ಸಂಸದೆ ಸುಮಲತಾ ಅಂಬರೀಷ್
ಸಂಸದೆ ಸುಮಲತಾ ಅಂಬರೀಷ್

ಗ್ಯಾರಂಟಿ ಯೋಜನೆ ಸೂಕ್ತವಲ್ಲ, ಮಹಿಳೆಯರ ಸಬಲೀಕರಣ ಆಗುತ್ತಿಲ್ಲ: ಸಂಸದೆ ಸುಮಲತಾ ಅಂಬರೀಷ್ (ಸಂದರ್ಶನ)

ಸಕ್ಕರೆ ನಾಡು ಮಂಡ್ಯದಲ್ಲಿ ಲೋಕಸಭಾ ಚುನಾವಣಾ ಕಾವು ಜೋರಾಗಿದೆ. ಬೇಸಿಗೆಯ ಬಿಸಿಲಿನ ಕಾವಿಗಿಂತ ಚುನಾವಣಾ ಕಾವು ಏರುತ್ತಿದೆ. ಕಾಂಗ್ರೆಸ್‌ನಿಂದ ಸ್ಟಾರ್ ಚಂದ್ರು ಈ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರೆ, ಅತ್ತ ಜೆಡಿಎಸ್‌ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಖುದ್ದು ಕಣಕ್ಕಿಳಿದಿದ್ದಾರೆ. ಈ ನಡುವೆ ಕ್ಷೇತ್ರ ತ್ಯಾಗ ಮಾಡಿ ಬಿಜೆಪಿಗೆ ಸೇರ್ಪಡೆಗೊಂಡಿರುವ ಹಾಲಿ ಸಂಸದೆ ಸುಮಲತಾ ಅಂಬರೀಷ್ ಅವರು ಚುನಾವಣಾ ಪ್ರಚಾರದಲ್ಲಿ ಬ್ಯುಝಿಯಾಗಿದ್ದಾರೆ.

ಈ ನಡುವೇ ಸುಮಲತಾ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ತಮ್ಮ ರಾಜಕೀ ಭವಿಷ್ಯ, ಬಿಜೆಪಿ ಸೇರ್ಪಡೆ ಹಾಗೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗಗಳು ಇಂತಿವೆ...

Q

ನೀವು 2019 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಿರಿ. ಈಗ ಬಿಜೆಪಿಗೆ ಸೇರ್ಪಡೆಯಾಗಿದ್ದೇಕೆ?

A

ಸ್ಪರ್ಧಿಸಲು ಟಿಕೆಟ್ ನೀಡದ ಪಕ್ಷಕ್ಕೇ ನಾನು ಸೇರ್ಪಡೆಗೊಂಡಿದ್ದೇನೆ. ನನ್ನ ನಿರ್ಧಾರ ಹಲವರಿಗೆ ಅಚ್ಚರಿ ತಂದಿರುವುದು ನಿಜ. ರಾಜಕೀಯದಲ್ಲಿ ಟಿಕೆಟ್ ನೀಡದಿದ್ದರೆ ಪಕ್ಷ ತೊರೆಯುತ್ತಾರೆ. ಮೋದಿ ಅವರ ಕೆಲಸವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಹೀಗಾಗಿ ಅವರ ನಾಯಕತ್ವದಲ್ಲಿ ನನಗೆ ನಂಬಿಕೆ ಇದೆ. ಅವರು ದೇಶಕ್ಕಾಗಿ ಮಾಡುತ್ತಿರುವುದು ಕೆಲಸ ಅದ್ಭುತವಾಗಿದೆ. ನಾನು ಈಗ ನನ್ನ ಭವಿಷ್ಯದ ಬಗ್ಗೆ ಯೋಚಿಸಬಾರದು. ನಾನು ಅಂತಹ ವ್ಯಕ್ತಿಯಲ್ಲ. ನಾನು ಮೋದಿಯವರ ದೃಷ್ಟಿಕೋನವನ್ನು ನಂಬುತ್ತೇನೆ,. ಅವರ ದೃಷ್ಟಿಕೋನವನ್ನು ಬೆಂಬಲಿಸುವುದು ನನ್ನ ಕರ್ತವ್ಯ.

Q

ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ನಿಮ್ಮ ಅಭಿಪ್ರಾಯವೇನು?

