ಸಿಎಂ ಆಯ್ಕೆ ಬಿಕ್ಕಟ್ಟು: ಡಿಕೆ ಶಿವಕುಮಾರ್ ದೆಹಲಿ ಪ್ರವಾಸ ಕೊನೆಯ ಕ್ಷಣದಲ್ಲಿ ರದ್ದು

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡಾ ದೆಹಲಿಗೆ ತೆರಳಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅವರ ಭೇಟಿ ರದ್ದಾಗಿದೆ. 
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಗಿಪಟ್ಟು ಹಿಡಿದಿರುವುದರಿಂದ ನೂತನ ಮುಖ್ಯಮಂತ್ರಿ ಆಯ್ಕೆ ಕಾಂಗ್ರೆಸ್  ಹೈಕಮಾಂಡ್ ಗೆ ತಲೆ ನೋವಾಗಿ ಪರಿಣಮಿಸಿದೆ. ವರಿಷ್ಠರ ಆಹ್ವಾನದ ಮೇರೆಗೆ ಸಿದ್ದರಾಮಯ್ಯ ತಮ್ಮ ಬೆಂಬಲಿಗರೊಂದಿಗೆ ದೆಹಲಿ ತಲುಪಿದ್ದು, ಇಂದು ರಾತ್ರಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡಾ ದೆಹಲಿಗೆ ತೆರಳಬೇಕಿತ್ತು. ಸಂಜೆ 7-30ಕ್ಕೆ ಕೆಐಎಬಿಯಿಂದ ದೆಹಲಿಗೆ ತಲುಪಲು ಏರ್ ಇಂಡಿಯಾ ವಿಮಾನದ ಟಿಕೆಟ್ ಕೂಡಾ ಬುಕ್ ಆಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅವರ ಭೇಟಿ ರದ್ದಾಗಿದೆ. ಈ ಕುರಿತು ತಮ್ಮ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರಿಗೆ ತಿಳಿಸಿದ ಡಿಕೆ ಶಿವಕುಮಾರ್, ನನ್ನ ಹೊಟ್ಟೆಯಲ್ಲಿ ಸಮಸ್ಯೆಯಾಗಿದೆ, ಸ್ವಲ್ಪ ವಿಶ್ರಾಂತಿ ಬೇಕು ಎಂದರು.

ನನಗೆ ಸಮಯ ಪ್ರಜ್ಞೆ ಇದೆ. ಹೋರಾಟದ ಕಿಚ್ಚು ಇದೆ. ಹೋರಾಟದಲ್ಲಿ ಯಶಸ್ವು ಸಿಗಬೇಕಾದರೆ ತಾಳ್ಮೆ ಇರಬೇಕು. ಧರ್ಮರಾಯರಂತೆ ತಾಳ್ಮೆ ಇರಬೇಕು, ಭೀಮನ ಬಲ ಇರಬೇಕು, ಕೃಷ್ಣನ ತಂತ್ರ ಇರಬೇಕು. ಪೂಜೆ ಪುನಸ್ಕಾರ, ಹುಟ್ಟುಹಬ್ಬ ಆಚರಣೆ ಬಳಿಕ ದೆಹಲಿಗೆ ಭೇಟಿ ನೀಡುವುದಾಗಿ ತಿಳಿಸಿದರು. 

135 ಕಾಂಗ್ರೆಸ್ ಶಾಸಕರಿದ್ದಾರೆ. ನನ್ನ ಬಳಿ ಶಾಸಕರಿಲ್ಲ, ಯಾವುದೇ ನಂಬರ್ ಇಲ್ಲ, ಯಾರನ್ನು  ದೆಹಲಿಗೆ ಕರೆದೊಯ್ಯಲ್ಲ ಅಂತಾ ಹೇಳುವ ಮೂಲಕ ಪರೋಕ್ಷವಾಗಿ ಡಿಕೆ ಶಿವಕುಮಾರ್  ಸಿದ್ದರಾಮಯ್ಯ ಅವರ ತಂತ್ರದ ವಿರುದ್ಧ  ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com