ಸ್ಟಾಲಿನ್‌ ಸ್ವಾಗತಿಸಲು ಐಎಎಸ್ ಅಧಿಕಾರಿಗಳನ್ನೂ ಕಾನೂನುಬಾಹಿರವಾಗಿ ಕಳುಹಿಸಿಕೊಟ್ಟಿದ್ದ ಸಿದ್ದರಾಮಯ್ಯ ಈಗ ಎಲ್ಲಿ ಅಡಗಿ ಕೂತಿದ್ದಾರೆ?

ಬೆಂಗಳೂರಿನಲ್ಲಿ ನಡೆದ ಇಂಡಿ ಮೈತ್ರಿಕೂಟದ ಸಭೆಯಲ್ಲಿ ಪಾಲ್ಗೊಳ್ಳಲು ಬಂದ ಸ್ಟಾಲಿನ್‌ರವರನ್ನು ಸ್ವಾಗತಿಸಲು, ಮಾವನ ಆತಿಥ್ಯ ಮಾಡುವ ಅಳಿಯನಂತೆ, ತಮ್ಮ ಇಡೀ ಸಚಿವ ಸಂಪುಟವನ್ನು ಮಾತ್ರವಲ್ಲದೆ ರಾಜ್ಯದ ಉನ್ನತ ಐಎಎಸ್ ಅಧಿಕಾರಿಗಳನ್ನೂ ಕಾನೂನುಬಾಹಿರವಾಗಿ ಕಳುಹಿಸಿಕೊಟ್ಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಎಲ್ಲಿ ಅಡಗಿ ಕೂತಿದ್ದಾರೆ?...
ಬಿಜೆಪಿ ಟ್ವೀಟ್
ಬಿಜೆಪಿ ಟ್ವೀಟ್

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಇಂಡಿ ಮೈತ್ರಿಕೂಟದ ಸಭೆಯಲ್ಲಿ ಪಾಲ್ಗೊಳ್ಳಲು ಬಂದ ಸ್ಟಾಲಿನ್‌ರವರನ್ನು ಸ್ವಾಗತಿಸಲು, ಮಾವನ ಆತಿಥ್ಯ ಮಾಡುವ ಅಳಿಯನಂತೆ, ತಮ್ಮ ಇಡೀ ಸಚಿವ ಸಂಪುಟವನ್ನು ಮಾತ್ರವಲ್ಲದೆ ರಾಜ್ಯದ ಉನ್ನತ ಐಎಎಸ್ ಅಧಿಕಾರಿಗಳನ್ನೂ ಕಾನೂನುಬಾಹಿರವಾಗಿ ಕಳುಹಿಸಿಕೊಟ್ಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಎಲ್ಲಿ ಅಡಗಿ ಕೂತಿದ್ದಾರೆ? ಡಿಕೆ.ಶಿವಕುಮಾರ್ ಯಾವ ಬಿಲದಲ್ಲಿದ್ದಾರೆಂದು ರಾಜ್ಯ ಬಿಜೆಪಿ ಪ್ರಶ್ನೆ ಮಾಡಿದೆ.

ಕಾವೇರಿ ವಿವಾದ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.

ಸ್ಟಾಲಿನ್ ಸರ್ಕಾರಕ್ಕೆ ಕಳ್ಳತನದಿಂದ ಆದೇಶಕ್ಕಿಂತಲೂ ಹೆಚ್ಚು ನೀರು ಬಿಟ್ಟು ಕನ್ನಡಿಗರಿಗೆ, ಕರ್ನಾಟಕಕ್ಕೆ ದ್ರೋಹ ಎಸಗಿ, ಏಳು ಸುತ್ತಿನ ಕೋಟೆಯ ಪೊಲೀಸ್ ಭದ್ರತೆಯಲ್ಲಿ ಭಯದಿಂದ ಬಚ್ಚಿಟ್ಟುಕೊಂಡಿರುವ ನಮ್ಮ ಹೆಮ್ಮೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಟೀಕೆ ಮಾಡಿದೆ.

ಸ್ಟಾಲಿನ್ ಕೇಳ್ ಕೇಳ್ದಂಗೆ ಸಿದ್ದರಾಮಯ್ಯನೋರು ನಮ್ಮಮ್ಮ ಕಾವೇರಿಯನ್ನ ತಮಿಳುನಾಡಿಗೆ ಬೇಕಾಬಿಟ್ಟಿ ಹರಿಸುತ್ತಿರೋದಾದರು ಯಾಕೆ? ಎಂದು ಪ್ರಶ್ನಿಸಿ, ಸಿದ್ದರಾಮಯ್ಯ ಅವರ ಹೇಳಿಕೆಯ ವಿಡಿಯೋವೊಂದನ್ನು ಹಂಚಿಕೊಂಡು ವ್ಯಂಗ್ಯವಾಡಿದೆ.

