BJP ಕೋರ್ ಕಮಿಟಿ ಸಭೆ: ‘ನಾಯಕತ್ವದಲ್ಲಿ ಬದಲಾವಣೆ ಇಲ್ಲ’ ಎಂದು ಸ್ಪಷ್ಟ ಸಂದೇಶ; ಸೋಮಶೇಖರ್-ಹೆಬ್ಬಾರ್ ಅಮಾನತಿಗೆ ಶಿಫಾರಸು..!

ಯತ್ನಾಳ್ ಬಂಡಾಯ ವಿಚಾರ ಈಗಾಗಲೇ ಹೈಕಮಾಂಡ್ ಅಂಗಳದಲ್ಲಿರುವುದರಿಂದ ಈ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಹೆಚ್ಚು ಚರ್ಚೆ ನಡೆದಿಲ್ಲ ಎನ್ನಲಾಗಿದೆ.
ಬಿಜೆಪಿ ನಾಯಕರು.
ಬಿಜೆಪಿ ನಾಯಕರು.
Updated on

ಬೆಂಗಳೂರು: 2025ರಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಪಕ್ಷದಲ್ಲಿನ ಆಂತರಿಕ ಕಚ್ಚಾಟವನ್ನು ಶಮನಗೊಳಿಸಲು ರಾಜ್ಯ ಬಿಜೆಪಿ ಕೋರ್ ಕಮಿಟಿ ಶನಿವಾರ ಸಭೆ ನಡೆಸಿತು.

ಸಭೆಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ,ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರತಿಪಕ್ಷ ನಾಯಕ ಆರ್.ಅಶೋಕ್,ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್, ಸಂಸದ ಗೋವಿಂದ್ ಕಾರಜೋಳ, ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪರಿಷತ್‌ ಸದಸ್ಯ ಸಿ.ಟಿ.ರವಿ ಅವರು ಉಪಸ್ಥಿತರಿದ್ದರು.

ಸಭೆಯಲ್ಲಿ, ಸದ್ಯ ಭಾರೀ ಗೊಂದಲ ಮೂಡಿಸಿರುವ ಬಂಡಾಯ, ಭಿನ್ನಮತ ಸೇರಿ ಅನೇಕ ವಿಚಾರಗಳನ್ನು ಚರ್ಚೆ ನಡೆಸಲಾಗಿದ್ದು, ಪಕ್ಷದ ರಾಜ್ಯ ಘಟಕದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿಯೇ ಮುಂಬರುವ ಚುನಾವಣೆಗಳನ್ನು ಪಕ್ಷ ಎದುರಿಸಲಿದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಲಾಗಿದೆ.

ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುವವರ ಜೊತೆಗೂಡಿ ಕೆಲಸ ಮಾಡುವಂತೆ ಮತ್ತು ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಲು ಕೆಲಸ ಮಾಡುವಂತೆ ಕೋರ್ ಕಮಿಟಿಯು ಪಕ್ಷದ ಎಲ್ಲಾ ನಾಯಕರಿಗೆ ಸಲಹೆ ನೀಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಯತ್ನಾಳ್ ಬಂಡಾಯ ವಿಚಾರ ಈಗಾಗಲೇ ಹೈಕಮಾಂಡ್ ಅಂಗಳದಲ್ಲಿರುವುದರಿಂದ ಈ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಹೆಚ್ಚು ಚರ್ಚೆ ನಡೆದಿಲ್ಲ ಎನ್ನಲಾಗಿದೆ.

ಈಗಾಗಲೇ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ಜಾರಿಯಾಗಿದ್ದು, ಅದಕ್ಕೆ ಉತ್ತರ ಬರುವವರೆಗೂ ಕಾದು ನೋಡಲು ಕೋರ್ ಕಮಿಟಿ ಸದಸ್ಯರು ತೀರ್ಮಾನಿಸಿದ್ದಾರೆ. ಆದರೆ, ಭಿನ್ನಮತೀಯ ಚಟುವಟಿಕೆಗಳನ್ನು ಹೀಗೆ ಬೆಳೆಯಲು ಬಿಡದೆ ಆರಂಭದಲ್ಲೇ ಕಡಿವಾಣ ಹಾಕುವುದು ಉತ್ತಮ ಎಂದು ಸಭೆಯಲ್ಲಿ ರಾಧಾ ಮೋಹನ್ ದಾಸ್ ಆಗರ್ವಾಲ್ ಅವರು ಅಭಿಪ್ರಾಯಪಟ್ಟಿದ್ದಾರೆಂದು ತಿಳಿದುಬಂದಿದೆ.

