ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್

ಲೋಕಸಭಾ ಚುನಾವಣೆ ನಂತರ ದೇಶದಲ್ಲಿ ಬದಲಾವಣೆಯಾಗಲಿದೆ ಎಂಬುದು ನನ್ನ ದೃಢ ನಂಬಿಕೆ: ಡಿ.ಕೆ.ಶಿವಕುಮಾರ್ (ಸಂದರ್ಶನ)

ಕಳೆದ ವರ್ಷ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ಓಟವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಮುಂದುವರೆಸಲು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಶತಾಯಗತಾಯ ಯತ್ನಗಳನ್ನು ನಡೆಸುತ್ತಿದ್ದಾರೆ.

ಕಳೆದ ವರ್ಷ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ಓಟವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಮುಂದುವರೆಸಲು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಶತಾಯಗತಾಯ ಯತ್ನಗಳನ್ನು ನಡೆಸುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮೋದಿ ಅಥವಾ ರಾಮಮಂದಿರದ ಅಲೆಯಿಲ್ಲ. ಹೀಗಾಗಿ ದೇಶದಲ್ಲಿ ಬದಲಾವಣೆಗಳಾಗಬಹುದು ಎಂಬುದು ನನ್ನ ದೃಢ ನಂಬಿಕೆಯಾಗಿದೆ ಎಂದು ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಸಂಪಾದಕ ಸಾಂತ್ವಾನ ಭಟ್ಟಾಚಾರ್ಯ ಮತ್ತು ಸಹಾಯಕ ಸ್ಥಾನಿಕ ಸಂಪಾದಕ ರಾಮು ಪಾಟೀಲ್ ಅವರು ನಡೆಸಿದ ಸಂದರ್ಭದಲ್ಲಿ ಚುನಾವಣೆ ಬೆನ್ನಲ್ಲೇ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗಗಳು ಇಂತಿವೆ...

Q

ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಬಧಲ್ಲಿ ಕಾಂಗ್ರೆಸ್ 140 ಸ್ಥಾನ ಗೆಲ್ಲುತ್ತದೆ ಎಂದು ಹೇಳಿದ್ದಿರಿ. ಪಕ್ಷವು 136 ಸ್ಥಾನಗಳನ್ನು ಗೆದ್ದಿತ್ತು. ಈಗ, ರಾಜ್ಯ ಮತ್ತು ರಾಷ್ಟ್ರದ ರಾಜಕೀಯ ಬೆಳವಣಿಗೆ ಬಗ್ಗೆ ನಿಮ್ಮ ಮೌಲ್ಯಮಾಪನವೇನು? ಕರ್ನಾಟಕ ಮತ್ತು ದೇಶದಾದ್ಯಂತ ಕಾಂಗ್ರೆಸ್ ಎಷ್ಟು ಸ್ಥಾನಗಳನ್ನು ಗೆಲ್ಲುತ್ತದೆ?

A

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಮಟ್ಟಿಗೆ ನಾನು ಆರಂಭಿಕ ಹಂತದಲ್ಲಿ 141 ಎಂದು ಭವಿಷ್ಯ ನುಡಿದಿದ್ದೆ. ಇದು ನನ್ನ ರಾಜಕೀಯ ಲೆಕ್ಕಾಚಾರವಾಗಿತ್ತು. ಐದರಿಂದ ಆರು ಸ್ಥಾನಗಳಲ್ಲಿ ನಮಗೆ ಕೆಲವು ಆಂತರಿಕ ಸಮಸ್ಯೆಗಳಿದ್ದವು. ಹೀಗಾಗಿ ಆ ಸ್ಥಾನಗಳನ್ನು ಕಳೆದುಕೊಂಡಿದ್ದೇವೆ. ಈಗ ಲೋಕಸಭೆ ಚುನಾವಣೆಗೆ ಬರುತ್ತಿದ್ದು, 14 ಲೋಕಸಭಾ ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದಿದ್ದು, ಉಳಿದ 14 ಸ್ಥಾನಗಳಿಗೆ ‘ಬಿ’ ಫಾರಂ ನೀಡುತ್ತಿದ್ದೇವೆ. ಕರ್ನಾಟಕದಲ್ಲಿ ಹಲವು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಈ ಹಿಂದೆ 2019ರಲ್ಲಿ ನಮ್ಮ ಸರ್ಕಾರವಿದ್ದರೂ ಸಂಸತ್ತಿಗೆ ಉತ್ತಮ ಸಂಖ್ಯೆಯ ಸ್ಥಾನಗಳನ್ನು ನೀಡಲು ಸಾಧ್ಯವಾಗಲಿಲ್ಲ. ರಾಷ್ಟ್ರಮಟ್ಟದ ವಿಚಾರಕ್ಕೆ ಬಂದರೆ ಹಲವು ಕಡೆ ನಮ್ಮ ಸೀಟುಗಳು ಅಂತಿಮಗೊಂಡಿಲ್ಲ. ಆದರೆ, ಒಂದಂತೂ ಸತ್ಯ ಎನ್ ಡಿಎಗೆ 200 ಸೀಟು ಕೂಡ ಸಿಗುವುದಿಲ್ಲ. ರಾಜ್ಯದಲ್ಲಿ ಮೋದಿ, ರಾಮಮಂದಿರ ಅಲೆ ಇಲ್ಲ. ಮತ್ತೊಂದೆಡೆ, ಕಾಂಗ್ರೆಸ್ ತನ್ನ ಮೌಲ್ಯಗಳ ಪರ ನಿಂತಿದೆ. ಕೊಟ್ಟ ಭರವಸೆಯನ್ನು ಈಡೇರಿಸಿದ್ದೇವೆ. ಜನರು ನಮ್ಮನ್ನು ನಂಬುತ್ತಿದ್ದಾರೆ. ದೇಶದಲ್ಲಿ ಬದಲಾವಣೆ ಆಗುತ್ತದೆ ಎಂಬುದು ನನ್ನ ದೃಢ ನಂಬಿಕೆಯಾಗಿದೆ.

Q

ಕಾಂಗ್ರೆಸ್‌ ಪರ ಕೆಲಸ ಮಾಡುವ ಅಂಶಗಳು ಯಾವುವು? ಬಿಜೆಪಿಯಂತೆ, ಕಾಂಗ್ರೆಸ್ ಅಥವಾ I.N.D.I.A ಬಣವು ಪ್ರಧಾನಿ ಅಭ್ಯರ್ತಥಿಯನ್ನು ಘೋಷಿಸಿಲ್ಲ. ಇದು ಸರಿಯಾದ ವಿಧಾನವೇ?

