ಮದ್ದೂರಿನಲ್ಲಿ ಜೆಡಿಎಸ್ ಗೆ ಸಡ್ಡು: ಉದ್ಯಮಿ ಕದಲೂರು ಉದಯ್ ಗೌಡ ಕಾಂಗ್ರೆಸ್ ಗೆ ಸೇರ್ಪಡೆ; ಡಿ.ಸಿ.ತಮ್ಮಣ್ಣ ಸೋಲಿಸಲು ಪಣ!

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಉದ್ಯಮಿ ಕದಲೂರು ಉದಯ್ ಗೌಡ ಅಚ್ಚರಿಯ ನಡೆ ಮೂಲಕ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ ಸೇರ್ಪಡೆಯಾದ ಉದ್ಯಮಿ ಕದಲೂರು ಉದಯ್ ಗೌಡ
ಕಾಂಗ್ರೆಸ್ ಸೇರ್ಪಡೆಯಾದ ಉದ್ಯಮಿ ಕದಲೂರು ಉದಯ್ ಗೌಡ

ಬೆಂಗಳೂರು: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಉದ್ಯಮಿ ಕದಲೂರು ಉದಯ್ ಗೌಡ ಅಚ್ಚರಿಯ ನಡೆ ಮೂಲಕ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಇದೇ ಕದಲೂರು ಉದಯ್ ಗೌಡ ಅವರು ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. 2019 ರಲ್ಲಿ ಬಿಜೆಪಿ ಸರ್ಕಾರ ರಚಿಸಲು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಉದಯ್ ಸಹಾಯ ಮಾಡಿದ್ದರು ಎನ್ನಲಾಗಿದೆ.

ಇನ್ನು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, 'ಜೆಡಿಎಸ್ ಭದ್ರಕೋಟೆಯನ್ನು ಛಿದ್ರಮಾಡಲು ಹಾಗೂ ಮದ್ದೂರು ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ.ತಮ್ಮಣ್ಣ ಅವರನ್ನು ಸೋಲಿಸಬೇಕೆಂಬ ಧ್ಯೇಯದೊಂದಿಗೆ ಕದಲೂರು ಉದಯ್ ಗೌಡ ಅವರನ್ನು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ. ಉದಯ್ ಯಾವುದೇ ಷರತ್ತು ಇಲ್ಲದೆ ಪಕ್ಷ ಸೇರುತ್ತಿದ್ದಾರೆ ಎಂದು ಹೇಳಿದರು.

ಬೆಂಗಳೂರಿನ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕದಲೂರು ಉದಯ್ ಗೌಡ ಅವರಿಗೆ ಪಕ್ಷದ ಬಾವುಟ ನೀಡಿ, ಶಾಲು ಹೊದಿಸಿ  ಬರಮಾಡಿಕೊಂಡು ಮಾತನಾಡಿದ ಡಿ.ಕೆ.ಶಿವಕುಮಾರ್, ನಮ್ಮಗಳ ಕೆಲವು ತಪ್ಪುಗಳಿಂದಲೇ ಈ ಕ್ಷೇತ್ರ ಕೈತಪ್ಪಿಹೋಗಿತ್ತು. ಉದಯ್ ಬಹಳ ದಿನಗಳಿಂದ ಈ ಭಾಗದಲ್ಲಿ ಸಮಾಜ ಮುಖಿ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್‍ನ ಡಿ.ಸಿ.ತಮ್ಮಣ್ಣರನ್ನು ಸೋಲಿಸಲು ಉದಯ್ ಕಾಂಗ್ರೆಸ್ ಸೇರುತ್ತಿದ್ದಾರೆ. ಗುರುಚರಣ್ ಕಷ್ಟಕಾಲದಲ್ಲಿ ತಳಮಟ್ಟದಲ್ಲಿ ಪಕ್ಷ ಉಳಿಸಿಕೊಂಡು ಬಂದಿದ್ದಾರೆ. ದಿನೇಶ್ ಗೂಳಿಗೌಡ ಹಾಗೂ ಮಧು ಜಿ.ಮಾದೇಗೌಡರು ಜನರ ಆಶೀರ್ವಾದದಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದಾರೆ. ಧೃವನಾರಾಯಣ ಮಂಡ್ಯ ಭಾಗದಲ್ಲಿ ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೆ ಅವರು ಇಂದು ನಮ್ಮ ಜೊತೆಯಲಿಲ್ಲ ಎಂದು ಡಿಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.

