ಬೆಂಗಳೂರು-ಮೈಸೂರು ಎಕ್ಸ್'ಪ್ರೆಸ್ ವೇ ಕ್ರೆಡಿಟ್ ಪಡೆಯಲು ಯತ್ನ: ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ

ಮಾರ್ಚ್ 12 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿರುವ 10 ಪಥಗಳ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯ ಕ್ರೆಡಿಟ್ ಪಡೆದುಕೊಳ್ಳಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಯತ್ನ ನಡೆಸುತ್ತಿದ್ದು, ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ವ್ಯಂಗ್ಯವಾಡಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಮೈಸೂರು: ಮಾರ್ಚ್ 12 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿರುವ 10 ಪಥಗಳ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯ ಕ್ರೆಡಿಟ್ ಪಡೆದುಕೊಳ್ಳಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಯತ್ನ ನಡೆಸುತ್ತಿದ್ದು, ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ವ್ಯಂಗ್ಯವಾಡಿದ್ದಾರೆ.

ಮಹಾರಾಜರ ಮೈದಾನದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಪ್ರಮಾಣಪತ್ರ ಮತ್ತು ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ವಿಧಾನಸಭೆ ಚುನಾವಣೆಗೂ ಮುನ್ನ ಸುಳ್ಳು ಭರವಸೆಗಳನ್ನು ನೀಡಿ ಕಾಂಗ್ರೆಸ್ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಪ್ರಸ್ತಾವನೆ ಸಲ್ಲಿಸಿದಾಕ್ಷಣ ಎಕ್ಸ್'ಪ್ರೆಸ್ ವೇ ಕ್ರೆಡಿಟ್ ಕಾಂಗ್ರೆಸ್'ಗೆ ಸಲ್ಲುವುದಿಲ್ಲ. ರಸ್ತೆ ವಿಸ್ತೀರ್ಣ ಪ್ರಸ್ತಾವನೆ 20 ವರ್ಷಗಳ ಹಿಂದೆಯೇ ಆಗಿತ್ತು. ಪ್ರಸ್ತಾಪ ಮಾಡುವುದಕ್ಕೂ ಹಣ ಬಿಡುಗಡೆ ಮಾಡಿ ಕೆಲಸ ಮಾಡಿಸುವುದಕ್ಕೂ ವ್ಯತ್ಯಾಸ ಇದೆ ಎಂದು ಹೇಳಿದರು.

ಹೈವೇಯನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿರ್ಮಿಸಲಾಗಿದೆ. ಕಾಂಗ್ರೆಸ್ ನಾಯಕರ ಮಾತನ್ನು ಕೇಳಿದರೆ ಜನರು ನಗುತ್ತಾರೆ. ಸಿದ್ದರಾಮಯ್ಯ ಅವರು ರಸ್ತೆ ಪರಿಶೀಲನೆಗೆ ನಮ್ಮ ತಕರಾರು ಇಲ್ಲ. ಹೆದ್ದಾರಿಯಲ್ಲಿ ಸಾವಿರಾರು ಜನರು ಈಗಾಗಲೇ ಓಡಾಡುತ್ತಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು ಎಂದು ತಿಳಿಸಿದರು.

ಬಳಿಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಪ್ರಮಾಣಪತ್ರ ಮತ್ತು ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಮಖ್ಯಮಂತ್ರಿಗಳು, ಜನರನ್ನು ಆಕರ್ಷಿಸುವ ಕಾಂಗ್ರೆಸ್‌ಗಿಂತ ಬಿಜೆಪಿ ಭಿನ್ನವಾಗಿದೆ ಎಂದು ತಿಳಿಸಿದರು.

