ಸಿಎಂ ಕುರ್ಚಿಗೆ ಸಿದ್ದು v/s ಡಿಕೆಶಿ ಫೈಟ್; ಅಧಿಕಾರ ಹಂಚಿಕೆಗೆ ಸಿದ್ದರಾಮಯ್ಯ ಒಪ್ಪಿಗೆ, ಯಾರಿಗೆ ಎಷ್ಟು ವರ್ಷ ಪಟ್ಟ?
ಶಿವಕುಮಾರ್ ಅವರೊಂದಿಗೆ ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಲು ಸಿದ್ಧರಿದ್ದಾರೆ ಎಂಬ ಸಲಹೆಯನ್ನು ಸಿದ್ದರಾಮಯ್ಯ ಹೈಕಮಾಂಡ್ ಮುಂದಿಟ್ಟಿದ್ದಾರೆ ಎಂದು ಎಐಸಿಸಿ ಮೂಲಗಳು ಸುದ್ದಿಸಂಸ್ಥೆ ಐಎಎನ್‌ಎಸ್‌ಗೆ ತಿಳಿಸಿವೆ.
Published: 15th May 2023 11:58 AM | Last Updated: 15th May 2023 02:24 PM | A+A A-

ಸಿದ್ದರಾಮಯ್ಯ-ಡಿಕೆ ಶಿವಕುಮಾರ್
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಭರ್ಜರಿ ಜನಾದೇಶದ ನಂತರ, ಕಾಂಗ್ರೆಸ್ ನೂತನ ಮುಖ್ಯಮಂತ್ರಿಯನ್ನು ಅಂತಿಮಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ.
ಶಿವಕುಮಾರ್ ಅವರೊಂದಿಗೆ ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಲು ಸಿದ್ಧರಿದ್ದಾರೆ ಎಂಬ ಸಲಹೆಯನ್ನು ಸಿದ್ದರಾಮಯ್ಯ ಹೈಕಮಾಂಡ್ ಮುಂದಿಟ್ಟಿದ್ದಾರೆ ಎಂದು ಎಐಸಿಸಿ ಮೂಲಗಳು ಸುದ್ದಿಸಂಸ್ಥೆ ಐಎಎನ್‌ಎಸ್‌ಗೆ ತಿಳಿಸಿವೆ.
ಆದರೆ, ಸಿದ್ದರಾಮಯ್ಯ ಅವರು ಮೊದಲ ಅವಧಿಗೆ ಮುಖ್ಯಮಂತ್ರಿ ಹುದ್ದೆಯನ್ನು ಬಯಸಿದ್ದಾರೆ ಮತ್ತು ಮೊದಲ ಎರಡು ವರ್ಷಗಳ ನಂತರ ಅಧಿಕಾರವನ್ನು ತ್ಯಜಿಸುತ್ತಾರೆ ಮತ್ತು ಉಳಿದ ಅವಧಿಯಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಬಹುದು ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಕುರುಬ ಸಮುದಾಯ ಮತ್ತು ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾಗಿದ್ದು, ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಸಂಕಷ್ಟದ ಪರಿಸ್ಥಿತಿಯಲ್ಲಿದೆ.
ಕಾಂಗ್ರೆಸ್ ಹೈಕಮಾಂಡ್ ಸೋಮವಾರವೇ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದ್ದು, ಮೊದಲ ಅವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಸಿಎಂ ಹುದ್ದೆ ರೇಸ್ ನಲ್ಲಿ ಸಿದ್ದು v/s ಡಿಕೆಶಿ: ಇಬ್ಬರು ನಾಯಕರ ಪ್ಲಸ್-ಮೈನಸ್ ಗಳೇನು?
ಶಿವಕುಮಾರ್ ಕೂಡ ಇದಕ್ಕೆ ಒಪ್ಪುತ್ತಾರೆ. ಆದರೆ, ಗೃಹ ಖಾತೆ ಹೊಂದಿರುವ ಏಕೈಕ ಉಪಮುಖ್ಯಮಂತ್ರಿಯಾಗಬೇಕು ಎಂದು ಪಕ್ಷದ ಹೈಕಮಾಂಡ್‌ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಪಕ್ಷದ ಮೂಲಗಳು ಐಎಎನ್‌ಎಸ್‌ಗೆ ತಿಳಿಸಿವೆ.
ಕರ್ನಾಟಕ ಕಾಂಗ್ರೆಸ್‌ನ ಹಿರಿಯ ನಾಯಕರ ಪ್ರಕಾರ, ಚುನಾಯಿತ ಶಾಸಕರಲ್ಲಿ ಸುಮಾರು 70 ಪ್ರತಿಶತದಷ್ಟು ಜನರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಬೆಂಬಲಿಸಿದ್ದಾರೆ.
ಎಐಸಿಸಿ ವೀಕ್ಷಕರಾದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ, ಜಿತೇಂದ್ರ ಸಿಂಗ್ ಮತ್ತು ದೀಪಕ್ ಬಬಾರಿಯಾ ಅವರೊಂದಿಗೆ ಸಮಾಲೋಚಿಸಿದ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಂತಿಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.
ಎಐಸಿಸಿ ಅಧ್ಯಕ್ಷರು ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಮತ್ತು ಕರ್ನಾಟಕ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರೊಂದಿಗೂ ಚರ್ಚೆ ನಡೆಸಲಿದ್ದಾರೆ.