ಹಣವಿಲ್ಲದೆ 'ಬ್ರ್ಯಾಂಡ್ ಬೆಂಗಳೂರು' ನಿರ್ಮಾಣ ಹೇಗೆ?: ಸರ್ಕಾರ ಕುರಿತು ಬಿಜೆಪಿ ವಂಗ್ಯ
ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಯೋಜನೆ ಹಾಕಿಕೊಂಡು ಅತ್ಯುತ್ತಮ ಮೂಲಸೌಕರ್ಯ, ವಾಸಯೋಗ್ಯ ಸೂಚ್ಯಂಕದೊಂದಿಗೆ ನಗರವನ್ನು ಮಹಾನಗರವನ್ನಾಗಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ.ಶಿವಕುಮಾರ್ ಅವರು ಶ್ರಮಿಸುತ್ತಿದ್ದು, ಈ ನಡುವಲ್ಲೇ ಸರ್ಕಾರ ಯೋಜನೆ ಕುರಿತು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ.
ಅನುದಾನ ನೀಡದೆ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿಗೊಳಿಸಲಾಗಿದೆ. ಅಭಿವೃದ್ಧಿಯ ಕೊರತೆಯು ನಗರದ ವರ್ಚಸ್ಸಿಗೆ ಧಕ್ಕೆ ತರುತ್ತಿದೆ. ಹಣ ವಿಲ್ಲದೆ ಸರ್ಕಾರ ಬ್ರ್ಯಾಂಡ್ ಬೆಂಗಳೂರನ್ನು ಹೇಗೆ ನಿರ್ಮಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.
ಸಿ.ವಿ.ರಾಮನ್ ನಗರದ ಬಿಜೆಪಿ ಶಾಸಕ ಎಸ್.ರಘು ಅವರು ಮಾತನಾಡಿ, ‘2023ರ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ನೀತಿ ಸಂಹಿತೆ ಜಾರಿಯಾದಾಗ ಅಂದರೆ ಏಪ್ರಿಲ್‌ನಿಂದ ಬಹುತೇಕ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಆರು ತಿಂಗಳಿಂದಲೂ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಶಾಸಕ ಮುನಿರತ್ನ ಅವರು ಮಾತನಾಡಿ, ಸ್ಥಗಿತಗೊಂಡಿರುವ ಕಾಮಗಾರಿಗಳ ಪಟ್ಟಿಯನ್ನು ಸರ್ಕಾರ ಕೇಳಿದ್ದು, ಶುಕ್ರವಾರ ಸಲ್ಲಿಸುತ್ತೇನೆಂದು ಹೇಳಿದ್ದಾರೆ.
ಬಿಜೆಪಿ ಮಾಜಿ ಕಾರ್ಪೊರೇಟರ್ ಎ.ಎಲ್.ಶಿವಕುಮಾರ್ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ತೀವ್ರ ಹಣದ ಕೊರತೆ ಎದುರಾಗಿದೆ, ರಸ್ತೆಗಳು ಕಳಪೆಯಾಗಿವೆ, ಡಾಂಬರೀಕರಣದ ಅಗತ್ಯವಿದೆ, ಚರಂಡಿಗಳ ಹೂಳು ತೆಗೆಯಲು ಮತ್ತು ಇತರ ಪೌರಕಾರ್ಮಿಕರಿಗೆ ಪ್ರತಿ ವಾರ್ಡ್‌ಗೆ 50 ಲಕ್ಷ ರೂ. ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಮಾಜಿ ಕಾರ್ಪೊರೇಟರ್ ಬಿ.ವಿ.ಗಣೇಶ್ ಮಾತನಾಡಿ, ನಗರದ ಹೊರವಲಯಕ್ಕೆ ಮೂಲಸೌಕರ್ಯಕ್ಕೆ ಹೆಚ್ಚಿನ ಹಣದ ಅಗತ್ಯವಿದೆ, ಅಭಿವೃದ್ಧಿ ಹೊಂದಿದ ಪ್ರದೇಶಗಳಿಗೆ ನಿರ್ವಹಣೆಗೆ ಹಣದ ಅಗತ್ಯವಿದೆ. ಬೆಂಗಳೂರಿನ ನಿಧಿ ಹಂಚಿಕೆ ನಿಷ್ಪಕ್ಷಪಾತವಾಗಿರಬೇಕು ಏಕೆಂದರೆ ಹಣವು ಬಿಜೆಪಿ ಅಥವಾ ಕಾಂಗ್ರೆಸ್ ಶಾಸಕರಿಗೆ ಹೋಗಲಿ, ಆ ಹಣ ನಗರದ ಅಭಿವೃದ್ಧಿಗೆ ಬಳಕೆಯಾಗುತ್ತದೆ ಎಂದಿದ್ದಾರೆ.
ರಸ್ತೆ, ಪಾದಚಾರಿ ಮಾರ್ಗ, ಚರಂಡಿಯಂತಹ ಹಲವು ನಾಗರಿಕ ಯೋಜನೆಗಳು ಅಪೂರ್ಣವಾಗಿರುವಾಗ ಬ್ರ್ಯಾಂಡ್ ಬೆಂಗಳೂರು ನಿರ್ಮಾಣವನ್ನು ಸರ್ಕಾರ ಹೇಗೆ ಕೈಗೆತ್ತಿಕೊಳ್ಳುತ್ತದೆ. ತಮಿಳುನಾಡಿಗೆ ನೀರು ಬಿಟ್ಟ ನಂತರ, ಲೋಡ್ ಶೆಡ್ಡಿಂಗ್ ಅನ್ನು ಹೇಗೆ ನಿರ್ವಹಿಸಲು ಸಾಧ್ಯವಾಗುತ್ತದೆ? ಎಂದು ಬಿಜೆಪಿ ಎಂಎಲ್‌ಸಿ ರವಿಕುಮಾರ್ ಅವರು ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕರ ವ್ಯಂಗ್ಯ ಕುರಿತು ಪ್ರತಿಕ್ರಿಯೆ ನೀಡಿರುವ ಡಿಕೆ.ಶಿವಕುಮಾರ್ ಅವರು, ನಕಲಿ ಬಿಲ್, ಶೇ.40 ಕಮಿಷನ್ ಆರೋಪಗಳಿಗೆ ನಾವು ಹಣ ಬಿಡುಗಡೆ ಮಾಡಲು ಸಾಧ್ಯವೇ? ಬಿಲ್ ಗಳು ನ್ಯಾಯಯುತವಾಗಿ ಮತ್ತು ಪ್ರಾಮಾಣಿಕವಾಗಿದ್ದರೆ, ನಾವು ಹಣ ಬಿಡುಗಡೆ ಮಾಡುತ್ತೇವೆ. ಲೋಕಾಯುಕ್ತರು ಕೂಡ ಈ ಅಕ್ರಮಗಳ ಬಗ್ಗೆ ಉಲ್ಲೇಖಿಸಿದೆ. ಅನುದಾನ ಬಿಡುಗಡೆ ವಿಚಾರದಲ್ಲಿ ಪಕ್ಷಪಾತದ ಪ್ರಶ್ನೆಯೇ ಬರುವುದಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