ಬಿಜೆಪಿ ಜೊತೆಗಿನ ಮೈತ್ರಿ ತಂದಿಟ್ಟ ಸಂಕಷ್ಟ: ಮತ್ತಷ್ಟು ಮುಸ್ಲಿಂ ನಾಯಕರು ಜೆಡಿಎಸ್ ತೊರೆಯಲು ನಿರ್ಧಾರ?
ಕರ್ನಾಟಕ ಪ್ರದೇಶ ಜನತಾದಳ (ಜಾತ್ಯಾತೀತ) ಪಕ್ಷ ಲೋಕಸಭೆ ಚುನಾವಣೆ 2024ರ ಹಿನ್ನಲೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೇರಿಕೊಂಡಿದೆ. ಈ ಮೈತ್ರಿಯು ಇದೀಗ ಜೆಡಿಎಸ್ ಪಕ್ಷಕ್ಕೆ ಸಂಕಷ್ಟವನ್ನು ಎದುರು ಮಾಡುತ್ತಿದೆ.
Published: 25th September 2023 08:44 AM | Last Updated: 25th September 2023 07:51 PM | A+A A-

ಜೆಡಿಎಸ್ ನಾಯಕ ಹೆಚ್'ಡಿ.ಕುಮಾರಸ್ವಾಮಿ
ಬೆಂಗಳೂರು; ಕರ್ನಾಟಕ ಪ್ರದೇಶ ಜನತಾದಳ (ಜಾತ್ಯಾತೀತ) ಪಕ್ಷ ಲೋಕಸಭೆ ಚುನಾವಣೆ 2024ರ ಹಿನ್ನಲೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೇರಿಕೊಂಡಿದೆ. ಈ ಮೈತ್ರಿಯು ಇದೀಗ ಜೆಡಿಎಸ್ ಪಕ್ಷಕ್ಕೆ ಸಂಕಷ್ಟವನ್ನು ಎದುರು ಮಾಡುತ್ತಿದೆ.
ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ಅಸಮಾಧಾನಗೊಂಡಿರುವ ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತ ಮುಖಂಡರು ಇದೀಗ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.
ನಗರದ ಕೆಕೆ ಗೆಸ್ಟ್ ಹೌಸ್ ನಲ್ಲಿ ನಿನ್ನೆ ಜೆಡಿಎಸ್ ಅಲ್ಪಸಂಖ್ಯಾತ ನಾಯಕರ ಸಭೆ ನಡೆಯಿತು. ಸಭೆಯಲ್ಲಿ ಮುಸ್ಲಿಂ ಮುಖಂಡರು ಜೆಡಿಎಸ್ ತೊರೆಯಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ಜೆಡಿಎಸ್ ಕಾರ್ಯಾಧ್ಯಕ್ಷ ಎನ್ ಎಂ ನಬಿ, ಮುಖಂಡರಾದ ಮೋಹಿದ್ ಅಲ್ತಾಫ್, ನಾಸೀರ್ ಉಸ್ತಾದ್,ವಕ್ತಾರ ನೂರ್ ಅಹಮ್ಮದ್ ಸೇರಿದಂತೆ ದಾವಣಗೆರೆ, ಮೈಸೂರು, ರಾಮನಗರ, ರಾಯಚೂರು, ತುಮಕೂರು ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಸಾಮೂಹಿಕ ರಾಜೀನಾಮೆ ನೀಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಸಭೆ ಬಳಿಕ ಮಾತನಾಡಿದ ಜೆಡಿಎಸ್ ನಾಯಕ ಎನ್ಎಂ ನಬಿ ಅವರು, ಎನ್‌ಡಿಎ ಸೇರುವ ಪಕ್ಷದ ನಾಯಕರ ನಿರ್ಧಾರದಿಂದ ನಮಗೆ ನೋವಾಗಿದೆ. ಈ ಸಮಯದಲ್ಲಿ, ನಾವು ಮುಸ್ಲಿಂ ನಾಯಕರಿಂದ ಮಾತ್ರವಲ್ಲದೆ ಸಮಾನ ಮನಸ್ಕ ಜಾತ್ಯತೀತ ನಾಯಕರಿಂದಲೂ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದೇವೆ. ಬಿಜೆಪಿ ಜೊತೆ ಕೈ ಜೋಡಿಸುವ ನಿರ್ಧಾರ ನಮಗೆ ನೋವು ತಂದಿದೆ. ಹೀಗಾಗಿ ನಮಗೆ ಪಕ್ಷವನ್ನು ಬಿಡದೆ ಬೇರೆ ದಾರಿ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿಯೊಂದಿಗೆ ಮೈತ್ರಿಯಿಂದ ಸಂಕಷ್ಟ; ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸೈಯದ್ ಶಫಿವುಲ್ಲಾ ಸಾಹೇಬ್ ರಾಜೀನಾಮೆ
ಏತನ್ಮಧ್ಯೆ, ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ ಝಡ್ ಜಮೀರ್ ಅಹಮದ್ ಖಾನ್ ಅವರು ಮಾತನಾಡಿ, ಮುಸ್ಲಿಮರ ಬೆಂಬಲದಿಂದ ರಾಜ್ಯದಲ್ಲಿ ಜೆಡಿಎಸ್ 19 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇಲ್ಲದಿದ್ದರೆ ಪಕ್ಷವು ಐದು ಅಥವಾ ಆರು ಸ್ಥಾನಗಳನ್ನಷ್ಟೇ ಗೆಲ್ಲುತ್ತಿದ್ದು. ಮುಸ್ಲಿಂ ಮತದಾರರಿಲ್ಲದಿದ್ದರೆ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಸೋಲಿನ ರುಚಿ ಅನುಭವಿಸುತ್ತಿದ್ದರು ಎಂದು ಹೇಳಿದ್ದಾರೆ.