ಐಟಿ ದಾಳಿಯಲ್ಲಿ ಸಿಕ್ಕಿದ್ದು ಕಮಿಷನ್ ಹಣ, ತೆಲಂಗಾಣ ಚುನಾವಣೆಗೆ ಕಾಂಗ್ರೆಸ್ ತೆಗೆದಿಟ್ಟ ಹಣ; ಬಿಜೆಪಿ, ಜೆಡಿಎಸ್ ಆರೋಪ

ಬೆಂಗಳೂರಿನ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ 42 ಕೋಟಿ ರುಪಾಯಿಗಳನ್ನು ವಶಕ್ಕೆ ಪಡೆದಿದ್ದು, ಈ ಐಟಿ ದಾಳಿ ಪ್ರಕರಣ ಇದೀಗ ರಾಜಕೀಯ ಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರಿನ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ 42 ಕೋಟಿ ರುಪಾಯಿಗಳನ್ನು ವಶಕ್ಕೆ ಪಡೆದಿದ್ದು, ಈ ಐಟಿ ದಾಳಿ ಪ್ರಕರಣ ಇದೀಗ ರಾಜಕೀಯ ಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿದೆ.

ಐಟಿ ಅಧಿಕಾರಿಗಳು ವಶಕ್ಕೆ ಪಡೆದ ಹಣ ಕಮಿಷನ್ ನೀಡಲು ತಂದಿಟ್ಟಿದ್ದ ಹಣವಾಗಿದ್ದು, ತೆಲಂಗಾಣ ಚುನಾವಣೆಗೆ ಕಾಂಗ್ರೆಸ್ ರಾಜ್ಯದಲ್ಲಿ ಹಣ ಸಂಗ್ರಹಿಸುತ್ತಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಆರೋಪಿಸಿದೆ.

ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂ.ಎಲ್.ಸಿ ಎನ್.ರವಿಕುಮಾರ್ ಮಾತನಾಡಿ, ಐದು ರಾಜ್ಯಗಳ ಚುನಾವಣೆಗೆ ಹಣ ನೀಡಲು ಬಿಬಿಎಂಪಿ ಗುತ್ತಿಗೆದಾರರಿಂದ ಕಾಂಗ್ರೆಸ್ ಹಣ ಸಂಗ್ರಹಿಸಿದೆ ಎಂದು ಆರೋಪಿಸಿದ್ದಾರೆ.

ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು, ಗುತ್ತಿಗೆದಾರರಿಗೆ 650 ಕೋಟಿ ರೂ.ಗಳ ಬಾಕಿ ಹಣವನ್ನು ಬಿಡುಗಡೆ ಮಾಡಿದ ಬಳಿಕ ಈ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಕುರಿತು ತನಿಖೆ ನಡೆಸಬೇಕಿದೆ. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ರಾಜೀನಾಮೆ ನೀಡಬೇಕೆಂದು ಎಂದು ರವಿಕುಮಾರ್ ಅವರು ಆಗ್ರಹಿಸಿದ್ದಾರೆ.

ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಡಿಕೆ.ಶಿವಕುಮಾರ್ ಅವರು ಹಣವನ್ನು ಸಂಗ್ರಹಿಸಿಟ್ಟಿದ್ದು, ಈ ಹಣವನ್ನು ಇದೀಗ ಒಟ್ಟುಗೂಡಿಸುತ್ತಿದ್ದಾರೆ. ಇದೀಗ ಯಾವ ತನಿಖಾ ಸಂಸ್ಥೆಗೆ ತನಿಖೆಯನ್ನು ವಹಿಸುತ್ತೀರಾ ಸಿದ್ದರಾಮಯ್ಯ ಅವರೇ ಏಂದು ಜೆಡಿಎಸ್ ನಾಯಕ ಕುಮಾರಸ್ವಾಮಿಯವರು ಪ್ರಶ್ನಿಸಿದ್ದಾರೆ.