A

ನಮ್ಮದು 23 ರಾಜಕೀಯ ಪಕ್ಷಗಳ ಬಣ, ಇನ್ನೂ ಇಂಡಿಯಾ ಮೈತ್ರಿಕೂಟ ಪ್ರಧಾನಿ ಅಭ್ಯರ್ಥಿ ಯಾರೆಂದು ನಿರ್ಧರಿಸಿಲ್ಲ. ನಾವು ಸಾಮೂಹಿಕ ನಾಯಕತ್ವವನ್ನು ನಂಬಿದ್ದೇವೆ. ಕರ್ನಾಟಕದಿಂದಲೇ ಇಂಡಿಯಾ ಮೈತ್ರಿಕೂಟ ಹುಟ್ಟಿದು. ನಮ್ಮ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೈತ್ರಿಕೂಟದ ಸಂಚಾಲಕರು. ಒಗ್ಗಟ್ಟಿನಲ್ಲಿ ಚುನಾವಣೆ ಎದುರಿಸಲಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಬಲಿಷ್ಠವಾಗಿದ್ದರೆ, ಎಲ್ಲಾ 28 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದ್ದರೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಅಗತ್ಯ ಏನಿತ್ತು? ಅವರು ದುರ್ಬಲರು. ಹೀಗಾಗಿಯೇ ಮೊದಲು ಅಧಿಕಾರದಿಂದ ಹೊರಹಾಕಿದ ಪಕ್ಷದೊಂದಿಗೆ ಕೈಜೋಡಿಸಿದ್ದಾರೆ. ಕಾಂಗ್ರೆಸ್ ಅನ್ನು ಸೋಲಿಸುವ ಉದ್ದೇಶದಿಂದ ಅವರು ಒಟ್ಟಾಗಿ ಸೇರಿದ್ದಾರೆ, ಇದೀಗ ಕರ್ನಾಟಕದ ಜನರು ನಿರ್ಧರ ಕೈಗೊಳ್ಳುತ್ತಾರೆ.

Q

ಗ್ಯಾರಂಟಿ ಯೋಜನೆ ಜಾರಿಯಾದ ವಿಧಾನ ಕಾಂಗ್ರೆಸ್‌ಗೆ ಗೇಮ್ ಚೇಂಜರ್ ಆಗಲಿದೆ ಎಂದು ನೀವು ಭಾವಿಸುತ್ತೀರಾ? ಯೋಜನೆಗಳು ಈಗಾಗಲೇ ಕರ್ನಾಟಕ, ತೆಲಂಗಾಣದಲ್ಲಿ ಕೆಲಸ ಮಾಡಿದೆ. ಇದೀಗ ರಾಷ್ಟ್ರ ಮಟ್ಟದಲ್ಲೂ ಭರವಸೆಗಳನ್ನು ನೀಡಲಾಗಿದೆ...?

A

ರಾಷ್ಟ್ರ ಮಟ್ಟದಲ್ಲೂ ಗ್ಯಾರಂಟಿ ಯೋಜನೆಗಳನ್ನು ರೂಪಿಸಿದ್ದೇವೆ. ಆದರೆ, ಇದು ಪಕ್ಷದ ಲಾಭಕ್ಕಾಗಿಯಂತೂ ಅಲ್ಲ. ದೇಶದ ಜನರ ಕಲ್ಯಾಣಕ್ಕಾಗಿ. ಮಹಿಳೆಯೊಬ್ಬರು ಗ್ಯಾಸ್ ಸಿಲಿಂಡರ್‌ಗೆ 400 ರಿಂದ 1000 ರೂ.ವರೆಗೆ ಪಾವತಿಸಬೇಕಾಗಿದೆ. ಅಡುಗೆ ಎಣ್ಣೆಯ ಬೆಲೆ ಲೀಟರ್‌ಗೆ 90 ರಿಂದ 220 ರೂ.ಗೆ ಏರಿಕೆಯಾಗಿದೆ. ಇತರ ಅನೇಕ ವಸ್ತುಗಳ ಬೆಲೆಗಳೂ ಏರಿಕೆಯಾಗಿವೆ. ಕೋವಿಡ್ ಸಮಯದಲ್ಲಿಯೂ, ಕೇಂದ್ರ ಸರ್ಕಾರವು ದೊಡ್ಡ ಕಂಪನಿಗಳಿಗೆ ಸಹಾಯ ಮಾಡಲು ಪ್ರಯತ್ನಿಸಿದೆಯೇ ಹೊರತು ಬಡವರ ಪರವಾಗಿ ಅಲ್ಲ. ನಾವು ಜನರಿಗೆ ಆರ್ಥಿಕವಾಗಿ ಸಹಾಯ ಮಾಡಲು ನಿರ್ಧರಿಸಿದ್ದೇವೆ. ಬಿಜೆಪಿ ಭಾವನೆಗಳನ್ನು ನೋಡುತ್ತದೆ, ನಾವು ಪ್ರತಿಯೊಬ್ಬ ವ್ಯಕ್ತಿಯ ಅಭಿವೃದ್ಧಿಯನ್ನು ನೋಡುತ್ತೇವೆ. ಹೀಗಾಗಿ ಉಚಿತ ವಿದ್ಯುತ್ ನೀಡಿದ್ದೇವೆ, ಮಹಿಳೆಯರು ಈಗ ಉಚಿತ ಬಸ್ ಪ್ರಯಾಣ ಮಾಡಬಹುದು. ಮಹಿಳೆಯರಿಗೆ 2,000 ರೂ ನೀಡಲಾಗುತ್ತಿದ್ದು, ಇದು ಶ್ರೀಸಾಮಾನ್ಯನ ಅಭಿವೃದ್ಧಿಯಾಗಿದೆ. ಯೋಜನೆಯು ಜನರ ಸಾಮಾಜಿಕ-ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ತೆಲಂಗಾಣ ಮತ್ತು ಹಿಮಾಚಲ ಪ್ರದೇಶಕ್ಕೆ ಹೋಗಿ, ಅಲ್ಲಿಯೂ ಭರವಸೆಗಳನ್ನು ನೀಡಿದೆವು. ನಮ್ಮ ಈ ಯೋಜನೆ ಕೇವಲ ವೋಟಿಗಾಗಿ ಮಾತ್ರವಾಗಿಲ್ಲ ಜನಸಾಮಾನ್ಯರಿಗೆ ಶಕ್ತಿ ತುಂಬುವ ಸಲುವಾಗಿದೆ.

Q

ಇದಕ್ಕೆ ಉತ್ತರವಾಗಿ ಮೋದಿ ಗ್ಯಾರಂಟಿಗಳೂ ಇವೆ...?

A

ಮೋದಿ ಭಾವನೆಗಳ ಮೇಲೆ ಕೆಲಸ ಮಾಡುತ್ತಾರೆ. ಆರ್ಟಿಕಲ್ 370, ರಾಮಮಂದಿರ, ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಮತ್ತು ಇತರ ವಿಷಯಗಳ ಬಗ್ಗೆ ಕೆಲಸ ಮಾಡುತ್ತಾರೆ. ನಾವು ಹಸಿದ ವ್ಯಕ್ತಿಯನ್ನು ನೋಡುತ್ತೇವೆ. ಒಬ್ಬ ವ್ಯಕ್ತಿಯ ಹೊಟ್ಟೆ ತುಂಬಿದ್ದರೆ, ಅವನು ಸಂತೋಷವಾಗಿರುತ್ತಾನೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಾವು ಆಹಾರದ ಹಕ್ಕು, ಉದ್ಯೋಗದ ಹಕ್ಕು ಸೇರಿದಂತೆ ಹಲವು ಕಾನೂನುಗಳನ್ನು ಜಾರಿಗೆ ತಂದಿದ್ದೇವೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಈ ಎನ್‌ಡಿಎ ಸರ್ಕಾರವು ಸಾಮಾನ್ಯ ಜನರಿಗೆ ಸಹಾಯ ಮಾಡಲು ಅಂತಹ ಯಾವುದೇ ಕಾನೂನನ್ನು ತಂದಿಲ್ಲ. ಇದೇ ನಮ್ಮ ಪಕ್ಷಕ್ಕೂ ಅವರ ಪಕ್ಷಕ್ಕೂ ಇರುವ ವ್ಯತ್ಯಾಸ.

