ಜೆಡಿಎಸ್‌ನಲ್ಲಿ ಅಂತ್ಯ ಕಾಣದ ಕುಟುಂಬ ಕಲಹ; ಬಿಜೆಪಿ-ಕಾಂಗ್ರೆಸ್ ರಾಷ್ಟ್ರೀಯ ನಾಯಕರು ನನ್ನ ಸಂಪರ್ಕದಲ್ಲಿ: ಎಚ್‌ಡಿಕೆ
ರಾಷ್ಟ್ರೀಯ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ನಿವಾರಿಸಿ ಕಾರ್ಯಕರ್ತರಿಗೆ ಒಗ್ಗಟ್ಟಿನ ಸಂದೇಶವನ್ನು ರವಾನಿಸುತ್ತಿರುವ ಸಮಯದಲ್ಲಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಿಗೆ ಹಾಸನ ಕ್ಷೇತ್ರದ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಕೌಟುಂಬಿಕ ಕಲಹವಿನ್ನೂ ಜೆಡಿಎಸ್ ಪಕ್ಷವನ್ನು ಕಾಡುತ್ತಿದೆ.
Published: 30th March 2023 02:41 PM | Last Updated: 30th March 2023 05:52 PM | A+A A-

ಕಾಂಗ್ರೆಸ್-ಜೆಡಿಎಸ್-ಬಿಜೆಪಿ
ಬೆಂಗಳೂರು: ರಾಷ್ಟ್ರೀಯ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ನಿವಾರಿಸಿ ಕಾರ್ಯಕರ್ತರಿಗೆ ಒಗ್ಗಟ್ಟಿನ ಸಂದೇಶವನ್ನು ರವಾನಿಸುತ್ತಿರುವ ಸಮಯದಲ್ಲಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಿಗೆ ಹಾಸನ ಕ್ಷೇತ್ರದ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಕೌಟುಂಬಿಕ ಕಲಹವಿನ್ನೂ ಜೆಡಿಎಸ್ ಪಕ್ಷವನ್ನು ಕಾಡುತ್ತಿದೆ.
ಚುನಾವಣೆ ನಂತರ ಕಿಂಗ್ ಮೇಕರ್ ಪಾತ್ರ ವಹಿಸಲು ಜೆಡಿಎಸ್ ಬಯಸಿದ್ದು, ಪಕ್ಷದಲ್ಲಿ ಹಿಡಿತ ಸಾಧಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಷ್ಟ್ರೀಯ ಪಕ್ಷಗಳು ತಮ್ಮ ಮನೆ ಬಾಗಿಲಿಗೆ ಬರಬೇಕಾಗುತ್ತದೆ ಎಂದು ಘೋಷಿಸಿದ್ದರು.
ಕಾಂಗ್ರೆಸ್ ಮತ್ತು ಬಿಜೆಪಿಯ ರಾಷ್ಟ್ರೀಯ ನಾಯಕರು ಮೈತ್ರಿಗಾಗಿ ಈಗಾಗಲೇ ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದೂ ಸಹ ಕುಮಾರಸ್ವಾಮಿ ಹೇಳಿಕೊಂಡಿದ್ದರು.
ಆದರೆ, ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವ ವಿಚಾರ ಗೌಡರ ಕುಟುಂಬದಲ್ಲಿ ಇನ್ನೂ ವಿವಾದವಾಗಿಯೇ ಉಳಿದಿದೆ. ಕುಮಾರಸ್ವಾಮಿ ಅವರು ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಲು ನಿರಾಕರಿಸುತ್ತಿದ್ದು, ಅವರ ಹಿರಿಯ ಸಹೋದರ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಪತ್ನಿ, ರೇವಣ್ಣ ಕುಟುಂಬದವರು ಟಿಕೆಟ್‌ಗಾಗಿ ಹಠ ಹಿಡಿದಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಭದ್ರಕೋಟೆ ಎಂದೇ ಪರಿಗಣಿಸಲಾಗಿದ್ದ ಹಾಸನ ಕ್ಷೇತ್ರದಲ್ಲಿ ಬಿಜೆಪಿ ಎಂಟ್ರಿ ಯಶಸ್ವಿಯಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರೀತಂ ಗೌಡ ವಿಜಯಿಯಾಗಿದ್ದು, ಗೌಡರ ಕುಟುಂಬಕ್ಕೆ ಶಾಕ್ ನೀಡಿದ್ದಾರೆ. ಗೌಡರ ಕುಟುಂಬದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಕೂಡ, ತಾವು ಭಾರಿ ಮತಗಳ ಅಂತರದಿಂದ ಗೆಲ್ಲುವುದಾಗಿ ಪ್ರೀತಂ ಗೌಡ ಈಗಾಗಲೇ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಚುನಾವಣೆ: ಸದ್ಯಕ್ಕೆ ಯಾರಿಗೂ ಬಹುಮತ ಇಲ್ಲ; ಅತಂತ್ರದ ಲೆಕ್ಕಾಚಾರವೇ ಎಲ್ಲ!
