ಸುಳ್ಳು ಗ್ಯಾರಂಟಿಗಳ ವಿರುದ್ಧ ಹೋರಾಟ; ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ರಾಜ್ಯ ಸರ್ಕಾರದ ಭವಿಷ್ಯ ನಿಂತಿದೆ: ಕುಮಾರಸ್ವಾಮಿ

ಕಾಂಗ್ರೆಸ್ ಸರ್ಕಾರದ ಸುಳ್ಳು ಗ್ಯಾರಂಟಿಗಳ ವಿರುದ್ಧ ಹೋರಾಟ ಮಾಡುವಂತೆ ಜೆಡಿಎಸ್ ಮುಖಂಡರಿಗೆ ಎಚ್.ಡಿ. ಕುಮಾರಸ್ವಾಮಿ ರಣವೀಳ್ಯ ನೀಡಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಸುಳ್ಳು ಗ್ಯಾರಂಟಿಗಳ ವಿರುದ್ಧ ಹೋರಾಟ ಮಾಡುವಂತೆ ಜೆಡಿಎಸ್ ಮುಖಂಡರಿಗೆ ಎಚ್.ಡಿ. ಕುಮಾರಸ್ವಾಮಿ ರಣವೀಳ್ಯ ನೀಡಿದ್ದಾರೆ.

ವಿಧಾನಸಭೆ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ನಗರದಲ್ಲಿ ಗುರುವಾರ ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಐದು ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಸರಕಾರ ಈಗ ಷರತ್ತು ಅನ್ವಯ ಅನ್ನುತ್ತಿದೆ. ನಂಗೂ ಫ್ರೀ ನಿಂಗೂ ಫ್ರೀ ಎಂದವರು ಈಗ ಕಂಡಿಷನ್ಸ್ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಹೇಳಿದ್ದೇನು, ಡಿಕೆಶಿ ಹೇಳಿದ್ದೇನು? ಖರ್ಗೆ ಹೇಳಿದ್ದೇನು? ಇದನ್ನೇ ನಾವು ಜನರ ಮುಂದೆ ಇಡಬೇಕು. ಈ ಬಗ್ಗೆಯೇ ಆಂದೋಲನವನ್ನೇ ಮಾಡಬೇಕು. ಜನರ ಜತೆ ನಿಲ್ಲಬೇಕು. ಜನರನ್ನೇ ಆಂದೋಲನಕ್ಕೆ ಧುಮುಕುವಂತೆ ಮಾಡಬೇಕು ಎಂದು ಕರೆ ನೀಡಿದರು. 

ಕಾಂಗ್ರೆಸ್ ಪಕ್ಷ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಿತು. ಸುಳ್ಳು ಗ್ಯಾರಂಟಿಗಳು ಹಾಗೂ ಕೂಪನ್ ಗಳನ್ನು ಕೊಟ್ಟು ಜನರಿಗೆ ವಂಚಿಸಿ ಅಧಿಕಾರಕ್ಕೆ ಬಂದಿದೆ ಕಾಂಗ್ರೆಸ್ ಕುತಂತ್ರದಿಂದ ಗೆದ್ದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮದೇ ಕುತಂತ್ರಗಾರಿಕೆ ಮಾಡಿದರು. ಅವರ ಪಕ್ಷದವರು ಒಂದು ಸಮುದಾಯವನ್ನು ನಮ್ಮ ವಿರುದ್ಧ ಎತ್ತಿ ಕಟ್ಟಿದರು ಎಂದು ಟೀಕಾಪ್ರಹಾರ ನಡೆಸಿದರು.

ಕಾಂಗ್ರೆಸ್, ಬಿಜೆಪಿ ಪಕ್ಷಗಳು ಹೇರಳವಾಗಿ ಹಣ ವೆಚ್ಚ ಮಾಡಿದವು, ಆಮಿಷಗಳನ್ನು ಒಡ್ಡಿದವು. ಅವುಗಳಿಗೆ ಪೈಪೋಟಿ ಕೊಡಲು ನನ್ನಿಂದ ಸಾಧ್ಯವಾಗಲಿಲ್ಲ. ನಾನು ಅಂತಹ ಕೆಲಸ ಮಾಡಲು ಹೋಗಲಿಲ್ಲ. ವೈಯಕ್ತಿಕ ನೆಲೆಗಟ್ಟಿನಲ್ಲಿ ಯಾರನ್ನೂ ನಾವು ಟೀಕೆ ಮಾಡಲಿಲ್ಲ, ತೇಜೋವಧೆ ಮಾಡಲಿಲ್ಲ, ಅಭಿವೃದ್ಧಿ ವಿಷಯ ಇಟ್ಟುಕೊಂಡು ಹೋದೆವು. ಅದಕ್ಕಾಗಿ ನಾವು ಸೋಲಬೇಕಾಯಿತು ಎಂದು ಮಾಜಿ ಮುಖ್ಯಮಂತ್ರಿ ಬೇಸರ ವ್ಯಕ್ತಪಡಿಸಿದರು.