Q

ಖರ್ಗೆ ಅವರನ್ನು ಪ್ರಧಾನಿಯ ಮುಖವನ್ನಾಗಿ ಬಿಂಬಿಸುವುದು ಕಾಂಗ್ರೆಸ್‌ಗೆ, ವಿಶೇಷವಾಗಿ ಕರ್ನಾಟಕದಲ್ಲಿ ಸಹಾಯ ಮಾಡುತ್ತದೆ ಎಂದು ನೀವು ಭಾವಿಸುತ್ತೀರಾ?

A

ಖರ್ಗೆ ಅವರು ಇಂಡಿಯಾ ಮೈತ್ರಿಕೂಟದ ಸಂಚಾಲಕರು, ಪ್ರತಿ ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ನಮ್ಮ ಪ್ರಮುಖ ಗುರಿಯಾಗಿದೆ. ನಂತರ ಪಕ್ಷಗಳು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಸೋನಿಯಾ ಗಾಂಧಿ ಯುಪಿಎ ನೇತೃತ್ವ ವಹಿಸಿದ್ದ ಸಮಯವೊಂದಿತ್ತು, ಸಂಸದರು ಅವರು ಪ್ರಧಾನಿಯಾಗಬೇಕೆಂದು ಬಯಸಿದ್ದರು. ಆದರೆ ಅವರು ಸ್ಥಾನವನ್ನು ತ್ಯಾಗ ಮಾಡಿ ಡಾ. ಮನಮೋಹನ್ ಸಿಂಗ್ ಅವರಿಗೆ ಅವಕಾಶ ಕೊಟ್ಟಿದ್ದರು. ಇದು ಕಾಂಗ್ರೆಸ್‌ನ ಆಂತರಿಕ ಶಕ್ತಿಯಾಗಿದೆ. ಮೊದಲು ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿ, ನಂತರ ಪ್ರಧಾನಿ ಬಗ್ಗೆ ನಿರ್ಧರಿಸುತ್ತೇವೆ.

Q

ಗ್ಯಾರಂಟಿ ಯೋಜನೆಗಳಿಗೆ ಭಾರೀ ಪ್ರಮಾಣದ ಅನುದಾನ ಹಂಚಿಕೆಯಿಂದಾಗಿ ಕರ್ನಾಟಕದಲ್ಲಿ ಅಭಿವೃದ್ಧಿ ಹಿನ್ನಡೆಯಾಗಿದೆ ಎಂಬ ಅಭಿಪ್ರಾಯವಿದೆ. ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೀರಿ?

A

ನಾನು ಬಲಿಷ್ಠನಾಗಿದ್ದರೆ ನನ್ನ ದೇಶ ಬಲಿಷ್ಠವಾಗುತ್ತದೆ. ನಾನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಆರೋಗ್ಯವಾಗಿರಬೇಕು. ಗ್ಯಾರಂಟಿ ಯೋಜನೆಗಳ ಹಂಚಿಕೆ ಕೇವಲ 52,000 ಕೋಟಿ ರೂಪಾಯಿಯಾಗಿದೆ. ಕರ್ನಾಟಕದಂತಹ ರಾಜ್ಯಕ್ಕೆ ಇದು ದೊಡ್ಡ ಮೊತ್ತವಲ್ಲ. ನಾವು ಸಾಮಾನ್ಯ ಜನರ ಪರವಾಗಿ ಇದ್ದೇವ. ಪ್ರಧಾನಿಗೆ ಸರಕುಗಳ ಬೆಲೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಪ್ರಧಾನಿ ಹೇಳಿದ್ದು, ಅದನ್ನು ಮಾಡಲಾಗಲಿಲ್ಲ. ನಮಗೆ ಅಭಿವೃದ್ಧಿ ಬೇಕು. ಹೀಗಾಗಿ ರಾಜ್ಯದ ಅಭಿವೃದ್ಧಿಗೆ 1.27 ಲಕ್ಷ ಕೋಟಿ ರೂಗಳನ್ನು ಮೀಸಲಿಟ್ಟೆವು. ನಾವು ಸಮಸ್ಯೆಗಳನ್ನು ಸಾಮಾನ್ಯ ಮನುಷ್ಯನ ದೃಷ್ಟಿಕೋನದಿಂದ ನೋಡುತ್ತೇವೆ. ಭಾರತ್ ಜೋಡೋ ಯಾತ್ರೆಯಲ್ಲಿ ವೃದ್ಧೆಯೊಬ್ಬರು ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿ, ಇಂದಿರಾಗಾಂಧಿಯವರು ಕೊಟ್ಟ ಜಮೀನಿನಲ್ಲಿ ಅದನ್ನು ಬೆಳೆದಿದ್ದೇನೆ ಎಂದು ಹೇಳಿದ್ದರು. ಇದು ಹಲವು ವರ್ಷಗಳ ಹಿಂದೆ ಭೂರಹಿತರಾಗಿದ್ದ ಜನರು ಸಲ್ಲಿಸಿದ ಕೃತಜ್ಞತೆಯಾಗಿದೆ.

Q

ಒಂದೆಡೆ, ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬರಲಿಲ್ಲ ಎಂದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದೀರಿ. ಇದೇ ಸಮಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಭಾರೀ ಪ್ರಮಾಣದ ಹಣ ಮಂಜೂರು ಮಾಡುತ್ತಿದ್ದೀರಿ...?

