ಬೆಂಗಳೂರು: ಅಕ್ಟೋಬರ್ ತಿಂಗಳಿನಲ್ಲಿ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆಗಳಿದ್ದು, ಇನ್ನೆರಡು ತಿಂಗಳುಗಳಲ್ಲಿ ತಮ್ಮ ಕಾರ್ಯವೈಖರಿ ಬದಲಾಯಿಸಿಕೊಳ್ಳದಿದ್ದರೆ ತಲೆದಂಡಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ ನೀಡಿದೆ.
ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಜೊತೆಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಸಚಿವರ ಜೊತೆಗೆ ಮಹತ್ವದ ಸಬೆ ನಡೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಈ ಸಂದೇಶ ರವಾನಿಸಿದ್ದಾರೆಂದು ತಿಳಿದುಬಂದಿದೆ.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯ ಸತ್ಯಶೋಧನಾ ಸಮಿತಿಯ ವರದಿ ಮತ್ತು ಗುಪ್ತಚರ ವರದಿಯನ್ನು ಆಧರಿಸಿ, ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರು ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಸಚಿವರು ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿದ್ದರೆ ಪಕ್ಷ 15 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತಿತ್ತು ಎಂದು ವೇಣುಗೋಪಾಲ್ ಹೇಳಿದ್ದಾರೆಂದು ವರದಿಗಳು ತಿಳಿಸಿವೆ.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ, ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಸಹಕಾರ ಸಚಿವ ಕೆ ಎನ್ ರಾಜಣ್ಣ ಸೇರಿದಂತೆ ಹತ್ತು ಶಾಸಕರು ವಿವಿಧ ಕಾರಣಗಳಿಗಾಗಿ ಎಚ್ಚರಿಕೆ ಪಡೆದಿದ್ದಾರೆಂದು ಮೂಲಗಳು ತಿಳಿಸಿವೆ.
ಆಡಳಿತದಲ್ಲಿನ ಕಳಪೆ ಪ್ರದರ್ಶನ ಸೇರಿದಂತೆ ಲೋಕಸಭೆ ಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ, ಹೈಕಮಾಂಡ್ ಆದೇಶದ ವಿರುದ್ಧ ಹೇಳಿಕೆ ನೀಡಿರುವುದರ ಕುರಿತು ಎಚ್ಚರಿಕೆ ನೀಡಿದ್ದಾರೆಂದು ತಿಳಿದುವೆ.
ಹಲವಾರು ಸಚಿವರ ಬಗ್ಗೆ ನಿರಂತರವಾಗಿ ದೂರುಗಳು ಕೇಳಿ ಬರುತ್ತಿವೆ. ಪ್ರತಿಯೊಬ್ಬ ಸಚಿವರ ಬಗ್ಗೆಯೂ ವೈಯಕ್ತಿಕ ಮೌಲ್ಯಮಾಪನಾ ವರದಿ ನಮ್ಮ ಬಳಿ ಇದೆ. ಸಚಿವರ ಕೆಲಸ ತವರು ಕ್ಷೇತ್ರ ಮತ್ತು ಉಸ್ತುವಾರಿ ಜಿಲ್ಲೆಗಷ್ಟೇ ಸೀಮಿತವಾಗಿದೆ. ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರ ಅವವಾಲಿಗೆ ಸ್ಪಂದಿಸಲೂ ಕೆಲ ಸಚಿವರು ದರ್ಪ ತೋರುತ್ತಿದ್ದಾರೆ. ಇದನ್ನು ಪಕ್ಷ ಸಹಿಸುವುದಿಲ್ಲ.
ನಿಮ್ಮ ಬಳಿಕೆ ಬರುವ ಶಾಸಕರು ಹಾಗೂ ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸದಿದ್ದರೆ ರಾಜ್ಯದ ಜನರ ಸಮಸ್ಯೆಗೆ ಹೇಗೆ ಸ್ಪಂದಿಸುತ್ತೀರಿ? ಮೊದಲು ಪಕ್ಷದ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಿ, ರಾಜ್ಯ ಪ್ರವಾಸ ಮಾಡಿ, ಇಲಾಖೆ ಸುಧಾರಣೆ ತಂದು ಸರ್ಕಾಪಕ್ಕೆ ಜನರಲ್ಲಿ ಉತ್ತಮ ಹೆಸರು ತರುವಂತೆ ಕೆಲಸ ಮಾಡಿ. ನೀವು ಸರಿಯಾಗಿ ಕೆಲಸ ಮಾಡಿದ್ದರೆ ಲೋಕಸಭೆಯಲ್ಲಿ ಕನಿಷ್ಟ 15 ಸ್ಥಾನ ಗೆಲ್ಲುತ್ತಿದ್ದೆವು ಎಂದು ಹೇಳಿದರು ಎಂದು ತಿಳಿದುಬಂದಿದೆ.
Advertisement