ಬಿಜೆಪಿಯಿಂದ ನಲುಗಿದ ಒಂದು ಸಮಾಜದ ಪರವಾಗಿ ನಾವು ದನಿ ಎತ್ತಿದೆವು, ಅಚಲವಾಗಿ ಬೆಂಬಲ ಕೊಟ್ಟೆವು, ಹೆಜ್ಜೆ ಹೆಜ್ಜೆಗೂ ಅವರಿಗೆ ಬಿಜೆಪಿ ಸರಕಾರ ತೊಂದರೆ ಕೊಟ್ಟಾಗ ಧೈರ್ಯವಾಗಿ ನಿಂತೆವು. ಆದರೆ ಅವರು ನಮ್ಮ ಪಕ್ಷದ ಪರವಾಗಿ ನಿಲ್ಲದೆ ಹೋದರು ಎಂದು ಕುಮಾರಸ್ವಾಮಿ  ನೊಂದು ನುಡಿದರು. ಆರ್ಥಿಕ ಸಮಸ್ಯೆಗಳೂ ನಮ್ಮ ಸೋಲಿಗೆ ಕಾರಣ, ಅಭ್ಯರ್ಥಿಗಳ ಖರ್ಚಿಗೆ ನಾವು ಹಣ ಕೊಡಲಿಲ್ಲ. ಬಿಜೆಪಿ ಕಾಂಗ್ರೆಸ್ ಪಕ್ಷಗಳಿಗೆ ಸರಿ ಸಮವಾಗಿ ಖರ್ಚು ಮಾಡಲು ನಮ್ಮಿಂದ ಆಗಲಿಲ್ಲ. ಕೇವಲ 600 ಮತಗಳಲ್ಲಿ ಸೋತ ಕುಮಟಾ ಕ್ಷೇತ್ರದ ಸೂರಜ್ ನಾಯಕ್ ಸೋನಿ ಅವರ ಸೋಲು ನನಗೆ ಅತೀವ ನೋವು ಉಂಟು ಮಾಡಿದೆ ಎಂದರು. 

ಫಲಿತಾಂಶದಿಂದ ಧೃತಿಗೆಡಬೇಕಿಲಿಲ್ಲ. 1989ರಲ್ಲಿ ದೇವೇಗೌಡರು ಎರಡು ಕ್ಷೇತ್ರಗಳಲ್ಲಿ ಸೋತಿದ್ದರು. ಆ ನಂತರ ಐದು ವರ್ಷಗಳಲ್ಲಿ ದೇವೇಗೌಡರ ನೇತೃತ್ವದಲ್ಲಿ ಪೂರ್ಣ ಪ್ರಮಾಣದ ರಾಜ್ಯ ಸರಕಾರ ಬಂದು ಅವರು ಮುಖ್ಯಮಂತ್ರಿ ಆಗಿ, ಆ ನಂತರ ಪ್ರಧಾನಿಯೂ ಅದರು. ಇಂಥ ಸೋಲು ಶಾಶ್ವತ ಅಲ್ಲ, ಹಾಗಂತ ಮೈಮರೆಯಬೇಡಿ ಎಂದು ಮುಖಂಡರಿಗೆ ತಾಕೀತು ಮಾಡಿದರು. 

ಲೋಕಸಭೆ ಚುನಾವಣೆ ನಂತರ ಏನು ಬೇಕಾದರೂ ಆಗಬಹುದು: ಮುಂದಿನ ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ಈ ಸರಕಾರದ ಭವಿಷ್ಯ ನಿಂತಿದೆ. ಈ ಸರಕಾರ ಇರಬಹುದು ಅಥವಾ ಹೋಗಬಹುದು. ನಾನೇನು ಭವಿಷ್ಯ ಹೇಳುತ್ತಿಲ್ಲ, ಆ ನಂತರ ಏನೆಲ್ಲಾ ಬೆಳೆವಣಿಗೆ ನಡೆಯಿತ್ತೂ ಗೊತ್ತಿಲ್ಲ. ಏನು ಬೇಕಾದರೂ ಆಗಬಹುದು ಎಂದರು. ಕಾಂಗ್ರೆಸ್ 135 ಕ್ಷೇತ್ರ ಗೆದ್ದಿದೆ, ಆದರೆ ಆ ಸರಕಾರದಲ್ಲಿ ವಿಶ್ವಾಸದ ಕೊರತೆ ಇದೆ. ಜನರ ಕೆಲಸ ಮಾಡಲು ಅವರಿಗೆ ಆಗುತ್ತಿಲ್ಲ. ಆದರೆ ನಾವು ಸಂಘಟನೆ ಕಡೆ ಗಮನಕ್ಕೆ ಕೊಡೋಣ, ವಿಷಯಾಧಾರಿತವಾಗಿ ನಾವು ಹೋರಾಟ ನಡೆಸಬೇಕು. ಸಂಘಟನೆಯನ್ನು ಬಳಪಡಿಸಿಕೊಂಡು ಜನರ ಜತೆ ನಿಲ್ಲೋಣ ಎಂದು ಅವರು ಹೇಳಿದರು. 

ಸಮರ್ಥ ಅಭ್ಯರ್ಥಿಗಳನ್ನು ತಯಾರು ಮಾಡುವಲ್ಲಿ, ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವಲ್ಲಿ ಲೋಪ ಎಸಗಿರುವ ಪಕ್ಷದ ಜಿಲ್ಲಾ ಅಧ್ಯಕ್ಷರುಗಳನ್ನು ಮಾಜಿ ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡರು. ಬೆಂಗಳೂರು ನಗರದಲ್ಲಿ ಪಕ್ಷ ಸಂಘಟನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ,ಮುಂದಿನ ದಿನಗಳಲ್ಲಿ ಪಕ್ಷವನ್ನು ಬಲಿಷ್ಟಗೊಳಿಸಲು ರಾಜಿ ಇಲ್ಲದೆ ಕೆಲಸ ಮಾಡುವೆ ಎಂದು ಘೋಷಣೆ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com