A

ಪ್ರತೀಯೊಂದು ದಾಖಲೆಯೂ ಆನ್‌ಲೈನ್‌ನಲ್ಲಿ ಲಭ್ಯವಿದೆ. ಮಹಾರಾಷ್ಟ್ರ ಅಥವಾ ಆಂಧ್ರಪ್ರದೇಶಕ್ಕೆ ಹಣ ಮಂಜೂರು ಮಾಡುವ ವಿಧಾನ ಒಂದೇ ಇಲ್ಲ. ತೆರಿಗೆ ಪಾವತಿಯಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿರುವ ರಾಜ್ಯವಾಗಿದೆ. ಈ ಬಾರಿ ಕರ್ನಾಟಕದ 224 ತಾಲೂಕುಗಳಲ್ಲಿ ಬರಗಾಲ ಎದುರಾಗಿದೆ. ಬರ ಪರಿಹಾರ ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯ. ಸಿಎಂ (ಸಿದ್ದರಾಮಯ್ಯ) ಮತ್ತು ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ. ಆದರೆ, ಒಂದು ರೂಪಾಯಿ ಕೊಟ್ಟಿಲ್ಲ. ಈ ಹಿಂದೆ ಇಂತಹ ಬರ ಘೋಷಣೆಯಾದಾಗ ರಾಜ್ಯಗಳಿಗೆ ಸಾವಿರಾರು ಕೋಟಿ ರೂ ನೀಡಲಾಗಿದೆ. ಒಂದು ರಾಜ್ಯವು ತೀವ್ರ ಬರಗಾಲದಲ್ಲಿ ಅಥವಾ ಕೋವಿಡ್‌ನಂತಹ ವಿಪರೀತ ಸಂದರ್ಭಗಳಲ್ಲಿ ತತ್ತರಿಸಿದಾಗ, MGNREGA (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ) ಅಡಿಯಲ್ಲಿ ಕಡ್ಡಾಯವಾಗಿ 100-ದಿನಗಳ ಕೆಲಸವನ್ನು 150 ದಿನಗಳವರೆಗೆ ವಿಸ್ತರಿಸಲಾಗುತ್ತದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಿದ್ದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಹೇಗೆ ಸಹಾಯ ಮಾಡಿದ್ದಾರೋ ಹಾಗೆಯೇ ನಮಗೂ ಸಹಾಯ ಮಾಡುತ್ತಿದ್ದರು. ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ (ಕರ್ನಾಟಕದಲ್ಲಿ) ಯಾವುದೇ ಸಹಾಯ ಮಾಡಲು ಅವರು ಬಯಸುತ್ತಿಲ್ಲ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ಮೀಸಲಿಟ್ಟರೂ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ನಮ್ಮನ್ನು ರಾಜಕೀಯ ಶತ್ರುಗಳಂತೆ ನೋಡಲಾಗುತ್ತಿದೆ.

Q

ಈ ಚುನಾವಣೆಯಲ್ಲಿ ನೀವು ಮತದಾರರ ಬಳಿಗೆ ಹೋದಾಗ ಕಾಂಗ್ರೆಸ್ ಮತ್ತು I.N.D.I.A ಬ್ಲಾಕ್ನ ನಿರೂಪಣೆ ಏನಿರುತ್ತದೆ? ಗ್ಯಾರಂಟಿ ಯೋಜನೆಗಳ ಭರವಸೆ ಅಥವಾ ಸಂವಿಧಾನವನ್ನು ಉಳಿಸುವುದಾಗಿರುತ್ತದೆ?

A

ಕೇಂದ್ರ ನಮ್ಮ ಹಣ ಪಡೆದು ಹಿಂಸೆ ನೀಡುತ್ತಿದೆ. ನಾವು ನಮ್ಮ ತೆರಿಗೆಗಾಗಿ ಹೋರಾಡಲು ಬಯಸುತ್ತೇವೆ. ಮಹದಾಯಿ ಮತ್ತು ಮೇಕೆದಾಟು ಅಥವಾ ರಾಜ್ಯವನ್ನು ಕಾಡುತ್ತಿರುವ ಯಾವುದೇ ವಿಷಯಗಳ ಬಗ್ಗೆ ಬಿಜೆಪಿ ಸಂಸದರು (ಕರ್ನಾಟಕದ) ಧ್ವನಿ ಎತ್ತಲಿಲ್ಲ. ಕೇಂದ್ರದಲ್ಲಿ ಕರ್ನಾಟಕದ ಬಿಜೆಪಿಯಿಂದ 27 ಮತ್ತು ಕಾಂಗ್ರೆಸ್‌ನಿಂದ ಒಬ್ಬರು ಸಂಸದರಿದ್ದಾರೆ. ಕರ್ನಾಟಕ ಬರ ಪರಿಸ್ಥಿತಿ ಎದುರಿಸುತ್ತಿದ್ದು, ಮಹದಾಯಿ ಮತ್ತು ಮೇಕೆದಾಟು ಯೋಜನೆಗಳಿಗೆ ಅಗತ್ಯ ಅನುಮತಿ ನೀಡಿದ್ದರೆ ಈ ಪರಿಸ್ಥಿತಿಯನ್ನು ತಡೆಯಬಹುದಿತ್ತು. ಅವರು ನಿಜವಾಗಿಯೂ ಸಮಸ್ಯೆಗಳನ್ನು ಪರಿಹರಿಸಲು ಬಯಸಿದ್ದೇ ಆಗಿದ್ದರೆ, ಮಾಡಬಹುದಿತ್ತು, ಆದರೆ ಬಿಜೆಪಿಯ ಕಣ್ಣು, ಕಿವಿ ಮತ್ತು ಹೃದಯ ಮುಚ್ಚಿ ಹೋಗಿದೆ. ನಮ್ಮ ಮುಖ್ಯ ನಿರೂಪಣೆ "ನಮ್ಮ ತೆರಿಗೆ, ನಮ್ಮ ಹಕ್ಕು" ಆಗಿರುತ್ತದೆ.

Q

ಕಾಂಗ್ರೆಸ್'ನ ಹಲವು ಪ್ರಮುಖ ನಾಯಕರು ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್ ತನ್ನ ನಾಯಕರನ್ನು ಉಳಿಸಿಕೊಳ್ಳಲು ಏಕೆ ಸಾಧ್ಯವಾಗುತ್ತಿಲ್ಲ?

A

ಕೇಂದ್ರೀಯ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜಪಿ ಒಂದು ರೀತಿ ವಾಷಿಂಗ ಮಷಿನ್ ಇದ್ದಂತೆ. ಬೇರೆ ಪಕ್ಷದಿಂದ ಆ ಪಕ್ಷಕ್ಕೆ ಜಿಗಿದವರೆಲ್ಲಾ ದೋಷಗಳಿಂದ ಮುಕ್ತರಾಗುತ್ತಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ಅನೇಕ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಬಿಜೆಪಿ ಸೇರ್ಪಡೆಗೊಂಡ ಬಳಿಕ ಕೇಂದ್ರ ಸಚಿವ ಸಂಪುಟ ಅವರ ಮೇಲಿನ ಎಲ್ಲಾ ಪ್ರಕರಣಗಳನ್ನು ಮುಕ್ತಾಯಗೊಳಿಸಿತು. ಬಿಜೆಪಿ ಕೇಂದ್ರೀಯ ಸಂಸ್ಥೆಗಳೊಂದಿಗೆ ಪ್ರತಿ ನಾಯಕನಿಗೆ ಬೆದರಿಕೆ ಹಾಕುತ್ತಿದೆ. ಈ ಪ್ರಯತ್ನದಲ್ಲಿ ಅವರು ಯಶಸ್ವಿಯಾಗುತ್ತಿದ್ದಾರೆ. ದೇಶದಲ್ಲಿ ಚುನಾವಣೆ ಎದುರಾಗುತ್ತಿದ್ದಂತೆಯೇ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಕಂಬಿ ಹಿಂದೆ ಹಾಕಲಾಗಿದೆ. ಪ್ರತಿದಿನ, ನನ್ನ ಕುಟುಂಬ, ಸಂಬಂಧಿಕರು ಮತ್ತು ಸ್ನೇಹಿತರಿಗೆ ಕೇಂದ್ರೀಯ ಸಂಸ್ಥೆಗಳಿದ ಸುಮಾರು 20 ನೋಟಿಸ್‌ಗಳು ಬರುತ್ತಿವೆ. ನನ್ನನ್ನು ರಾಜಕೀಯವಾಗಿ ಹತ್ಯೆ ಮಾಡಲು ದಿನನಿತ್ಯ ಕಿರುಕುಳ ನೀಡಲಾಗುತ್ತಿದೆ.