ನಮ್ಮ ಸರ್ಕಾರ ST/SC ಮೀಸಲಾತಿ ಹೆಚ್ಚಳವನ್ನು ಘೋಷಿಸಿದೆ. ನಮ್ಮ ಸರ್ಕಾರ ಎಂದಿಗೂ ಜಾರಿಗೆ ತರುವುದಿಲ್ಲ ಕಾಂಗ್ರೆಸ್ ಹೇಳಿತ್ತು. ಕಳೆದ ನಾಲ್ಕೈದು ದಶಕಗಳಲ್ಲಿ ಅವರು ಮಾಡಲು ವಿಫಲವಾದುದನ್ನು ನಾವು ಮಾಡುತ್ತಿದ್ದೇವೆ. ಸರ್ಕಾರದ ಯೋಜನೆಗಳು ಡಿಬಿಟಿ ಮೂಲಕ ಫಲಾನುಭವಿಗಳಿಗೆ ತಲುಪುವಂತೆ ಮೋದಿ ಖಾತ್ರಿಪಡಿಸಿದ್ದಾರೆ. "ಸಾಂಕ್ರಾಮಿಕ ರೋಗ ಸಮಯದಲ್ಲಿ ಮೋದಿ ಸರ್ಕಾರವು ಅತಿದೊಡ್ಡ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿತು, ಬಿಎಸ್ ಯಡಿಯೂರಪ್ಪನವರು ಸಿಎಂ ಆಗಿದ್ದ ಅವಧಿಯಲ್ಲಿ, ರಾಜ್ಯದ ಜನರು ಕೂಡ ಪ್ರಯೋಜನ ಪಡೆದುಕೊಂಡರು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ರಾಜ್ಯದ 33 ಲಕ್ಷಕ್ಕೂ ಅಧಿಕ ರೈತರಿಗೆ 24 ಸಾವಿರ ಕೋಟಿ ಸಾಲ ನೀಡುವ ಗುರಿ ಹೊಂದಲಾಗಿದ್ದು, ಅದರಲ್ಲಿ 3 ಲಕ್ಷ ಹೊಸ ರೈತರು ಇದ್ದಾರೆ. ನಾವು ಸಾಲದ ಮೊತ್ತವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿದ್ದೇವೆ ಎಂದರು.

ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಕಾಂಗ್ರೆಸ್‌ ಬಂದ್‌ಗೆ ಕರೆ ಕುರಿತು ಲೇವಡಿ ಮಾಡಿದರು. ಕಾಂಗ್ರೆಸ್‌ ಪಕ್ಷವೇ ಸ್ವತಃ ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿದೆ. ಹೀಗಿರುವಾಗ ಬಂದ್‌ ನಡೆಸಲು ಕಾರಣವೇನು ಎಂಬ ಕುತೂಹಲವಿದೆ. ಮಾರ್ಚ್ 9 ರಿಂದ ಪಿಯು ಪರೀಕ್ಷೆಗಳು ಪ್ರಾರಂಭವಾಗುವುದರಿಂದ ಬಂದ್'ಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುವುದಿಲ್ಲ ಎಂದರು.

ಅತಿಥಿಗಳಿಗೆ ಕಾಫಿ, ತಿಂಡಿಗಾಗಿ ರೂ.200 ಖರ್ಚು ಮಾಡಿರುವ ಬಗ್ಗೆ ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದಿರುವ ಆರೋಪ ಕುರಿತು ಪ್ರತಿಕ್ರಿಯೆ ನೀಡಿ, ಆರೋಪ ನಿಜವೆಂದು ಕಂಡು ಬಂದಲ್ಲಿ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಎಚ್‌3ಎನ್2 ವೈರಸ್ ಭೀತಿ ವಿಚಾರ ಕುರಿತು ಮಾತನಾಡಿ, ಕೇಂದ್ರ ಸರ್ಕಾರ ಈ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದೆ. ಇಡೀ ರಾಜ್ಯಕ್ಕೆ ಮಾರ್ಗಸೂಚಿಯನ್ನು ಅತೀ ಶೀಘ್ರದಲ್ಲೇ ಕೊಡಲಿದ್ದಾರೆ. ಅದಕ್ಕೆ ಔಷಧಿಗಳನ್ನು ಸಂಗ್ರಹ ಮಾಡಿ ಜಿಲ್ಲಾ ಕೇಂದ್ರಗಳಲ್ಲಿ ಇಡಲು ಸೂಚನೆ ನೀಡಲಿದ್ದಾರೆ. ಕರ್ನಾಟಕದಲ್ಲಿ ಅಂತಹ ಸಮಸ್ಯೆಗಳಿಲ್ಲ. ಎಚ್ಚರಿಕೆ ವಹಿಸಬೇಕಿದೆ, ಮಾಸ್ಕ್ ಕಡ್ಡಾಯವಲ್ಲ. ಶೀಘ್ರದಲ್ಲಿಯೇ ಉನ್ನತ ಮಟ್ಟದ ಸಭೆ ನಡೆಸಿ ನಿರ್ಧಾರ ಕೈಗಳ್ಳಲಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com