ಮಾ.20ಕ್ಕೆ ಬೆಳಗಾವಿಯಲ್ಲಿ ಯುವಕ್ರಾಂತಿ ಸಮಾವೇಶ; ಭಾರತ ಜೋಡೋ ಯಾತ್ರೆ ಬಳಿಕ ರಾಹುಲ್ ಮೊದಲ ಸಾರ್ವಜನಿಕ ಕಾರ್ಯಕ್ರಮ  

ಭಾರತ್ ಜೋಡೋ ಯಾತ್ರೆ ಸುದೀರ್ಘ ಯಾತ್ರೆ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮೊದಲ ಬಾರಿಗೆ ಬೆಳಗಾವಿಯ ಯುವ ಕ್ರಾಂತಿ ರ್ಯಾಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಬೆಳಗಾವಿ: ಭಾರತ್ ಜೋಡೋ ಯಾತ್ರೆ ಸುದೀರ್ಘ ಯಾತ್ರೆ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮೊದಲ ಬಾರಿಗೆ ಬೆಳಗಾವಿಯ ಯುವ ಕ್ರಾಂತಿ ರ್ಯಾಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಿಕೆ. ಶಿವಕುಮಾರ್ ಅವರು, ಮಹಾತ್ಮ ಗಾಂಧಿ ಅವರು ಅಧ್ಯಕ್ಷತೆ ವಹಿಸಿಕೊಂಡಿದ್ದ 1924ರ ಕಾಂಗ್ರೆಸ್‌ ಅಧಿವೇಶನ ಬೆಳಗಾವಿಯಲ್ಲಿ ನಡೆದಿತ್ತು. ಹೀಗಾಗಿ, ಇದೇ ಸ್ಥಳದಿಂದ ‘ಯುವ ಕ್ರಾಂತಿ’ ರ್‍ಯಾಲಿ ಆರಂಭಿಸಲು ರಾಹುಲ್‌ ಗಾಂಧಿ ನಿರ್ಧರಿಸಿದ್ದಾರೆಂದು ಹೇಳಿದರು.

“ಬೆಳಗಾವಿ ರ್ಯಾಲಿಯಲ್ಲಿ ರಾಹುಲ್ ಅವರು ಜನತೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಭಾರತ್ ಜೋಡೋ ಯಾತ್ರೆಯ ಉದ್ದೇಶಗಳು ಮತ್ತು ಗುರಿಗಳ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದಾರೆ. ಇದು ಪಕ್ಷದ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಮತ್ತು ಶಕ್ತಿಯನ್ನು ತುಂಬಲು ಮತ್ತು ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸುವ ಪ್ರಯತ್ನವಾಗಲಿದೆ ಎಂದು ತಿಳಿಸಿದರು.

ಬಳಿಕ ಕರ್ನಾಟಕದ 865 ಗ್ರಾಮಗಳಲ್ಲಿ ಆರೋಗ್ಯ ಯೋಜನೆ ಜಾರಿಗೆ ತರಲು ಮುಂದಾಗಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಡಿಕೆ.ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.

ಮಹಾರಾಷ್ಟ್ರ ಸರ್ಕಾರ 356ನೇ ವಿಧಿಯನ್ನು ಉಲ್ಲಂಘಿಸಿರುವುದರಿಂದ ಸರ್ಕಾರವನ್ನು ಅಮಾನತುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

"ಎಲ್ಲಾ ರಾಜ್ಯಗಳು ಫೆಡರಲ್ ರಚನೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಮಹಾರಾಷ್ಟ್ರದ ನಡೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾನಿ ಮಾಡುತ್ತಿದೆ. ರಾಜ್ಯದ ಶಾಂತಿ ಮತ್ತು ಸಮಗ್ರತೆಗೆ ಧಕ್ಕೆ ತರುವ ಸಂಚು ರೂಪಿಸಲಾಗುತ್ತಿದ್ದು, ಇದು ದುರದೃಷ್ಟಕರ. ಮಹಾರಾಷ್ಟ್ರದ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿರುವ ಕರ್ನಾಟಕ ಸರ್ಕಾರವನ್ನು ಕೇಂದ್ರ ಸರ್ಕಾರ ಅಮಾನತುಗೊಳಿಸಬೇಕು' ಎಂದು ಒತ್ತಾಯಿಸಿದರು.

ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಮಾರ್ಚ್ 20 ರಂದು ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯಲ್ಲಿ ನಡೆಯಲಿರುವ ರ್ಯಾಲಿಯಲ್ಲಿ 4-5 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮಾತನಾಡಿ, ರಾಹುಲ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಬೆಳಗಾವಿಯಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಯುವಕರ ಭವಿಷ್ಯದ ಬಗ್ಗೆ ರಾಹುಲ್ ಅವರು ತಮ್ಮ ಭಾಷಣದಲ್ಲಿ ಮಾತನಾಡಲಿದ್ದಾರೆ. ಯುವಕರಿಗೆ ಉದ್ಯೋಗ ಸೃಷ್ಟಿಸಲು ಕಾಂಗ್ರೆಸ್ ಚಿಂತನೆ ಏನೆಂಬುದನ್ನೂ ಘೋಷಿಸಲಿದ್ದಾರೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com