Q

ಸವಾಲುಗಳ ನಡುವಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೀರಿ. ಬೇರೆ ರಾಜ್ಯಗಳ ಮತ್ತು ರಾಷ್ಟ್ರ ಮಟ್ಟದಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸಲು ಯಾವ ತಂತ್ರ ಹೂಡುತ್ತೀರಿ?

A

ರಾಷ್ಟ್ರಮಟ್ಟದಲ್ಲಿ ನೋಡಿಲ್ಲ. ಅದಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ನಾಯಕರಿದ್ದಾರೆ. ರಾಜ್ಯ ಮಟ್ಟದಲ್ಲಿ ಮಾತ್ರ ಪಕ್ಷವನ್ನು ಪುನಶ್ಚೇತನಗೊಳಿಸಲು ತಂತ್ರ ರೂಪಿಸಲಾಗುತ್ತಿದೆ. ರಾಜ್ಯದಲ್ಲಿ ಎರಡು ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದು, ಲೋಕಸಭೆ ಚುನಾವಣೆಯ ನಂತರ, ಸ್ಪಷ್ಟ ಮಾರ್ಗಗಳು ತಿಳಿದು ಬರಲಿದೆ.

Q

ಲೋಕಸಭೆ ಚುನಾವಣೆ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ? ಇದರ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

A

ಈ ಎರಡೂ ಪಕ್ಷಗಳು ಹಗಲುಗನಸು ಕಾಣುತ್ತಿವೆ. ನಮ್ಮ ಸರ್ಕಾರ ಸುರಕ್ಷಿತವಾಗಿದೆ. ಜೆಡಿಎಸ್ ಮತ್ತು ಬಿಜೆಪಿ ಕೈ ಜೋಡಿಸಿದ್ದು ಏಕೆ? ಹಲವು ಜೆಡಿಎಸ್ ನಾಯಕರು ಬಿಜೆಪಿಗೆ ಹಾರಲು ಸಿದ್ಧರಾಗಿದ್ದರು. ಹೀಗಾಗಿ ಎರಡೂ ಪಕ್ಷಗಳು ಕೈಜೋಡಿಸಿದವು.

Q

ಚುನಾವಣಾ ಬಾಂಡ್‌ಗಳ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನು?

A

ದೇಶದ ಸರ್ವೋಚ್ಚ ನ್ಯಾಯಾಲಯವು ಬಾಂಡ್‌ಗಳ ವಿರುದ್ಧ ತೀರ್ಪು ನೀಡಿದೆ. ಇದು ಅವರನ್ನು ಅಕ್ರಮ ಎಂದು ಸ್ಪಷ್ಟವಾಗಿ ಹೇಳಿದೆ. ಇಡಿ ಮತ್ತು ಸಿಬಿಐನಂತಹ ಕೇಂದ್ರೀಯ ಸಂಸ್ಥೆಗಳಿಂದ ನೋಟಿಸ್‌ಗೆ ಪಡೆದಿರುವ ಅನೇಕ ಕಂಪನಿಗಳು ಬಾಂಡ್‌ಗಳನ್ನು ಖರೀದಿಸಿವೆ. ಇದು ಅತಿದೊಡ್ಡ ಭ್ರಷ್ಟಾಚಾರ ಪ್ರಕರಣಗಳಲ್ಲಿ ಒಂದಾಗಿದೆ. ಈಗ ರಾಜಕೀಯ ಪಕ್ಷಕ್ಕೆ ಬಂದ ಹಣಕ್ಕೆ ತೆರಿಗೆ ಅನ್ವಯವಾಗುತ್ತದೋ ಇಲ್ಲವೋ ಎಂಬ ಪ್ರಶ್ನೆ ಎದುರಾಗಿದೆ. ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು ಇದಕ್ಕೆ ಉತ್ತರಿಸಬೇಕಾಗಿದೆ.

Q

ಚುನಾವಣಾ ಬಾಂಡ್‌ಗಳ ಮೂಲಕ ಹಣ ನೀಡುವವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂಬ ಸಂಸದೀಯ ಸಾರ್ವಭೌಮ ಭರವಸೆ ಇತ್ತು. ಈಗ ಅದೆಲ್ಲವೂ ಬಹಿರಂಗವಾಗಿದೆ. ಬಹುಕಾಲದಿಂದ ರಾಜಕೀಯ ಜೀವನದಲ್ಲಿದ್ದ ವ್ಯಕ್ತಿಯಾಗಿ, ಭವಿಷ್ಯದಲ್ಲಿ ಇದು ರಾಜಕೀಯ ಭವಿಷ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ನೀವು ಭಾವಿಸುತ್ತೀರಿ?

A

ಇದು ಯಾವುದೇ ರಾಜಕೀಯ ಪಕ್ಷಕ್ಕೆ ತುಂಬಾ ಕಷ್ಟ. ಇದರಿಂದ ಯಾವುದೇ ಉದ್ಯಮಿ ಯಾವುದೇ ಪಕ್ಷಕ್ಕೆ ಸಹಾಯ ಮಾಡಲು ಮುಂದೆ ಬರುವುದಿಲ್ಲ, ರಾಜಕೀಯ ಪಕ್ಷಗಳಿಗೆ ಚೆಕ್ ನೀಡಲು ನಾವು ನಿಬಂಧನೆಗಳನ್ನು ಹೊಂದಿದ್ದರೂ, ಅಧಿಕಾರದಲ್ಲಿರುವ ಇಂತಹ ರೀತಿಯ ಸರ್ಕಾರಗಳಿಗೆ ಹೆದರುತ್ತಾರೆ. ಈ ಬೆಳವಣಿಗೆ ಖಂಡಿತವಾಗಿಯೂ ಹೆಚ್ಚಿನ ಪರಿಣಾಮ ಬೀರಲಿದೆ. ಆದರೆ, ನ್ಯಾಯಾಲಯ ಈಗಾಗಲೇ ತೀರ್ಪು ನೀಡಿದೆ, ಆ ವಿಷಯದ ಬಗ್ಗೆ ಹೆಚ್ಚು ಚರ್ಚೆ ಬೇಡ.

Q

ನಿಮ್ಮ ಮೈತ್ರಿ ಒಕ್ಕೂಟದ ಪಾಲುದಾರ ಡಿಎಂಕೆ ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿದೆ. ಆದರೆ, ನೀವು ಯೋಜನೆ ಜಾರಿ ಖಚಿತ ಎಂದು ಹೇಳುತ್ತಿದ್ದೀರಿ. ಲೋಕಸಭಾ ಚುನಾವಣೆಯ ನಂತರ ಅವರಿಗೆ ಮನವರಿಕೆ ಮಾಡಿಕೊಡುತ್ತೀರಾ?