ಐದು ರಾಜ್ಯಗಳ ಚುನಾವಣಾ ದಿನಾಂಕ ಘೋಷಣಯಾಗುತ್ತಿದ್ದಂತೆಯೇ ಹಣ ಸಂಗ್ರಹ ಕಾರ್ಯ ಆರಂಭವಾಗಿದೆ. ಗುತ್ತಿಗೆದಾರರೊಬ್ಬರ ಮನೆಯಲ್ಲಿ ವಶಪಡಿಸಿಕೊಂಡ ಹಣ ಯಾರದ್ದು? ಗುತ್ತಿಗೆದಾರರ ಬಾಕಿ ಹಣ ರೂ.650 ಕೋಟಿ ಬಿಡುಗಡೆಯಾದ ಬೆನ್ನಲ್ಲೇ ಐಟಿ ಅಧಿಕಾರಿಗಳು ರೂ.42 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನು ನೋಡಿದರೆ ಸರ್ಕಾರ ಕಮಿಷನ್ ಪಡೆಯುತ್ತಿರುವ ಆರೋಪ ಸತ್ಯವೆಂದು ತಿಳಿದುಬರುತ್ತಿದೆ. ಸರ್ಕಾರ ಪಡೆಯುತ್ತಿರುವ ಶೇಕಡಾವಾರು ಕಮಿಷನ್ ಎಷ್ಟು, ಇದರ ಹಿಂದಿರುವ ವ್ಯಕ್ತಿ ಯಾರು? ಎಂದು ಪ್ರಶ್ನಿಸಿದ್ದಾರೆ.

ಪಂಚರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಕರ್ನಾಟಕವನ್ನು ಎಟಿಎಂ ಆಗಿ ಬಳಸಿಕೊಳ್ಳುತ್ತಿದೆ. ಬರ ಮತ್ತು ವಿದ್ಯುತ್ ಸಮಸ್ಯೆಯಿಂದ ಈಗಾಗಲೇ ರೈತರು ಕಂಗಾಲಾಗಿದ್ದಾರೆ. ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಆದರೆ, ಸರ್ಕಾರ ಕಮಿಷನ್ ವಸೂಲಿಯಲ್ಲಿ ಬಿಝಿಯಾಗಿದೆ ಎಂದು ಕಿಡಿಕಾರಿದರು.

ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಡಾ.ಸಿಎನ್.ಅಶ್ವತ್ಥ್ ನಾರಾಯಣ್ ಕೂಡ ಇದೇ ರೀತಿಯ ಆರೋಪ ಮಾಡಿ, ಸರ್ಕಾರದ ವಿರುದ್ಧ ತೀವ್ರವಾದಿ ಕಿಡಿಕಾರಿದರು.

ಈ ನಡುವೆ ಬಿಜೆಪಿ-ಜೆಡಿಎಸ್ ಆರೋಪ ಸಂಬಂಧ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ರಾಜಕೀಯ ಪ್ರೇರಿತವಿಲ್ಲದೆ ದೇಶದಲ್ಲಿ ಯಾವುದೇ ಐಟಿ ದಾಳಿಗಳು ನಡೆಯುತ್ತಿಲ್ಲ. ಇಂದು ನಡೆಯುತ್ತಿರುವ ಐಟಿ ದಾಳಿ ಕರ್ನಾಟಕದಲ್ಲಿ ಮಾತ್ರವಷ್ಟೇ ಅಲ್ಲ, ಬೇರೆ ರಾಜ್ಯಗಳಲ್ಲಿಯೂ ನಡೆಯುತ್ತಿದೆ ಎಂದರು.

ಐಟಿ ದಾಳಿ ವೇಳೆ ಗುತ್ತಿಗೆದಾರರ ಮನೆಯಲ್ಲಿ ವಶಕ್ಕೆ ಪಡೆದ ರೂ.42 ಕೋಟಿ ಹಣ ಗುತ್ತಿಗೆದಾರರಿಗೆ ಬಿಡುಗಡೆ ಮಾಡಲಾಗಿದ್ದ ರೂ.650 ಕೋಟಿ ಹಣದಿಂದ ಪಡೆದ ಕಮಿಷನ್ ಆಗಿದೆ ಎಂಬ ಬಿಜೆಪಿ ಆರೋಪ ಕುರಿತು ಪ್ರತಿಕ್ರಿಯೆ ನೀಡಿ, ಇದರ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com