ಬರ ಪರಿಹಾರ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿಲ್ಲ; ಮಾನಗೆಟ್ಟ ಕಾಂಗ್ರೆಸ್'ನಿಂದ ತಪ್ಪು ವ್ಯಾಖ್ಯಾನ- ಆರ್.ಅಶೋಕ್

ಬರ ಪರಿಹಾರ ಬಿಡುಗಡೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಯಾವುದೇ ನಿರ್ದೇಶನ ನೀಡಿಲ್ಲ. ಆದರೆ, ಮಾನಗೆಟ್ಟ ಕಾಂಗ್ರೆಸ್ ತಪ್ಪು ವ್ಯಾಖ್ಯಾನ ಮಾಡಿ ಜಯವೆಂದು ಬಿಂಬಿಸಿಕೊಳ್ಳುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಚಾಟಿ ಬೀಸಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್
Updated on

ಬೆಂಗಳೂರು: ಬರ ಪರಿಹಾರ ಬಿಡುಗಡೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಯಾವುದೇ ನಿರ್ದೇಶನ ನೀಡಿಲ್ಲ. ಆದರೆ, ಮಾನಗೆಟ್ಟ ಕಾಂಗ್ರೆಸ್ ತಪ್ಪು ವ್ಯಾಖ್ಯಾನ ಮಾಡಿ ಜಯವೆಂದು ಬಿಂಬಿಸಿಕೊಳ್ಳುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಚಾಟಿ ಬೀಸಿದರು.

ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬರ ಪರಿಹಾರ ಬಿಡುಗಡೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಯಾವುದೇ ನಿರ್ದೇಶನ ನೀಡಿಲ್ಲ. ಕೇಂದ್ರ ಸರ್ಕಾರವೇ ಚುನಾವಣಾ ಆಯೋಗದ ಅನುಮತಿ ಕೇಳಿದ್ದು, ಅದಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿದೆ. ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದಿದೆ. ಇದೇ ವಿಷಯವನ್ನು ಸುಪ್ರೀಂ ಕೋರ್ಟ್ ನಲ್ಲಿ ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಅಟಾರ್ನಿ ಜನರಲ್ ಪ್ರಸ್ತಾಪಿಸಿ, ‘ನೆಕ್ಸ್ಟ್ ಮಂಡೆ ( ಏಪ್ರಿಲ್ 29) ಸಮ್ ಥಿಂಗ್ ವಿಲ್ ಬಿ ಹ್ಯಾಪನ್’ ಎಂದಾಗ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಸಹಮತ ವ್ಯಕ್ತಪಡಿಸಿದ್ದಾರೆ. ಈ ಕೇಸ್ ನಲ್ಲಿ ವಾದ ಮಾಡುವ ಅಗತ್ಯವೇನಿಲ್ಲವೆಂದು ನ್ಯಾಯಾಲಯ ಹೇಳಿದೆ.

ಕೇಂದ್ರ ಸರ್ಕಾರದಿಂದ ಅನ್ಯಾಯವಾಗಿದೆ, ತೊಂದರೆ ನೀಡುತ್ತಿದೆ ಎಂದು ರಾಜ್ಯದ ಪರ ವಕೀಲ ವಾದ ಮಾಡಿಲ್ಲ. ಸುಪ್ರೀಂ ಕೋರ್ಟ್ ಅವಕಾಶ ಕೊಟ್ಟಿಲ್ಲ. ವಾರದೊಳಗೆ ಬಿಡುಗಡೆ ಮಾಡಿ ಎಂದೂ ಆದೇಶಿಸಿಲ್ಲ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಮಾಡಿರುವ ಪ್ರಯತ್ನಗಳಿಗೆ ರಾಜ್ಯದ ಪರ ವಕೀಲ ಸಹಮತ ವ್ಯಕ್ತಪಡಿಸಿದರೆ, ವಾದ ಅಗತ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಗೆ ನಿವೇದಿಸಿಕೊಂಡಿದ್ದಾರೆ.

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್
ಬರ ಪರಿಹಾರ: ರಾಜ್ಯದ ರೈತರಿಗೆ ಸಂದ ಜಯ- ಸಚಿವ ಕೃಷ್ಣ ಬೈರೇಗೌಡ

