ಮುಡಾ ಹಗರಣ ನಡುವಲ್ಲೇ ವಿಶ್ವನಾಥ್-ಡಿಕೆಶಿ ಭೇಟಿ: ಕುತೂಹಲ ಮೂಡಿಸಿದ ನಾಯಕರ ಮಾತುಕತೆ!

ಅನುದಾನ ಹಾಗೂ ಅಭಿವೃದ್ಧಿ ಕಾರ್ಯಗಳ ವಿಚಾರ ಕುರಿತು ಚರ್ಚೆ ನಡೆಸಲಾಗಿದೆ ಎಂದು ವಿಶ್ವನಾಥ್ ಅವರು ಹೇಳಿದ್ದಾರೆ.
ಬಿಜೆಪಿಯ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್
ಬಿಜೆಪಿಯ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್
Updated on

ಬೆಂಗಳೂರು: ಮುಡಾ ಹಗರಣ ಪ್ರಕರಣ ಸಂಬಂಧ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಹಾಗೂ ಆಡಳಿರಾಢ ಕಾಂಗ್ರೆಸ್ ನಡುವೆ ಜಟಾಪಟಿ ಮುಂದುವರೆದಿರುವ ನಡುವಲ್ಲೇ ಬಿಜೆಪಿಯ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಡಿ.ಕೆ.ಶಿವಕುಮಾರ್ ಅವರನ್ನು ಮಂಗಳವಾರ ಭೇಟಿ ಮಾಡಿದ್ದು, ನಾಯಕರ ಮಾತುಕತೆ ಕುತೂಹಲ ಕೆರಳಿಸಿದೆ.

ವಿಶ್ವನಾಥ್ ಅವರು ಮೊದಲಿನಿಂದಲೂ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಲೇ ಬಂದಿದ್ದಾರೆ. ಈ ಹಿಂದೆ ವಿದೇಶಕ್ಕೆ ತೆರಳುವುದಕ್ಕೂ ಮುನ್ನ ಮುಡಾ ಹಗರಣವನ್ನು ಬಯಲು ಮಾಡಿದ್ದರು. ಆದರೆ, ಇದೀಗ ಇದ್ದಕ್ಕಿದ್ದಂತೆ ಡಿಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಈ ಹಿಂದೆ ಮೈಸೂರು ಸಂಸದೀಯ ಸ್ಥಾನಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಶ್ವನಾಥ್ ಅವರು, ಇದ್ದಕ್ಕಿಂದ್ದಂತೆ ಮುಡಾ ಹಗರಣವನ್ನು ಬಹಿರಂಗಪಡಿಸಿದ್ದರು. ಇದರ ಹಿಂದಿನ ಕಾರಣ ಕೂಡ ಕುತೂಹಲವನ್ನು ಮೂಡಿಸಿದೆ.

ಟಿಕೆಟ್ ಸಂಬಂಧ ವಿಶ್ವನಾಥ್ ಅವರು ಹಲವು ಬಾರಿ ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಸಿದ್ದರು. ಆದರೂ ವಿಶ್ವನಾಥ್ ಅವರನ್ನು ಮೈಸೂರು ಲೋಕಸಭಾ ಸ್ಥಾನಕ್ಕೆ ಪರಿಗಣಿಸಿರಲಿಲ್ಲ. ಇದರಿಂದ ಅಸಮಾಧಾನದಲ್ಲಿದ್ದ ವಿಶ್ವನಾಥ್ ಅವರು ಮುಡಾ ಹಗರಣವನ್ನು ಬಹಿರಂಗಪಡಿಸಿರಬಹುದು ಎಂದು ಹೇಳಲಾಗುತ್ತಿದೆ.

ಬಿಜೆಪಿಯ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್
ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, ಹೆಚ್. ವಿಶ್ವನಾಥ್ ಸೇರಿದಂತೆ ಮುಡಾ ನಿವೇಶನ ಪಡೆದ BJP-JDS ನಾಯಕರ ಪಟ್ಟಿ ಬಹಿರಂಗ!

ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಮತ್ತು ಬೆಂಗಳೂರು ಉತ್ತರ ಮತ್ತು ಮೈಸೂರಿನ ಇತರ ಒಕ್ಕಲಿಗ ಅಭ್ಯರ್ಥಿಗಳು ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರೂ ಕೂಡ ಸೋಲು ಕಂಡಿದ್ದರು. ಈ ಬೆಳವಣಿಗೆ ಡಿಕೆ.ಶಿವಕುಮಾರ್ ಅವರ ಹಿನ್ನೆಡೆಗೆ ಕಾರಣವಾಗಿತ್ತು. ಈ ನಡುವಲ್ಲೇ ಸಿದ್ದರಾಮಯ್ಯ ಅವರ ಆಪ್ತರು ಹೆಚ್ಟುವರಿ ಡಿಸಿಎಂ ಹುದ್ದೆಗಳಿಗೆ ಬೇಡಿಕೆ ಇರಿಸಿದ್ದು, ಶಿವಕುಮಾರ್ ಮತ್ತು ಅವರ ಬೆಂಬಲಿಗರನ್ನು ಹಿಮ್ಮಟ್ಟಿಸುವಂತೆ ಮಾಡಿತ್ತು. ಈ ಸಂದರ್ಭದಲ್ಲಿ ಮುಡಾ ಹಗರಣ ಬೆಳಕಿಗೆ ಬಂದಿತ್ತು ಎಂಬುದು ಕುತೂಹಲಕಾರಿ ವಿಚಾರವಾಗಿದೆ.

ಈ ನಡುವೆ ವಿಶ್ವನಾಥ್ ಅವರು ಡಿಕೆ.ಶಿವಕುಮಾರ್ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ್ದು, ಅನುದಾನ ಹಾಗೂ ಅಭಿವೃದ್ಧಿ ಕಾರ್ಯಗಳ ವಿಚಾರ ಕುರಿತು ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ಇದನ್ನು ರಾಜಕೀಯ ವಿಶ್ಲೇಷಕರು ನಿರಾಕರಿಸಿದ್ದಾರೆ.

ಸಾಮಾನ್ಯವಾಗಿ ಯಾವುದೇ ಸಭೆ, ಭೇಟಿ ಗಳನ್ನು ಡಿಕೆ.ಶಿವಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಆದರೆ, ವಿಶ್ವನಾಥ್ ಭೇಟಿ ಕುರಿತು ಯಾವುದೇ ಫೋಟೋಗಳನ್ನು ಹಂಚಿಕೊಂಡಿಲ್ಲ. ಇದು ಅನುಮಾನಗಳು ಮತ್ತಷ್ಟು ಗಟ್ಟಿಗೊಳ್ಳುವಂತೆ ಮಾಡಿದೆ.

ಏತನ್ಮಧ್ಯೆ ಡಿಕೆ.ಶಿವಕುಮಾರ್ ಹಾಗೂ ವಿಶ್ವನಾಥ್ ಇಬ್ಬರಿಗೂ ಆಪ್ತರಾಗಿರುವ ಮೈಸೂರು ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್ ಅವರು ಮುಡಾ ಹಗರಣ ಪ್ರಕರಣ ಬಯಲು ವಿಚಾರದಲ್ಲಿ ಭಾಗಿಯಾಗಿರಬಹುದು ಎಂಬ ಊಹಾಪೋಹಗಳೂ ಶುರುವಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com