'ಬಂಡೆ' ಯನ್ನು ಮತ್ತಷ್ಟು ಗಟ್ಟಿಗೊಳಿಸಿದ ತಿಹಾರ್ ಜೈಲು: ನಿರ್ಲಕ್ಷ್ಯಕ್ಕೆ 'ಮದ್ದು' ಅರೆದ ಪ್ರಭಾವಿ ಒಕ್ಕಲಿಗ ನಾಯಕ ಡಿಕೆಶಿ!

ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾದ ಶಿವಕುಮಾರ್‌ರದ್ದು ರಾಜ್ಯ ರಾಜಕಾರಣದಲ್ಲಿ ಪರಿಚಿತ ಹೆಸರು. ಹಿಂದಿನ ಸಾತನೂರು ವಿಧಾನಸಭಾ ಕ್ಷೇತ್ರ ಹಾಗೂ ಹಾಲಿ ಕನಕಪುರ ಕ್ಷೇತ್ರದಿಂದ ಸತತ ಎಂಟನೇ ಬಾರಿ ಶಾಸಕರಾಗಿ ಆಯ್ಕೆಯಾದ ಕೀರ್ತಿ ಅವರದ್ದು.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾದ ಶಿವಕುಮಾರ್‌ರದ್ದು ರಾಜ್ಯ ರಾಜಕಾರಣದಲ್ಲಿ ಪರಿಚಿತ ಹೆಸರು. ಹಿಂದಿನ ಸಾತನೂರು ವಿಧಾನಸಭಾ ಕ್ಷೇತ್ರ ಹಾಗೂ ಹಾಲಿ ಕನಕಪುರ ಕ್ಷೇತ್ರದಿಂದ ಸತತ ಎಂಟನೇ ಬಾರಿ ಶಾಸಕರಾಗಿ ಆಯ್ಕೆಯಾದ ಕೀರ್ತಿ ಅವರದ್ದು. ಈ ಬಾರಿ ಅತ್ಯಧಿಕ ಮತಗಳ ಅಂತರದಿಂದ ಗೆದ್ದಿರುವುದು ಅವರ ಜನಪ್ರಿಯತೆ ಮತ್ತು ತಂತ್ರಗಾರಿಕೆಗೆ ಸಾಕ್ಷಿ.

ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ಶಿವಕುಮಾರ್ ಅವರ ಮೇಲಿವೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿವಕುಮಾರ್ ತಿಹಾರ್ ಜೈಲು ಸೇರಿದ್ದರು. ಈ ವೇಳೆ ಅವರು ಎದೆಗುಂದಲಿಲ್ಲ, ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಕೊನೆಗೊಳಿಸಿಕೊಳ್ಳಲಿಲ್ಲ, ಏಕೆಂದರೆ ತಿಹಾರ ಜೈಲು ಸೇರಿದರೆ ಅಲ್ಲಿ ಬದುಕಿನ ಉತ್ಸಾಹ ಕಳೆದು ಕೊಳ್ಳುತ್ತಾರೆ, ಆದರೆ ಡಿಕೆಶಿ ವಿಷಯದಲ್ಲಿ ಹಾಗಾಗಲಿಲ್ಲ. ಅಲ್ಲಿಂದಲೇ ಅವರು  ಮತ್ತಷ್ಚು ಬಲಶಾಲಿಯಾಗಿ ಹೆಚ್ಚು ದೃಢವಾಗಿ ಹೊರಹೊಮ್ಮಿದ್ದಾರೆಂದು ತೋರುತ್ತದೆ.

ಸಂದಿಗ್ಧ ಪರಿಸ್ಥಿತಿಗಳಲ್ಲಿ ರಾಜ್ಯ ಕಾಂಗ್ರೆಸ್ ಪಾಲಿಗೆ ‘ಬಂಡೆ’ಯಂತೆ ನಿಂತು ಪಕ್ಷ ನಿಷ್ಠೆ ಪ್ರದರ್ಶಿಸಿದ, ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಹೆಗಲು ಕೊಟ್ಟು ದುಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ರಾಜ್ಯದ  ಉಪಮುಖ್ಯಮಂತ್ರಿ ಹುದ್ದೆ ಒಲಿದು ಬಂದಿದೆ. ಪಕ್ಷದ ಟ್ರಬಲ್ ಶೂಟರ್ ಆಗಿದ್ದ ಅವರು ಅದರ ಒಕ್ಕಲಿಗ ಪ್ರಬಲರಾಗಿ ಹೊರಹೊಮ್ಮಿದ್ದಾರೆ, ಅವರ ವಿರುದ್ಧ ಅನೇಕ ಗಂಭೀರ ಆರೋಪಗಳು ಮತ್ತು ಪ್ರಸ್ತುತ ಕೇಂದ್ರ ಏಜೆನ್ಸಿಗಳು ತನಿಖೆ ನಡೆಸುತ್ತಿರುವ ಪ್ರಕರಣಗಳ ಹೊರತಾಗಿಯೂ ಡಿಕೆಶಿ ಉಪಮುಖ್ಯಮಂತ್ರಿ ಪಟ್ಟ ಅಲಂಕರಿಸುತ್ತಿದ್ದಾರೆ.