ಆದರೆ, ಸುಪ್ರೀಂ ಕೋರ್ಟ್ ನಲ್ಲಿ ಜಯವಾಗಿದೆ. ವಾರದೊಳಗೆ ಪರಿಹಾರ ಧನ ಬಿಡುಗಡೆ ಮಾಡಲು ಆದೇಶಿಸಿದೆ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳನ್ನು ಸಮಾನವಾಗಿ ನೋಡಬೇಕಾಗುತ್ತದೆ. ತ್ವರಿತವಾಗಿ ಪರಿಹಾರ ನಿಧಿ ಬಿಡುಗಡೆ ಮಾಡಲು ಅನುಮತಿ ಕೋರಿ ಚುನಾವಣೆ ಆಯೋಗಕ್ಕೆ ಪತ್ರ ಬರೆದು, ಒಪ್ಪಿಗೆ ಪಡೆದಿದೆ. ಅದಕ್ಕಾಗಿ ಅಭಿನಂದನೆ ಸಲ್ಲಿಸುವೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಎಸ್‌ಡಿಆರ್‌ಎಫ್‌ ಅಡಿ ಈಗಾಗಲೇ ರೂ.700 ಕೋಟಿ ಕೊಟ್ಟಿದೆ. ಆ ಹಣದಲ್ಲೇ ರೂ.2,000 ಪರಿಹಾರ ನೀಡುತ್ತಿದೆ. ಆದರೆ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣದ ಬಗ್ಗೆ ಯಾವುದೇ ಪ್ರಸ್ತಾಪ ಮಾಡುತ್ತಿಲ್ಲ? ಈ ರೂ.700 ಕೋಟಿಯಲ್ಲಿ ಶೇ 25 ರಷ್ಟು ಹಣವನ್ನು ರಾಜ್ಯ ಸರ್ಕಾರ ನೀಡಬೇಕು.

ಸಾಮಾನ್ಯವಾಗಿ ಬರಕ್ಕೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳಿಂದ ಹಣ ಬಂದ ಬಳಿಕವೇ ಪರಿಹಾರವನ್ನು ಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಹಿಂದಿನಿಂದಲೂ ಇದೇ ಪರಂಪರೆ ನಡೆದುಕೊಂಡು ಬಂದಿದೆ. ಆದರೆ, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿಗಳನ್ನು ಜಾರಿ ತಂದಿತು. ಅದಕ್ಕೆ ಯಾವುದೇ ತಯಾರಿ ಮಾಡಿಕೊಂಡಿರಲಿಲ್ಲ. ಇದರಿಂದಾಗಿ ಸರ್ಕಾರದ ಖಜಾನೆ ಖಾಲಿ ಆಗಿದೆ. ಯಾವುದೇ ಗ್ಯಾರಂಟಿ ಜನರಿಗೆ ತಲುಪಿಲ್ಲ. ಆದ್ದರಿಂದ ರೊಚ್ಚಿಗೆದ್ದಿದ್ದಾರೆ. ಹೀಗಾಗಿ ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಿರಂತರ ಮಾಡುತ್ತಲೇ ಬಂದಿದೆ.

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್
'ಅನ್ಯಾಯ ಸಾಕು, ನ್ಯಾಯ ಕೊಡಿ ಚೊಂಬೇಶ್ವರ, ಬರ ಪರಿಹಾರ ಬಿಡುಗಡೆ ಮಾಡಿ': ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಯಾವುದೇ ಅಭಿವೃದ್ಧಿಗೂ ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ, ಗ್ಯಾರಂಟಿಗಳಲ್ಲಿ ಎಲ್ಲರಿಗೂ ಅದರ ಪ್ರಯೋಜನ ಸಿಗುತ್ತಿಲ್ಲ, ತೆರಿಗೆ ಸಂಗ್ರಹಣೆ ಕಡಿಮೆ ಆಗಿದೆ. ಜನ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಹಾಲಿನ ಸಬ್ಸಿಡಿ ರೂ.700 ಕೋಟಿಯನ್ನು ರೈತರಿಗೆ ಕೊಟ್ಟಿಲ್ಲ. ಚುನಾವಣೆ ಮುಗಿದ ಬಳಿಕ ನೌಕರರಿಗೆ ಸಂಬಳ ಪಾವತಿ ಮಾಡಲು ಹಣವಿಲ್ಲ, ನೌಕರರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ದೂರಿದರು.

ನೇಹಾ ಹತ್ಯೆ ಹಿರೇಮಠ ಹತ್ಯೆ ಬೆನ್ನಲ್ಲೇ ಯಾದಗಿರಿ ಜಿಲ್ಲೆಯಲ್ಲಿ ದಲಿತ ಯುವಕನ ಹತ್ಯೆಯಾಗಿದೆ. ಕಾಂಗ್ರೆಸ್ ಮುಸ್ಲಿಂ ಓಲೈಕೆಯು ಜನರನ್ನು ರೊಚ್ಚಿಗೆಬ್ಬಿಸಿದೆ. ಹಿಂದು ಕಾರ್ಯಕರ್ತರ ಆಕ್ರೋಶ ಭುಗಿಲೆದ್ದು, ಹೆಚ್ಚು ಫೋಕಸ್ ಆಗುತ್ತಿರುವ ಕಾರಣ ವಿಷಯಾಂತರಕ್ಕೆ ಕಾಂಗ್ರೆಸ್ ಹವಣಿಸಿದೆ. ವಿಧಾನಸೌಧ ಆವರಣದಲ್ಲಿ ಪ್ರತಿಭಟನೆ ನಡೆಸಿ ನೀತಿ ಸಂಹಿತೆ ಉಲ್ಲಂಘಿಸಿದೆ.. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com