ಬಿಜೆಪಿಯಲ್ಲಿ ಲಿಂಗಾಯತರ ಕಡೆಗಣನೆ, ಬಕೆಟ್ ಹಿಡಿದವರಿಗೆ ರಾಜಮರ್ಯಾದೆ: ಪ್ರದೀಪ್ ಶೆಟ್ಟರ್ ಸಿಟ್ಟಿಗೆ ಕಾರಣವೇನು?

ಬಿಜೆಪಿಯಲ್ಲಿ ಪಕ್ಷ ನಿಷ್ಠೆ ಬಿಟ್ಟು ಬಕೆಟ್ ಹಿಡಿದವರಿಗೆ ಮನ್ನಣೆ ನೀಡಲಾಗುತ್ತಿದೆ. ಅಲ್ಲದೇ ಲಿಂಗಾಯತ ನಾಯಕರನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಮೊದಲ ಬಾರಿಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಪ್ರದೀಪ್ ಶೆಟ್ಟರ್
ಪ್ರದೀಪ್ ಶೆಟ್ಟರ್
Updated on

ಹುಬ್ಬಳ್ಳಿ: ಬಿಜೆಪಿಯಲ್ಲಿ ಪಕ್ಷ ನಿಷ್ಠೆ ಬಿಟ್ಟು ಬಕೆಟ್ ಹಿಡಿದವರಿಗೆ ಮನ್ನಣೆ ನೀಡಲಾಗುತ್ತಿದೆ. ಅಲ್ಲದೇ ಲಿಂಗಾಯತ ನಾಯಕರನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಮೊದಲ ಬಾರಿಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಇತ್ತೀಚೆಗಷ್ಟೇ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಲಿಂಗಾಯತ ನಾಯಕರನ್ನು ನಿರ್ಲಕ್ಷಿಸುತ್ತಿರುವ ಬಹಿರಂಗವಾಗಿ ಅಸಮಾಧಾನ ವ್ಯಕ್ತ ಪಡಿಸಿದ್ದರು. ಮುನೇನ ಕೊಪ್ಪ ನಂತ ಜಗದೀಶ ಶೆಟ್ಟರ್ ಸಹೋದರ ಬಿಜೆಪಿ ಎಂಎಲ್ ಸಿ ಪ್ರದೀಪ ಶೆಟ್ಟರ್ ಬಹಿರಂಗವಾಗಿ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರು ಬಹಿರಂಗವಾಗಿ ಪಕ್ಷದ ನಾಯಕರ ವಿರುದ್ಧ ಸಮರ ಸಾರಿದ್ದರೇ, ಮತ್ತೆ ಕೆಲವರು ತೆರೆಮರೆಯಲ್ಲಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

ವಿಧಾನಪರಿಷತ್ ಸದಸ್ಯನಾಗಿದ್ದರೂ ನನ್ನನ್ನು ಕೆಲವು ಕಾರ್ಯಕ್ರಮಗಳಿಗೆ ಕಡೆಗಣಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮಕ್ಕೆ ನನ್ನನ್ನು ಕರೆದಿಲ್ಲ. ಇಂತಹ ನಾಲ್ಕೈದು ಕಾರ್ಯಕ್ರಮಗಳಲ್ಲಿ ಕಡೆಗಣನೆ ಮಾಡಿದ್ದಾರೆ. ಇದು ನನಗೆ ಬೇಸರ ತಂದಿದೆ. ಯಾಕೆ ಹೀಗೆ ಆಗುತ್ತಿದೆ ಎಂದು ಅರ್ಥ ಆಗುತ್ತಿಲ್ಲ. ಆದರೆ ವೀರಶೈವ ಲಿಂಗಾಯತ ನಾಯಕರಿಗೆ ನಾಯಕತ್ವ ಕೊಟ್ಟರೆ ಮಾತ್ರ ಬಿಜೆಪಿ ಗೆಲ್ಲಲು ಸಾಧ್ಯ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ವೀರಶೈವ ಲಿಂಗಾಯತರಿಗೆ ಕೊಡಬೇಕು. ಈ ಎಲ್ಲಾ ವಿಚಾರಗಳ ಬಗ್ಗೆ ರಾಷ್ಟ್ರೀಯ ನಾಯಕರ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.

