಗಳಲ್ಲಿ ಸಂಗ್ರಹವಾಗಿದ್ದ ನೀರಿನ ಅಂಶ ಬರಿದಾಗಿದೆ. ಹೀಗಾಗಿ ಪದ್ಮನಾಭನಗರದಲ್ಲಿರುವ ಕಿರಿಯ ಮಗಳು ಶೈಲಜಾ ಅವರ ಮನೆಯಲ್ಲಿ ಅವರು ವಿಶ್ರಾಂತಿ ಪಡೆಯಲಿದ್ದಾರೆ. ಈ ವೇಳೆ ಅವರು ಕುಟುಂಬ ಸದಸ್ಯರನ್ನು ಮಾತ್ರ ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಸಹೋದರ ಹೆಚ್ ಡಿ ರೇವಣ್ಣ ಅವರ ತಂದೆಯ ಸಲಹೆ ಮೇರೆಗೆ ಹಾಸನ ಕ್ಷೇತ್ರದ ಟಿಕೆಟ್ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ರೇವಣ್ಣ ಅವರ ಪುತ್ರ ಹಾಗೂ ಹಾಸನ ಎಂಎಲ್‌ಸಿ ಡಾ.ಸೂರಜ್ ರೇವಣ್ಣ ಅವರು ದೇವೇಗೌಡರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದರು.
ಇದನ್ನೂ ಓದಿ: ಜೆಡಿಎಸ್ ಪಂಚರತ್ನ ರಥ ಯಾತ್ರೆ ಪಟ್ಟಿಯಿಂದ ವಿವಾದಿತ ಹಾಸನ ಕ್ಷೇತ್ರ ಕೈಬಿಟ್ಟ ಎಚ್‌ಡಿಕೆ
ಆದರೆ ದೇವೇಗೌಡರ ಒಲವು ಯಾರ ಕಡೆ ಹರಿಯಲಿದೆ ಎಂಬುದು ಇನ್ನೂ ನಿಗೂಡವಾಗಿಯೇ ಉಳಿದಿದೆ, ತಮ್ಮ ಸೊಸೆ ಭವಾನಿ ರೇವಣ್ಣ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ.
ಕ್ಷೇತ್ರದಲ್ಲಿ ಸುಮಾರು 40,000 ಮತದಾರರನ್ನು ಹೊಂದಿರುವ ಒಕ್ಕಲಿಗ ಸಮುದಾಯದ 'ದಾಸ ಒಕ್ಕಲಿಗ' ಪಂಗಡದಿಂದ ಬಂದಿರುವ ಸ್ವರೂಪ್ ಪ್ರಕಾಶ್ ಪರವಾಗಿ ಕುಮಾರಸ್ವಾಮಿ ಒಲವು ತೋರಿದ್ದಾರೆ. 45 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಮಾರ್ಚ್ 11 ಅಥವಾ 14 ರಂದು ಪ್ರಕಟಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.