ಸ್ಟಾಲಿನ್ ನಾಡಿನ ರೈತರಿಗೆ ಎರೆಡೆರಡು ಬೆಳೆ ಬೆಳೆಯಲು ನೀರು ಬಿಟ್ಟು, ನಾಡಿನ ರೈತರಿಗೆ ನೀರಿಲ್ಲದೆ ಭತ್ತ ಬೆಳೆಯುವ "ಕರ್ನಾಟಕ ಮಾಡೆಲ್" ಅನ್ನು ಪರಿಚಯಿಸುತ್ತಿರುವ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ ಎಂದು ವಾಗ್ದಾಳಿ ನಡೆಸಿದೆ.

ನಾಲ್ಕು ತಿಂಗಳ ಕಾಂಗ್ರೆಸ್ ಸರ್ಕಾರ, ರಾಜ್ಯದ ನೇಕಾರರ ಬದುಕನ್ನು ಅಕ್ಷರಶಃ ಅನಾಥವನ್ನಾಗಿಸಿದೆ. ಅತ್ತ ದುಡಿಮೆಯ ಕೂಲಿಯು ಇಲ್ಲ, ಇತ್ತ ನೇಕಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನೂ ಸಹ ಸರಿಯಾಗಿ ಪೂರೈಸುತ್ತಿಲ್ಲ. ರೈತ ವಿದ್ಯಾನಿಧಿ ಯೋಜನೆಯನ್ನು ನೇಕಾರರ ಮಕ್ಕಳಿಗೂ ಸಹ ಬಿಜೆಪಿ ಸರ್ಕಾರ ವಿಸ್ತರಿಸಿತ್ತು. ಆ ಯೋಜನೆಯನ್ನು ಸಹ ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಕಾರರಿಗೆ ದೊರೆಯುತ್ತಿದ್ದ ವಿದ್ಯುತ್ ದರದ ಸಬ್ಸಿಡಿಗೂ ಕೈ ಸರ್ಕಾರ ಕೊಕ್ಕೆ ಹಾಕಿದೆ. ಪಾರಂಪರಿಕ ವೃತ್ತಿಯನ್ನು ಮುಂದುವರೆಸುತ್ತಿರುವ ನೇಕಾರ ಸಮುದಾಯವನ್ನು ಕಂಡರೆ, ಕಾಂಗ್ರೆಸ್ ಸರ್ಕಾರಕ್ಕೆ ಏಕೆ ಈ ಪರಿ ದ್ವೇಷ ಎಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿದೆ.

ಇದೇ ವೇಳೆ ನೀರಿನ ಬಳಕೆ ಕಡಿಮೆ ಮಾಡಲು ತಂತ್ರಜ್ಞಾನ ಬಳಸಿ ಎಂದು ರೈತರಿಗೆ ಸೂಚನೆ ನೀಡಿದ್ದ ಸಚಿವ ಚೆಲುವರಾಯಸ್ವಾಮಿಯವರ ಹೇಳಿಕೆ ಕುರಿತಂತೆಯೂ ವ್ಯಂಗ್ಯವಾಡಿದೆ.

ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಿರುವ ಕಾಂಗ್ರೆಸ್ ನ ತುಘಲಕ್‌ ಸರ್ಕಾರ ಮುಂದೆ ಜನರಿಗೆ ಷರತ್ತುಗಳೊಂದಿಗೆ ಹೊರಡಿಸಬಹುದಾದ ಆದೇಶಗಳು ಇಂತಿವೆ...

ಕಾವೇರಿ ನೀರಿಲ್ಲ ರೈತರು ಬೆಳೆ ಬೆಳೆಯಬೇಡಿ, ಬೆಂಗಳೂರಿಗೆ ನೀರಿಲ್ಲ ಸ್ನಾನ ಮಾಡಬೇಡಿ, ಸೆಂಟ್‌ ಬಳಸಿ, ರಾಜ್ಯದಲ್ಲಿ ವಿದ್ಯುತ್‌ ಕೊರತೆ ಇದೆ ಫ್ರಿಜ್‌ ಟಿವಿ ಬಳಸಬೇಡಿ, ಬರಗಾಲದಿಂದ ಆಹಾರದ ಕೊರತೆ ಇದೆ ಉಪವಾಸ ಮಾಡಿ, ಸರ್ಕಾರದ ಬೊಕ್ಕಸ ಖಾಲಿ ಆಗಿದೆ ವಿಸ್ಕಿ, ರಮ್‌ ಕುಡಿಯಿರಿ. ಇದು ತಮಾಷೆ ಅಲ್ಲ, ಈಗಾಗಲೇ ಇದರಲ್ಲಿ ಮೂರು ಅಂಶಗಳು ಪ್ರಸ್ತುತ ಚಾಲ್ತಿಗೆ ಬಂದಿವೆ. ಇನ್ನು ಹತ್ತು ಹಲವುಗಳನ್ನು ಕಾಂಗ್ರೆಸ್‌ ತರಲಿದೆ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com