ಪಕ್ಷದಲ್ಲಿ ಲಿಂಗಾಯತ ನಾಯಕರನ್ನು ಬದಿಗೆ ಸರಿಸುವ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ, ಹೀಗಾಗಿ ತಮ್ಮ ಸಹೋದರ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ತೊರೆದು ಹೋಗಿದ್ದಾರೆ ಪರೋಕ್ಷವಾಗಿ ಹೇಳಿದ್ದಾರೆ.

ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸನ್ಮಾನಿಸುವ ಕಾರ್ಯಕ್ರಮಕ್ಕೆ ಪ್ರದೀಪ್ ಅವರನ್ನು ಆಹ್ವಾನಿಸದೆ ತಪ್ಪು ಮಾಡಿರುವುದಾಗಿ ಒಪ್ಪಿಕೊಂಡರೂ ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ  ಎಂದು  ಧಾರವಾಡ ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ  ಸಮಜಾಯಿಷಿ ನೀಡಿದ್ದಾರೆ. ಆದರೆ, ಪ್ರದೀಪ್ ಶೆಟ್ಟರ್  ಲಿಂಗಾಯತ ವಿಚಾರವನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿದ ರೀತಿಯನ್ನು ಖಂಡಿಸಿದರು.

ಡಿವಿ ಸದಾನಂದಗೌಡರನ್ನು ಹೊರತುಪಡಿಸಿ ಉಳಿದೆಲ್ಲ ಮುಖ್ಯಮಂತ್ರಿಗಳು ಲಿಂಗಾಯತರಾಗಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವು ಆರು ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಅದರಲ್ಲಿ ಮೂವರು ಚುನಾಯಿತರಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಭಾನುವಾರದ ಬೆಳವಣಿಗೆಯ ಪರಿಣಾಮವಾಗಿ, ಸೋಮವಾರ ನಡೆದ ಪಕ್ಷದ ಸಭೆಗೆ ಪ್ರದೀಪ್ ಶೆಟ್ಟರ್ ಅವರನ್ನು ಆಹ್ವಾನಿಸಲಾಯಿತು. ಎರಡು ಬಾರಿ ಎಂಎಲ್ ಸಿ ಆಗಿರುವ ಪ್ರದೀಪ್ ಶೆಟ್ಟರ್ ತಮ್ಮ ಅಭಿಪ್ರಾಯ ವೈಯಕ್ತಿಕ ಅನುಭವದ ಮೇಲೆ ಬಂದಿದ್ದು, ಪಕ್ಷದ ಹಿತದೃಷ್ಟಿಯಿಂದ ಹೀಗೆ ಹೇಳಿರುವುದಾಗಿ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಹಲವಾರು ಮಂಡಲ ಪ್ರಮುಖರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಇದೇ ರೀತಿಯ ಅಭಿಪ್ರಾಯ ಹೊಂದಿದ್ದರು ಹೀಗಾಗಿ ಅವರೆಲ್ಲಾ ಶೆಟ್ಟರ್ ಅವರನ್ನು ಶ್ಲಾಘಿಸಿದರು.

ಪರಿಷತ್ ಸದಸ್ಯನಾಗಿ ಇನ್ನೂ ನಾಲ್ಕೂವರೆ ವರ್ಷಗಳ ಅಧಿಕಾರವಿರುವುದರಿಂದ ಪಕ್ಷವನ್ನು ತೊರೆಯುವುದಿಲ್ಲ ಎಂದು ಪ್ರದೀಪ್ ಸ್ಪಷ್ಟಪಡಿಸಿದ್ದಾರೆ. 35 ವರ್ಷಗಳಿಂದ ಪಕ್ಷದಲ್ಲಿ ಇರುವ ಕಾರಣ ಪಕ್ಷದ ಶಿಸ್ತಿನ ಬಗ್ಗೆ ನನಗೆ ತಿಳಿದಿದೆ ಎಂದು ಹೇಳಿದರು.

ಆದಾಗ್ಯೂ, ಅನೇಕ ಲಿಂಗಾಯತ ನಾಯಕರಲ್ಲಿ ನಿರ್ಲಕ್ಷ್ಯದ ಭಾವನೆ ಮೂಡಿದೆ. ಮುಂಬರುವ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಲು ಪಕ್ಷವು ಅವರಿಗೆ ಸ್ಥಾನಗಳನ್ನು ನೀಡಬೇಕು ಮತ್ತು ಸಮುದಾಯದ ವರ್ಚಸ್ಸನ್ನು ಮರುಸ್ಥಾಪಿಸಬೇಕು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com