ಹಿಂದೆ ಕಾಂಗ್ರೆಸ್ ಜೊತೆಗಿನ ಮೈತ್ರಿ ಆಕಸ್ಮಿಕ, ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅನಿವಾರ್ಯ: ನಿಖಿಲ್ ಕುಮಾರಸ್ವಾಮಿ
ಬಿಜೆಪಿಯೊಂದಿಗಿನ ಮೈತ್ರಿ ಕುರಿತು ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಈ ಹಿಂದೆ ಕಾಂಗ್ರೆಸ್ ಜೊತೆ ಆಕಸ್ಮಿಕವಾಗಿ ಮೈತ್ರಿ ಆಗಿತ್ತು. ಆದರೆ, ಈಗ ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
Published: 02nd October 2023 10:58 AM | Last Updated: 02nd October 2023 05:20 PM | A+A A-

ನಿಖಿಲ್ ಕುಮಾರಸ್ವಾಮಿ
ರಾಮನಗರ: ಬಿಜೆಪಿಯೊಂದಿಗಿನ ಮೈತ್ರಿ ಕುರಿತು ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಈ ಹಿಂದೆ ಕಾಂಗ್ರೆಸ್ ಜೊತೆ ಆಕಸ್ಮಿಕವಾಗಿ ಮೈತ್ರಿ ಆಗಿತ್ತು. ಆದರೆ, ಈಗ ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಬೆನ್ನಲ್ಲೇ ಪಕ್ಷದೊಳಗಿನ ಭಿನ್ನಮತ ಶಮನಕ್ಕೆ ಬಿಡದಿಯಲ್ಲಿರುವ ಎಚ್‌ಡಿ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಎಚ್‌ಡಿ ದೇವೇಗೌಡ ಅವರ ನೇತೃತ್ವದಲ್ಲಿ ಭಾನುವಾರ ಪಕ್ಷದ ಶಾಸಕರು, ಪದಾಧಿಕಾರಿಗಳು ಹಾಗೂ ಮುಖಂಡರ ಸಭೆ ನಡೆಯಿತು.
ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಮೈತ್ರಿ ಬಗ್ಗೆ ತೀರ್ಮಾನ ಮಾಡಿದ್ದಾರೆ. ದೇವೇಗೌಡ ಅವರು ನಮ್ಮ ಜೊತೆ ಇರಬೇಕು ಎಂಬುದು ಮೋದಿ ಅವರ ಅಪೇಕ್ಷೆಯಾಗಿದ್ದು, ನಮ್ಮನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ ಜೊತೆ ದೋಸ್ತಿಗೆ ಅಸಮಾಧಾನ: ಜೆಡಿಎಸ್ ಮಹತ್ವದ ಸಭೆ, ಕುಮಾರಸ್ವಾಮಿ ಹೇಳಿದಿಷ್ಟು...
ದುರದೃಷ್ಟಕರ ವಿಚಾರವೇನೆಂದರೆ ರಾಜ್ಯದಲ್ಲಿ ಆಮಿಷವೊಡ್ಡಿದ ಕಾರಣಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ ಮತ್ತು ದೇಶದಲ್ಲಿ ಕಾಂಗ್ರೆಸ್ ಸೋಲಿಸಲು ಬಿಜೆಪಿ-ಜೆಡಿಎಸ್ ಒಂದಾಗಿದೆ ಎಂದು ಸಮರ್ಥಿಸಿಕೊಂಡರು.
ಮೈತ್ರಿಗೆ ಅಸಮಾಧಾನ ವ್ಯಕ್ತಪಡಿಸಿದ್ದ ಗುರುಮಠಕಲ್ ಶಾಸಕರ ಶರಣಗೌಡ ಕಂದದೂರ ಅವರೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ಅವರು ಒಂದಷ್ಟು ಸಲಹೆ-ಸೂಚನೆ ನೀಡಿದ್ದಾರೆ. ಸ್ಥಳೀಯವಾಗಿ ಇರುವ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ. ಅದನ್ನ ಬಿಟ್ಟು ಅವರಿಗೆ ಬೇರೆ ಯಾವುದೇ ವಿಚಾರದಲ್ಲಿ ಅಸಮಾಧಾನ ಇಲ್ಲ. ಎಲ್ಲಾ ನಾಯಕರ ಅಭಿಪ್ರಾಯಗಳಿಗೆ ಮನ್ನಣೆ ನೀಡಲಾಗುವುದು ಎಂದು ಹೇಳಿದರು.