ಬಿಜೆಪಿ ನಾಯಕರು.
ಈಗ ನಾನು ಸೈಲೆಂಟ್, ಜಾರಕಿಹೊಳಿ ವೈಲೆಂಟ್; ದೆಹಲಿ ನಾಯಕರಿಂದ ನನಗೆ ಶಹಬಾಸ್ ಗಿರಿ: ಯತ್ನಾಳ್

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಪಕ್ಷದ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು, ಮುಂಬರುವ ಪಂಚಾಯತ್ ಚುನಾವಣೆಯನ್ನು ಅತ್ಯಂತ ಶಕ್ತಿಯುತವಾಗಿ ಎದುರಿಸಲು ಬಯಸುತ್ತಿದ್ದೇವೆ. ಪಕ್ಷದ ನಾಯಕತ್ವವನ್ನು ಬದಲಾಯಿಸುವ ಶಕ್ತಿ ತಳಮಟ್ಟದ ಕಾರ್ಯಕರ್ತರು, ರಾಷ್ಟ್ರೀಯ ನಾಯಕರ ಕೈಯಲ್ಲಿದೆ. ಯಾವುದೇ ಮಧ್ಯವರ್ತಿ ವ್ಯಕ್ತಿಗಳಿಂದ ಸಾಧ್ಯವಿಲ್ಲ ಎಂದು ಹೇಳಿದರು.

ಯತ್ನಾಳ್ ನೋಟಿಸ್ ಕುರಿತ ಪ್ರಶ್ನೆಗೆ ಉತ್ತರಿಸಿ, ಪಕ್ಷದ ಶಿಸ್ತು ಸಮಿತಿ ಇತ್ತೀಚೆಗೆ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್‌ ಜಾರಿ ಮಾಡಿದೆ. ಯತ್ನಾಳ್ ಅವರ ಉತ್ತರವನ್ನು ಅಧ್ಯಯನ ಮಾಡಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಅವರು (ಯತ್ನಾಳ್) ಇನ್ನೂ ಉತ್ತರ ನೀಡಿಲ್ಲ. ಅಗತ್ಯವಿದ್ದರೆ ಅವರ ಉತ್ತರವನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕರ್ನಾಟಕದಲ್ಲಿ ಯತ್ನಾಳ್ ವರ್ಸಸ್ ವಿಜಯೇಂದ್ರ ಅಥವಾ ಯತ್ನಾಳ್ ವರ್ಸಸ್ ಬಿಜೆಪಿ ಇಲ್ಲ. ನಾವು ಕರ್ನಾಟಕದಲ್ಲಿ 71 ಲಕ್ಷ ಕಾರ್ಯಕರ್ತರನ್ನು ಹೊಂದಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ವ್ಯಕ್ತಿತ್ವವಿದೆ. ಅವರ ವ್ಯಕ್ತಿತ್ವ ಸರಿಯೋ ತಪ್ಪೋ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ ಎಂದು ಅವರು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮಾತನಾಡಿ, ಕೆಲ ನಾಯಕರ ಅಶಿಸ್ತಿನ ವರ್ತನೆಗೆ ಕಡಿವಾಣ ಹಾಕಲು ಹಾಗೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲು ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದರು.

ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಕಳೆದ ಹಲವು ತಿಂಗಳಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು, ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಪಕ್ಷದ ವರಿಷ್ಠರಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ. ಜೊತೆಗೆ ಶಿಗ್ಗಾವ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣ ಹುಡುಕಲು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಮತ್ತು ಮಾಜಿ ಸಚಿವ ಎನ್.ಮಹೇಶ್ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ಸಚಿಸಲಾಗಿದೆ ಎಂದು ತಿಳಿಸಿದರು.

ಯತ್ನಾಳ್ ಅವರನ್ನು ಉಚ್ಚಾಟನೆಗೆ ಕೋರಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಬಹಿರಂಗವಾಗಿ ಮಾತನಾಡಲಾರೆ... ವಿಷಯ ಹೈಕಮಾಂಡ್ ಅಂಗಳದಲ್ಲಿದೆ. ಇದೆಲ್ಲ ಪಕ್ಷದ ಅಭಿವೃದ್ಧಿಗೆ ಒಳ್ಳೆಯದಲ್ಲ, ಕಾರ್ಯಕರ್ತರಲ್ಲೂ ಅಸಮಾಧಾನವಿದೆ, ಯಾರೇ ಆಗಲಿ ಪಕ್ಷದ ಚೌಕಟ್ಟಿನಲ್ಲಿ ಚರ್ಚೆಯಾಗಬೇಕು, ಪಕ್ಷದ ವಿಚಾರವಾಗಿ ಮಾತನಾಡುವವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ನಡೆದಿದೆ ಎಂದು ಹೇಳಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com