ಬಿ,ಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ
ಬಿ,ಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ

ಬೊಮ್ಮಾಯಿ ನಿರ್ಲಕ್ಷ್ಯ, ಯಡಿಯೂರಪ್ಪ ಕಡೆಗಣನೆ: ಲಿಂಗಾಯತ ನಾಯಕರ ಮೂಲೆಗುಂಪು; ಲೋಕಸಭೆ ಚುನಾವಣೆಯಲ್ಲೂ ಹಳ್ಳ ಹಿಡಿಯುತ್ತಾ ಕೇಸರಿ ಪಡೆ?

ಬಿಜೆಪಿಯಲ್ಲಿ ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಇಂಥದ್ದೊಂದು ಭಾವ, ಅಂತರ್ಗತವಾಗಿ ಹರಿಯುತ್ತಲೇ ಇದೆ. ಇದಕ್ಕೆ ಒತ್ತು ನೀಡುವಂತೆ ಇತ್ತೀಚೆಗೆ ಪಕ್ಷದಲ್ಲಿ ನಡೆಯುತ್ತಿರುವ ಅನೇಕ ಬೆಳವಣಿಗೆಗಳು ಅದನ್ನು ಮತ್ತಷ್ಟು ಪುಷ್ಟೀಕರಿಸುತ್ತಿವೆ.
Published on

ಬೆಂಗಳೂರು: ಬಿಜೆಪಿಯಲ್ಲಿ ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಇಂಥದ್ದೊಂದು ಭಾವ, ಅಂತರ್ಗತವಾಗಿ ಹರಿಯುತ್ತಲೇ ಇದೆ. ಇದಕ್ಕೆ ಒತ್ತು ನೀಡುವಂತೆ ಇತ್ತೀಚೆಗೆ ಪಕ್ಷದಲ್ಲಿ ನಡೆಯುತ್ತಿರುವ ಅನೇಕ ಬೆಳವಣಿಗೆಗಳು ಅದನ್ನು ಮತ್ತಷ್ಟು ಪುಷ್ಟೀಕರಿಸುತ್ತಿವೆ.

ಸಂಪ್ರದಾಯದಂತೆ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು ವಿರೋಧ ಪಕ್ಷದ ನಾಯಕರಾಗುತ್ತಿದ್ದರು. ಅದರಂತೆ ಈ ಬಾರಿ ಬಸವರಾಜ ಬೊಮ್ಮಾಯಿ ಅವರಿಗೆ ಆ ಸ್ಥಾನ ಸಿಗಬೇಕಿತ್ತು, ಆದರೆ ಬಿಜೆಪಿ ನಾಯಕತ್ವ ಅವರನ್ನು  ಪ್ರತಿಪಕ್ಷ ನಾಯಕನನ್ನಾಗಿ ನೇಮಿಸದಿರುವುದು ಮತ್ತು ಹುದ್ದೆಯನ್ನು ಖಾಲಿ ಇರಿಸಿರುವುದು ಲಿಂಗಾಯತರಾದ ಬೊಮ್ಮಾಯಿ ಅವರನ್ನು ಅವಮಾನಿಸುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ವೀರಶೈವ ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ ಆರೋಪಿಸಿದ್ದಾರೆ.

ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಬೇರೆಯವರ ಹೆಸರು ಪ್ರಸ್ತಾಪಿಸಿ ಬೊಮ್ಮಾಯಿ ಜತೆ ಮೈಂಡ್ ಗೇಮ್ ಆಡುತ್ತಿದ್ದಾರೆ,  ಬೊಮ್ಮಾಯಿ ಅವರನ್ನು ಸಾರ್ವಜನಿಕವಾಗಿ ಅವಮಾನಿಸುತ್ತಿದ್ದಾರೆ, ಇದರಿಂದ  ಬೊಮ್ಮಾಯಿ ಅವರು ತನಗೆ ಆಸಕ್ತಿ ಇಲ್ಲ ಎಂದು ಹತಾಶೆಯಿಂದ ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲಿಂಗಾಯತ ಮತಗಳು ಕಡಿಮೆಯಾಗಿದ್ದು, ಸಮುದಾಯವು ಪಕ್ಷದ ವಿರುದ್ಧವಾಗಿದೆ ಎಂದು ವಿಶ್ಲೇಷಕರು  ಅಭಿಪ್ರಾಯ ಪಟ್ಟಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಭವಿಷ್ಯದ ಬಗ್ಗೆ ಪ್ರಶ್ನೆ ಎದ್ದಿದೆ. ಲಿಂಗಾಯತ ಸಮುದಾಯದ ಹಿತಾಸಕ್ತಿ ವಿರುದ್ಧವಾಗಿ ನಿಂತಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಲಿಂಗಾಯತ ಸಮುದಾಯದಲ್ಲಿ ಒಂದು ರೀತಿಯ ವಿರೋಧ ನಿರ್ಮಾಣವಾಗುತ್ತಿದೆ ಎಂದು ರಾಜಕೀಯ ವಿಶ್ಲೇಷಕ ಬಿ.ಎಸ್.ಮೂರ್ತಿ ವಿಶ್ಲೇಷಿಸಿದ್ದಾರೆ.

ಚುನಾವಣೆಗೆ ಮುನ್ನ ವೈರಲ್ ಆಗಿದ್ದ ಅವರ ವೀಡಿಯೊದಿಂದ ಪ್ರಾರಂಭವಾಯಿತು, ಲಿಂಗಾಯತ ಬೆಂಬಲಕ್ಕಿಂತ ಹಿಂದುತ್ವದ ಮತಗಳ ಮೇಲೆ ಹೆಚ್ಚು ಅವಲಂಬಿತರಾಗಬೇಕು ಎಂದು ಅವರು ಹೇಳಿದ್ದಾರೆಂದು ಆರೋಪಿಸಲಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಎಂಪಿ ರೇಣುಕಾಚಾರ್ಯ, ಪ್ರದೀಪ್ ಶೆಟ್ಟರ್ ಮತ್ತು ಇತರ ಲಿಂಗಾಯತ ನಾಯಕರ ಹೇಳಿಕೆಗಳು ಬಿಜೆಪಿ ಮತ್ತು ಲಿಂಗಾಯತಗಳ ನಡುವಿನ ವಿಭಜನೆಯ ಗ್ರಹಿಕೆಯನ್ನು ಹೆಚ್ಚಿಸಿವೆ.

ಕರ್ನಾಟಕ ರಾಜಕೀಯದಲ್ಲಿ ಜೆಡಿಎಸ್ ನ ಎಚ್‌ಡಿ ದೇವೇಗೌಡ ಮತ್ತು  ಎಚ್‌ಡಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನ ಸಿದ್ದರಾಮಯ್ಯ ಅವರಿಗೆ ಸರಿಸಾಟಿಯಾಗುವ ಏಕೈಕ ಮಾಸ್ ಲೀಡರ್ ಎಂದರೆ ಬಿಎಸ್ ಯಡಿಯೂರಪ್ಪ. ಬಿಎಲ್  ಸಂತೋಷ್ ನಿಧಾನವಾಗಿ 'ಲಿಂಗಾಯತ ಶತ್ರು' ಎಂಬಂತೆ ಬಿಂಬಿತವಾಗುತ್ತಿದ್ದಾರೆ. ಇದರಿಂದ ಕೇಂದ್ರ ನಾಯಕತ್ವವು ದೊಡ್ಡ ಒತ್ತಡಕ್ಕೆ ಒಳಗಾಗುತ್ತಿದೆ ಎಂದು ಹೇಳಿದ್ದಾರೆ.

