ಬಿಜೆಪಿಯೊಂದಿಗೆ ಮೈತ್ರಿಯಿಂದ ಸಂಕಷ್ಟ; ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸೈಯದ್ ಶಫಿವುಲ್ಲಾ ಸಾಹೇಬ್ ರಾಜೀನಾಮೆ
ಮುಂಬರುವ 2024ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಕರ್ನಾಟಕದಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ಕೈಜೋಡಿಸಿದ್ದು, ಇದೀಗ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಸೈಯದ್ ಶಫಿವುಲ್ಲಾ ಸಾಹೇಬ್ ಅವರು ಪಕ್ಷದೊಂದಿಗಿನ ಸಂಬಂಧವನ್ನು ಮುರಿದುಕೊಳ್ಳಲು ನಿರ್ಧರಿಸಿದ್ದಾರೆ.
Published: 24th September 2023 11:11 AM | Last Updated: 25th September 2023 07:47 PM | A+A A-

ಬಿಜೆಪಿ-ಜೆಡಿಎಸ್
ಬೆಂಗಳೂರು: ಮುಂಬರುವ 2024ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಕರ್ನಾಟಕದಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ಕೈಜೋಡಿಸಿದ್ದು, ಇದೀಗ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಸೈಯದ್ ಶಫಿವುಲ್ಲಾ ಸಾಹೇಬ್ ಅವರು ಪಕ್ಷದೊಂದಿಗಿನ ಸಂಬಂಧವನ್ನು ಮುರಿದುಕೊಳ್ಳಲು ನಿರ್ಧರಿಸಿದ್ದಾರೆ.
ಶಫೀವುಲ್ಲಾ ಅವರು ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಸಿ.ಎಂ.ಇಬ್ರಾಹಿಂ ಅವರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ, 'ನಮ್ಮ ಪಕ್ಷವು ಜಾತ್ಯತೀತ ನೆಲೆಗಟ್ಟಿನ ಮೇಲೆ ನಂಬಿಕೆಯನ್ನಿಟ್ಟುಕೊಂಡಿದ್ದು, ಸಮಾಜ ಮತ್ತು ಸಮುದಾಯಕ್ಕೆ ಸೇವೆ ಸಲ್ಲಿಸಲು ನಾನು ಶ್ರಮಿಸಿದ್ದೇನೆ ಮತ್ತು ಪಕ್ಷಕ್ಕೆ ಸೇವೆ ಸಲ್ಲಿಸಿದ್ದೇನೆ. ಆದರೆ, ನಮ್ಮ ನಾಯಕರಾದ ಎಚ್‌ಡಿ ಕುಮಾರಸ್ವಾಮಿ ಅವರು ಈ ಮೊದಲು ಸರ್ಕಾರ ರಚನೆಗೆ ಬಿಜೆಪಿಯೊಂದಿಗೆ ಕೈಜೋಡಿಸಿದ್ದರು. ಇದೀಗ ಎರಡನೇ ಬಾರಿಗೆ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಪಕ್ಷದಿಂದ ಹಾಗೂ ಪಕ್ಷದ ಚಟುವಟಿಕೆಯಿಂದ ಹೊರಗುಳಿಯಲು ನಿರ್ಧರಿಸಿದ್ದೇನೆ' ಎಂದು ಹೇಳಿದ್ದಾರೆ.
'ಪಕ್ಷದ ಹಿರಿಯ ನಾಯಕರು ಈಗ ಬಿಜೆಪಿಯೊಂದಿಗೆ ಕೈಜೋಡಿಸಲು ನಿರ್ಧರಿಸಿರುವುದರಿಂದ, ಪಕ್ಷದ ಉಪಾಧ್ಯಕ್ಷ ಹುದ್ದೆಗೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದನ್ನು ಬಿಟ್ಟು ನನಗೆ ಬೇರೆ ದಾರಿ ಕಾಣಿಸುತ್ತಿಲ್ಲ' ಎಂದು ಅವರು ಹೇಳಿದ್ದಾರೆ.
ಇವರಲ್ಲದೆ, ಶಿವಮೊಗ್ಗ ಜೆಡಿಎಸ್ ಘಟಕದ ಅಧ್ಯಕ್ಷ ಎಂ ಶ್ರೀಕಾಂತ್, ಯುಟಿ ಆಯೇಷಾ ಫರ್ಜಾನಾ ಸೇರಿದಂತೆ ಹಲವು ನಾಯಕರು ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶ್ರೀಕಾಂತ್ ಜೊತೆಗೆ ಜೆಡಿಎಸ್ ಕಾರ್ಪೊರೇಟರ್‌ಗಳು, ಮುಖಂಡರು, ನಾಯಕರು ಅಪಾರ ಸಂಖ್ಯೆಯ ಕಾರ್ಯಕರ್ತರು ಸಹ ಕಾಂಗ್ರೆಸ್ ಸೇರ್ಪಡೆ ಆಗುವುದು ಖಚಿತ ಎನ್ನುವ ಸುದ್ದಿ ಹೊರಬಿದ್ದಿದೆ.
ಇದನ್ನೂ ಓದಿ: ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸೇರಿದ ಜೆಡಿಎಸ್; ಸೀಟು ಹಂಚಿಕೆ ಗೊಂದಲ ಇಲ್ಲ- ಎಚ್ ಡಿಕೆ
ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಜೆಡಿಎಸ್ ಶುಕ್ರವಾರ ಕರ್ನಾಟಕದಲ್ಲಿ ಬಿಜೆಪಿಯೊಂದಿಗೆ ಮೈತ್ರಿಯನ್ನು ಘೋಷಿಸಿತು ಮತ್ತು 2024ರ ಲೋಕಸಭೆ ಚುನಾವಣೆಗೆ ಮುನ್ನ ಔಪಚಾರಿಕವಾಗಿ ಎನ್‌ಡಿಎ ಒಕ್ಕೂಟಕ್ಕೆ ಸೇರಿತು. ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ ನಂತರ ಜೆಡಿಎಸ್ ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಈ ಘೋಷಣೆ ಮಾಡಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿತ್ತು. ಆದರೆ, ಕರ್ನಾಟಕದ 28 ಸ್ಥಾನಗಳಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದುಕೊಂಡಿತ್ತು ಮತ್ತು ಮಂಡ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯೂ ಗೆಲುವು ಸಾಧಿಸಿದ್ದರಿಂದ ಉಭಯ ಪಕ್ಷಗಳು ಹೀನಾಯವಾಗಿ ಸೋತಿದ್ದವು.