ನ್ಯಾ. ಕೆಂಪಣ್ಣ ಆಯೋಗದ ವರದಿ ಬಹಿರಂಗಪಡಿಸುವಂತೆ ಸಿಎಂ ಸಿದ್ದರಾಮಯ್ಯಗೆ ಸೂಚಿಸಿ: ರಾಜ್ಯಪಾಲರಿಗೆ ಸಿಟಿ ರವಿ ಮನವಿ
ಬೆಂಗಳೂರು: ಅರ್ಕಾವತಿ ಬಡಾವಣೆ ಅಕ್ರಮ ಡಿನೋಟಿಫಿಕೇಷನ್ ಮತ್ತು ಭ್ರಷ್ಟಾಚಾರ ಆರೋಪ ಕುರಿತು ನ್ಯಾಯಮೂರ್ತಿ ಕೆಂಪಣ್ಣ ಅವರ ವರದಿಯನ್ನು ಬಹಿರಂಗ ಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡುವಂತೆ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ಸಿ.ಟಿ.ರವಿ ಶನಿವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ರಾಜ್ಯಪಾಲರಿಗೆ ಪತ್ರ ಬರೆದಿರುವ ಸಿಟಿ ರವಿ, ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಡಲಾದ ಅಂದಾಜು ರೂ.8,000 ಕೋಟಿ ಮೊತ್ತದ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದ ಸುಮಾರು 852 ಎಕರೆಯಷ್ಟು ಜಮೀನಿನ ಡಿನೋಟಿಫಿಕೇಷನ್ ಅಥವಾ ‘ರೀ ಡು’ ಬಗ್ಗೆ ಗಮನ ಸೆಳೆಯಲು ಬಯಸುತ್ತೇನೆ.
2014 ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ, ನ್ಯಾಯಮೂರ್ತಿ ಕೆಂಪಣ್ಣರವರ ನೇತೃತ್ವದ ವಿಚಾರಣಾ ಆಯೋಗವನ್ನು ಕಮಿಷನ್ ಆಫ್ ಎನಕ್ವೈರಿ ಆಕ್ಟ್ 1952 ರಂತೆ ರಚಿಸಿದ್ದರು. ಅದರಂತೆ ಈ ಆಯೋಗ ವಿಚಾರಣಾ ವರದಿಯನ್ನು ಸರ್ಕಾರಕ್ಕೆ ನೀಡಿದೆ. ಆಯೋಗಗಳ ತನಿಖಾ ವರದಿಗಳು ಸಾರ್ವಜನಿಕ ದಾಖಲೆಗಳಾಗಿದ್ದು, ಅದನ್ನು ಜನಸಾಮಾನ್ಯರಿಗೆ ದೊರಕುವ ಹಾಗೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಆದರೆ ಇದುವರೆಗೂ ಆಯೋಗದ ವರದಿಯನ್ನು ಬಿಡುಗಡೆ ಮಾಡದೇ ಇರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಕಾರ್ಯಾಲಯವು ಈ ವರದಿಯನ್ನು ಸಾರ್ವಜನಿಕ ಪರಿಶೀಲನೆಗೆ ಲಭ್ಯವಾಗುವಂತೆ ತೋರುತ್ತಿಲ್ಲ. ರಾಜ್ಯದ ಜನಪ್ರತಿನಿಧಿಯಾಗಿ ನಾನು ಸಹ ಈ ವರದಿಯ ಬಿಡುಗಡೆಗಾಗಿ ಕಾಯುತ್ತಿದ್ದೇನೆ. ತಮ್ಮ ಸರ್ಕಾರ ಈ ವರದಿಯನ್ನು ಬಿಡುಗಡೆ ಮಾಡದೇ ಮುಚ್ಚಿಡುವ ಕಾರ್ಯ ಮಾಡುತ್ತಿರುವುದು ನಿಮ್ಮ ಮತ್ತು ನಿಮ್ಮ ಸರ್ಕಾರದ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯ ಕುರಿತು ಸಂಶಯ ಹಾಗೂ ಸಂದೇಹ ಹುಟ್ಟುವಂತೆ ಮಾಡುತ್ತಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ನ್ಯಾಯಮೂರ್ತಿ ಕೆಂಪಣ್ಣ ಅವರ ವರದಿಯನ್ನು ಬಹಿರಂಗಪಡಿಸುವಂತೆ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಬೇಕು, ಆ ಮೂಲಕ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ರಾಜ್ಯಪಾಲರ ಬದ್ಧತೆಯನ್ನು ಬಲಪಡಿಸಿದಂತಾಗುತ್ತದೆ ಎಂದು ಸಿಟಿ ರವಿ ಪ್ರತಿಪಾದಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