'ಗಂಜಲ-ಸಗಣಿ'ಯಿಂದಲೂ ಬಿಜೆಪಿ ಸರ್ಕಾರದ ದುಷ್ಕೃತ್ಯಗಳನ್ನು ಅಳಿಸಲು ಸಾಧ್ಯವಿಲ್ಲ: ಬೊಮ್ಮಾಯಿ ವಿರುದ್ಧ ಡಿಕೆಶಿ ಕಿಡಿ

ಬಿಜೆಪಿ ಶಾಸಕರಿಗೆ ಕರೆ ಮಾಡಿ ಕಾಂಗ್ರೆಸ್ ಟಿಕೆಟ್ ನೀಡುವುದಾಗಿ ಹೇಳುತ್ತಿದ್ದಾರೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರೋಪಕ್ಕೆ ತಿರುಗೇಟು ನೀಡಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್, ಬಸವರಾಜ್ ಬೊಮ್ಮಾಯಿ ಅವರಿಗೆ ಮಾತನಾಡುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: ಬಿಜೆಪಿ ಶಾಸಕರಿಗೆ ಕರೆ ಮಾಡಿ ಕಾಂಗ್ರೆಸ್ ಟಿಕೆಟ್ ನೀಡುವುದಾಗಿ ಹೇಳುತ್ತಿದ್ದಾರೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರೋಪಕ್ಕೆ ತಿರುಗೇಟು ನೀಡಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್, ಬಸವರಾಜ್ ಬೊಮ್ಮಾಯಿ ಅವರಿಗೆ ಮಾತನಾಡುವ ನೈತಿಕತೆ ಇಲ್ಲ. ಪಕ್ಷಾಂತರಗೊಂಡ ಕಾಂಗ್ರೆಸ್-ಜೆಡಿ(ಎಸ್) ಶಾಸಕರ ಬೆಂಬಲದೊಂದಿಗೆ 'ಸಮ್ಮಿಶ್ರ ಸರ್ಕಾರ' ನಡೆಸುತ್ತಿದ್ದಾರೆ ಎಂದು ಗುರುವಾರ ವಾಗ್ದಾಳಿ ನಡೆಸಿದರು.

'ಗಂಜಲ ಮತ್ತು ಸಗಣಿ' ಸಹ ಅವರ ಸರ್ಕಾರದ ದುಷ್ಕೃತ್ಯಗಳನ್ನು ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.

'ನಾನು ಬಿಜೆಪಿ ಶಾಸಕರನ್ನು ಸಂಪರ್ಕಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ನೀವು (ಸಿಎಂ/ಬಿಜೆಪಿ) ನಮ್ಮ 13 (ಕಾಂಗ್ರೆಸ್ ಶಾಸಕರು), ಜೆಡಿಎಸ್‌ನ ಮೂವರು ಮತ್ತು ಇಬ್ಬರು ಸ್ವತಂತ್ರರ ಬಾಗಿಲು ತಟ್ಟಿ ಅವರನ್ನು ನಿಮ್ಮೊಂದಿಗೆ ಕರೆದೊಯ್ದು ಸರ್ಕಾರ ರಚಿಸಲಿಲ್ಲವೇ?. ನಿಮಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಸರ್ಕಾರವನ್ನು ಉದ್ದೇಶಿಸಿ, ‘ಆಪರೇಷನ್ ಕಮಲ’ದಡಿ ಕಾಂಗ್ರೆಸ್ ಟಿಕೆಟ್ ಪಡೆದು ಗೆದ್ದಿದ್ದ ಶಾಸಕರನ್ನು ಕಿತ್ತುಕೊಂಡು ಇಷ್ಟು ದಿನ ಅಧಿಕಾರ ಅನುಭವಿಸಿದ್ದೀರಿ. ನಿಮಗೆ ಯಾವ ನೈತಿಕತೆ ಇದೆ? ಜನರು ನಿಮಗೆ 112 ಸ್ಥಾನಗಳನ್ನು ನೀಡದಿದ್ದರೂ (2018ರ ಚುನಾವಣೆಯಲ್ಲಿ ಬಹುಮತ) ಆ ಶಾಸಕರ ಸಹಾಯದಿಂದ ನೀವು ಅನೈತಿಕ ಸರ್ಕಾರವನ್ನು ರಚಿಸಿದ್ದೀರಿ. ನೀವು ಇಂದಿನವರೆಗೂ (ಪಕ್ಷಾಂತರಗೊಂಡ) ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ಬೆಂಬಲದೊಂದಿಗೆ ಸಮ್ಮಿಶ್ರ ಸರ್ಕಾರವನ್ನು ನಡೆಸಿದ್ದೀರಿ. ನಿಮ್ಮದು ಸಮ್ಮಿಶ್ರ ಸರ್ಕಾರ, ಇದು ರಾಜ್ಯಕ್ಕೆ ಶಾಪವಾಗಿ ಪರಿಣಮಿಸಿದೆ ಎಂದು ಹೇಳಿದರು.

