'ರಾಮ'ನಗರ ಜಿದ್ದಾಜಿದ್ದಿ: ನಿಖಿಲ್ ವಿರುದ್ಧ ಇಕ್ಬಾಲ್ ಹುಸೇನ್ ಸ್ಪರ್ಧೆ; ಡಿ.ಕೆ ಸುರೇಶ್ ಕಣಕ್ಕಿಳಿಸದಂತೆ ಸ್ವಾಮೀಜಿ ಸೂಚನೆ?

2023ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರ ಹಲವು ಕಾರಣಗಳಿಗೆ ಸುದ್ದಿಯಾಗುತ್ತಿದೆ. ಹಾಲಿ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಗಾಗಿ  ಕ್ಷೇತ್ರ ತ್ಯಾಗ ಮಾಡಿದ್ದಾರೆ.
ಸುರೇಶ್, ನಿಖಿಲ್ ಮತ್ತು ಇಕ್ಬಾಲ್ ಹುಸೇನ್
ಸುರೇಶ್, ನಿಖಿಲ್ ಮತ್ತು ಇಕ್ಬಾಲ್ ಹುಸೇನ್

ರಾಮನಗರ: 2023ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರ ಹಲವು ಕಾರಣಗಳಿಗೆ ಸುದ್ದಿಯಾಗುತ್ತಿದೆ. ಹಾಲಿ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಗಾಗಿ  ಕ್ಷೇತ್ರ ತ್ಯಾಗ ಮಾಡಿದ್ದಾರೆ.

ರಾಮನಗರದಿಂದ ನಿಖಿಲ್ ಕಣಕ್ಕಿಳಿಯುವುದು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ನಿಂದ ಸಂಸದ ಡಿ.ಕೆ ಸುರೇಶ್ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು, ಆದರೆ ಈ ಎಲ್ಲಾ ಊಹಾ ಪೋಹಗಳಿಗೆ ತೆರೆ ಬಿದ್ದಿದ್ದು, ಕಾಂಗ್ರೆಸ್ ಚುನಾವಣಾ ಸಮಿತಿ ಇಕ್ಬಾಲ್ ಹುಸೇನ್ ಅವರ ಹೆಸರನ್ನು ಅಂತಿಮಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

2019ರ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ವಿರುದ್ಧ ಸೋಲು ಕಂಡಿದ್ದ ನಿಖಿಲ್ ಕುಮಾರಸ್ವಾಮಿ ರಾಮನಗರದಿಂದ ಸ್ಪರ್ಧಿಸಿ ಗೆಲುವು ಸವಿಯುವ ನಿರೀಕ್ಷೆಯಲ್ಲಿದ್ದಾರೆ. ಈ ಹಿಂದೆ ರಾಮನಗರದಿಂದ  ಸ್ಪರ್ಧಿಸಿ ನಿಖಿಲ್ ತಂದೆ ಎಚ್.ಡಿ ಕುಮಾರಸ್ವಾಮಿ ಮತ್ತು ತಾತ ಎಚ್‌ಡಿ ದೇವೇಗೌಡರು ಗೆದ್ದು ಮುಖ್ಯಮಂತ್ರಿಯಾಗಿದ್ದರು.

ರಾಮನಗರದಲ್ಲಿ ನಿಖಿಲ್ ವಿರುದ್ಧ ಡಿ.ಕೆ ಸುರೇಶ್ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು, ಆದರೆ ಇತ್ತೀಚೆಗೆ ನಡೆದ ಸಮುದಾಯದ ಧಾರ್ಮಿಕ ಮುಖಂಡರುಗಳ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು, ಒಕ್ಕಲಿಗರ ನಡುವೆ ಉಂಟಾಗುವ ಸಂಘರ್ಷ ತಪ್ಪಿಸಲು ನಿಖಿಲ್ ವಿರುದ್ಧ ಸುರೇಶ್ ಅವರನ್ನು ಕಣಕ್ಕಿಳಿಸದಂತೆ ಡಿ.ಕೆ ಶಿವಕುಮಾರ್ ಅವರಿಗೆ ಸಲಹೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಸುರೇಶ್ ಹೆಸರನ್ನು ಕೈ ಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸ್ಥಾನದ ಮೇಲೆ ಹಕ್ಕು ಸಾಧಿಸಲು ಬಯಸುವ ಸಮುದಾಯವು ಕನಿಷ್ಠ 40 ಶಾಸಕರನ್ನು ಹೊಂದಿರಬೇಕು ಎಂದು ಧಾರ್ಮಿಕ ಮುಖಂಡರು ಸೂಚಿಸಿದ್ದಾರೆ. ಆ ನಿರ್ಧಾರಕ್ಕೆ ಬದ್ಧರಾಗಿ, 2018 ರಲ್ಲಿ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದ ಅಲ್ಪಸಂಖ್ಯಾತ ಮುಖಂಡ ಮತ್ತು ಮಾಜಿ ಜಿಪಂ ಅಧ್ಯಕ್ಷ ಇಕ್ಬಾಲ್ ಮುಂಬರುವ ಚುನಾವಣೆಯಲ್ಲಿ ನಿಖಿಲ್ ವಿರುದ್ಧ ಕಣಕ್ಕಿಳಿಸುವ ಸಾಧ್ಯತೆಯಿದೆ.

ನಾನು ಕ್ಷೇತ್ರದಲ್ಲಿ ಸುಮಾರು 950 ಕಿ.ಮೀ ಕ್ರಮಿಸಿದ್ದೇನೆ. ಒಕ್ಕಲಿಗರು ಸಹ ನನಗೆ ಮತ ಹಾಕುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಇಕ್ಬಾಲ್  ಹುಸೇನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ರಾಮನಗರ ಕ್ಷೇತ್ರದ 2.10 ಲಕ್ಷ ಮತದಾರರಲ್ಲಿ 65,000ಕ್ಕೂ ಹೆಚ್ಚು ಒಕ್ಕಲಿಗರು, 40,391 ಮುಸ್ಲಿಮರು, 45,000 ಎಸ್‌ಸಿ/ಎಸ್‌ಟಿಗಳು, 9,000 ಲಿಂಗಾಯತರು, 8,000 ತಿಗಳರು, 7,000 ಕುರುಬರು ಮತ್ತು ಇತರೆ ಹಿಂದುಳಿದ ವರ್ಗದವರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com