A

ಮೈತ್ರಿಯು ಕೆಲವು ಕಾರಣಗಳು ಮತ್ತು ಪ್ರದೇಶಗಳಿಂದ ಹುಟ್ಟಿದೆ. ಹಳೆ ಮೈಸೂರು ಭಾಗದಲ್ಲಿ ಹಿಂದಿನಿಂದಲೂ ಬಿಜೆಪಿ ಮೊದಲ ಆಯ್ಕೆಯಾಗಿ ಕಾಣಲಿಲ್ಲ. ಹೀಗಾಗಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲು ಪಕ್ಷದ ಹಿತದೃಷ್ಟಿಯಿಂದ ಮೈತ್ರಿ ಮಾಡಿಕೊಳ್ಳಲಾಗಿದೆ.

Q

ಈ ಬಾರಿ ಚುನಾವಣೆಗೆ ಏಕೆ ಸ್ಪರ್ಧಿಸಲಿಲ್ಲ?

A

ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲುವುದು ತಮಾಷೆಯ ವಿಷಯವಲ್ಲ. ಕರ್ನಾಟಕದಲ್ಲಿ 52 ವರ್ಷಗಳ ನಂತರ ಸ್ವತಂತ್ರ ಸಂಸದಳಾಗಿ ಗೆಲವು ಸಾಧಿಸಿದ್ದೆ. ಇದು ಪ್ರತೀ ಐದು ವರ್ಷಗಳಿಗೊಮ್ಮೆ ಮರುಕಳಿಸುವ ವಿದ್ಯಮಾನವಲ್ಲ. ಅದರ ಬಗ್ಗೆ ವಾಸ್ತವಿಕ ಚಿಂತನೆ ನನಗಿದೆ. ಅಂದಿನ ರಾಜಕೀಯ ಸನ್ನಿವೇಶವೇ ಬೇರೆ. ಆಗ ಬಿಜೆಪಿ ನನಗೆ ಬೆಂಬಲ ನೀಡಿತ್ತು, ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರೂ ನನಗೆ ಬೆಂಬಲ ನೀಡಿದ್ದರು. ಆದರೆ, ಕಾಂಗ್ರೆಸ್ ನಾಯಕತ್ವ ಬೆಂಬಲ ನೀಡಿರಲಿಲ್ಲ. ಹೀಗಾಗಿಯೇ ನಾನು ಗೆದ್ದೆ. ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಲ್ಲಿದೆ. ಕಾಂಗ್ರೆಸ್ ಪಕ್ಷದಲ್ಲಿ ನನಗೆ ಸೂಕ್ತ ಗೌರವ ಸಿಗದ ಕಾರಣ ಹಾಗೂ ಕೆಲವು ಕಾರಣಗಳಿಂದ ಆ ಪಕ್ಷಕ್ಕೆ ಸೇರ್ಪಡೆಗೊಳ್ಳಲು ನನಗೆ ಇಷ್ಟವಾಗಲಿಲ್ಲ. ನನ್ನನ್ನು ಗೌರವಿಸದ ಸ್ಥಳಕ್ಕೆ ಹೋಗುವ ಉದ್ದೇಶ ನನಗಿರಲಿಲ್ಲ.

Q

ಅಂಬರೀಶ್ ಇದ್ದಾಗ ನೀವಿಬ್ಬರೂ ರಾಜಕೀಯದ ಬಗ್ಗೆ ಚರ್ಚೆ ಮಾಡುತ್ತಿದ್ದೀರಾ?

A

ನಾವು ಆರೋಗ್ಯಕರ ಮತ್ತು ಬಲವಾದ ವಿಚಾರಗಳ ಕುರಿತು ಚರ್ಚೆಗಳನ್ನು ನಡೆಸಿದ್ದೇವೆ. ನಾನು ಯಾವಾಗಲೂ ಅವರೊಂದಿಗೆ ವಕೀಲಳಂತೆಯೇ ವಾದ ಮಾಡುತ್ತಿದ್ದೆ. ಬಿಜೆಪಿ ಪರ ಮಾತನಾಡುತ್ತಿದ್ದೆ. ಮೋದಿಯನ್ನು ಗುಜರಾತ್ ಸಿಎಂ ಆಗಿ, ನಂತರ ಪ್ರಧಾನಿಯಾಗಿ ನೋಡುತ್ತಿದ್ದೆವು. ಅದು ಕೇವಲ ಚರ್ಚೆಗಳಾಗಿದ್ದವು ಅಷ್ಟೇ. ನನಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ.