ಮುಖ್ಯಮಂತ್ರಿ ರೇಸ್‌ನಲ್ಲಿ ಅವರು ತಮ್ಮ ಪಕ್ಷದ ಹಿರಿಯ ಸಹೋದ್ಯೋಗಿ ಸಿದ್ದರಾಮಯ್ಯನವರ ವಿರುದ್ಧ ಸೋತರೂ, 2019 ರ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ನಂತರ ಪಕ್ಷವನ್ನು ಪುನರುತ್ಥಾನಗೊಳಿಸಲು ಅವರು ನೀಡಿದ ಕೊಡುಗೆಯನ್ನು ಕಾಂಗ್ರೆಸ್‌ನೊಳಗಿನ ಅವರ ವಿರೋಧಿಗಳು ಸಹ ಪ್ರಶ್ನಿಸುವುದಿಲ್ಲ.

ಚುನಾವಣೆ ಗೆಲ್ಲುವುದು ಹೇಗೆ ಎಂಬುದನ್ನು ಪಕ್ಷ ಮರೆತಂತೆ ಕಾಣುತ್ತಿತ್ತು. ಈ ವೇಳೆ 2020 ರಲ್ಲಿ ಕೆಪಿಸಿಸಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ನಂತರ, ಅವರು ಮಾಡಿದ ಮೊದಲ ಕಾರ್ಯವೆಂದರೆ ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ನೈತಿಕತೆ ಸ್ಥೈರ್ಯ ಹೆಚ್ಚಿಸುವುದು. ಇದರ ಫಲಿತಾಂಶ 2023ರ ಅಸೆಂಬ್ಲಿ ಚುನಾವಣೆಯಲ್ಲಿ  ಹೊರಬಿದ್ದಿದೆ. ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿದೆ.

62ರ ವರ್ಷದ ಶಿವಕುಮಾರ್ ವಿದ್ಯಾರ್ಥಿ ದಿನಗಳಿಂದಲೂ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿದ್ದರು. ಅವರು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಮತ್ತು ಯೂತ್ ಕಾಂಗ್ರೆಸ್ ಸದಸ್ಯರಾಗಿದ್ದರು. ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜಕೀಯದ ಇನ್ನಿಂಗ್ಸ್‌ ಆರಂಭಿಸಿದ ಅವರು ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದು 1985ರಲ್ಲಿ. ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾದ ಅವರಿಗೆ ಸ್ಪರ್ಧಿಯಾಗಿದ್ದು ಜನತಾ ಪಕ್ಷದ ಅಭ್ಯರ್ಥಿ ಎಚ್.ಡಿ. ದೇವೇಗೌಡ.

ಮೊದಲ ಚುನಾವಣೆಯಲ್ಲೇ ಗೌಡರ ವಿರುದ್ಧ ಸೋಲು ಕಂಡ ಶಿವಕುಮಾರ್, 1987ರಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಗೆ ಸಾತನೂರು ಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾದರು. 1989ರ ವಿಧಾನಸಭೆಯಲ್ಲಿ ಸಾತನೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮತ್ತೆ ಕಣಕ್ಕೆ ಇಳಿದು ಗೆಲುವಿನ ನಗೆ ಬೀರಿದರು.