ಉದಯ್, ಗುರುಚರಣ್ ಹಾಗೂ ಸ್ಥಳೀಯ ಮುಖಂಡರ ಜತೆ ಚರ್ಚೆ ಮಾಡಿದ್ದೇವೆ. ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಒಪ್ಪಿದ್ದಾರೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.

ಉದಯ್ ಆಪರೇಷನ್ ಕಮಲದಲ್ಲಿ ಭಾಗಿಯಾಗಿದ್ದರು ಎಂಬ ಅಪಾದನೆ ಇದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಆಪರೇಷನ್ ಕಮಲದಲ್ಲಿ ಭಾಗಿಯಾಗಿದ್ದರು. ವಿರೋಧ ಪಕ್ಷದಲ್ಲಿದ್ದಾಗ ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ನಮ್ಮ ಜತೆ ಇದ್ದ ಎ.ಮಂಜು ಈಗ ಜೆಡಿಎಸ್‍ಗೆ ಹೋಗಿದ್ದಾರೆ. ಜೆಡಿಎಸ್ ನಲ್ಲಿದ್ದ ಶಿವಲಿಂಗೇಗೌಡರು, ಗುಬ್ಬಿ ವಾಸು, ಮಧುಬಂಗಾರಪ್ಪ ಸೇರಿದಂತೆ ಅನೇಕರು ಕಾಂಗ್ರೆಸ್ ಗೆ ಬಂದಿದ್ದಾರೆ. ನಾನು ಹಾಗೂ ಎಚ್.ಡಿ.ಕುಮಾರಸ್ವಾಮಿ ಪರಸ್ಪರ ಎದುರಾಳಿಯಾಗಿ ಗುದ್ದಾಡಿದ್ದರೂ ಹೈಕಮಾಂಡ್ ನಿರ್ದೇಶನದ ಮೇರೆಗೆ ಅವರ ಜತೆ ಸೇರಿ ಮೈತ್ರಿ ಸರಕಾರ ಮಾಡಿದ್ದೇವು. ರಾಜಕಾರಣದಲ್ಲಿ ಇಂತಹ ಬೆಳವಣಿಗೆ ಸಹಜ ಎಂದರು.

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷವೇ ಬಲಿಷ್ಟ
ಅಂತೆಯೇ ಪ್ರಧಾನಿ ನಿನ್ನೆ ಮಂಡ್ಯಕ್ಕೆ ಭೇಟಿ ನೀಡಿ ಕೇವಲ ಕಾಂಗ್ರೆಸ್ ಪಕ್ಷವನ್ನು ಮಾತ್ರ ಗುರಿಮಾಡಿ ಮಾತಾಡಿದ್ದು, ಜೆಡಿಎಸ್ ಬಗ್ಗೆ ಒಂದೂ ಮಾತನಾಡಿಲ್ಲ. ಅವರಿಗೆ ಜನತಾದಳ ಮುಖ್ಯವಲ್ಲ.. ಕಾಂಗ್ರೆಸ್ ಮಾತ್ರ ಮುಖ್ಯವಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಮಾತ್ರ ಅಟ್ಯಾಕ್ ಮಾಡಿದ್ದಾರೆ. ಇದರ ಅರ್ಥ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷ ಸ್ಟ್ರಾಂಗ್ ಇದೆ.. ಜೆಡಿಎಸ್ ಸ್ಟ್ರಾಂಗ್ ಇಲ್ಲ ಎಂಬುದು ಅವರ ಅರ್ಥ.. ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಅತೀ ಹೆಚ್ಚು ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು‌.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಮಾಜಿ ಸದಸ್ಯ ಬಿ.ರಾಮಕೃಷ್ಣ, ಕಾಂಗ್ರೆಸ್ ಮುಖಂಡ ಗುರುಚರಣ್, ಜಿಲ್ಲಾಧ್ಯಕ್ಷ ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

