ತಿಂಗಳು ತಡ ಮಾಡಿ ಕೇಳಿದ್ದಕ್ಕೆ ಬರ ಪರಿಹಾರ ಸಿಕ್ಕಿಲ್ಲ: ಅಮಿತ್ ಶಾ ಹೇಳಿಕೆ ವಿರುದ್ಧ ಸಿಎಂ ಸಿದ್ದರಾಮಯ್ಯ ಗುಡುಗು!

ಬರಪರಿಹಾರ ವಿಚಾರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನಡುವೆ ಮಂಗಳವಾರ ಮಾತಿನ ಸಮರ ನಡೆಯಿತು.
ಅಮಿತ್ ಶಾ- ಸಿದ್ದರಾಮಯ್ಯ
ಅಮಿತ್ ಶಾ- ಸಿದ್ದರಾಮಯ್ಯonline desk
Updated on

ಬೆಂಗಳೂರು: ಬರ ಪರಿಹಾರ ವಿಚಾರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನಡುವೆ ಮಂಗಳವಾರ ಮಾತಿನ ಸಮರ ನಡೆಯಿತು.

ಬರ ಪರಿಹಾರ ಕುರಿತು ಹೇಳಿಕೆ ನೀಡಿದ್ದ ಅಮಿತ್ ಶಾ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರವು ಮೂರು ತಿಂಗಳು ತಡವಾಗಿ ಪ್ರಸ್ತಾವನೆ ಸಲ್ಲಿಸಿದ ಕಾರಣ ಕೇಂದ್ರ ಸರ್ಕಾರವು ಸಮಯಕ್ಕೆ ಸರಿಯಾಗಿ ಬರ ಪರಿಹಾರ ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು. ಈ ಹೇಳಿಕೆ ವಿರುದ್ಧ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.

ಹೇಳಿಕೆ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಮುಖ್ಯಮಂತ್ರಿಗಳು, ಸನ್ಮಾನ್ಯ ಗೃಹಸಚಿವ ಅಮಿತ್ ಶಹಾ ಅವರೇ,ನಿರೀಕ್ಷಿಸಿದಂತೆಯೇ ರಾಜ್ಯದಲ್ಲಿ ನಿಮ್ಮ ಪಕ್ಷದ ಚುನಾವಣಾ ಪ್ರಚಾರವನ್ನು ಸುಳ್ಳುಗಳ ಮೂಲಕವೇ ಉದ್ಘಾಟಿಸಿದ್ದೀರಿ, ಇದಕ್ಕಾಗಿ ಅಭಿನಂದನೆಗಳು ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸರ್ಕಾರ ಮೂರು ತಿಂಗಳು ವಿಳಂಬವಾಗಿ ಬರಪರಿಹಾರ ಕೋರಿ ಮನವಿ ಸಲ್ಲಿಸಿತ್ತು. ಅಷ್ಟರಲ್ಲಿ ಚುನಾವಣೆ ಘೋಷಣೆಯಾಗಿರುವ ಕಾರಣ ಪರಿಹಾರ ನೀಡಲು ಸಾಧ್ಯವಾಗಿಲ್ಲ’’ ಎಂಬ ಅಪ್ಪಟ ಸುಳ್ಳನ್ನು ರಾಮನಗರದಲ್ಲಿ ಇಂದು ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ನೀವು ಹೇಳಿದ್ದೀರಿ. ಈ ಸುಳ್ಳನ್ನು ಹೇಳುವಾಗ ಕನಿಷ್ಠ ನಿಮ್ಮ ಆತ್ಮಸಾಕ್ಷಿಯಾದರೂ ಕುಟುಕಲಿಲ್ಲವೇ?

ಈ ನಿಮ್ಮ ಸುಳ್ಳಿಗೆ ನಿಮಗೆ ಇಷ್ಟವಾಗಿರುವ ‘’ಕ್ರೊನಾಲಜಿ’’ಯಲ್ಲಿಯೇ ಉತ್ತರ ನೀಡುತ್ತೇನೆ. ನೀವೂ ಸ್ವಲ್ಪ ಕ್ರೊನಾಲಜಿಯನ್ನು ಅರ್ಥ ಮಾಡಿಕೊಳ್ಳಿ.( ಆಪ್ ಬೀ ಝರಾ ಕ್ರೊನಾಲಜಿ ಸಮಜಿಯೇ). ನಾನು ನಿಮ್ಮ ಮುಂದೆ ಇಡುವ ಸತ್ಯವನ್ನು ಸುಳ್ಳೆಂದು ನೀವು ಸಾಬೀತು ಮಾಡಿದರೆ ರಾಜಕೀಯದಿಂದಲೇ ನಾನು ನಿವೃತ್ತಿಯಾಗುತ್ತೇನೆ. ನಿಮಗೆ ನಿಮ್ಮ ಮಾತನ್ನು ಸತ್ಯ ಎಂದು ಸಾಬೀತು ಮಾಡಲಾಗದಿದ್ದರೆ ನೀವೇನು ಮಾಡಬೇಕೆಂದು ನೀವೇ ನಿರ್ಧರಿಸಿ ಎಂದು ಸವಾಲು ಹಾಕಿದರು.

