
ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಎಚ್.ಡಿ. ಕುಮಾರಸ್ವಾಮಿ ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ವಿಧಾನಸಭೆ ಸಭಾಧ್ಯಕ್ಷರ ಕಚೇರಿಯಲ್ಲಿ ಹಂಗಾಮಿ ಸ್ಪೀಕರ್ ಆಗಿ ಆರ್. ವಿ. ದೇಶಪಾಂಡೆ ಅವರಿಂದ ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕುಮಾರಸ್ವಾಮಿ ಅವರನ್ನು ಅವಿರೋಧವಾಗಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್. ಡಿ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಕೆ.ಎ. ತಿಪ್ಪೇಸ್ವಾಮಿ ಸೇರಿದಂತೆ ಪಕ್ಷದ ಎಲ್ಲಾ 19 ನೂತನ ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಿದರು. ವಿಧಾನಮಂಡಲದಲ್ಲಿ ಜನಪರ, ವಿಷಯಾಧಾರಿತವಾಗಿ ಹೋರಾಟ ಮಾಡುವ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಚುನಾವಣೆಯಲ್ಲಿ ಪಕ್ಷ ಸೋತಿದೆ ಎಂದು ಎದೆಗುಂದದೆ, ತಳಮಟ್ಟದಲ್ಲಿ ಸಂಘಟಿಸಬೇಕಾಗಿದೆ ಎಂದು ಚುನಾಯಿತ ಶಾಸಕರಿಗೆ ಕುಮಾರಸ್ವಾಮಿ ಕರೆ ನೀಡಿದರು.