Q

ಈಗ ನಿಮ್ಮ ಮುಂದಿರುವ ಚಿಂತನೆಗಳೇನು?

A

ಹಳೇ ಮೈಸೂರು ಭಾಗದಲ್ಲಿ ಅದರಲ್ಲೂ ಮಂಡ್ಯದಲ್ಲಿ ಬಿಜೆಪಿ ನೆಲೆಯೂರುವುದನ್ನು ನೋಡಲು ನಾನು ಬಯಸುತ್ತೇನೆ. ಅಲ್ಲದೆ, ರಾಜ್ಯಾದ್ಯಂತ, ಪಕ್ಷವನ್ನು ಬಲಪಡಿಸಲು ನನ್ನ ಉಪಸ್ಥಿತಿ ಅಗತ್ಯವಿದೆ. ಆ ಕಾರ್ಯವನ್ನು ತಳಮಟ್ಟದಿಂದ ಪ್ರಾರಂಭಿಸಬೇಕು. ಈ ಪ್ರದೇಶದಲ್ಲಿ ಪಕ್ಷವನ್ನು ಬಲಪಡಿಸುವ ಪ್ರಯತ್ನವನ್ನಾದರೂ ಮಾಡಬೇಕೆಂದಿದ್ದೇನೆ.

Q

ಕಳೆದ ಬಾರಿ ಮಂಡ್ಯದಲ್ಲಿ ನಿಮ್ಮ ಪರ ಪ್ರಚಾರ ಮಾಡಿದ್ದ ನಟ ದರ್ಶನ್, ಈ ಬಾರಿಯೂ ಅದೇ ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

A

ಎಲ್ಲಿ ಹೋಗಬೇಕೆಂದು ಸೂಚಿಸಲು ದರ್ಶನ್ ಚಿಕ್ಕ ಮಗು ಅಲ್ಲ, ನಾನು ಸ್ಪರ್ಧೆಗಿಳಿದಾಗ ದರ್ಶನ್ ನನ್ನ ಪರ ನಿಲ್ಲುತ್ತಾರೆ. ಅದನ್ನೇ ಈ ಹಿಂದೆ ಕೂಡ ಮಾಡಿದ್ದರು. ಭವಿಷ್ಯದಲ್ಲೂ ಅದನ್ನೇ ಮಾಡುತ್ತಾರೆ. ನಾನು ಸ್ಪರ್ಧೆಯಲ್ಲಿಲ್ಲ. ಇದೀಗ ಅವರು ಅವರು ಸ್ವತಂತ್ರ ವ್ಯಕ್ತಿ. ದರ್ಶನ್ ಯಾವುದೇ ಪಕ್ಷದ ಪರ ಪ್ರಚಾರ ಮಾಡಿಲ್ಲ, ಅವರಿಗೆ ಬೇಕಾದ ವ್ಯಕ್ತಿ ಪರವಾಗಿ ಮಾಡಿದ್ದಾರೆ. ಪ್ರಚಾರದ ಬಗ್ಗೆ ಅವರು ನನಗೆ ಮಾಹಿತಿ ನೀಡುವ ಅಗತ್ಯವೂ ಇಲ್ಲ. ನಾನು ಸ್ಪರ್ಧೆಯಲ್ಲೇ ಇಲ್ಲದಿರುವಾಗ ನಾವು ರಾಜಕೀಯದ ಬಗ್ಗೆ ಚರ್ಚೆ ಮಾಡುವುದಿಲ್ಲ.

Q

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಏನು ಹೇಳುತ್ತೀರಿ?

A

ಫ್ಯಾನ್ಸಿ ನೇಮ್ ಇಟ್ಟು ಅವರ ದೊಡ್ಡ ತಪ್ಪುಗಳನ್ನು ಮುಚ್ಚಿಡು ಸಾಧ್ಯವಿಲ್ಲ. ಈ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯ ಮತ್ತು ರಾಷ್ಟ್ರದ ಆರ್ಥಿಕತೆಯ ಜೊತೆ ಆಟವಾಡುತ್ತಿದ್ದಾರೆ. ಯುವಕರ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ. ಕೇವಲ ಅಧಿಕಾರವನ್ನು ಪಡೆಯಲು ಸ್ವಾರ್ಥಿಗಳಾಗಬಾರದು. ಜನರನ್ನು ದಾರಿ ತಪ್ಪಿಸಬಾರದು.