ಭವಾನಿ ರೇವಣ್ಣ ಅವರು ಚುನಾವಣೆಗೆ ಸ್ಪರ್ಧಿಸುವ ಉತ್ಸುಕತೆ ಹೊಂದಿದ್ದು, ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಸಿದ್ಧರಿಲ್ಲ. ಇದು ಕುಮಾರಸ್ವಾಮಿ ಮತ್ತು ರೇವಣ್ಣ ಕುಟುಂಬಗಳ ನಡುವೆ ಜಗಳಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಪ್ರಧಾನಿ ದೇವೇಗೌಡರಿಗೂ ತಮ್ಮ ಪುತ್ರರ ಕುಟುಂಬಗಳನ್ನು ಒಪ್ಪಿಸಲು ಸಾಧ್ಯವಾಗುತ್ತಿಲ್ಲ. ಇದೀಗ, ಭವಾನಿ ರೇವಣ್ಣ ಅವರ ಮೊದಲ ಪುತ್ರ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ತಮ್ಮ ತಾಯಿಗೆ ಟಿಕೆಟ್ ನೀಡದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿರುವುದರಿಂದ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಎಂಎಲ್‌ಸಿಯಾಗಿ ಆಯ್ಕೆಯಾಗಿರುವ ಭವಾನಿ ರೇವಣ್ಣ ಅವರ ಎರಡನೇ ಪುತ್ರ ಸೂರಜ್ ರೇವಣ್ಣ ಅವರು ತಮ್ಮ ತಾಯಿಯ ಸ್ಪರ್ಧೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ವಿರುದ್ಧ ಸಾರ್ವಜನಿಕವಾಗಿ ಆಕ್ರೋಶ ಹೊರಹಾಕಿದ್ದರು.
ಪಕ್ಷದ ಕಾರ್ಯಕರ್ತರು ಮತ್ತು ಪಕ್ಷದ ಅಭಿವೃದ್ಧಿ ನನಗೆ ಮುಖ್ಯ ಎಂದು ಕುಮಾರಸ್ವಾಮಿ ಪುನರುಚ್ಚರಿಸಿದ್ದಾರೆ.
ಅನಿವಾರ್ಯವಾದರೆ ಮಾತ್ರ ಕುಟುಂಬದ ಸದಸ್ಯರು ಸ್ಪರ್ಧಿಸುತ್ತಿದ್ದಾರೆ. ಹಾಸನಕ್ಕೆ ಪ್ರಬಲ ಅಭ್ಯರ್ಥಿ ಇದ್ದಾರೆ. ಟೀಕೆಗೆ ಆಸ್ಪದ ನೀಡಬಾರದು. ನಾನು ಈ ಹಿಂದಿನ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದ ಅವರು, ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಪರೋಕ್ಷವಾಗಿ ಸೂಚಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ: ಈ ಪ್ರಮುಖ 10 ವಿಷಯಗಳೇ ನಿರ್ಣಾಯಕ!
ಆದರೆ, ಹಾಸನಕ್ಕೆ ಪ್ರಬಲ ಅಭ್ಯರ್ಥಿ ಯಾರೆಂಬುದು ನನಗೆ ಗೊತ್ತಿಲ್ಲ. ಪಕ್ಷದ ಯಾವ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡುತ್ತಾರೋ ಗೊತ್ತಿಲ್ಲ ಎಂದು ಹೆಚ್.ಡಿ.ರೇವಣ್ಣ ವ್ಯಂಗ್ಯವಾಡಿದರು.
ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಮತ್ತು ಇದು ಚುನಾವಣಾ ಫಲಿತಾಂಶಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎನ್ನಲಾಗುತ್ತಿದೆ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದು, ಅವರ ತಾಯಿ ಅನಿತಾ ಕುಮಾರಸ್ವಾಮಿ ಅವರು ಹಾಲಿ ಶಾಸಕಿಯಾಗಿದ್ದಾರೆ. ಕುಮಾರಸ್ವಾಮಿ ಮತ್ತು ರೇವಣ್ಣ ಕುಟುಂಬಗಳ ನಡುವೆ ಅಧಿಕಾರದ ಬಿನ್ನಾಭಿಪ್ರಾಯ ಹೆಚ್ಚಾಗಿದ್ದು, ಈ ಎಲ್ಲಾ ವರ್ಷಗಳಲ್ಲಿ ಪಕ್ಷದ ಗೆಲುವಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.