A

ಡಿಎಂಕೆ ಅಥವಾ ಎಐಎಡಿಎಂಕೆ ಆಗಿರಲಿ ಅವರವರ ರಾಜ್ಯದ ಹಿತಾಸಕ್ತಿಗಳ ವಿಷಯದಲ್ಲಿ ತಮಿಳುನಾಡಿನಲ್ಲಿ ಎಲ್ಲರೂ ಒಂದೇ. ನನ್ನ ಪ್ರಕಾರ, ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಅವರ ಹಿತಾಸಕ್ತಿಯನ್ನೂ ರಕ್ಷಿಸಲಾಗುತ್ತದೆ. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಮಿಳುನಾಡಿಗೆ 177 ಟಿಎಂಸಿ ಅಡಿ ನೀರು ಬಿಡುವಂತೆ ಆದೇಶಿಸಿದೆ. ಅದನ್ನು ಪಾಲಿಸಿದರೆ ಕರ್ನಾಟಕ ಜಲಾಶಯ ನಿರ್ಮಿಸಬಹುದು. ಆದರೆ, ಅವರು ತಮ್ಮ ಪ್ರದೇಶದಲ್ಲಿ ಜಲಾಶಯವನ್ನು ನಿರ್ಮಿಸಲು ಬಯಸುತ್ತಿದ್ದಾರೆ ... ನಾವು ನಮ್ಮಲ್ಲಿ ನಿರ್ಮಿಸಲು ಬಯಸುತ್ತಿದ್ದೇವೆ. ಈ ನಿಟ್ಟಿನಲ್ಲಿ ನ್ಯಾಯಾಲಯ ನಮಗೆ ಸಹಾಯ ಮಾಡುತ್ತದೆ ಎಂಬ ವಿಶ್ವಾಸವಿದೆ. ಯೋಜನಾ ಪ್ರದೇಶವು ನನ್ನ ಕನಕಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ನಾವು ಯೋಜನೆಯನ್ನು ಅನುಷ್ಠಾನಗೊಳಿಸುತ್ತೇವೆ ಮತ್ತು ಬೆಂಗಳೂರು ಮತ್ತು ರಾಜ್ಯದ ದಕ್ಷಿಣ ಭಾಗಗಳಿಗೆ ನೀರು ಹಂಚಿಕೆ ಮಾಡುತ್ತೇವೆ.

Q

ಪ್ರತಿಪಕ್ಷಗಳು ಇವಿಎಂಗಳ ವಿಷಯವನ್ನು ಎತ್ತುತ್ತಿವೆ. ರಾಹುಲ್ ಗಾಂಧಿ ಹೇಳಿಕೆ ನೀಡಿದ್ದು, ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. EVM (ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್) ಡೇಟಾದೊಂದಿಗೆ VVPAT (ಮತದಾರ ದೃಢೀಕರಿಸಿದ ಪೇಪರ್ ಆಡಿಟ್ ಟ್ರಯಲ್) ಶೇ.100 ಹೊಂದಾಣಿಕೆಯನ್ನು ಸ್ವೀಕರಿಸಿದ ಮನವಿಯನ್ನು ಸುಪ್ರೀಂಕೋರ್ಟ್ ಅಂಗೀಕರಿಸಿದೆ. ಅದು ದೊಡ್ಡ ವ್ಯತ್ಯಾಸವನ್ನುಂಟುಮಾಡುತ್ತದೆ ಎಂದು ನೀವು ಭಾವಿಸುತ್ತೀರಾ?

A

ರಾಜಕೀಯ ಪಕ್ಷಗಳು ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಮಧ್ಯಪ್ರದೇಶದಲ್ಲಿ ಮತ ಎಣಿಕೆ ನಡೆದಾಗ 75 ಪ್ರತಿಶತ ಮತಗಳು ಕಾಂಗ್ರೆಸ್‌ಗೆ ಬಂದವು ಮತ್ತು ಇವಿಎಂಗಳಲ್ಲಿ ಪ್ರಕರಣವು ವ್ಯತಿರಿಕ್ತವಾಗಿದೆ. ಇದರಿಂದ ಸ್ವತಃ ಬಿಜೆಪಿ ಕೂಡ ಆಘಾತಕ್ಕೊಳಗಾಯಿತು. ಪ್ರತಿ ಮತವನ್ನು ನಮ್ಮ ಪೋಲಿಂಗ್ ಏಜೆಂಟ್‌ಗಳು ಪರಿಶೀಲಿಸಬೇಕು. ನನಗೆ ತಂತ್ರಜ್ಞಾನ ಅರ್ಥವಾಗುತ್ತಿಲ್ಲ, ಆದರೆ, ನಮ್ಮ ಇತರ ನಾಯಕರು ಈ ಸಮಸ್ಯೆ ಬಗ್ಗೆ ಚರ್ಚಿಸುತ್ತಿದ್ದಾರೆ. ಈ ಬಾರಿ ನ್ಯಾಯಸಮ್ಮತ, ಮುಕ್ತ ಮತ್ತು ಪಾರದರ್ಶಕ ಮತದಾನ ನಡೆಯಬೇಕು.

Q

ನಗರದ ವರ್ಚಸ್ಸು ಹೆಚ್ಚಿಸಲು ಬ್ರಾಂಡ್ ಬೆಂಗಳೂರು ಉಪಕ್ರಮವನ್ನು ತೆಗೆದುಕೊಂಡಿದ್ದೀರಿ, ಆದರೆ ಬೆಂಗಳೂರು ಸಂಚಾರ ದಟ್ಟಣೆ, ತ್ಯಾಜ್ಯ ನಿರ್ವಹಣೆ ಮತ್ತು ಇತರ ವಿಷಯಗಳಂತಹ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಲೇ ಇದೆ. ಬೆಂಗಳೂರು ಅಭಿವೃದ್ಧಿ ಸಚಿವರಾಗಿ, ಮುಂದಿನ ಹತ್ತು ವರ್ಷಗಳಲ್ಲಿ ಈ ನಗರವನ್ನು ಯಾವ ರೀತಿ ನೋಡುತ್ತೀರಿ?

A

ನಾನು ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ ಖಾತೆಗಳ ಜವಾಬ್ದಾರಿಯನ್ನು ಹೊಂದಿದ್ದೇನೆ. ೃ ನಾನು ಇಲ್ಲಿ ಹುಟ್ಟಿಲ್ಲವಾದರೂ, ಇಲ್ಲಿಯೇ ಬೆಳೆದು ಐವತ್ತು ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದೇನೆ. ಬೆಂಗಳೂರು, ನವದೆಹಲಿ, ಚಂಡೀಗಢ ಮತ್ತು ಮೈಸೂರಿನಂತೆ ಯೋಜಿತ ನಗರವಲ್ಲದ ಕಾರಣ, ಪರಿಹಾರದ ಬೆಲೆ ದೊಡ್ಡದಾಗಿರುವ ಕಾರಣ ಇಲ್ಲಿನ ರಸ್ತೆಗಳನ್ನು ವಿಸ್ತರಿಸಲು ಸಾಧ್ಯವಾಗುತ್ತಿಲ್ಲ. ಇಪ್ಪತ್ತು ವರ್ಷಗಳ ಹಿಂದೆ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ನಗರದ ಜನಸಂಖ್ಯೆ 55-60 ಲಕ್ಷ ಇತ್ತು. ಈಗ 1.4 ಕೋಟಿ ಆಗಿದೆ. ಕೆಲವು ಕುಟುಂಬಗಳು 4-5 ಕಾರುಗಳನ್ನು ಹೊಂದಿದ್ದು, ಇತರ ಕೆಲವು ದೇಶಗಳಲ್ಲಿರುವಂತೆ ನಾವು ಅವುಗಳ ಮೇಲೆ ಹೆಚ್ಚುವರಿ ತೆರಿಗೆಯನ್ನು ವಿಧಿಸಲು ಸಾಧ್ಯವಿಲ್ಲ. ಹೀಗಾಗಿ ನಾವು ಮೆಟ್ರೋ ರೈಲುಗಳು, ರಿಂಗ್ ರಸ್ತೆಗಳು ಇತ್ಯಾದಿಗಳಂತಹ ಪರ್ಯಾಯಗಳನ್ನು ನೋಡುತ್ತಿದ್ದೇವೆ. NICE ರಸ್ತೆ ಇಲ್ಲದಿದ್ದರೆ ಸಮಸ್ಯೆ ಮತ್ತಷ್ಟು ದೊಡ್ಡದಾಗುತ್ತಿತ್ತು.

