ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಬದಲಿಸುವ ಸಾಧ್ಯತೆಯಿದೆ. ಅಲ್ಲದೆ, 135 ಕ್ಷೇತ್ರಗಳಲ್ಲಿ ಗೆದ್ದಿರುವ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ಪ್ರಬಲ ನಾಯಕ ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ.
224 ಕ್ಷೇತ್ರಗಳ ಪೈಕಿ ಅರ್ಧದಷ್ಟು ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸದಲ್ಲಿದ್ದ ಬಿಜೆಪಿ ಕೇವಲ 66 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 2024ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಯಾವುದೇ ಹೊಸ ಪ್ರಯೋಗದತ್ತ ಚಿತ್ತ ಹರಿಸಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಕಟೀಲ್ ತಾನಾಗಿಯೇ ರಾಜೀನಾಮೆ ನೀಡಲಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಟಿಎನ್‌ಐಇಗೆ ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಟೀಲ್ ಅವರ ಕಾರ್ಯವೈಖರಿ ಅತೃಪ್ತಿಕರವಾಗಿದೆ. ದೆಹಲಿಯ ಪಕ್ಷದ ನಾಯಕರು ಅವರನ್ನು ಬದಲಾಯಿಸಲು ನಿರ್ಧರಿಸಿದ್ದಾರೆ ಎಂದು ಬಿಜೆಪಿ ನಾಯಕ ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷರಾಗಿ ಕಟೀಲ್ ಅವರ ಅಧಿಕಾರಾವಧಿ 2022 ರಲ್ಲಿ ಕೊನೆಗೊಂಡಿತ್ತು. ಆದರೆ, ವಿಧಾನಸಭಾ ಚುನಾವಣೆ ಇದ್ದ ಕಾರಣ ಕಟೀಲ್ ಅವರನ್ನು ಬದಲಾಯಿಸದೇ ರಾಜ್ಯಾಧ್ಯಕ್ಷ ಸ್ಥಾನದಲ್ಲೇ ಮುಂದುವರಿಸಲಾಗಿತ್ತು. ಕಟೀಲ್ ಅವರೇ ಮುಂದುವರಿಯುವಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಬೆಂಬಲಿಸಿದ್ದರು.
ಶನಿವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಸವರಾಜ ಬೊಮ್ಮಾಯಿ ಅವರಿಗೆ ಪ್ರತಿಪಕ್ಷ ನಾಯಕ ಸ್ಥಾನ ಸಿಗುವ ಸಾಧ್ಯತೆಗಳು ಕಡಿಮೆ ಎಂದು ಮೂಲಗಳು ತಿಳಿಸಿವೆ. "ಕಾಂಗ್ರೆಸ್ 135 ಶಾಸಕರನ್ನು ಹೊಂದಿದೆ. ಸದನದ ಒಳಗೆ ಮತ್ತು ಹೊರಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ನಮಗೆ ಪ್ರಬಲ ವಿರೋಧ ಪಕ್ಷದ ನಾಯಕರ ಅಗತ್ಯವಿದೆ. ಸಾರ್ವತ್ರಿಕ ಚುನಾವಣೆಗೆ ನಮಗೆ ಕೇವಲ ಒಂದು ವರ್ಷವಿದೆ ಮತ್ತು ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲು ಕರ್ನಾಟಕ ಘಟಕದ ಮೇಲೆ ಒತ್ತಡವಿದೆ. ಇದಕ್ಕಾಗಿ ನಮಗೆ ಪಕ್ಷದಲ್ಲಿ ಹಾಗೂ ಸದನದಲ್ಲಿ ಬಲಿಷ್ಠ ನಾಯಕನ ಅಗತ್ಯವಿದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಎರಡೂ ಸ್ಥಾನಗಳಿಗೆ ಅಚ್ಚರಿಯ ಅಭ್ಯರ್ಥಿಯ ನಿರೀಕ್ಷೆಯಲ್ಲಿ ಪಕ್ಷದ ಕಾರ್ಯಕರ್ತರು ಇದ್ದಾರೆ. ಇದೇ ವೇಳೆ, ಫಲಿತಾಂಶದ ಕುರಿತು ಚರ್ಚಿಸಲು ಭಾನುವಾರ ಕಟೀಲು ಮತ್ತು ಇತರ ಶಾಸಕರು ಸೇರಿದಂತೆ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ್ದೇವೆ ಎಂದು ಬೊಮ್ಮಾಯಿ ಹೇಳಿದರು. "ನಾವು ನಮ್ಮ ಕಾರ್ಯಕ್ಷಮತೆಯ ಬಗ್ಗೆ ವಿವಿಧ ಪ್ರದೇಶಗಳಿಂದ ವಿವರಗಳನ್ನು ಸಂಗ್ರಹಿಸಿದ್ದೇವೆ. ನಾವು ರಾಜ್ಯದಾದ್ಯಂತ ಫಲಿತಾಂಶಗಳ ಬಗ್ಗೆ ಸಂಪೂರ್ಣ ವಿಶ್ಲೇಷಣೆ ಮಾಡಲು ನಿರ್ಧರಿಸಿದ್ದೇವೆ. ಇದರೊಂದಿಗೆ, ನಾವು ಕ್ಷೇತ್ರವಾರು ವಿಶ್ಲೇಷಣೆಯನ್ನು ಸಹ ಮಾಡುತ್ತೇವೆ. ನಮ್ಮ ಮತ ಹಂಚಿಕೆ ಒಂದೇ ಆಗಿದ್ದರೂ, ನಾವು ಕಡಿಮೆ ಪಡೆದಿದ್ದೇವೆ. ಮುಂದಿನ 4-5 ದಿನಗಳಲ್ಲಿ ಚುನಾಯಿತ ಪ್ರತಿನಿಧಿಗಳೊಂದಿಗೆ ಮತ್ತು ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳೊಂದಿಗೆ ಪ್ರತ್ಯೇಕ ಸಭೆಯನ್ನು ಕರೆಯುತ್ತೇವೆ ಎಂದು ಬೊಮ್ಮಾಯಿ ಮಾಧ್ಯಮಗಳಿಗೆ ತಿಳಿಸಿದರು.
"ನಾವು ಕೇವಲ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿಲ್ಲ. ಅದನ್ನು ಮೀರಿ ಕೆಲಸ ಮಾಡುತ್ತೇವೆ. ನಮ್ಮ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ನಾವು ಜನರ ಬಳಿಗೆ ಕೊಂಡೊಯ್ಯುತ್ತೇವೆ. ನಾವು ಪಕ್ಷವನ್ನು ಪುನರ್ನಿರ್ಮಿಸಿ ಅದನ್ನು ಬಲಪಡಿಸುತ್ತೇವೆ. ಇದು ನಿರಂತರ ಪ್ರಕ್ರಿಯೆ. 2013 ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. 40 ಸೀಟು ಸಿಕ್ಕಿದೆ. ಆದರೆ 2014ರ ಲೋಕಸಭೆ ಚುನಾವಣೆಯಲ್ಲಿ 19 ಸಿಕ್ಕಿದೆ. 2024ರ ಸಾರ್ವತ್ರಿಕ ಚುನಾವಣೆಗೆ ಈಗಲೇ ತಯಾರಿ ಆರಂಭಿಸುತ್ತೇವೆ, ಸೋಲನ್ನು ನಮ್ರತೆಯಿಂದ ಸ್ವೀಕರಿಸುತ್ತೇವೆ. ಸಮಸ್ಯೆಗಳನ್ನು ಸರಿಪಡಿಸಿಕೊಂಡು ಮುನ್ನಡೆಯುತ್ತೇವೆ,’’ ಎಂದರು
ಇದನ್ನು ಪ್ರಧಾನಿ ನರೇಂದ್ರ ಮೋದಿಯವರ ಲಾಸ್ ಎಂದು ಹೇಳಬಾರದು ಎಂದರು. ಮೋದಿ ಇಡೀ ರಾಷ್ಟ್ರಕ್ಕೆ ಸೇರಿದವರಾಗಿದ್ದು, ಕರ್ನಾಟಕಕ್ಕೆ ಪ್ರಚಾರಕ್ಕಾಗಿ ಬಂದಿದ್ದರು ಎಂದು ಬೊಮ್ಮಾಯಿ ಹೇಳಿದ್ದಾರೆ. ಇತ್ತೀಚಿಗೆ ದೇಶಾದ್ಯಂತ ನಡೆದ ಹಲವಾರು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಿದೆ ಎಂದು ನೆನಪಿಸಿದರು.
Advertisement