“ಊರ್ ಮೇಲೆ ಊರ್ ಬಿದ್ರು ನಾವ್ ಚೆನ್ನಾಗಿರ್ಬೇಕು, ಬರ್ಗಾಲ ಬಂದ್ರುನೂ ನಾವ್ ಉಂಡು ತಿಂದು ಮಜಾ ಮಾಡ್ಬೇಕು”: ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ
ಬೆಂಗಳೂರು: ಕಾವೇರಿ ವಿವಾದ ಸಂಬಂಧ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ವಾಗ್ದಾಳಿ ಮುಂದುವರೆಸಿದೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿ ಕಿಡಿಕಾರಿರುವ ಬಿಜೆಪಿ, “ಊರ್ ಮೇಲೆ ಊರ್ ಬಿದ್ರು ನಾವ್ ಚೆನ್ನಾಗಿರ್ಬೇಕು, ಬರ್ಗಾಲ ಬಂದ್ರುನೂ ನಾವ್ ಉಂಡು ತಿಂದು ಮಜಾ ಮಾಡ್ಬೇಕು ಎಂದು ಕಾಂಗ್ರೆಸ್ ನಾಯಕರ ಕುರಿತು ವ್ಯಂಗ್ಯವಾಡಿದೆ.
ಮತ್ತೊಂದು ಟ್ವೀಟ್ ವರ್ಗಾವಣೆ ದಂಧೆ ಕುರಿತು ಕಿಡಿಕಾರಿರುವ ಬಿಜೆಪಿ, ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವರ್ಗಾವಣೆ ದಂಧೆಯ ಕರಾಳತೆಯು ಈಗ ಶಿಕ್ಷಕರ ನೆಮ್ಮದಿಯನ್ನೂ ಸಂಪೂರ್ಣವಾಗಿ ಬಲಿ ತೆಗೆದುಕೊಂಡಿದೆ ಎಂದು ಹೇಳಿದೆ.
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಗಿದು ಮೂರು ತಿಂಗಳಾದರೂ, ಸ್ಥಳ ನಿಯೋಜನೆಗೊಂಡಿಲ್ಲ. ಅತಿಥಿ ಶಿಕ್ಷಕರು ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಈ ನಾಟಕಕ್ಕೆ ಇಲ್ಲಿ ಬಲಿಯಾಗುತ್ತಿರುವುದು ವಿದ್ಯಾರ್ಥಿಗಳ ಭವಿಷ್ಯ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪಠ್ಯಪುಸ್ತಕ ಬದಲಿಸುವಲ್ಲಿರುವ ಆತುರ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಇರದಿರುವುದು ದುರಂತವೇ ಸರಿ ಎಂದು ತಿಳಿಸಿದೆ.
ವೀರಶೈವ-ಲಿಂಗಾಯತರಿಗೆ ಆಗುತ್ತಿರುವ ಅನ್ಯಾಯವನ್ನು ಶಾಮನೂರು ಶಿವಶಂಕರಪ್ಪ ಅವರು ಎಷ್ಟೇ ಬಾರಿ ಪ್ರಸ್ತಾಪಿಸಿದರೂ ಸಿದ್ದರಾಮಯ್ಯ ಅವರು ಬಾಯಲ್ಲಿ ಕಡುಬು ಇಟ್ಟುಕೊಂಡವರಂತೆ ಸೈಲೆಂಟ್ ಆಗಿದ್ದರು. ಇದೀಗ ಶಾಮನೂರು ಶಿವಶಂಕರಪ್ಪ ವಿರುದ್ಧ ತಮ್ಮ ಶಿಷ್ಯ ಬಳಗದ ಆಪ್ತರನ್ನು ಛೂ ಬಿಟ್ಟು ಇಡೀ ವೀರಶೈವ-ಲಿಂಗಾಯತ ಸಮಾಜಕ್ಕೆ ಅಪಮಾನ ಮಾಡಿಸುತ್ತಿದ್ದಾರೆ. ಸಚಿವ ಸ್ಥಾನ ಕೊಟ್ಟಿರುವುದು ಸಿದ್ದರಾಮಯ್ಯ ಅವರು ಹಾಕಿದ ಭಿಕ್ಷೆ ಎನ್ನುವಂತೆ ವೀರಶೈವ - ಲಿಂಗಾಯತ ಸಮುದಾಯವನ್ನೇ ಕೀಳಾಗಿ ನೋಡಲಾಗುತ್ತಿದೆ ಎಂದಿದೆ.
ವೀರಶೈವ-ಲಿಂಗಾಯತ ಸಮುದಾಯವನ್ನು ಹತ್ತಿಕ್ಕುತ್ತಿರುವ ಸಿದ್ದರಾಮಯ್ಯ ಅವರ ಸರ್ಕಾರದ ವಿರುದ್ಧ ಗುಟುರು ಹಾಕಿದ್ದ ಶಾಮನೂರು ಶಿವಶಂಕರಪ್ಪ ಅವರ ಬಾಯಿ ಮುಚ್ಚಿಸಲು ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ಮಾಡಲಾಗಿತ್ತು. ಮೊನ್ನೆಯಷ್ಟೆ ಸಚಿವ ಸಂಪುಟ ಸಭೆ ನಡೆಸಿ ವೀರಶೈವ-ಲಿಂಗಾಯತ ಸಮುದಾಯದ ವಿರುದ್ಧ ಸಮರ ಸಾರಿದ್ದ ಸಿದ್ದರಾಮಯ್ಯರವರ ಎದುರು ಈಗ ಶಾಮನೂರು ಶಿವಶಂಕರಪ್ಪ ರವರ ತೊಡೆ ತಟ್ಟಿ ನಿಂತಿರುವ ಹಾಗಿದೆ.
ನಾನೇ ಹೈಕಮಾಂಡ್ ನನಗೆ ಯಾವ ಹೈಕಮಾಂಡ್ ಇಲ್ಲ ಎನ್ನುವ ಮೂಲಕ ಲಿಂಗಾಯತ ವಿರೋಧಿ ಸಿದ್ದರಾಮಯ್ಯ ಅವರಿಗೆ ಬಿಸಿ ಮುಟ್ಟಿಸಿದ್ದಾರೆ ಶಿವಶಂಕರಪ್ಪರವರು. ಕಾಂಗ್ರೆಸ್ ಸರ್ಕಾರ ತನ್ನ ಲಿಂಗಾಯತ ವಿರೋಧಿ ಧೋರಣೆಯನ್ನು ಮರೆಮಾಚಲು ಸಾಧ್ಯವೇ ಇಲ್ಲ ಎಂದು ಹೇಳಿದೆ.
ಇದೇ ವೇಳೆ ಮತ್ತೊಂದು ಟ್ವೀಟ್ ನಲ್ಲಿ ಕಾಂಗ್ರೆಸ್ ಬಂದಾಗಿನಿಂದ ರಾಜ್ಯ ಅಭಿವೃದ್ಧಿ ಹಳ್ಳ ಹಿಡಿದಿದ್ದು, ರಾಜ್ಯದ ಆರ್ಥಿಕತೆ ದಿವಾಳಿಯತ್ತ ಸಾಗಿದೆ. ಇವುಗಳನ್ನೆಲ್ಲಾ ಮರೆಮಾಚಲು ಸಿದ್ದರಾಮಯ್ಯ ಅವರ ಸರ್ಕಾರ ಯೋಜನೆ ಹಾಕಿಕೊಂಡಿದೆ ಎಂದು ಕಿಡಿಕಾರಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