ಕಳೆದ ಎರಡ್ಮೂರು ದಿನಗಳಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ವಿಧಾನಸಭೆ ಚುನಾವಣೆಗೆ ಟಿಕೆಟ್ ಘೋಷಿಸದ 100 ಕ್ಷೇತ್ರಗಳಲ್ಲಿ ನಮ್ಮ ಶಾಸಕರಿಗೆ ದೂರವಾಣಿ ಕರೆ ಮಾಡುತ್ತಿದ್ದಾರೆ. ನೀವು (ಬಿಜೆಪಿ ಶಾಸಕರು) (ಕಾಂಗ್ರೆಸ್‌ಗೆ) ಬಂದರೆ ನಾವು ನಿಮಗೆ ಟಿಕೆಟ್ ನೀಡುತ್ತೇವೆ ಎಂದು ಅವರು ಹೇಳುತ್ತಿದ್ದಾರೆ ಎಂದು ಮಂಗಳವಾರ ಸಿಎಂ ಆರೋಪಿಸಿದ್ದರು.

'ನಿಮ್ಮ (ಬಿಜೆಪಿ) ನಾಯಕರು ‘ಗಂಜಲ’ ಮತ್ತು ‘ಸಗಣಿ’ ಬಳಸಿ (ನಿಮ್ಮ ಸರ್ಕಾರದ ದುಷ್ಕೃತ್ಯಗಳನ್ನು) ಶುದ್ಧೀಕರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ನೀವು ಎಷ್ಟು ಗಂಜಲ ಮತ್ತು ಸಗಣಿಯನ್ನು ಬಳಸಿದರೂ, ನೀವು ಮಾಡಿದ್ದನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಅದನ್ನು ಜನರು ನಿರ್ಧರಿಸುತ್ತಾರೆ ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. 
ಬಿಜೆಪಿ ಆಡಳಿತ ಭ್ರಷ್ಟಾಚಾರದಿಂದ ಕಲುಷಿತಗೊಂಡಿದೆ ಎಂದು ಆರೋಪಿಸಿ ‘ವಿಧಾನಸೌಧ’ವನ್ನು ಗೋಮೂತ್ರದಿಂದ ಶುದ್ಧೀಕರಿಸುವುದಾಗಿ ಜನವರಿಯಲ್ಲೂ ಶಿವಕುಮಾರ್ ಹೇಳಿದ್ದರು.

ಆಡಳಿತ ಯಂತ್ರಗಳ ದುರುಪಯೋಗ ಮತ್ತು ವ್ಯಾಪಕ ಭ್ರಷ್ಟಾಚಾರ ನಡೆದಿರುವುದರಿಂದ ನೀತಿ ಸಂಹಿತೆ ಮೊದಲೇ ಜಾರಿಗೆ ಬಂದಿದ್ದರೆ ಒಳ್ಳೆಯದಾಗುತ್ತಿತ್ತು. ಮುಂದಿನ ದಿನಗಳಲ್ಲಿ ಈ ಬಗ್ಗೆ ವಿವರಗಳನ್ನು ಬಹಿರಂಗಪಡಿಸುವುದಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com