ಅಮಿತ್ ಶಾ- ಸಿದ್ದರಾಮಯ್ಯ
ಬೆಂಗಳೂರು ಸ್ಫೋಟದ ಬಳಿಕವೂ ಕಾಂಗ್ರೆಸ್ SDPI ಬೆಂಬಲ ಪಡೆಯುತ್ತಿದೆ: ಅಮಿತ್ ಶಾ ಆರೋಪ

ಮಳೆ ಅಭಾವದ ಸೂಚನೆ ಸಿಗುತ್ತಿದ್ದಂತೆಯೇ ಜಾಗೃತಗೊಂಡ ರಾಜ್ಯ ಸರ್ಕಾರ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿರುವ ಪ್ರಕೃತಿ ವಿಕೋಪ ಸಂಪುಟ ಉಪಸಮಿತಿಯ ಮೊದಲ ಸಭೆ ನಡೆಸಿದ್ದು 2023ರ ಆಗಸ್ಟ್ 22ರಂದು. ಆ ಸಭೆ ರಾಜ್ಯದ 116 ತಾಲೂಕುಗಳಲ್ಲಿ ಬರಪೀಡಿತವಾಗಿರುವುದನ್ನು ದಾಖಲಿಸಿತ್ತು. ಅದರ ನಂತರ ಸೆಪ್ಟೆಂಬರ್ 22 ರ ವರೆಗೆ ಇದೇ ಸಂಪುಟ ಉಪಸಮಿತಿ ನಾಲ್ಕು ಬಾರಿ ಸಭೆ ನಡೆಸಿ ರಾಜ್ಯದ ಬರಗಾಲದ ಪರಿಸ್ಥಿತಿಯನ್ನು ಪರಿಶೀಲಿಸಿ ಅಂತಿಮವಾಗಿ ಮುಖ್ಯಮಂತ್ರಿಯಾಗಿರುವ ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 195 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲಾಯಿತು.

ರಾಜ್ಯದ ಬರಪೀಡಿತ ತಾಲೂಕುಗಳಲ್ಲಿ ಪರಿಹಾರ ಕಾರ್ಯ ನಡೆಸಲು ಎನ್ ಡಿಆರ್ ಎಫ್ ನಿಂದ ರೂ.4860 ಕೋಟಿ ನೀಡಬೇಕೆಂಬ ಮೊದಲ ಮನವಿಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಿಗೆ ಸಲ್ಲಿಸಿದ್ದು 2023ರ ಸೆಪ್ಟೆಂಬರ್ 22ರಂದು.ಈ ಮನವಿಗೆ ಪ್ರತಿಕ್ರಿಯಿಸಿ ಕೇಂದ್ರ ಸರ್ಕಾರದ ಹತ್ತು ಸದಸ್ಯರ ತಜ್ಞರ ತಂಡ 2023ರ ಅಕ್ಟೋಬರ್ ನಾಲ್ಕರಿಂದ ಒಂಬತ್ತರ ವರೆಗೆ ರಾಜ್ಯದ ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅಧ್ಯಯನ ನಡೆಸಿತ್ತು .ಅದರ ನಂತರ ರಾಜ್ಯದ ಬರಪರಿಸ್ಥಿತಿಯ ಮೇಲೆ ನಿರಂತರವಾಗಿ ನಿಗಾ ಇಡುತ್ತಾ ಬಂದಿರುವ ರಾಜ್ಯದ ಸಂಪುಟ ಉಪಸಮಿತಿ ಅಕ್ಟೋಬರ್ ತಿಂಗಳಲ್ಲಿ ನಾಲ್ಕು ಬಾರಿ ಮತ್ತು ಸೆಪ್ಟೆಂಬರ್ ನಲ್ಲಿಒಂದು ಬಾರಿ ಸಭೆ ನಡೆಸಿ ಅಂತಿಮವಾಗಿ ರಾಜ್ಯದ ಒಟ್ಟು 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರಪೀಡಿತವಾಗಿವೆ ಎಂದು ಘೋಷಿಸಿತು.

ಬರಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯ ನಡೆಸಲು ಎನ್ ಡಿಆರ್ ಎಫ್ ನಿಂದ ರೂ.18,171.44 ಕೋಟಿ ನೀಡಬೇಕೆಂಬ ಮನವಿಯನ್ನೊಳಗೊಂಡ ವಿವರವಾದ ಪತ್ರವನ್ನು ರಾಜ್ಯ ಸರ್ಕಾರ ಕೇಂದ್ರ ಕೃಷಿ ಸಚಿವರಿಗೆ 2023ರ ನವಂಬರ್ 15ರಂದು ನಾನೇ ಬರೆದಿದ್ದೆ.ನವಂಬರ್ 23ರಂದು ರಾಜ್ಯದ ಕಂದಾಯ ಸಚಿವರು ಮತ್ತು ಕೃಷಿ ಸಚಿವರು ಕೇಂದ್ರ ಹಣಕಾಸು ಸಚಿವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಬರಪರಿಹಾರ ಬಿಡುಗಡೆಮಾಡುವಂತೆ ಕೋರಿದ್ದರು.

ಅಮಿತ್ ಶಾ- ಸಿದ್ದರಾಮಯ್ಯ
12 ಲಕ್ಷ ಕೋಟಿ ರೂ. ಹಗರಣದ ಕಾಂಗ್ರೆಸ್, ಶೂನ್ಯ ಭ್ರಷ್ಟಾಚಾರ ಆರೋಪ ಹೊಂದಿರುವ ಮೋದಿ ಜೊತೆ ಪೈಪೋಟಿ ನಡೆಸುತ್ತಿದೆ: ಅಮಿತ್ ಶಾ ಟೀಕೆ

ಇದರ ನಂತರವೂ ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ವ್ಯಕವಾಗದೆ ಇದ್ದುದನ್ನು ಕಂಡು 2023ರ ಡಿಸೆಂಬರ್ 19ರಂದು ಮುಖ್ಯಮಂತ್ರಿಯಾದ ನಾನು ಕಂದಾಯ ಸಚಿವರ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹಸಚಿವರಾದ ನಿಮ್ಮನ್ನು ಭೇಟಿ ಮಾಡಿ ಬರಪರಿಹಾರಕ್ಕಾಗಿ ಮನವಿ ಮಾಡಿದ್ದೆವು. ಆ ಭೇಟಿಯ ಸಮಯದಲ್ಲಿ ತಾವು ಒಂದು ವಾರದೊಳಗೆ ತಮ್ಮ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿಯ ಸಭೆ ನಡೆಸಿ ಎನ್ ಡಿಆರ್ ಎಫ್ ನಿಂದ ಪರಿಹಾರ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ನೀವು ಆಶ್ವಾಸನೆ ನೀಡಿದ್ದೀರಿ' ಎಂದು ಹೇಳಿದರು.

ಅಮಿತ್ ಶಹಾ ಅವರೇ, ನೀವು ಕೊಟ್ಟ ಒಂದು ವಾರದ ಆಶ್ವಾಸನೆಯ ನಂತರ ಮೂರು ತಿಂಗಳುಗಳು ಉರುಳಿಹೋಗಿದೆ. ಈಗ ರಾಜ್ಯಕ್ಕೆ ಬಂದು ಕರ್ನಾಟಕಕ್ಕೆ ನೀವು ಮಾಡಿರುವ ಘನಘೋರ ಅನ್ಯಾಯವನ್ನು ಮುಚ್ಚಿಹಾಕಲು ಸುಳ್ಳಿನ ಮೊರೆ ಹೋಗಿದ್ದೀರಿ. ಜಾಗೃತ ಕನ್ನಡಿಗರು ನಿಮ್ಮ ಸುಳ್ಳಿಗೆ ಬಲಿಯಾಗುವುದಿಲ್ಲ, ಅವರಿಗೆ ಸತ್ಯ ಗೊತ್ತಿದೆ.ಈಗಲೂ ಕಾಲ ಮಿಂಚಿಲ್ಲ ಬರಪೀಡಿತರ ಬದುಕಿನ ಜೊತೆ ಕೊಳಕು ರಾಜಕೀಯ ಮಾಡಲು ಹೋಗದೆ ತಕ್ಷಣ ಬರಪರಿಹಾರವನ್ನು ಬಿಡುಗಡೆ ಮಾಡಿ. ಇದಕ್ಕೆ ತಪ್ಪಿದ್ದಲ್ಲಿ ರಾಜ್ಯದ ಆರುವರೆ ಕೋಟಿ ಕನ್ನಡಿಗರು ಇದೇ ಲೋಕಸಭಾ ಚುನಾವಣೆಯಲ್ಲಿ ನೀವು ಹೇಳಿರುವ ಸುಳ‍್ಳಿಗೆ ಮತ್ತು ರಾಜ್ಯದ ಜನತೆಗೆ ನಿಮ್ಮ ಸರ್ಕಾರ ಮಾಡಿರುವ ದ್ರೋಹಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಕೃಷ್ಣ ಬೈರೇಗೌಡ ಕಿಡಿ