ಕೋಟ್ಯಾಧಿಪತಿಯಾದ ಉದಯ್ ಅವರು ಭಾರತ ಮತ್ತು ವಿದೇಶಗಳಲ್ಲಿ ವಿಶೇಷವಾಗಿ ಶ್ರೀಲಂಕಾದಲ್ಲಿ ವ್ಯವಹಾರಗಳನ್ನು ನಡೆಸುತ್ತಿದ್ದರು. ಅವರು ಮದ್ದೂರು ಸಮೀಪದ ಕದಲೂರು ಎಂಬ ಗ್ರಾಮದವರಾಗಿದ್ದು, ಮೊದಲಿನಿಂದಲೂ ದೊಡ್ಡ ಉದ್ಯಮಿಯಾಗಿ ಬೆಳೆದರು. ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಅವರ ನಿಕಟವರ್ತಿಯಾಗಿರುವ ಅವರು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೂ ಸಂಪರ್ಕದಲ್ಲಿದ್ದರು. ಹತ್ತನೇ ತರಗತಿ ತೇರ್ಗಡೆಯಾಗಿರುವ ಉದಯ್ ಅವರು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಆಪ್ತರಾದ ಜೆಡಿಎಸ್ ಶಾಸಕ ಡಿ ಸಿ ತಮ್ಮಣ್ಣ ವಿರುದ್ಧ ಮದ್ದೂರಿನಿಂದ ಕಾಂಗ್ರೆಸ್ ಟಿಕೆಟ್ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಗೆ ದೊಡ್ಡ ಲಾಭ
ಇನ್ನು ಉದ್ಯಮಿ ಉದಯ್ ಅವರ ಬಲವಾದ ಆರ್ಥಿಕ ಹಿನ್ನೆಲೆಯನ್ನು ಗಮನಿಸಿದರೆ, ಅವರು ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ಲಾಭ ಆಗಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಮಕೃಷ್ಣ, ಎಂಎಲ್‌ಸಿಗಳಾದ ದಿನೇಶ್ ಗೂಳಿಗೌಡ ಮತ್ತು ಮಧು ಮಾದೇಗೌಡ ಸೇರಿದಂತೆ ಮಂಡ್ಯದ ಸ್ಥಳೀಯ ನಾಯಕರು ಕೂಡ ಅವರನ್ನು ಕಾಂಗ್ರೆಸ್‌ಗೆ ಸೇರಿಸುವಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸಿದ್ದಾರೆ ಎಂದು ಮೂಲವೊಂದು ಟಿಎನ್‌ಐಇಗೆ ತಿಳಿಸಿದೆ. ಉದಯ್ ಕಾಂಗ್ರೆಸ್ ಸೇರ್ಪಡೆಗೆ ಮಾಜಿ ಸಿಎಂ ಎಸ್ಎಂ ಕೃಷ್ಣ ಅವರ ಸಂಬಂಧಿ ಕೂಡ ಆಗಿರುವ ಗುರುಚರಣ್ ಅವರ ಒಪ್ಪಿಗೆಯೂ ಇದೆ ಎನ್ನಲಾಗಿದೆ.

ಉದಯ್ ಈಗಾಗಲೇ ಮದ್ದೂರಿನ ಪ್ರತಿ ಮನೆಗೆ ಸೀರೆ ಸೇರಿದಂತೆ ಉಚಿತ ಉಡುಗೊರೆಗಳನ್ನು ನೀಡಿ ಮನೆ ಮಾತಾಗಿದ್ದಾರೆ ಎಂದು ನಿವಾಸಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಕುತೂಹಲಕಾರಿಯಾಗಿ, ಅವರು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರೊಂದಿಗೂ ಉದಯ್ ಉತ್ತಮ ಸಂಬಂಧ ಹೊಂದಿದ್ದಾರೆ ಮತ್ತು 2022 ರ ಆಗಸ್ಟ್‌ನಲ್ಲಿ ದಾವಣಗೆರೆಯಲ್ಲಿ ನಡೆದ ಅವರ ಜನ್ಮದಿನದ ಸಮಾರಂಭಕ್ಕೆ ಧನಸಹಾಯ ಮಾಡಿದ್ದರು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com