'ಒದ್ದು ಸಿಎಂ ಸ್ಥಾನ ಕಿತ್ಕೋ'...: ಮುಖ್ಯಮಂತ್ರಿ ಸ್ಥಾನ ಮಹತ್ವಾಕಾಂಕ್ಷೆ ಬಗ್ಗೆ ಡಿಕೆಶಿಗೆ R Ashoka ಟಾಂಗ್!, ಸದನದಲ್ಲಿ ಬಿಸಿ ಬಿಸಿ ಚರ್ಚೆ!

ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿದ್ದ ಡಿ.ಕೆ.ಶಿವಕುಮಾರ್ ತಮ್ಮ ಮತ್ತು ಮಾಜಿ ಸಿಎಂ SM Krishna ಅವರ ನಡುವಿನ ರಾಜಕೀಯ ಸಂಬಂಧದ ಕುರಿತು ಹಳೆಯ ಘಟನಾವಳಿಗಳನ್ನು ನೆನಪು ಮಾಡಿಕೊಂಡರು.
DK Shivakumar-R Ashok
ಡಿಕೆ ಶಿವಕುಮಾರ್ ಮತ್ತು ಆರ್ ಅಶೋಕ್
Updated on

ಬೆಳಗಾವಿ: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮುಖ್ಯಮಂತ್ರಿ ಸ್ಥಾನದ ಮಹತ್ವಾಕಾಂಕ್ಷೆ ಬಗ್ಗೆ ಸದನದಲ್ಲಿ ಬಿಸಿ ಬಿಸಿ ಚರ್ಚೆ ನಡೆದಿದ್ದು, 'ಒದ್ದು ಸಿಎಂ ಸ್ಥಾನ ಕಿತ್ಕೋತೀರಾ' ಎಂದು ವಿಪಕ್ಷ ನಾಯಕ ಆರ್ ಅಶೋಕ್ ಟಾಂಗ್ ನೀಡಿದ್ದಾರೆ.

ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿದ್ದ ಡಿ.ಕೆ.ಶಿವಕುಮಾರ್ ತಮ್ಮ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ನಡುವಿನ ರಾಜಕೀಯ ಸಂಬಂಧದ ಕುರಿತು ಹಳೆಯ ಘಟನಾವಳಿಗಳನ್ನು ನೆನಪು ಮಾಡಿಕೊಂಡರು.

ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್ ಅವರು 1999ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದನ್ನು ನೆನಪಿಸಿಕೊಂಡರು. 'ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಚಿವಸ್ಥಾನ ಕೈತಪ್ಪುವ ಪರಿಸ್ಥಿತಿ ಇತ್ತು. ಆಗ ಕೃಷ್ಣ ಅವರ ಮನೆಯ ಬಾಗಿಲನ್ನು ಒದ್ದ ಘಟನೆಯನ್ನು ಉಲ್ಲೇಖ ಮಾಡಿದರು.

ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸೇರಬೇಕಾದವರ ಸಚಿವರ ಹಾಗೂ ಖಾತೆಗಳ ಪಟ್ಟಿಯನ್ನು ನಾನೇ ಸಿದ್ಧಪಡಿಸಿದ್ದೆ. ಆದರೆ ರಾಜಭವನಕ್ಕೆ ಹೋಗಿದ್ದು ಮಾತ್ರ 9 ಶಾಸಕರ ಹೆಸರು. ಅದರಲ್ಲಿ ನನ್ನ ಹೆಸರಿರಲಿಲ್ಲ. ಜಾತಿಗೊಂದು ಸಚಿವ ಸ್ಥಾನ ನೀಡಲಾಗಿತ್ತು.

DK Shivakumar-R Ashok
Karnataka Assembly: ಸ್ಪೀಕರ್ ಕಚೇರಿಗೆ ನುಗ್ಗಿದ BJP ಶಾಸಕರು, UT Khader ಜತೆ ಜಗಳ, ಉದ್ವಿಗ್ನ ಪರಿಸ್ಥಿತಿ

ಈ ವಿಚಾರವನ್ನು ದ್ವಾರಕಾನಾಥ್ ಎಂಬುವರ ಗಮನಕ್ಕೆ ತಂದಾಗ ಅವರು ಯಾರೂ ಕೊಡುವುದಿಲ್ಲ, ಒದ್ದು ಕಿತ್ತುಕೊಳ್ಳಬೇಕೆಂಬ ಸಲಹೆ ನೀಡಿದರು. ಅದೇ ರೀತಿ ನಾನು, ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರ ಜೊತೆ ಹೋಗಿ ಎಸ್.ಎಂ.ಕೃಷ್ಣ ಅವರ ಮನೆಬಾಗಿಲನ್ನು ಒದ್ದೆ. ಯಾವಾಗಲೂ ನಿಮೊಂದಿಗಿರುತ್ತೇವೆ. ನನ್ನ ಹೊರತು ಪ್ರಮಾಣವಚನ ಆಗಬಾರದು ಎಂದು ಹೇಳಿದೆ.

