ರೇವಣ್ಣಗೆ ಭವಾನಿ ಚಿಂತೆ, ಕುಮಾರಣ್ಣನಿಗೆ ನಿಖಿಲ್ ಚಿಂತೆ, ಭಾಗ್ಯವಿಧಾತ ಸಿದ್ದರಾಮಯ್ಯಗೆ ಕ್ಷೇತ್ರದ್ದೇ ಚಿಂತೆ: ಪ್ರತಾಪ್ ಸಿಂಹ ವ್ಯಂಗ್ಯ
ಅನ್ನಭಾಗ್ಯ, ಶಾದಿ ಭಾಗ್ಯ, ಕ್ಷೀರಭಾಗ್ಯ ಮುಂತಾದ ಭಾಗ್ಯಗಳನ್ನು ಕೊಟ್ಟ ಸಿದ್ದರಾಮ್ಯನವರಿಗೆ ಕ್ಷೇತ್ರ ಭಾಗ್ಯವೇ ಇಲ್ಲ. ಅವರು ಕ್ಷೇತ್ರವನ್ನು ಹುಡುಕುವ ದುಃಸ್ಥಿತಿ ಬಂದಿದೆ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
Published: 23rd March 2023 03:32 PM | Last Updated: 23rd March 2023 07:13 PM | A+A A-

ಪ್ರತಾಪ್ ಸಿಂಹ
ಕೊಡಗು: ಅನ್ನಭಾಗ್ಯ, ಶಾದಿ ಭಾಗ್ಯ, ಕ್ಷೀರಭಾಗ್ಯ ಮುಂತಾದ ಭಾಗ್ಯಗಳನ್ನು ಕೊಟ್ಟ ಸಿದ್ದರಾಮ್ಯನವರಿಗೆ ಕ್ಷೇತ್ರ ಭಾಗ್ಯವೇ ಇಲ್ಲ. ಅವರು ಕ್ಷೇತ್ರವನ್ನು ಹುಡುಕುವ ದುಃಸ್ಥಿತಿ ಬಂದಿದೆ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ಕೊಡಗಿನಲ್ಲಿ ಮಾತನಾಡಿದ ಅವರು, ಎಲ್ಲಾ ಭಾಗ್ಯಗಳನ್ನು ಕೊಟ್ಟು ಈಗ ಒಂದು ಕ್ಷೇತ್ರಕ್ಕಾಗಿ ಹುಡುಕಾಡುತ್ತಿರುವುದನ್ನು ನೋಡಿದರೆ ಆಶ್ಚರ್ಯ ಮತ್ತು ಸೋಜಿವಾಗುತ್ತದೆ ಎಂದರು.
ಯುಗಾದಿ ಹಬ್ಬದ ದಿನದಂದು ಕಾಂಗ್ರೆಸ್ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಆಗಬೇಕಾಗಿತ್ತು. ಆದರೆ ಯಾಕೆ ಇವತ್ತಿನವರೆಗೆ ಟಿಕೆಟ್ ಘೋಷಣೆ ಆಗಿಲ್ಲ. ಇವರಿಗೆ ಯಾರಿಗೂ ರಾಜ್ಯ ಮತ್ತು ದೇಶದ ಚಿಂತೆಯಿಲ್ಲ. ಸಿದ್ದರಾಮಯ್ಯಗೆ ಕ್ಷೇತ್ರದ ಚಿಂತೆ ಆದರೆ ಅವರ ಧರ್ಮಪತ್ನಿಗೆ ಪುತ್ರನ ಚಿಂತೆ.
ರೇವಣ್ಣ ಅವರಿಗೆ ಭವಾನಿಯವರ ಚಿಂತೆಯಾದರೆ, ಕುಮಾರಣ್ಣನಿಗೆ ನಿಖಿಲ್ ನ ಚಿಂತೆ. ಹೀಗಾಗಿ ಇವರಿಗೆಲ್ಲ ಅವರವರ ಕುಟುಂಬಗಳ ಚಿಂತೆ ಇದೆಯೇ ಹೊರತ್ತು, ಇವರಿಗೆ ರಾಜ್ಯದ ಚಿಂತೆ ಇಲ್ಲ. ಹೀಗಾಗಿ ರಾಜ್ಯದ ಚಿಂತೆ ಇದೆ ಎಂದು ಯಾರು ಮಂಗಗಳಾಗಬೇಡಿ ಎಂದು ಜನರಿಗೆ ಮನವಿ ಮಾಡಿದರು.
ಇವರು ಕೊಡುವ 200 ಯುನಿಟ್ ವಿದ್ಯುತ್, ಗೃಹಿಣಿಯರಿಗೆ 2000 ಗೃಹಲಕ್ಷ್ಮಿ ಯೋಜನೆ ಕೊಡುತ್ತೇವೆ ಎನ್ನುವುದೆನ್ನೆಲ್ಲ ನಂಬಬೇಡಿ. ಪಂಜಾಬ್ ನಲ್ಲಿ ಎಎಪಿಯವರು ಇದನ್ನೇ ಹೇಳಿ ಟೋಪಿ ಹಾಕಿದ್ದಾರೆ. ಈಗ ರಾಜ್ಯದ ಜನತೆಗೆ ಟೋಪಿಹಾಕಲು ಬರುತ್ತಿದ್ದಾರೆ. ಹೀಗಾಗಿ ಇವರನ್ನು ನಂಬಬೇಡಿ ಎಂದು ಪ್ರತಾಪ್ ಸಿಂಹತಿರುಗೇಟು ನೀಡಿದರು.