ಬೊಮ್ಮಾಯಿ ಅವರನ್ನು ಪಕ್ಷದಿಂದ ರಿಮೋಟ್‌ನಂತೆ ನಿಯಂತ್ರಿಸಲಾಗುತ್ತದೆ ಮತ್ತು ಅವರು ಯಡಿಯೂರಪ್ಪ ಅವರ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವ ಮಾತುಗಳನ್ನಾಡುತ್ತಿದೆ.  ಯಡಿಯೂರಪ್ಪ ಅವರನ್ನು ಮತ್ತೆ ಕೇಂದ್ರ ಸ್ಥಾನಕ್ಕೆ ತರದಿದ್ದರೆ ಬಿಜೆಪಿಗೆ ಹಿಡಿತ ಕಷ್ಟವಾಗಲಿದೆ.

ಕೇರಳದಲ್ಲಿ, ಪಕ್ಷವು 88 ವರ್ಷ ವಯಸ್ಸಿನ ಇ ಶ್ರೀಧರನ್ ಅವರ ಸೇವೆಯನ್ನು ಬಳಸಿಕೊಂಡಿದೆ. ಪಕ್ಷದ ನಿವೃತ್ತಿ ವಯಸ್ಸು 75 ಕ್ಕಿಂತ ಹೆಚ್ಚು, ಪಕ್ಷವು ಈಗ 80 ವರ್ಷ ವಯಸ್ಸಿನ ಯಡಿಯೂರಪ್ಪ ಅವರನ್ನು ಮತ್ತೆ ಕರೆತರಬೇಕಾಗಿದೆ ಎಂದು ಅವರು ಹೇಳಿದರು.

ಇತ್ತೀಚೆಗೆ, ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮದ ಹೇಳಿಕೆಯ ವಿರುದ್ಧ ಹೇಳಿಕೆ ನೀಡಲು ಬಲಪಂಥೀಯ ಗುಂಪುಗಳು ಅನೇಕ ಲಿಂಗಾಯತ ಸಮುದಾಯದ ಶ್ರೀಗಳನ್ನು ಸಂಪರ್ಕಿಸಿದವು ಎಂದು ಮೂಲಗಳು ತಿಳಿಸಿವೆ. ಯಡಿಯೂರಪ್ಪನವರು ಅಧಿಕಾರ ವಹಿಸಿಕೊಂಡಿದ್ದರೆ ಪ್ರತಿಕ್ರಿಯಿಸಲು ಒಂದಿಷ್ಟು ಜನ ಶ್ರೀಗಳು ಸಿಗುತ್ತಿದ್ದರು. "ಇದು ಲಿಂಗಾಯತ ಅಸಮಾಧಾನವಲ್ಲದಿದ್ದರೆ, ಮತ್ತೇನು ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಎಂಎಲ್ಸಿ ಅಡಗೂರು ವಿಶ್ವನಾಥ್ ಮಾತನಾಡಿ, ಇಸ್ರೋ ತಂಡಕ್ಕೆ ಶುಭ ಹಾರೈಸಲು ಮೋದಿ ಬಂದಿದ್ದರು. ಅವರಿಗೆ ಕಾಳಜಿ ಇದ್ದಿದ್ದರೆ ಬೊಮ್ಮಾಯಿ ಅಥವಾ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಅಥವಾ ಇತರ ಬಿಜೆಪಿ ನಾಯಕರನ್ನು ವಿಮಾನ ನಿಲ್ದಾಣಕ್ಕೆ ಆಹ್ವಾನಿಸಬಹುದಿತ್ತು. ಅಧಿಕಾರಶಾಹಿಗಳು ಅವರನ್ನು ಬರಮಾಡಿಕೊಳ್ಳಬೇಕೆಂದು ಅವರು ಆದ್ಯತೆ ನೀಡಿರುವುದು ಅನೇಕ ಜನರಿಗೆ, ವಿಶೇಷವಾಗಿ ಬೊಮ್ಮಾಯಿ ಮತ್ತು ರಾಜ್ಯ ನಾಯಕತ್ವಕ್ಕೆ ಮಾಡಿದ ಅವಮಾನವಾಗಿದೆ ಎಂದು ವಿಶ್ಲೇಷಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com