ಈ ನಡುವೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಮಿತ್ ಶಾ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಕೇಂದ್ರದಿಂದ ಬರ ಪರಿಹಾರಕ್ಕಾಗಿ ರಾಜ್ಯ ಸರಕಾರ ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳಿಂದ ಈ ಕ್ಷಣದ ವರೆಗೆ ಸಾಂವಿಧಾನಿಕ ಮಾದರಿಯಲ್ಲಿಹೋರಾಟ ನಡೆಸುತ್ತಿದೆ. ಕೇಂದ್ರ ಸ್ಪಂದಿಸದ ಕಾರಣ ಬೇರೆ ದಾರಿ ಕಾಣದೆ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ. ಆದರೆ, ಅಮಿತ್‌ ಶಾ ಸತ್ಯವನ್ನು ಸಂಪೂರ್ಣ ಮರೆಮಾಚಿ ಸುಳ್ಳು ಹೇಳಿ ಜನರನ್ನು ನಂಬಿಸುವ ವ್ಯರ್ಥ ಪ್ರಯತ್ನ ನಡೆಸಿದ್ದಾರೆ ಎಂದು ಹರಿಹಾಯ್ದರು.

ಅಮಿತ್ ಶಾ- ಸಿದ್ದರಾಮಯ್ಯ
ಬಿಜೆಪಿ ಬಂಡಾಯ ನಾಯಕ ಕೆಎಸ್ ಈಶ್ವರಪ್ಪಗೆ ಹೈಕಮಾಂಡ್‌ ಬುಲಾವ್; ನಾಳೆ ಅಮಿತ್ ಶಾ ಭೇಟಿ

ತೆರಿಗೆ ಹಂಚಿಕೆ, ವಿಶೇಷ ಅನುದಾನ ಬಿಡುಗಡೆ ಸೇರಿದಂತೆ ಹಲವು ವಿಚಾರಗಳಲ್ಲಿಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ರೈತರಿಗೆ ಬರ ಪರಿಹಾರ ನೀಡುವ ವಿಚಾರವನ್ನೂ ರಾಜಕೀಯಗೊಳಿಸಿ ಕರ್ನಾಟಕವನ್ನು ಶೋಷಣೆಗೆ ಈಡುಮಾಡಲು ಕೇಂದ್ರ ಸರಕಾರ ಮುಂದಾಗುತ್ತದೆ ಎಂದು ನಾವು ಭಾವಿಸಿರಲಿಲ್ಲ. ಹಸಿ ಸುಳ್ಳು ಹೇಳುವ ಅಮಿತ್‌ ಶಾ ವರ್ತನೆ ನಿಜಕ್ಕೂ ವಿಷಾದನೀಯ ಎಂದು ಹೇಳಿದರು.

ರಾಜ್ಯದ ಮನವಿಯಂತೆ ಕೇಂದ್ರದ ಬರ ಅಧ್ಯಯನ ತಂಡ ಕಳೆದ ವರ್ಷ ಅಕ್ಟೋಬರ್‌ 6 ರಂದು ರಾಜ್ಯಕ್ಕೆ ಆಗಮಿಸಿತ್ತು. ಈ ತಂಡವು ಕೇಂದ್ರಕ್ಕೆ ಒಂದು ವಾರದಲ್ಲೇ ವರದಿಯನ್ನೂ ಸಲ್ಲಿಸಿತ್ತು. ಎನ್‌ಡಿಆರ್‌ಎಫ್‌ ನಿಯಮದ ಅನ್ವಯ ಕೇಂದ್ರ ಬರ ಅಧ್ಯಯನ ತಂಡ ವರದಿ ನೀಡಿದ ತಕ್ಷಣ ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯ ಸಮಿತಿ ಸಭೆ ಮಾಡಿ, ಪರಿಹಾರ ಬಿಡುಗಡೆ ಕುರಿತು ನಿರ್ಧರಿಸಬೇಕು. ಆದರೆ, ಈವರೆಗೆ ಸಭೆಯನ್ನೇ ನಡೆಸಿಲ್ಲ. ಕಳೆದ ವರ್ಷ ಡಿ.19 ರಂದು ಸ್ವತಃ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು.

ಈ ವೇಳೆ ಸಿಎಂ ಸಿದ್ದರಾಮಯ್ಯ ಜತೆಗೆ ನಾನೂ ಸಹ ಪ್ರಧಾನಿ ಭೇಟಿ ಮಾಡಿದ್ದೆ. ರಾಜ್ಯದ ಬರ ಪರಿಸ್ಥಿತಿಯ ಕುರಿತು ಪ್ರಧಾನಿಗೆ ವಿವರಿಸಿ, ಒಟ್ಟು 18,177.44 ಕೋಟಿ ಪರಿಹಾರ ಬಿಡುಗಡೆಗೆ ಮನವಿ ಮಾಡಲಾಗಿತ್ತು ಎಂದು ವಿವರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com