Q

ಆದರೆ ಈ ಯೋಜನೆಗಳು ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿವೆ ಎಂದು ಹೇಳುತ್ತಿದ್ದಾರೆ...?

A

ಉಚಿತಗಳನ್ನು ನೀಡಿ, ಘನತೆಯಿಂದ ಬದಕಲು ಉದ್ಯೋಗ ಸೃಷ್ಟಿಸದಿದ್ದರೆ ಅದು ಮಹಿಳೆಯರ ಸಬಲೀಕರಣವಾಗುವುದಿಲ್ಲ, ಆರ್ಥಿಕತೆಯಲ್ಲಿ ಟ್ರಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಹೊಂದಿರುವ ಅಮೆರಿಕದಂತಹ ದೇಶದಲ್ಲಿ ಅಲ್ಲಿನ ನಿರಾಶ್ರಿತರಿಗೆ ಮತ್ತು ಬಡವರಿಗೆ ಏಕೆ ಉಚಿತಗಳನ್ನು ನೀಡುತ್ತಿಲ್ಲ? ಯಾವ ದೇಶವೂ ಈ ರೀತಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಆ ರೀತಿ ಮಾಡಿದರೆ, ಪಾಕಿಸ್ತಾನ ಅಥವಾ ಶ್ರೀಲಂಕಾದಂತೆ ದಿವಾಳಿಯಾಗುತ್ತದೆ. ಇದು ಸಮರ್ಥನೀಯ ಅಲ್ಲ. ಲೋಕಸಭೆ ಚುನಾವಣೆ ನಂತರ ಯಾವ ರೀತಿ ಆಡಳಿತ ನಡೆಸುತ್ತಾರೆ ಎಂಬುದನ್ನು ಕಾದು ನೋಡಬೇಕು.

Q

ಕರ್ನಾಟಕದಲ್ಲಿ ಬಿಜೆಪಿ ಮುಂದಿರುವ ಸವಾಲುಗಳೇನು?

A

2019 ರಲ್ಲಿ, ಬಿಜೆಪಿ 28 ರಲ್ಲಿ 25 ಸ್ಥಾನಗಳನ್ನು ಗೆದ್ದಿದೆ. ಕೆಲವು ಕ್ಷೇತ್ರದಲ್ಲಿ ಆಡಳಿತ ವಿರೋಧಗಳು ಎದುರಾಗಬಹುದು. ಉಚಿತ ಗ್ಯಾರಂಟಿ ಯೋಜನೆಗಳು ಅಪಾಯ ಎದುರು ಮಾಡಲಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕಿದ್ದು, ಇದು ಹೇಗೆ ಎಂಬುದೇ ದೊಡ್ಡ ಸವಾಲಾಗಿದೆ.

Q

ಮಂಡ್ಯ ಪ್ರಚಾರಕ್ಕೆ ಹೋಗುತ್ತೀರಾ?

A

ಎಲ್ಲವೂ ಪಕ್ಷದ ಮೇಲೆ ಅವಲಂಬಿತವಾಗಿದೆ. ಮಂಡ್ಯದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೆ, ಅಲ್ಲಿ ಜೆಡಿಎಸ್ ತನ್ನದೇ ಆದ ಪ್ರಬಲ ನೆಲೆಯನ್ನು ಹೊಂದಿದ್ದು, ಪಕ್ಷ ಪ್ರಬಲವಾಗಿದೆ. ಪಕ್ಷಕ್ಕೆ ಬೇಕಾದ ಕಡೆ ಬಿಜೆಪಿ ನನ್ನನ್ನು ಕಳುಹಿಸುತ್ತಿದೆ. ಪಕ್ಷ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದ ಹೊರತು ಅಲ್ಲಿ ಪ್ರಚಾರ ಮಾಡಲು ನಾನೇ ನಿರ್ಧರಿಸಲು ಸಾಧ್ಯವಿಲ್ಲ.

Related Stories

No stories found.

Advertisement

X
Kannada Prabha
www.kannadaprabha.com