ಆಗ ಕೃಷ್ಣ ಅವರು ಏನು ನಿನ್ನ ರೌದ್ರಾವತಾರ? ಎಂದು ಕೇಳಿದರು. ಅಲ್ಲದೆ ಈಗ ನೀನು ಮಂತ್ರಿಯಾಗಲು ಸಮಯ ಸರಿಯಿಲ್ಲ ಎಂದು ಜ್ಯೋತಿಷಿ ಹೇಳಿದ್ದಾರೆ ಎಂದರು. ಆದರೆ ಪಟ್ಟು ಹಿಡಿದು ಪ್ರಮಾಣವಚನದ ಸಮಯವನ್ನು ಬದಲಾಯಿಸಿ ಹೈಕಮಾಂಡ್ ಮೂಲಕ ಒಪ್ಪಿಗೆ ಪಡೆದು ನಾವೆಲ್ಲ ಸಚಿವರಾದೆವು ಎಂದು ಡಿಕೆಶಿ ಹೇಳಿದರು.

ಒದ್ದು ಸಿಎಂ ಸ್ಥಾನ ಕಿತ್ಕೋತೀರಾ: ಅಶೋಕ್ ವ್ಯಂಗ್ಯ

ಈ ವೇಳೆ ಮಧ್ಯ ಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, 'ಈಗಲೂ ಅದೇ ಪರಿಸ್ಥಿತಿ ಇದೆ. ಅದೇ ರೀತಿ ಒದ್ದು ಸಿಎಂ ಸ್ಥಾನ ಕಿತ್ಕೋತೀರಾ? ಎಂದು ಪ್ರಶ್ನಿಸಿದರು. ಮಾತು ಮುಂದುವರೆಸಿದ ಅವರು, ನಾನು ಟೀಕೆ ಮಾಡುವುದಿಲ್ಲ. ಎಸ್.ಎಂ.ಕೃಷ್ಣ ಅವರಿಂದ ನಿಮಗೆ ಒಳ್ಳೆಯದಾಗಿದೆ. ಈಗ ಮುಖ್ಯಮಂತ್ರಿ ಸ್ಥಾನವನ್ನು ಒದ್ದು ಕಿತ್ತುಕೊಳ್ಳಬೇಕೆಂದು ಹೇಳುತ್ತೀರಾ? ಎಂದು ಪ್ರಶ್ನಿಸಿದರು.

ನೀವು ಯಾವಾಗ ಒದ್ದು ಕಿತ್ತುಕೊಳ್ಳುತ್ತೀರಾ? ಯಾವಾಗ ಮುಹೂರ್ತ ಫಿಕ್ಸ್ ಆಗಿದೆ? ಜನವರಿಯೊಳಗೆ ನೀವು ಮುಖ್ಯಮಂತ್ರಿಯಾದರೆ ಆಗುತ್ತೀರಿ. ಇಲ್ಲವೆಂದರೆ ಇಲ್ಲ. ಜನವರಿ ನಂತರ ನಿಮ ಗ್ರಹಗತಿ ಸರಿಯಿಲ್ಲ ಎಂದು ಅಶೋಕ್ ವ್ಯಂಗ್ಯ ಮಾಡಿದರು. 'ಡಿಕೆ ಶಿವಕುಮಾರ್‌ ಅವರೇ ನೀವು ಎಸ್‌ ಎಂ ಕೃಷ್ಣ ಅವರ ಜೊತೆಗೆ ಮಂತ್ರಿ ಆಗಿ ಪ್ರಮಾಣ ವಚನ ತಗೊಂಡ್ರಿ, ಸಿಗಲಿಲ್ಲ ಅಂದ್ರೆ ಕಿತ್ಕೋಬೇಕು ಅಂತ ಮಾತಿನ ವೇಳೆ ಹೇಳಿದ್ರಿ. ಈಗಲೂ ಹಾಗೇ ಇದ್ದೀರಾ? ಒದ್ದು ಕಿತ್ಕೋಬೇಕು ಅಂದ್ರಲ್ಲ ಹಾಗೇ ಇದ್ದೀರಾ ಈಗಲೂ? ಇಲ್ಲಿರೋರಿಗೆಲ್ಲ ಅದೇ ಪಾಠನಾ?' ಎಂದು ಕಿಚಾಯಿಸಿದರು.