ಇದರ ಜೊತೆಗೆ 26,000 ರಿಂದ 27,000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಪೆರಿಫೆರಲ್ ರಿಂಗ್ ರಸ್ತೆಯನ್ನು ಯೋಜಿಸಿದ್ದೇವೆ. ಏತನ್ಮಧ್ಯೆ, ರೈತರು ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ, ಆದರೆ, ನಾನು ಅದನ್ನು ಬಿಟ್ಟುಕೊಡಲು ಬಯಸುವುದಿಲ್ಲ. ಸುರಂಗ ಮಾರ್ಗಕ್ಕೂ ಯೋಜನೆ ರೂಪಿಸಿದ್ದು, ಟೆಂಡರ್‌ ಕರೆಯಲಾಗಿದೆ. ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ಬ್ರಾಂಡ್ ಬೆಂಗಳೂರಿಗೆ 70,000 ಸಲಹೆಗಳನ್ನು ಸ್ವೀಕರಿಸಿದ್ದೇವೆ. ಅವುಗಳ ಕುರಿತು ಕೆಲಸಗಳು ನಡೆಯುತ್ತಿವೆ. ಐಟಿ ಕೇಂದ್ರ ಮತ್ತು ಜ್ಞಾನದ ರಾಜಧಾನಿಯಾಗಿರುವ ನಗರದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಬಳಸಿಕೊಳ್ಳಲು ಬಯಸುತ್ತಿದ್ದೇವೆ. ವಿಧಾನಸೌಧ ಬಿಟ್ಟರೆ ಜನಸಾಮಾನ್ಯರ ಆಕರ್ಷಣೀಯ ಸ್ಥಳಗಳಿರಲಿಲ್ಲ. 3-4 ತಿಂಗಳಲ್ಲಿ ನಾವು ನಮ್ಮ ಕಾರ್ಯಸೂಚಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತೇವೆ.

Q

ಬಿಜೆಪಿ ಎನ್‌ಡಿಎಗೆ 370-400 ಸ್ಥಾನಗಳು ಸಿಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದೆ. ಆ ರೀತಿಯಾಗಿದ್ದೇ ಆದರೆ, ಕಾಂಗ್ರೆಸ್ ಹೆಚ್ಚು ಕಾಲ ಅಂದರೆ ಸುಮಾರು 15 ವರ್ಷಗಳ ಕಾಲ ಅಧಿಕಾರದಿಂದ ಹೊರಗುಳಿಯುವಂತಾಗುತ್ತದೆ. ನೆಹರೂ ನಂತರ ಮೋದಿ ಮೂರನೇ ಬಾರಿಗೆ ಆ ಹುದ್ದೆಗೆ ಏರುವ ಎರಡನೇ ಪ್ರಧಾನಿಯಾಗಲಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?

A

ಬಿಜೆಪಿ ಬಲಿಷ್ಠವಾಗಿದ್ದರೆ ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಏಕೆ ಮೈತ್ರಿ ಮಾಡಿಕೊಳ್ಳುತ್ತಿತ್ತು? ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್‌ಸಿಪಿ ಅಥವಾ (ನವೀನ್) ಜಿಂದಾಲ್‌ನಿಂದ ನಾಯಕರನ್ನು ಏಕೆ ಸೇರಿಸಿಕೊಳ್ಳಬೇಕು? 200 ಸೀಟು ದಾಟುವುದಿಲ್ಲ ಎಂಬ ಭಾವನೆ ಅವರಲ್ಲಿದೆ. ಜನರ ಗಮನ ಸೆಳೆಯಲು ಈ ರೀತಿ ಹೇಳುತ್ತಿದ್ದಾರೆ.

Q

ಬಿಜೆಪಿ-ಜೆಡಿ (ಎಸ್) ಮೈತ್ರಿ ವಿಶೇಷವಾಗಿ ಬೆಂಗಳೂರು ಗ್ರಾಮಾಂತರದಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದೆ. ಅಮಿತ್ ಶಾ ಅಲ್ಲಿಂದಲೇ ಚುನಾವಣಾ ಪ್ರಚಾರ ಆರಂಭಿಸಿದರು. ಕಳೆದ ಬಾರಿ ಕಾಂಗ್ರೆಸ್ ಗೆಲ್ಲಬಹುದಾದ ಏಕೈಕ ಲೋಕಸಭಾ ಸ್ಥಾನದ ಸನ್ನಿವೇಶ ಈಗ ಹೇಗಿದೆ?

A

ತಾವು ದುರ್ಬಲರು ಎಂದು ಒಪ್ಪಿಕೊಂಡು ಚನ್ನಪಟ್ಟಣದ ಸಂಸದೀಯ ಕ್ಷೇತ್ರಕ್ಕೆ ಬಂದಿದ್ದಾರೆ. ಜೆಡಿಎಸ್ ಪ್ರಬಲವಾಗಿದ್ದರೆ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ತಮ್ಮ ಅಳಿಯ (ಡಾ ಸಿಎನ್ ಮಂಜುನಾಥ್) ಅವರನ್ನು ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಲು ಏಕೆ ಕೇಳಿದರು? ಬಿಜೆಪಿ ಜೊತೆಗಿನ ಮೈತ್ರಿಯ ಭಾಗಯಿಂದಾಗಿ ಜೆಡಿಎಸ್ (ಎಸ್) ಮೂರು ಸ್ಥಾನಗಳಲ್ಲಿ ಗೆಲ್ಲುವುದಿಲ್ಲ.

Q

ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ-ಆರ್ಥಿಕ ಸಮೀಕ್ಷೆ (ಜಾತಿ ಗಣತಿ) ವರದಿಯ ಬಗ್ಗೆ ಏನು ಹೇಳುತ್ತೀರಿ? ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗರಿಂದ ವಿರೋಧವಿದೆಯೇ?

A

ನಮಗೆ ಜಾತಿ ಗಣತಿ ಬೇಕು, ಆದರೆ, ಅದು ಎಲ್ಲಾ ಮಧ್ಯಸ್ಥಗಾರರಿಗೆ ತಮ್ಮ ಅಭಿಪ್ರಾಯಗಳನ್ನು ನೀಡಲು ಅವಕಾಶ ನೀಡುವ ಮೂಲಕ ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕು. ನಾವು ಸಮೀಕ್ಷೆಯ ವಿರುದ್ಧ ಇಲ್ಲ. ವರದಿ ಬಂದಿದ್ದು, ಅಂಕಿ-ಅಂಶಗಳು (ಪ್ರತಿ ಜಾತಿಯ ಜನಸಂಖ್ಯೆ) ಬಗ್ಗೆ ತಿಳಿದುಬಂದ ನಂತರ ನಾವು ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.