1991 ರಲ್ಲಿ ಎಸ್ ಬಂಗಾರಪ್ಪ ಸರ್ಕಾರದಲ್ಲಿ ರಾಜ್ಯ ಸಚಿವರಾದರು. 1994 ರಲ್ಲಿ ಅವರಿಗೆ ಟಿಕೆಟ್ ನಿರಾಕರಿಸಲಾಯಿತು ಆದರೆ ಬಂಡಾಯ ಅಭ್ಯರ್ಥಿಯಾಗಿ ಗೆದ್ದರು. ಅವರು ತಮ್ಮ ಗೆಲುವಿನ ಓಟವನ್ನು ಮುಂದುವರೆಸಿದ್ದರಿಂದ, 1999 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅವರು ಎಸ್‌ಎಂ ಕೃಷ್ಣ ಸರ್ಕಾರದಲ್ಲಿ ದೊಡ್ಡ ಬ್ರೇಕ್ ಪಡೆದರು. ಅವರು ಸಹಕಾರ ಮತ್ತು ನಗರಾಭಿವೃದ್ಧಿ ಖಾತೆಗಳನ್ನು ನಿರ್ವಹಿಸಿದರು ಮತ್ತು ರಾಜ್ಯ ಯೋಜನಾ ಮಂಡಳಿಯ ಅಧ್ಯಕ್ಷರೂ ಆಗಿದ್ದರು.

ಆದರೆ 2013 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದ ನಂತರ, ಆರಂಭದಲ್ಲಿ ಅವರ ವಿರುದ್ಧದ ಆರೋಪಗಳನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಶಿವಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿಲ್ಲ. ಸುಮಾರು 7 ತಿಂಗಳುಗಳ ಕಾಲ ಅವರಿಗೆ ಸಚಿವ ಸ್ಥಾನ ನೀಡದೇ ಸತಾಯಿಸಲಾಗಿತ್ತು. ಇದರಿಂದ ಡಿಕೆ ಶಿವಕುಮಾರ್ ಕುದಿದು ಹೋಗಿದ್ದರು.  ಏಳು ತಿಂಗಳ ನಂತರ ಅವರನ್ನು ಸಚಿವರನ್ನಾಗಿ ಮಾಡಿ ಇಂಧನ ಖಾತೆ ನೀಡಲಾಯಿತು.

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಅವರು ಮತ್ತೆ ಸಚಿವರಾದರು, ನಂತರ ಹಲವಾರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿದ ನಂತರ ಪತನಗೊಂಡಿತು. ಶಾಸಕರು ಇರುವ ಮುಂಬೈ ಹೋಟೆಲ್‌ನ ಹೊರಗೆ ಶಿವಕುಮಾರ್ ಮಳೆಯಲ್ಲಿ ನಿಂತು ಪ್ರತಿಭಟನೆ ನಡೆಸಿದರು.

2017ರಲ್ಲಿ ಗುಜರಾತ್‌ನಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ 44 ಗುಜರಾತ್‌ ಶಾಸಕರನ್ನು ಬಿಜೆಪಿ ಸರ್ಕಾರ ಹೈಜಾಕ್‌ ಮಾಡಲು ಯತ್ನಿಸಿದಾಗ, ಕಾಂಗ್ರೆಸ್‌ ಹೈಕಮಾಂಡ್ ಸೂಚನೆಯಂತೆ ಅವರಿಗೆ ಕರ್ನಾಟಕದಲ್ಲಿ ಆತಿಥ್ಯ ಮತ್ತು ರಕ್ಷಣೆ ನೀಡಿದ್ದು ಇದೇ ಡಿ.ಕೆ. ಶಿವಕುಮಾರ್. ಇದೇ ಕಾರಣಕ್ಕೆ ಅವರು ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಇದ್ದಾಗಲೇ ಐ.ಟಿ. ದಾಳಿ ಎದುರಿಸಬೇಕಾಯಿತು.

ಶಿವಕುಮಾರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಸೆಪ್ಟೆಂಬರ್ 2018 ರಲ್ಲಿ ಅವರನ್ನು ಬಂಧಿಸಿ ತಿಹಾರ್‌ಗೆ ಕಳುಹಿಸಲಾಯಿತು ಮತ್ತು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಾಯಿತು. ಅದಾದ ನಂತರ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಕೆಪಿಸಿಸಿ ಇತಿಹಾಸದಲ್ಲೇ ಅತ್ಯಂತ ಶ್ರೀಮಂತ ಅಧ್ಯಕ್ಷ ಎನ್ನುವ ಕೀರ್ತಿ ಶಿವಕುಮಾರ್‌ರದ್ದು. ಈ ಬಾರಿಯ ಚುನಾವಣೆಯಲ್ಲಿ ಘೋಷಿಸಿಕೊಂಡಂತೆ ಡಿಕೆಶಿ ಕುಟುಂಬದ ಒಟ್ಟು ಆಸ್ತಿ ಮೌಲ್ಯ 1400 ಕೋಟಿ ರು ಆಸ್ತಿ ಘೋಷಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com