DK Shivakumar-R Ashok
ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಯತ್ನಾಳ್ ವಿರುದ್ಧದ ಕೇಸ್ ರದ್ದುಗೊಳಿಸಿದ ಹೈಕೋರ್ಟ್

'ನೀವು ಸೂಕ್ತ ತೀರ್ಮಾನ ಮಾಡಿ. ಇಬ್ಬರ ಜಗಳ ಮೂರನೆಯವರಿಗೆ ಲಾಭವಾಗಬಾರದು. ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ್ ಅವರ ವಿಚಾರದಲ್ಲಿ ಅವರ ನಡುವೆ ಇದೇ ರೀತಿಯ ಪರಿಸ್ಥಿತಿ ಉಂಟಾಗಿ ಬೇರೆಯವರಾದ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದರು.

ನಿಮ್ಮ ವಿಚಾರದಲ್ಲಿ ಹಾಗಾಗಬಾರದು ಹುಷಾರಾಗಿರಿ.. ಬಿಜೆಪಿ ಶಾಸಕ ಚಂದ್ರಪ್ಪಅವರು ಜನತಾದಳದಿಂದ 6 ಶಾಸಕರು ಎಸ್.ಎಂ.ಕೃಷ್ಣ ಅವರಿಗೆ ಮತ ಹಾಕಿದೆವು ಎಂದು ಹೇಳಿದರು. ಆಗ ಡಿ.ಕೆ.ಶಿ ಅವರು ದೇವೇಗೌಡರ ಮತವೂ ಬಿದ್ದಿತ್ತು ಎಂದು ಅಶೋಕ್ ಛೇಡಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್ 'ವಿಪಕ್ಷ ನಾಯಕರು ನಿಮಗೆ 2-3 ಪ್ರಶ್ನೆ ಕೇಳಿದ್ದಾರೆ. ಆ ಪ್ರಶ್ನೆಗಳಿಗೆ ನೀವು ನಿಮ್ಮ ಕೊಠಡಿಯಲ್ಲಿ ಉತ್ತರ ಕೊಡಿ, ಸದನದಲ್ಲಿ ಕೊಡಬೇಡಿ ಎಂದು ಡಿಕೆಶಿಗೆ ಕಿವಿಮಾತು ಹೇಳಿದರು. ಈ ವೇಳೆ ಬಿಜೆಪಿ ಶಾಸಕ ಸಿ.ಸಿ.ಪಾಟೀಲ್ ಮಾತನಾಡಿ, ನಿಮ್ಮ ನೇತೃತ್ವದಲ್ಲಾದರೂ ಪಂಚಮಸಾಲಿ ಮೀಸಲಾತಿ ಸಿಗಲಿ ಎಂದು ಡಿಕೆಶಿಯವರನ್ನು ಛೇಡಿಸಿದರು.

ಮತ್ತೆ ಮಾತು ಮುಂದುವರೆಸಿದ ಡಿಕೆ ಶಿವಕುಮಾರ್, 'ನಾನು ಇಲ್ಲಿ ಉತ್ತರ ಕೊಡುವುದಿಲ್ಲ. ಕೊಠಡಿಯಲ್ಲೇ ಉತ್ತರ ಕೊಡುತ್ತೇನೆ ಎಂದು ಹೇಳಿದರು. ಆಗ ಅಶೋಕ್ ಅವರು ಸಭಾಧ್ಯಕ್ಷರನ್ನು ಉದ್ದೇಶಿಸಿ ಹೊಸ ಪೀಠದಲ್ಲೇ ಇರಬೇಕೆಂದು ನೀವು ಭಾವಿಸಿದ್ದೀರಾ? ಎಂದು ಕೇಳಿದರು.

30 ಪ್ರತಿಪಕ್ಷಗಳ ಶಾಸಕರು ಬರುತ್ತಾರೆ

ಆಗ ಮಾತು ಮುಂದುವರೆಸಿದ ಡಿ.ಕೆ.ಶಿವಕುಮಾರ್ ಅವರು, ಪ್ರತಿಪಕ್ಷಗಳ ಕಡೆಯ 25ರಿಂದ 30 ಶಾಸಕರು ನಮ್ಮ ಕಡೆಗೆ ಬರುತ್ತಾರೆ ಎಂದಾಗ, ಇದಕ್ಕೆ ತಿರುಗೇಟು ನೀಡಿದ ಅಶೋಕ್, 'ಬಹುಶಃ ಡಿಕೆಶಿಯವರೇ ನಮ್ಮ ಕಡೆ ಬರುತ್ತಾರೆ ಎಂದರು. ಮಾತು ಮುಂದುವರೆಸಿದ ಡಿಕೆಶಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಕರೆತರಲು ಮಾಜಿ ಸಚಿವ ಯೋಗೇಶ್ವರ್ ಪ್ರಯತ್ನಿಸಿದ್ದಾರೆ ಎಂಬೆಲ್ಲಾ ವಿಚಾರಗಳು ಪ್ರಸ್ತಾಪವಾಗಿದ್ದವು ಎಂದು ಹೇಳಿ ಈ ವಿಚಾರದ ಚರ್ಚೆಗೆ ತೆರೆ ಎಳೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com