ಬೆಂಗಳೂರು: ಹಾಸನದಲ್ಲಿ ಡಿಸೆಂಬರ್ 5 ರಂದು ಕಾಂಗ್ರೆಸ್ ಆಯೋಜಿಸಿರುವ ಸಮಾವೇಶದ ಹೆಸರನ್ನು ಬದಲಾಯಿಸಲಾಗಿದೆ. ಈ ಹಿಂದೆ ಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶ ಎಂದು ಹೆಸರಿಡಲಾಗಿತ್ತು. ಇದೀಗ ಜನ ಕಲ್ಯಾಣ ಸಮಾವೇಶ ಎಂದು ಹೆಸರಿಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡರ ತವರಿನಲ್ಲಿ ನಡೆಯಲಿರುವ ಸಮಾವೇಶವನ್ನು ಆರಂಭದಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನವಾಗಿ ಆಯೋಜಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಇದಕ್ಕೆ ಪಕ್ಷದಲ್ಲಿಯೇ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಹೆಸರನ್ನು ಬದಲಾಯಿಸಲಾಗಿದೆ.
ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಪಕ್ಷದ ಬ್ಯಾನರ್ ಹಾಗೂ ತಮ್ಮ ನಾಯಕತ್ವದಲ್ಲಿಯೇ ಸಮಾವೇಶ ನಡೆಯಲಿದೆ. ಇದು ಕಾಂಗ್ರೆಸ್ ಕಾರ್ಯಕ್ರಮವಾಗಿದ್ದು, ಪಕ್ಷ ಹಾಗೂ ನನ್ನ ನೇತೃತ್ವದಲ್ಲಿ ನಡೆಯಲಿದೆ ಎಂದು ಹೇಳಿದರು.
ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಆಗಿರುವ ಅಭಿವೃದ್ಧಿ ಕಾರ್ಯಕ್ರಮಗಳು, ಸಾಧನೆಗಳನ್ನು ಜನರಿಗೆ ಪರಿಚಯಿಸುತ್ತಿದ್ದೇವೆ. ಯಾವುದೇ ಕೆಲಸ ಮಾಡದ ಬಿಜೆಪಿ ಹಾಗೂ ಜೆಡಿಎಸ್ ಸುಳ್ಳು ಹೇಳುತ್ತಿವೆ. ಭರ್ಜರಿ ಗೆಲುವಿನೊಂದಿಗೆ ಕಾಂಗ್ರೆಸ್ ದೊಡ್ಡ ಪಕ್ಷವಾಗಿದೆ. ಜನಾದೇಶ ಸಿಕ್ಕಿದೆ. ಪಕ್ಷದ ಅಧ್ಯಕ್ಷನಾಗಿ ನಾನು ಪಾಲ್ಗೊಳ್ಳಬೇಕಾದರೆ ಅದು ನಮ್ಮ ಪಕ್ಷದ ಬ್ಯಾನರ್ ಅಡಿಯಲ್ಲಿಯೇ ನಡೆಯುತ್ತದೆ. ಸಿಎಂ ಭಾಗವಹಿಸುವುದಾದರೆ ಅದು ಕಾಂಗ್ರೆಸ್ ಬ್ಯಾನರ್ ಆಗುತ್ತದೆ. ನಾನೇ ಸಮಾವೇಶದ ಅಧ್ಯಕ್ಷತೆ ವಹಿಸುತ್ತೇನೆ ಎಂದರು.
ಪಕ್ಷದ ವೇದಿಕೆಯಿಂದ ಸಮಾವೇಶ ಆಯೋಜನೆಯಿಂದ ಸಿದ್ದರಾಮಯ್ಯ ಆಪ್ತರಿಗೆ ಅಸಮಾಧಾನವೇನೂ ಇಲ್ಲ. ಅದು ತಪ್ಪು, ಅವರು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಯಾರು ಕೂಡಾ ಡಿಕೆ ಶಿವಕುಮಾರ್ ಅಥವಾ ಸಿದ್ದರಾಮಯ್ಯ ಬೆಂಬಲಿಗರಲ್ಲ. ಪ್ರತಿಯೊಬ್ಬರು ಕಾಂಗ್ರೆಸ್ ಬೆಂಬಲಿಗರು ಎಂದು ಸಿದ್ದರಾಮಯ್ಯ ತಿಳಿಸಿದರು.
ಮೊದಲಿಗೆ ಮುಡಾ ಹಗರಣ ತನಿಖೆ ನಡುವೆ ಸಿದ್ದರಾಮಯ್ಯ ಅವರ ವರ್ಚಸ್ಸು ಹೆಚ್ಚಿಸುವ ನಿಟ್ಟಿನಲ್ಲಿ ಪಕ್ಷದ ಹಿಂದುಳಿದ ಪ್ರತಿನಿಧಿಗಳು ಸಮಾವೇಶ ಆಯೋಜಿಸಲು ನಿರ್ಧರಿಸಿದ್ದರು. ಆದರೆ, ಪಕ್ಷದ ಕೆಲ ನಾಯಕರು ಆಕ್ಷೇಪ ವ್ಯಕ್ತಪಡಿಸಿದ ನಂತರ ಪಕ್ಷ ವೇದಿಕೆಯಲ್ಲಿ ಸಮಾವೇಶ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಕಳೆದ ವಾರ ಹೇಳಿದ್ದರು. ಇದೀಗ ಗ್ಯಾರಂಟಿ ಯೋಜನೆಗಳು, ಮತ್ತಿತರ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
Advertisement