Q

ಈ ವಿಚಾರದಲ್ಲಿ ಬಿಜೆಪಿ ನಿರಂತರವಾಗಿ ನಿಮ್ಮ ಮೇಲೆ ವಾಗ್ದಾಳಿ ನಡೆಸುತ್ತಿದ್ದರೂ ಕಾಂಗ್ರೆಸ್ ನಾಯಕರ ಕುಟುಂಬದವರನ್ನೇ 15-16 ಲೋಕಸಭಾ ಸ್ಥಾನಗಳಲ್ಲಿ ಏಕೆ ಕಣಕ್ಕಿಳಿಸಿಲಾಗಿದೆ?

A

ಬಿಜೆಪಿ ಕೂಡ ಇದೇ ರೀತಿ ಮಾಡಿದೆ. ನಾಯಕರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಿದೆ. ಕೆಲವು ಸಂದರ್ಭದಲ್ಲಿ ಅದು ನಮಗೆ ಅನಿವಾರ್ಯವಾಯಿತು. ನನ್ನ ಸಹೋದರ ಸಾರ್ವಜನಿಕ ಜೀವನದಲ್ಲಿ ಇರಲಿಲ್ಲ, ಆದರೆ ನನಗೆ ಸಹಾಯ ಮಾಡುತ್ತಿದ್ದರು. ಈ ನಡುವೆ ನಾನು ಅಧಿಕಾರದಿಂದ ಹೊರಗುಳಿದಾಗಲೇ ಬೆಂಗಳೂರು ಗ್ರಾಮಾಂತರಕ್ಕೆ ಉಪಚುನಾವಣೆ ಘೋಷಣೆಯಾಗಿತ್ತು. ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪತ್ನಿಯನ್ನು ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದ್ದರಿಂದ ನನ್ನೊಂದಿಗೆ ಸಮಾಲೋಚನೆ ನಡೆಸದೆ ನನ್ನ ಸಹೋದರ ಡಿ.ಕೆ.ಸುರೇಶ್ ಅವರನ್ನು ಅಭ್ಯರ್ಥಿ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಬಿಜೆಪಿ-ಜೆಡಿಎಸ್ ಒಗ್ಗೂಡಿ ಹೋರಾಡುತ್ತಿದ್ದ ಹಿನ್ನೆಲೆಯಲ್ಲಿ ನಾನು ನನ್ನ ರಾಜಕೀಯ ಪ್ರಭಾವವನ್ನು ತೋರಿಸಬೇಕಾಗಿತ್ತು. ಅಂತಿಮವಾಗಿ ನನ್ನ ಸಹೋದರ 1.3 ಲಕ್ಷ ಮತಗಳಿಂದ ಗೆಲುವು ಸಾಧಿಸಿದರು. ಸತತ ಮೂರು ಚುನಾವಣೆಯಲ್ಲಿ ಗೆದ್ದರು. ಶಾಸಕರು ಸೇರಿದಂತೆ ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ನಾಯಕರ ಕುಟುಂಬದ ಹತ್ತಾರು ಮಂದಿಗೆ ಈ ಬಾರಿ ಟಿಕೆಟ್ ನೀಡಲಾಗಿದೆ.

Q

ಈ ನಿರ್ಧಾರ ಸಮೀಕ್ಷೆ ಅಥವಾ ವರದಿಗಳನ್ನು ಆಧರಿಸಿದೆಯೇ?

A

ಖಂಡಿತವಾಗಿಯೂ ನಾವು ಸಮೀಕ್ಷೆಗಳನ್ನು ಪರಿಗಣಿಸುತ್ತೇವೆ. ಕೆಲವು ಸಮೀಕ್ಷೆಗಳನ್ನು ನಾನು ನಂಬುವುದಿಲ್ಲ ಕೆಲವು ಸಮೀಕ್ಷೆಗಳು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕಡಿಮೆ ಸ್ಥಾನಗಳು ಸಿಗಲಿವೆ ಎಂದು ಭವಿಷ್ಯ ನುಡಿದಿತ್ತು.

Q

ವಿಧಾನಸಭಾ ಚುನಾವಣೆಯಲ್ಲಿ ನೀವು ನುಡಿದಿದ್ದದ ಭವಿಷ್ಯ ಸತ್ಯವಾಗಿತ್ತು. ಮೈಸೂರು-ಕೊಡಗಿನ ಬಗ್ಗೆ ನಿಮ್ಮ ಮೌಲ್ಯಮಾಪನವೇನು?

A

ಈಗಲೇ ಊಹಿಸುವುದು ಕಷ್ಟ. ಈ ಬಾನು ಎಂ ಲಕ್ಷ್ಮಣ್ (ಒಕ್ಕಲಿಗ) ಅವರನ್ನು ಕಣಕ್ಕಿಳಿಸಿದ್ದೇವೆ. ಯದುವೀರ್ (ಮೈಸೂರಿನ ರಾಜಮನೆತನದ ಒಡೆಯರ್ ಕುಟುಂಬದ ಕುಡಿ) ವಿರುದ್ಧ ಒಕ್ಕಲಿಗರನ್ನೇ ನಿಲ್ಲಿಸಲು ನಾನು ಮತ್ತು ಸಿದ್ದರಾಮಯ್ಯ ನಿರ್ಧರಿಸಿದೆವು. ಮುಂದಿನ ದಿನಗಳಲ್ಲಿ ಭವಿಷ್ಯದ ಬಗ್ಗೆ ತಿಳಿದುಬರಲಿದೆ.

Q

ನೀವು ರಾಜಮನೆತನಕ್ಕೆ ಹತ್ತಿರವಾಗಿದ್ದೀರಿ, ನೀವೂ ಯದುವೀರ್ ಅವರನ್ನು ಸಂಪರ್ಕಿಸಿದ್ದೀರಾ?

A

ರಾಜಮನೆತನದ ಸದಸ್ಯರು ರಾಜಕೀಯ ಕಾಲಿಡುತ್ತಾರೆಂಬ ಸಂದೇಶ ನನ್ನಲ್ಲಿತ್ತು, ಆದರೆ, ಬಿಜೆಪಿ ಒಪ್ಪಂದ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Q

ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದರೆ ಲೋಕಸಭಾ ಚುನಾವಣೆಯ ನಂತರ ನೀವು ಮುಖ್ಯಮಂತ್ರಿ ಸ್ಥಾನಕ್ಕೇರುತ್ತೀರಾ?

A

ನಾನು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಹೈಕಮಾಂಡ್ ನಡುವೆ ಈಗಾಗಲೇ ವಿಷಯ ಇತ್ಯರ್ಥವಾಗಿದೆ. ಆದರೆ, ದಿನಾಂಕ ನಿಗದಿಪಡಿಸಲು ನಾನು ಬಯಸುವುದಿಲ್ಲ.

Related Stories

No stories found.

Advertisement

X
Kannada Prabha
www.kannadaprabha.com